ಮಹಾವತಾರ ಪೂರ್ಣಯೋಗಿ ಶ್ರೀಬಾಬಾಜಿ

| ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್​

ಭಾರತೀಯ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಮಹಾವತಾರ ಶ್ರೀಬಾಬಾಜಿ ಹೆಸರು ಚಿರಸ್ಥಾಯಿಯಾದುದು. ಅವರಿಂದ ಯೋಗದೀಕ್ಷೆ ಪಡೆದ ಶ್ರೀಲಾಹಿರೀ ಮಹಾಶಯ, ಸ್ವಾಮಿ ಕೇವಲಾನಂದ ಮುಂತಾದವರು ಕ್ರಿಯಾಯೋಗದ ಮೂಲಕ ಲೋಕಕ್ಷೇಮಕ್ಕೆ ಕಾರಣರಾದರು. ಕ್ರಿಯಾಯೋಗದ ಸಂಪ್ರದಾಯದಲ್ಲಿ ಲಾಹಿರೀ ಮಹಾಶಯರು ‘ಯೋಗಾವತಾರ’ ಎನಿಸಿಕೊಂಡರೆ, ಅವರ ಶಿಷ್ಯ ಯುಕ್ತೇಶ್ವರರು ‘ಜ್ಞಾನಾವತಾರ’ರೆಂದು ಪ್ರಸಿದ್ಧಿ ಪಡೆದರು. ಸಮಾಜದ ಆಧ್ಯಾತ್ಮಿಕ ಮಟ್ಟವನ್ನು ಮೇಲೇರಿಸಿದ ಬಾಬಾಜಿ, ಮೊಟ್ಟಮೊದಲ ಬಾರಿಗೆ ಎಲ್ಲರಿಗೂ ಯೋಗಸ್ವಾತಂತ್ರ್ಯದ ಬಾಗಿಲನ್ನು ತೆರೆದರು.

ಬದರಿನಾರಾಯಣ ಕ್ಷೇತ್ರದ ಸಮೀಪ ಕಡಿದಾದ ಹಿಮಾಲಯದ ಬಂಡೆ, ಪವಿತ್ರ ಗುಹೆಗಳು ಇಂದಿಗೂ ಬಾಬಾಜಿ ಅಸ್ತಿತ್ವದ ಪ್ರತೀಕಗಳಾಗಿವೆ. ಅಲ್ಲಿ ಏಕಾಂತವಾಸಿಗಳಾಗಿ ಶತಮಾನಗಳ ಉದ್ದಕ್ಕೂ ಭೌತಶರೀರವನ್ನು ಉಳಿಸಿಕೊಂಡಿರುವ ಬಾಬಾಜಿ ಅವತಾರಪುರುಷರೆಂದೇ ಪ್ರತೀತಿ. ‘ಅವರ ಆಧ್ಯಾತ್ಮಿಕ ಎತ್ತರ ತಿಳಿಯಲು ಮಾನವಬುದ್ಧಿಗೆ ಸಾಧ್ಯವಿಲ್ಲ, ಅದು ಅಗ್ರಾಹ್ಯ’ ಎಂದು ಯುಕ್ತೇಶ್ವರರು ಪರಮಹಂಸ ಯೋಗಾನಂದರಿಗೆ ಹೇಳಿದ್ದುಂಟು. ಬಾಬಾಜಿ ಅವರ ವಂಶ, ಹುಟ್ಟಿದ ಸ್ಥಳ ಇಂದಿಗೂ ಅನೂಹ್ಯ. ಇವರನ್ನು ಮಹಾಮುನಿ ಬಾಬಾಜಿ, ಮಹಾರಾಜ್, ಮಹಾಯೋಗಿ, ತ್ರ್ಯಂಬಕ ಬಾಬಾ ಎಂದೆಲ್ಲ ಶಿಷ್ಯರು ಕರೆಯುತ್ತಿದ್ದರು. ಬಾಬಾಜಿ ನೇರಶಿಷ್ಯರಾದ ಲಾಹಿರೀ ಮಹಾಶಯರು ‘ಬಾಬಾಜಿ ಹೆಸರನ್ನು ಭಕ್ತಿಯಿಂದ ಹೇಳುವವರು ಆಧ್ಯಾತ್ಮಿಕ ಕೃಪೆಗೆ ಪಾತ್ರರಾಗುತ್ತಾರೆ’ ಎನ್ನುತ್ತಿದ್ದರು. ಬಾಬಾಜಿ ಸಾವರಿಯದ ಗುರು; ದೇಹದ ಮೇಲೆ ವಯಸ್ಸಿನ ಚಿಹ್ನೆಗಳಿಲ್ಲದ, ಯುವಕರಂತೆ ಕಂಗೊಳಿಸುವ, ಸಾಧಾರಣ ಎತ್ತರದ ಮೈಕಟ್ಟು ಅವರದ್ದು. ಆ ದೇಹ ದರ್ಶನೀಯ ತೇಜಸ್ಸನ್ನು ಸದಾ ಹೊರಹೊಮ್ಮಿಸುತ್ತಿರುತ್ತದೆ. ಅವರ ಕಣ್ಣುಗಳು ಕಪ್ಪಗಿದ್ದು ಸೌಮ್ಯ ಮತ್ತು ಕೋಮಲವಾಗಿವೆ. ಅವರ ಕೂದಲು ನೀಳ, ಕೆಂಬಣ್ಣದ ಹೊಳಪಿನಿಂದ ಕೂಡಿರುವಂಥದ್ದು.

ಲಾಹಿರೀ ಕಂಡ ಬಾಬಾಜಿ: ಲಾಹಿರೀ ಮಹಾಶಯರು ಬಾಬಾಜಿ ಅವರನ್ನು ಮೊದಲಿಗೆ ಕಂಡದ್ದು 1861ರ ಶರತ್ಕಾಲದ ದಿನ. ಆಗ 33ರ ಪ್ರಾಯದವರಾಗಿದ್ದ ಮಹಾಶಯರು ಮಿಲಿಟರಿ ಇಂಜಿನಿಯರಿಂಗ್ ಇಲಾಖೆಯಲ್ಲಿ ಲೆಕ್ಕಾಧಿಕಾರಿಯಾಗಿದ್ದರು. ಇಲಾಖೆಯ ನಿರ್ವಹಣಾಧಿಕಾರಿ ಲಾಹಿರೀಯವರನ್ನು ಕರೆದು ‘ನಿನ್ನನ್ನು ರಾಣಿಖೇತ್​ಗೆ ವರ್ಗಮಾಡಲಾಗಿದೆ. ಈಗಷ್ಟೇ ಟೆಲಿಗ್ರಾಂ ಬಂತು’ ಎಂದ. ಮಹಾಶಯರು ಸೇವಕನೊಡನೆ 500 ಮೈಲಿಗಳ ಪ್ರವಾಸ ಕೈಗೊಂಡರು. ಅಲ್ಮೋರಾ ಜಿಲ್ಲೆಯಲ್ಲಿರುವ ರಾಣಿಖೇತ್, ಹಿಮಾಲಯದ ಎತ್ತರ ಶಿಖರಗಳಲ್ಲೊಂದಾದ ನಂದಾದೇವಿ ಬುಡದಲ್ಲಿದೆ. ಭವ್ಯವಾದ ಆ ಪರ್ವತಾರಣ್ಯಗಳ ತಾಣದಲ್ಲಿ ಲಾಹಿರೀ ನೆಲೆಸಿದರು. ಒಮ್ಮೆ ಪರ್ವತದ ಮಗ್ಗುಲಲ್ಲಿ ವಿಹರಿಸುತ್ತಿದ್ದಾಗ ದೂರದಿಂದ ಹೆಸರುಹಿಡಿದು ಕರೆದಂತಾಗಿ ಲಾಹಿರೀ ಅಚ್ಚರಿಗೊಂಡರು. ಆ ಧ್ವನಿ ಬಂದಕಡೆ ಪರ್ವತವನ್ನು ರಭಸದಿಂದ ಏರತೊಡಗಿ ಸ್ವಲ್ಪ ಬಿಡುಬೀಸಾಗಿದ್ದ ಜಾಗ ಸೇರಿದರು. ಅಲ್ಲಿ ಎರಡೂ ಪಕ್ಕಗಳಲ್ಲಿ ಸಾಲಾಗಿ ಗುಹೆಗಳಿದ್ದವು. ಪರ್ವತಪಾರ್ಶ್ವದ ಚಾಚುಬಂಡೆಯೊಂದರ ಮೇಲೆ ಮಂದಹಾಸ ಬೀರುತ್ತಿದ್ದ ಸಂತನೊಬ್ಬ, ಕೈನೀಡಿ ಇವರನ್ನು ಸ್ವಾಗತಿಸಿದ. ಆತ ಲಾಹಿರೀ ಮಹಾಶಯರನ್ನೇ ಹೋಲುತ್ತಿದ್ದ. ಲಾಹಿರೀ ಹೆಸರನ್ನು ಕರೆದು ವಿಶ್ರಾಂತಿ ತೆಗೆದುಕೊಳ್ಳುವಂತೆ ಹಿಂದಿಯಲ್ಲಿ ಸೂಚಿಸಿದ. ಅವರಿಬ್ಬರೂ ಸಣ್ಣ ಗುಹೆಯೊಂದನ್ನು ಪ್ರವೇಶಿಸಿದರು. ಅಲ್ಲಿ ಕಂಬಳಿ-ಕಮಂಡಲಗಳಿದ್ದವು. ಮೂಲೆಯೊಂದರಲ್ಲಿ ಮಡಿಸಿ ಹಾಸಿದ್ದ ಕಂಬಳಿಯ ಕಡೆ ಬೊಟ್ಟುಮಾಡಿ ಸಂತರು ‘ಲಾಹಿರೀ ಆ ಜಾಗ ನೆನಪಿದೆಯೇ’ ಎಂದಾಗ ‘ಇಲ್ಲ ಸ್ವಾಮಿ’ ಎಂದ ಲಾಹಿರೀ ತಾವು ರಾತ್ರಿಗೂ ಮೊದಲೇ ಹಿಂದಿರುಗಬೇಕೆಂದೂ, ಬೆಳಗ್ಗೆ ಕಚೇರಿಯಲ್ಲಿ ಕೆಲಸವಿದೆಯೆಂದೂ ವಿನಂತಿಸಿಕೊಂಡರು. ಅದಕ್ಕೆ ಆ ಯೋಗಿ ‘ಕಚೇರಿ ನಿನಗಾಗಿ ತರಿಸಲ್ಪಟ್ಟಿದೆಯೇ ಹೊರತು, ಕಚೇರಿಗಾಗಿ ನೀನಲ್ಲ’ ಎಂದು ಇಂಗ್ಲಿಷ್​ನಲ್ಲಿ ಉತ್ತರಿಸಿದರು. ಲಾಹಿರೀ ಸ್ತಂಭೀಭೂತಗೊಂಡರು. ಆಗ ಆ ಯೋಗಿ ‘ಈ ನಿರ್ಜನ ಪ್ರದೇಶಕ್ಕೆ ವರ್ಗಮಾಡಬೇಕೆಂದು ನಿನ್ನ ಮೇಲಧಿಕಾರಿಯ ಮನಸ್ಸಿಗೆ ಪ್ರೇರೇಪಿಸಿದ್ದು ನಾನೇ. ಮನುಷ್ಯವರ್ಗದಲ್ಲಿ ಭಾವೈಕ್ಯನಾದವನಿಗೆ ಎಲ್ಲರ ಮನಸ್ಸುಗಳು ಪ್ರಸಾರಕೇಂದ್ರಗಳಾಗಿಬಿಡುತ್ತವೆ. ಈ ಗುಹೆ ನಿನಗೆ ಪರಿಚಿತವೆಂದು ಕಾಣುತ್ತಿಲ್ಲವೇ?’ ಎಂದು ಮರುಪ್ರಶ್ನಿಸಿದರು. ಲಾಹಿರೀ ಮೂಕವಿಸ್ಮಿತರಾಗಿದ್ದರು. ಆಗ ಯೋಗಿ ಅವರ ಹಣೆಯನ್ನು ಬೆರಳಿನಿಂದ ಮೃದುವಾಗಿ ರ್ಸ³ಸುತ್ತಿದ್ದಂತೆ ಅದ್ಭುತ ಶಕ್ತಿಯೊಂದು ಪ್ರವಾಹರೂಪದಲ್ಲಿ ಹರಿಯತೊಡಗಿ ಗತಜನ್ಮದ ನೆನಪಿನ ಬೀಜಗಳು ಕಾಣಿಸಿಕೊಂಡವು. ಗದ್ಗದಿತ ಲಾಹಿರೀ ‘ನೀವು ನನ್ನ ಗುರುಗಳಾದ ಬಾಬಾಜಿ. ಹಿಂದಿನ ದೃಶ್ಯಗಳೆಲ್ಲ ನನ್ನ ಮನಸ್ಸಿನಲ್ಲಿ ವಿವರವಾಗಿ ಮೂಡುತ್ತಿವೆ. ಪೂರ್ವಜನ್ಮದ ಹಲವು ವರ್ಷಗಳನ್ನು ಈ ಗುಹೆಯಲ್ಲಿ ಕಳೆದ ನೆನಪು ಬಂದಿದೆ’ ಎಂದರು. ಭಾವಪರವಶರಾಗಿದ್ದ ಲಾಹಿರೀ ಕಣ್ಣಿನಲ್ಲಿ ಆನಂದಭಾವವಿತ್ತು, ಬಾಬಾಜಿಯ ಪಾದಗಳನ್ನು ಗಟ್ಟಿಯಾಗಿ ಅಪ್ಪಿದರು. ಆಗ ಬಾಬಾಜಿ ‘3 ದಶಕಗಳಿಂದ ನಿನಗಾಗಿ ಕಾಯುತ್ತಿದ್ದೇನೆ’ ಎಂದರು. ಗುರುಸಾನ್ನಿಧ್ಯದಲ್ಲಿ ಲಾಹಿರೀ ಕರಗಿಹೋದರು. ನಂತರ ಬಾಬಾಜಿ ನಿರ್ದೇಶನದಂತೆ ಬೋಗುಣಿಯಲ್ಲಿದ್ದ ಎಣ್ಣೆಯನ್ನು ಕುಡಿದು ನದಿದಡದಲ್ಲಿ ಮಲಗಿದರು. ಬಾಬಾಜಿಯವರ ಪ್ರಾಯೋಗಿಕ ವಿವೇಕ ಮುಂಜಾಗರೂಕತೆಯಿಂದ ಕೂಡಿತ್ತು. ಆ ಹಿಮಾಚ್ಛಾದಿತ ಪರ್ವತಗಳ ಮೇಲೆ ರಾತ್ರಿ ಕವಿಯುತ್ತಿತ್ತು. ಆದರೆ, ಬೆಚ್ಚನೆಯ ಕಿರಣಗಳು ಲಾಹಿರೀ ದೇಹದಲ್ಲಿ ಸ್ಪುರಿಸತೊಡಗಿದವು. ಕಟುಗಾಳಿ ಅಪ್ಪಳಿಸುತ್ತಿತ್ತು. ಬಂಡೆಯೊಂದರ ಮೇಲೆ ಇವರ ದೇಹ ಬಿದ್ದಿತ್ತು. ಸಮೀಪದ ಗೋಘಾಷ್ ನದಿಯ ತಂಪಾದ ಅಲೆಗಳು ದೇಹವನ್ನು ತಟ್ಟುತ್ತಿದ್ದವು. ಹುಲಿಗಳ ಘರ್ಜನೆ ಕೇಳಿಬರುತ್ತಿತ್ತು. ತಾಸುಗಳೇ ಕಳೆದವು. ಭಯವು ನಿರ್ಭಯದಲ್ಲಿ ಲೀನಗೊಂಡಿತ್ತು. ಸಹಚರನೊಬ್ಬ ಇವರ ಕೈಹಿಡಿದು ಕರೆದೊಯ್ದ. ಪದ್ಮಾಸನದಲ್ಲಿ ಕುಳಿತಿದ್ದ ಬಾಬಾಜಿ ಪಾದಗಳಿಗೆ ಲಾಹಿರೀ ವಂದಿಸಿದಾಗ, ‘ಎಚ್ಚರವಾಗು, ನಿನ್ನ ಲೌಕಿಕ ದಾಹಗಳೆಲ್ಲ ಅಡಗಿಹೋಗುತ್ತವೆ’ ಎಂದು ಕೆಲ ರಹಸ್ಯ ಶಬ್ದಗಳನ್ನು ಉಚ್ಚರಿಸಿ, ‘ಮಗೂ, ಕ್ರಿಯಾಯೋಗದ ಮೂಲಕ ದೈವೀಸಾಮ್ರಾಜ್ಯದ ಪ್ರವೇಶಕ್ಕೆ ದೀಕ್ಷೆಯನ್ನು ಸ್ವೀಕರಿಸು’ ಎನ್ನುತ್ತ ಕೈನೀಡಿದರು. ಅಲ್ಲಿ ಹೋಮಾಗ್ನಿ ಧಗಧಗಿಸುತ್ತಿತ್ತು. ಬಂಧವಿಮೋಚನೆಯ ಯೌಗಿಕ ತಂತ್ರವನ್ನು ಲಾಹಿರೀಯವರಲ್ಲಿ ಅಗ್ನಿಸಾಕ್ಷಿಯಾಗಿ ಬಾಬಾಜಿ ಸ್ಥಿರೀಕರಿಸಿದರು. ಬೆಳಗಿನ ವೇಳೆಗೆ ಎಲ್ಲ ಕ್ರಿಯಾಕಲಾಪಗಳು ಮುಗಿದವು. ಲಾಹಿರೀ ಅತೀಂದ್ರಿಯ ಸ್ಥಿತಿಯಲ್ಲಿದ್ದರು.

ಮರುದಿನ ಮಧ್ಯಾಹ್ನ ಲಾಹಿರೀ ಕಂಬಳಿಯ ಮೇಲೆ ಕುಳಿತಿದ್ದಾಗ ಹತ್ತಿರಕ್ಕೆ ಬಂದ ಬಾಬಾಜಿ ಹಸ್ತವನ್ನು ಅವರ ಮಸ್ತಕದ ಮೇಲೆ ಇಡುತ್ತಿದ್ದಂತೆ ಲಾಹಿರೀ ನಿರ್ವಿಕಲ್ಪ ಸಮಾಧಿಗೆ ಜಾರಿದರು, 7 ದಿನ ಇದೇ ಸ್ಥಿತಿಯಲ್ಲಿ ಉಳಿದುಬಿಟ್ಟರು. ಆತ್ಮಜ್ಞಾನದ ಹಲವು ಹಂತಗಳನ್ನು ದಾಟಿ ಸಾವಿಲ್ಲದ ಸಾಮ್ರಾಜ್ಯವನ್ನು ಹೊಕ್ಕಿದ್ದರು. ವಿಶ್ವಾತ್ಮನ ವೇದಿಕೆಯ ಮೇಲೆ ಆತ್ಮವು ಸ್ಥಿರವಾಗಿ ಸ್ಥಾಪನೆಗೊಂಡಿತು. 8ನೆಯ ದಿನ ಸಮಾಧಿಯಿಂದ ಹೊರಬಂದು ಬಾಬಾಜಿ ಪಾದಗಳಿಗೆ ಎರಗಿ, ತಮ್ಮನ್ನು ಜತೆಯಲ್ಲೇ ಉಳಿಸಿಕೊಳ್ಳುವಂತೆ ಪ್ರಾರ್ಥಿಸಿದರು. ಅವರನ್ನು ಆಲಿಂಗಿಸಿಕೊಂಡ ಬಾಬಾಜಿ ‘ಗೃಹಸ್ಥನಾಗಿ ಕುಟುಂಬ ನಿರ್ವಹಣೆಯ ಹೊಣೆಹೊತ್ತಿದ್ದೀಯೆ; ಇದರೊಂದಿಗೆ ಜನಸಾಮಾನ್ಯರ ಆಧ್ಯಾತ್ಮಿಕ ವಿಕಾಸಕ್ಕೂ ನೆರವಾಗಬೇಕು. ನಮ್ಮೊಂದಿಗೆ ಸೇರಿಕೊಳ್ಳುವ ಯೋಚನೆ ಇಟ್ಟುಕೊಳ್ಳಬೇಡ. ಅಸಂಖ್ಯಾತ ಶ್ರದ್ಧಾವಂತರಿಗೆ ನೀನು ಕ್ರಿಯಾಯೋಗದ ಮೂಲಕ ಆಧ್ಯಾತ್ಮಿಕ ಶಾಂತಿ ತಂದುಕೊಡಬೇಕಿದೆ. ಗೃಹಸ್ಥರು ಉನ್ನತ ಯೌಗಿಕ ಸಾಧನೆಗಳನ್ನು ಮಾಡಬೇಕಾಗಿದೆ. ಇದನ್ನು ಅವರಿಗೆ ಮನವರಿಕೆ ಮಾಡಿಕೊಟ್ಟು ಮಾರ್ಗದರ್ಶಕನಾಗಬೇಕು. ಆಂತರಂಗಿಕವಾಗಿ ಈ ಲೋಕದ ಎಲ್ಲ ಕರ್ಮಬಂಧಗಳನ್ನೂ ಕಳಚಿಕೊಂಡಿದ್ದೀಯೆ. ಆದರೆ, ಪ್ರಜ್ಞಾಪೂರ್ವಕವಾಗಿ ನಿನ್ನ ಕುಟುಂಬದ ಸಾಮಾಜಿಕ-ಆಧ್ಯಾತ್ಮಿಕ ಕರ್ತವ್ಯಗಳನ್ನು ನಿರ್ವಹಿಸಬೇಕಾಗಿದೆ. ದೈವೀಪ್ರಜ್ಞೆಯ ಮಧುರ ಉಸಿರೊಂದನ್ನು ಮಾನವರ ಬತ್ತಿದ ಹೃದಯಗಳಲ್ಲಿ ಮೂಡಿಸ ಬೇಕಾಗಿದೆ’ ಎಂದು ಆಶೀರ್ವದಿಸಿದರು. ಮಾರನೆಯ ಮುಂಜಾನೆ ಆಶೀರ್ವಾದ ಪಡೆಯುವಾಗ, ‘ನಮ್ಮಿಬ್ಬರಿಗೆ ಅಗಲಿಕೆ ಎಂಬುದೇ ಇಲ್ಲ. ನೀನೆಲ್ಲೇ ಇರು, ಯಾವಾಗ ಕರೆದರೂ ನಿನ್ನಲ್ಲಿಗೆ ಬರುತ್ತೇನೆ’ ಎಂದು ಬಾಬಾಜಿ ಭುಜತಟ್ಟಿ ಕಳುಹಿಸಿಕೊಟ್ಟರು.

ಕೇವಲಾನಂದರು ಕಂಡಂತೆ: ಬಾಬಾಜಿಯವರ ಪ್ರಮುಖಶಿಷ್ಯರಲ್ಲಿ ಒಬ್ಬರಾಗಿದ್ದು, ಅವರೊಡನೆ ಕೆಲಕಾಲ ಹಿಮಾಲಯದಲ್ಲಿದ್ದ ಸ್ವಾಮಿ ಕೇವಲಾನಂದರು ಬಾಬಾಜಿಯ ಅಸಾಮಾನ್ಯ ವಿವರಗಳನ್ನು ಶಿಷ್ಯರಿಗೆ ಆಗಾಗ್ಗೆ ವರ್ಣಿಸಿದ್ದುಂಟು. ಶಿಷ್ಯರೊಡನೆ ಪರ್ವತಗಳಲ್ಲಿ ಸಂಚರಿಸುತ್ತಿದ್ದ ಬಾಬಾಜಿ, ಒಂದೆಡೆ ಕೆಲಕಾಲ ಇದ್ದು ನಂತರ ‘ಡೇರಾ ದಂಡ ಉಠಾವೋ’ ಎನ್ನುತ್ತ ಹೊರಡುತ್ತಿದ್ದರು. ಅವರ ಕೈಯಲ್ಲಿ ಬಿದಿರಿನ ದಂಡವೊಂದು ಇರುತ್ತಿತ್ತು, ಕಾಲ್ನಡಿಗೆಯಲ್ಲೇ ಶಿಖರದಿಂದ ಶಿಖರಕ್ಕೆ ಸಾಗುತ್ತಿದ್ದರು. ಅವರು ಅಪೇಕ್ಷೆಪಟ್ಟರಷ್ಟೇ ಇತರರು ಅವರನ್ನು ಕಾಣಬಹುದಿತ್ತು, ಇಲ್ಲವೇ ಗುರುತಿಸಬಹುದಿತ್ತು. ಅಪರೂಪಕ್ಕೊಮ್ಮೆ ಆಹಾರ ಸೇವಿಸುತ್ತಿದ್ದ ಅವರು, ಶಿಷ್ಯರು ತಮ್ಮನ್ನು ಕಾಣಬಂದಾಗ ಹಣ್ಣುಗಳು, ಹಾಲಿನಿಂದ ಕುದಿಸಿದ ಅನ್ನ ಮತ್ತು ತುಪ್ಪವನ್ನು ಅವರಿಂದ ಸ್ವೀಕರಿಸಿದ್ದುಂಟು. ಬಾಬಾಜಿ ಜತೆಗಿದ್ದಾಗಿನ 2 ಘಟನೆಗಳನ್ನು ಕೇವಲಾನಂದರು ಹೀಗೆ ವಿವರಿಸಿದ್ದಾರೆ- ‘ಅದೊಂದು ರಾತ್ರಿ. ಅಗ್ನಿಕುಂಡದ ಸುತ್ತ ಶಿಷ್ಯರು ಕುಳಿತಿದ್ದಾರೆ. ಉರಿಯುತ್ತಿದ್ದ ಕೊಳ್ಳಿಯೊಂದನ್ನು ಬಾಬಾಜಿ ತೆಗೆದುಕೊಂಡು ಶಿಷ್ಯನೊಬ್ಬನ ಭುಜದ ಮೇಲೆ ಬಡಿದರು. ಅಲ್ಲೇ ಇದ್ದ ಲಾಹಿರೀ ‘ಗುರುಗಳೇ ಏನಿದು?’ ಎಂದು ಪ್ರತಿಭಟಿಸಿದಾಗ, ‘ಆತ ಪೂರ್ವಾರ್ಜಿತ ಕರ್ಮಫಲದಂತೆ ನಿಮ್ಮ ಕಣ್ಮುಂದೆಯೆ ಅಗ್ನಿಯಲ್ಲಿ ಭಸ್ಮವಾಗುತ್ತಿದ್ದ. ಅದನ್ನು ತಡೆಹಿಡಿದಿದ್ದೇನೆ’ ಎನ್ನುತ್ತ ಶಿಷ್ಯನ ಸುಟ್ಟುವಿಕಾರಗೊಂಡಿದ್ದ ಭುಜದ ಮೇಲೆ ಶಮನಕಾರಕ ಹಸ್ತವನ್ನಿಟ್ಟು ‘ನಿನ್ನ ಸಾವನ್ನು ತಪ್ಪಿಸಿದ್ದೇನೆ. ನಿನ್ನ ಕರ್ಮದ ಪರಿಣಾಮ ನೀಗಿತು’ ಎಂದರು.

ಇನ್ನೊಂದು ಆಶ್ಚರ್ಯಕರ ಘಟನೆ- ಅಪರಿಚಿತನೊಬ್ಬ ಗುರುಗಳ ಬಿಡಾರದ ಸಮೀಪ ಬಂದಿದ್ದ. ಗುರುಗಳನ್ನು ಕಂಡೊಡನೆ ಅವನ ಮುಖ ಅನಿರ್ವಚನೀಯ ಭಕ್ತಿಭಾವದಿಂದ ಕಳೆ ಏರಿತು. ಆತ ‘ತಾವೇ ಮಹಾತ್ಮ ಬಾಬಾಜಿ. ತಮಗಾಗಿ ಹಲವುಕಾಲ ಹುಡುಕಾಡಿದೆ. ದೈವಯೋಗದಿಂದ ಈಗ ಸಿಕ್ಕಿದಿರಿ. ನನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಿರಿ’ ಎಂದ. ಬಾಬಾಜಿ ಪ್ರತಿಕ್ರಿಯಿಸದಿದ್ದಾಗ ಆತ, ‘ನನ್ನನ್ನು ನಿರಾಕರಿಸಿದರೆ ಪರ್ವತದಿಂದ ಧುಮುಕಿಬಿಡುತ್ತೇನೆ. ದೈವ ಸಾಕ್ಷಾತ್ಕಾರಕ್ಕೆ ನಿಮ್ಮ ಮಾರ್ಗದರ್ಶನ ದೊರೆಯದಿದ್ದರೆ ಈ ಬಾಳಿಗೆ ಬೆಲೆಯಿಲ್ಲ’ ಎಂದ. ಆಗ ಬಾಬಾಜಿ ‘ಪ್ರಪಾತಕ್ಕೆ ಧುಮುಕು; ಈಗಿರುವ ಪರಿಸ್ಥಿತಿಯಲ್ಲಿ ಸ್ವೀಕರಿಸಲಾರೆ’ ಎಂದುಬಿಟ್ಟರು. ಆತ ಪ್ರಪಾತಕ್ಕೆ ಉರುಳೇಬಿಟ್ಟ. ಅಲ್ಲಿದ್ದವರೆಲ್ಲರೂ ಮೂಕವಿಸ್ಮಿತರಾದರು. ಬಾಬಾಜಿ ಸೂಚನೆಯಂತೆ ಅವನ ದೇಹವನ್ನು ಮೇಲಕ್ಕೆ ತರಲಾಯಿತು. ಕಳೇಬರದ ಮೇಲೆ ಗುರುಗಳು ಕೈಯಿಡುತ್ತಿದ್ದಂತೆ ಅದರ ಕಣ್ಣುಗಳು ತೆರೆದವು. ಆತ ಸರ್ವಶಕ್ತ ಗುರುವಿಗೆ ನಮ್ರನಾಗಿ ಅಡ್ಡಬಿದ್ದ. ದಯಾದೃಷ್ಟಿ ಬೀರಿದ ಬಾಬಾಜಿ, ‘ನೀನೀಗ ನನ್ನ ಶಿಷ್ಯನಾಗಲು ಅರ್ಹನಾಗಿದ್ದೀಯೆ. ಸಾವು ನಿನ್ನನ್ನು ರ್ಸ³ಸದು’ ಎಂದು ಹೇಳಿ ಶಿಷ್ಯನನ್ನಾಗಿ ಮಾಡಿಕೊಂಡರು.

ಯುಕ್ತೇಶ್ವರರು ಕಂಡಂತೆ: ಲಾಹಿರೀಯವರ ಶಿಷ್ಯರೇ ಯುಕ್ತೇಶ್ವರರು. ಅವರು ಪರಮಹಂಸ ಯೋಗಾನಂದರ ಗುರುಗಳು. ಒಮ್ಮೆ ಯೋಗಾನಂದರು ಯುಕ್ತೇಶ್ವರರ ಬಳಿ ಬಾಬಾಜಿ ಬಗೆಗೆ ಪ್ರಸ್ತಾಪಿಸಿ ‘ನಿಮಗೆ ಎಂದಾದರೂ ಬಾಬಾಜಿ ಭೇಟಿ ಆಗಿತ್ತೆ?’ ಎಂದು ಪ್ರಶ್ನಿಸಿದಾಗ, ‘ಹೌದು, ಆ ಪರಮಗುರು 3 ಬಾರಿ ದರ್ಶನವಿತ್ತು ಅನುಗ್ರಹಿಸಿದರು. ನಮ್ಮ ಮೊದಲಭೇಟಿ ಅಲಹಾಬಾದಿನ ಕುಂಭಮೇಳದಲ್ಲಿ ಆಯಿತು’ ಎನ್ನುತ್ತ ನೆನಪಿಗೆ ಜಾರಿದರು. ಬಾಬಾಜಿಯವರನ್ನು ಕಂಡಾಗ ಯುಕ್ತೇಶ್ವರರು ಇನ್ನೂ ‘ಸ್ವಾಮಿ’ ಆಗಿರಲಿಲ್ಲ; ಲಾಹಿರೀಯವರಿಂದ ಕ್ರಿಯಾಯೋಗದ ದೀಕ್ಷೆಯನ್ನಷ್ಟೇ ಪಡೆದಿದ್ದರು. 1894ರ ಜನವರಿಯಲ್ಲಿ ಕುಂಭಮೇಳ ನಡೆಯಿತು. ಗುರುಗಳ ಆಣತಿಯಂತೆ ಯುಕ್ತೇಶ್ವರರು ಅಲ್ಲಿಗೆ ಹೋದರು. ಜನಸಂದಣಿಯ ಗದ್ದಲ. ಜ್ಞಾನದಿಂದ ಬೆಳಗುವ ಯಾವೊಬ್ಬ ಗುರುತಿನ ಮುಖವೂ ಕಾಣಲಿಲ್ಲ. ಆಗ ಸಂನ್ಯಾಸಿಯೊಬ್ಬ ಬಂದು ಸಂತರೊಬ್ಬರು ಕರೆಯುತ್ತಿದ್ದಾರೆ ಎಂದ. ಯುಕ್ತೇಶ್ವರರು ಮರವೊಂದರ ಬಳಿಗೆ ಹೋದಾಗ, ಅದರ ನೆರಳಿನಲ್ಲಿ ಶಿಷ್ಯರಿಂದ ಸುತ್ತುವರಿಯಲ್ಪಟ್ಟ ಗುರು ಕಂಡರು. ಅವರ ಕಣ್ಣುಗಳು ತೇಜೋಪೂರ್ಣವಾಗಿದ್ದವು, ಆಕೃತಿ ಅಸಾಮಾನ್ಯವಾಗಿತ್ತು. ಅವರು ಎದ್ದುನಿಂತು ಯುಕ್ತೇಶ್ವರರನ್ನು ಆಲಿಂಗಿಸಿಕೊಂಡು ‘ಸ್ವಾಗತ ಸ್ವಾಮೀಜಿ’ ಎಂದರು ವಾತ್ಸಲ್ಯದಿಂದ. ‘ಪೂಜ್ಯರೇ, ನಾನು ಸ್ವಾಮೀಜಿಯಲ್ಲ, ಆ ಉಪಾಧಿಯನ್ನಿನ್ನೂ ಪಡೆದಿಲ್ಲ’ ಎಂದಾಗ ಆ ಮಹಾಗುರು, ‘ನಾನು ಉಪಾಧಿಯನ್ನು ನೀಡಿದ್ದೇನೆ, ನೀನದನ್ನು ತಿರಸ್ಕರಿಸುವಂತಿಲ್ಲ’ ಎಂದರು. ಆ ಮಾತಿಗೆ ಯುಕ್ತೇಶ್ವರರು ಮಣಿದರು. ಆ ಪರಮಗುರು ಲಾಹಿರೀ ಮಹಾಶಯರಂತೆಯೇ ಕಾಣುತ್ತಿದ್ದರು. ನಂತರ ಅವರಿಬ್ಬರಲ್ಲಿ ಪೂರ್ವ-ಪಶ್ಚಿಮಗಳ ಬಗೆಗಿನ ಸಂವಾದ ನಡೆಯಿತು. ‘ಬೌದ್ಧಿಕ ಸಾಧನೆಯಲ್ಲಿ ಪಶ್ಚಿಮದ ಜನ ಅಗ್ರಗಣ್ಯರೇನೊ ನಿಜ. ವಿಜ್ಞಾನ- ತತ್ತ್ವಶಾಸ್ತ್ರಗಳಲ್ಲಿ ಅವರು ವಿಖ್ಯಾತರಾಗಿದ್ದರೂ, ಧರ್ಮದಲ್ಲಿರುವ ಏಕೀಭಾವವನ್ನು ಗುರುತಿಸಿಲ್ಲ’ -ಹೀಗೆಂದು ಯುಕ್ತೇಶ್ವರರು ಹೇಳಿದಾಗ ‘ಪೂರ್ವ ಮತ್ತು ಪಶ್ಚಿಮ ದೇಶಗಳ ಕಾರ್ಯಚಟುವಟಿಕೆಗಳಲ್ಲಿ ಸುವರ್ಣ ಮಾಧ್ಯಮವೊಂದನ್ನು ಸ್ಥಾಪಿಸಬೇಕಾಗಿದೆ. ಐಹಿಕ ಅಭಿವೃದ್ಧಿಗಾಗಿ ಭಾರತ ಪಶ್ಚಿಮದಿಂದ ಕಲಿಯಬೇಕಾದ್ದು ಬಹಳವಿದೆ. ಅದಕ್ಕೆ ಪ್ರತಿಯಾಗಿ ಯೋಗವಿಜ್ಞಾನದ ಪದ್ಧತಿಗಳನ್ನು ಪಶ್ಚಿಮದವರಿಗೆ ಕಲಿಸುವುದೂ ಅಗತ್ಯವಿದೆ. ಆ ಕೆಲಸ ಮುಂದೆ ಆಗುವುದಿದೆ’ ಎಂದು ಭವಿಷ್ಯ ನುಡಿದರು. ನಂತರ ಬಾಬಾಜಿ, ‘ನೀನು ಭಗವದ್ಗೀತೆಯ ಹಲವು ಅಧ್ಯಾಯಗಳಿಗೆ ವ್ಯಾಖ್ಯಾನ ಬರೆದಿರುವುದು ನನಗೆ ತಿಳಿದಿದೆ. ಆದರೆ, ನೀನು ಪೌರ್ವಾತ್ಯ ಮತ್ತು ಪಾಶ್ಚಾತ್ಯ ಧರ್ಮಗ್ರಂಥಗಳಿಗೆ ಆಧಾರಭೂತವಾದ ಸಾಮರಸ್ಯದ ಕುರಿತು ಪುಸ್ತಕವೊಂದನ್ನು ಬರೆಯಬೇಕು’ ಎಂದು ಆಗ್ರಹಿಸಿದರು.

ನಂತರ ಬಾಬಾಜಿ ಅವರನ್ನು ಕಂಡದ್ದು ವಾರಾಣಸಿಯ ರಾಜಘಾಟ್ ಬಳಿ. ಬಾಬಾಜಿಯವರಿಗೆ ಯುಕ್ತೇಶ್ವರರು ನಮಸ್ಕರಿಸಿದಾಗ ‘ನನ್ನಿಚ್ಛೆಯಂತೆ ಪುಸ್ತಕವನ್ನು ಬರೆದುಮುಗಿಸಿದ್ದು ಸಂತೋಷ ತಂದಿದೆ. ಅದಕ್ಕಾಗಿ ನಿನ್ನನ್ನು ಅಭಿನಂದಿಸಲು ಇಲ್ಲಿಗೆ ಬಂದಿದ್ದೇನೆ’ ಎಂದರು. ನಂತರ ಯುಕ್ತೇಶ್ವರರು ಮನೆಗೆ ಹೋಗಿ ಬಾಬಾಜಿಗೆಂದು ಸವಿಯುಣಿಸನ್ನು ತಂದರು. ಆದರೆ, ಅವರು ಅಲ್ಲಿ ಕಾಣಿಸಲಿಲ್ಲ. ಅಲ್ಲಿಂದ ಲಾಹಿರೀಯವರ ಮನೆಗೆ ಬಂದಾಗ ಬಾಬಾಜಿ ಮರಳಿ ಕಾಣಿಸಿಕೊಂಡರು. ‘ಧ್ಯಾನವನ್ನು ಹೆಚ್ಚು ಅಭ್ಯಾಸಮಾಡು, ನಿನ್ನ ದೃಷ್ಟಿ ಇನ್ನೂ ನಿರ್ದುಷ್ಟಗೊಳ್ಳಬೇಕು’ ಎನ್ನುತ್ತ ಬಾಬಾಜಿ ಅವ್ಯಕ್ತ ತೇಜಸ್ಸಿನೊಳಗೆ ಅಡಗಿಹೋದರು.

ಶ್ರೀ ಬಾಬಾಜಿ ಈಗಲೂ ಹಿಮಾಲಯದ ಗುಹೆಯಲ್ಲಿ ಇರುವರೆಂದು ಸಂಪ್ರದಾಯದ ನಂಬುಗೆ. ಅವರು ಸಾವಿಲ್ಲದ ಮಹಾಯೋಗಿ. ವಿಶ್ವಾದ್ಯಂತ ಭಕ್ತಗಣ ಹೊಂದಿರುವ ಅವರು ಪ್ರತಿಯೊಬ್ಬ ಸಾಧಕನ ಬಾಳಿಗೆ ಬೆಳಕಾಗಿದ್ದಾರೆ!

(ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು)