ಕ್ರಿಯಾಯೋಗದ ಮಹಾತಪಸ್ವಿ ಶ್ರೀ ಲಾಹಿರೀ ಮಹಾಶಯ

ಧುನಿಕ ಭಾರತದ ಆಧ್ಯಾತ್ಮಿಕ ಪುಟದಲ್ಲಿ ಶ್ರೀ ಶ್ಯಾಮಚರಣ ಲಾಹಿರೀ ಹೆಸರು ಪ್ರಸಿದ್ಧವಾದದ್ದು. ಇವರು ಮುಖ್ಯವಾಗಿ ಯೌಗಿಕ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅಪಾರ. ಬಂಗಾಳದೇಶದಲ್ಲಿ ಹುಟ್ಟಿ, ಕಾಶಿಯಲ್ಲಿ ನೆಲೆನಿಂತ ಇವರ ಜೀವನ ತಪೋಮಯವಾದದ್ದು. ಮಹಾವತಾರ ಶ್ರೀಬಾಬಾಜಿ ಅವರಿಂದ ಕ್ರಿಯಾಯೋಗದ ದೀಕ್ಷೆ ಪಡೆದು ಶ್ರೀಮಂತ-ಬಡವರು, ಸ್ವಧರ್ವಿುಯ-ಅನ್ಯಧರ್ವಿುಯರೆನ್ನದೆ ಸಮಭಾವದಿಂದ ಕಾಣುತ್ತ ಉನ್ನತ ಯೌಗಿಕನೆಲೆಗೆ ಕೊಂಡೊಯ್ದವರು ಲಾಹಿರೀ ಮಹಾಶಯರು. ಇವರ ಶಿಷ್ಯರೇ ಶ್ರೀ ಯುಕ್ತೇಶ್ವರ ಗಿರಿ. ಕ್ರಿಯಾಯೋಗವನ್ನು ಜಗದ್ವಾ್ಯಪಿಗೊಳಿಸಿದ ಶ್ರೀ ಪರಮಹಂಸ ಯೋಗಾನಂದರು ಇವರ ಗುರುಪರಂಪರೆಗೆ ಸೇರಿದವರು.

ಜನನ: ಶ್ಯಾಮಚರಣರು 1828ರ ಸೆಪ್ಟೆಂಬರ್ 30ರಂದು ಬಂಗಾಳದ ಘುರ್ನಿ ಎಂಬ ಗ್ರಾಮದಲ್ಲಿ, ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ತಾಯಿ ಮುಕ್ತಕಾಶಿ, ತಂದೆ ಗೌರಮೋಹನ ಲಾಹಿರೀ. ಶ್ಯಾಮಚರಣ ಮಗುವಾಗಿದ್ದಾಗಲೇ ತಾಯಿ ತೀರಿಕೊಂಡಳು. ಇವರು ಕೊನೆಯ ಮಗ. ತಾಯಿಯ ಕುರಿತು ಇವರಿಗೆ ನಸುಕು-ಮಸುಕು ನೆನಪಷ್ಟೇ. ಶ್ಯಾಮಚರಣರು 4ನೇ ವಯಸ್ಸಿನಲ್ಲೇ ಧ್ಯಾನಕ್ಕೆ ಕುಳಿತುಕೊಳ್ಳುತ್ತಿದ್ದುದುಂಟು. ಇವರಿಗೆ 5 ವರ್ಷವಿದ್ದಾಗ, ಪೂರ್ವಿಕರು ಕಟ್ಟಿದ್ದ ಮನೆ ನೆರೆಹಾವಳಿಯಿಂದ ಹಾಳಾಯಿತು. ಆಗ ಕುಟುಂಬ ಬಂಗಾಳದಿಂದ ವಾರಾಣಸಿಗೆ ಪಯಣಿಸಿತು. ಶ್ಯಾಮಚರಣರ ಸಂಪೂರ್ಣ ಜೀವನ ಮುಂದೆ ಅಲ್ಲೇ ಕಳೆಯಿತು.

ಶ್ಯಾಮಚರಣರಿಗೆ ಚಿಕ್ಕಂದಿನಲ್ಲಿಯೇ ಉರ್ದು, ಹಿಂದಿ ಭಾಷೆಗಳು ಕರಗತವಾದವು. ನಂತರ ಸರ್ಕಾರಿ ಸಂಸ್ಕೃತ ಕಾಲೇಜಿಗೆ ಸೇರಿ ಬೆಂಗಾಲಿ, ಸಂಸ್ಕೃತ, ಪರ್ಷಿಯನ್, ಫ್ರೆಂಚ್ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪರಿಣತಿ ಸಾಧಿಸಿದರು. ಆಗಲೇ ವೇದಗಳ ಕುರಿತು ಆಳ ಅಧ್ಯಯನ ಮಾಡಿದರು. ಇವರು ಆಗಾಗ್ಗೆ ಗಂಗಾನದಿಯಲ್ಲಿ ಸ್ನಾನ ಮುಗಿಸಿ ವೇದೋಕ್ತ ಮಂತ್ರಗಳ ಮೂಲಕ ಸೂರ್ಯೋಪಾಸನೆ ಮಾಡುತ್ತಿದ್ದುದುಂಟು. 1846ರಲ್ಲಿ ಕಾಶಿಮೋನಿ ಎಂಬ ಸಾಂಪ್ರದಾಯಿಕ ಹೆಣ್ಣುಮಗಳೊಡನೆ ವಿವಾಹ ನೆರವೇರಿತು. ಈ ದಂಪತಿಗೆ ತಿನ್​ಕೌರಿ ಮತ್ತು ದುಕೌರಿ ಎಂಬ ಗಂಡುಮಕ್ಕಳು, ಹರಿಮೋತಿ, ಹರಿಕಾಮಿನಿ ಮತ್ತು ಹರಿಮೋಹಿನಿ ಎಂಬ ಹೆಣ್ಣುಮಕ್ಕಳು ಜನಿಸಿದರು. ಗಂಡುಮಕ್ಕಳು ಕಾಲಕ್ರಮೇಣ ಸಂತಜೀವನವನ್ನು ಒಪ್ಪಿಕೊಂಡರು. ಕಾಶಿಮೋನಿ ಸುತ್ತಮುತ್ತಲ ಜನಕ್ಕೆ ಗುರುಮಾತೆಯಾದರು. ಗಂಡನನೊಂದಿಗೆ ಬಾಳುವೆ ಮಾಡುತ್ತಲೇ ಆಧ್ಯಾತ್ಮಿಕ ಜೀವನ ನಡೆಸಿದರು. ಒಂದೆಡೆ ಕುಟುಂಬ, ಮತ್ತೊಂದೆಡೆ ಅಧ್ಯಾತ್ಮ ಎರಡನ್ನೂ ಸರಿದೂಗಿಸತೊಡಗಿದ ಶ್ಯಾಮಚರಣರು ಬ್ರಿಟಿಷ್ ಸರ್ಕಾರಕ್ಕೆ ಸೇರಿದ ಮಿಲಿಟರಿ ಇಂಜಿನಿಯರ್ ಇಲಾಖೆಯಲ್ಲಿ ಲೆಕ್ಕಾಧಿಕಾರಿಯಾಗಿದ್ದರು ಮತ್ತು ತಂದೆ ತೀರಿಕೊಳ್ಳುವವರೆಗೂ ವಾರಾಣಸಿಯನ್ನು ಬಿಟ್ಟು ಎಲ್ಲೂ ಹೋಗಲಿಲ್ಲ.

ಬಾಬಾಜಿ ದರ್ಶನ: ಶ್ಯಾಮಚರಣರು 1861ರಲ್ಲಿ ಹಿಮಾಲಯದ ತಪ್ಪಲಲ್ಲಿರುವ ರಾಣಿಖೇತ್ ಎಂಬಲ್ಲಿಗೆ ವರ್ಗವಾದರು. ಅಲ್ಲಿ ಪ್ರತಿನಿತ್ಯ ಹಿಮಾಲಯ ಪರ್ವತದ ಸಮೀಪದಲ್ಲೇ ತಿರುಗಾಡುತ್ತಿದ್ದರು. ಒಮ್ಮೆ ಅನೂಹ್ಯ ಧ್ವನಿಯೊಂದು ಕರೆದಂತಾಗಿ ಧ್ವನಿ ಬಂದಕಡೆ ತಿರುಗಿ ಹೆಜ್ಜೆಹಾಕತೊಡಗಿದಾಗ ಮಹಾಗುರುವನ್ನು ಕಂಡರು. ಬಾಬಾಜಿ ದಯಾರ್ದ್ರಭಾವದಿಂದ ಅವರನ್ನು ತಮ್ಮೆಡೆಗೆ ಸೆಳೆದುಕೊಂಡರು. ಅವರ ಪ್ರಖರ ಧ್ಯಾನಮುಖಸ್ಥಿತಿಗೆ ಶ್ಯಾಮಚರಣರು ಮಾರುಹೋಗಿ ಪಾದಕ್ಕೆರಗಿದರು. ಗುರು-ಶಿಷ್ಯರ ಮಿಲನ ಅಪೂರ್ವವಾಗಿತ್ತು. ಬಾಬಾಜಿ ಶ್ಯಾಮಚರಣರಿಗೆ ಕ್ರಿಯಾಯೋಗದ ದೀಕ್ಷೆ ನೀಡಿದರು. ಬಾಬಾಜಿ ಆಣತಿಯಂತೆ ಪ್ರಪಂಚದಾದ್ಯಂತ ಕ್ರಿಯಾಯೋಗದ ಮಹತ್ವವನ್ನು ಹರಡಲು ಶ್ಯಾಮಚರಣರು ಕಟಿಬದ್ಧರಾದರು. ಗುರುವಿನ ಆಶೀರ್ವಾದ ಪಡೆದು ಮನೆಗೆ ಹಿಂದಿರುಗಿದರು. ಅವರು ವಾಸವಿದ್ದ ರಾಣಿಖೇತ್ ಸುಂದರ ನಿಸರ್ಗಧಾಮಗಳಲ್ಲಿ ಒಂದಾಗಿತ್ತು. ಹಿಮಾಲಯದ ದಿವ್ಯಾನುಭವಗಳ ಜತೆ ಅವರು ವಿಹರಿಸುತ್ತಿದ್ದರು. ಕ್ರಿಯಾಯೋಗದ ಲೋಕಮಹತ್ವವು ಅವರಿಗೆ ಅರಿವಾದದ್ದು ಹಿಮಾಲಯದ ಪರ್ವತಾನುಭವಗಳಲ್ಲಿಯೇ.

ಕೆಲ ದಿನಗಳ ನಂತರ ರಾಣಿಖೇತ್​ನಿಂದ ವಾರಾಣಸಿಗೆ ಹಿಂದಿರುಗಿದ ಶ್ಯಾಮಚರಣರು ಜನರಿಗೆ ಕ್ರಿಯಾಯೋಗದ ಮಹತ್ವವನ್ನು ತಿಳಿಸತೊಡಗಿ, ದಿನಗಳೆದಂತೆ ‘ಲಾಹಿರೀ ಮಹಾಶಯ’ರಾಗಿ ಪ್ರಖ್ಯಾತಿ ಹೊಂದಿದರು. ಅಲ್ಲಿನ ಅಭುಕ್ತ ಮೂಲೆಯೊಂದರಲ್ಲಿ ಆಧ್ಯಾತ್ಮಿಕ ಪುನರುಜ್ಜೀವನ ಕಾರ್ಯ ಪ್ರಾರಂಭವಾಯಿತು. ಶಾಂತತೆಯಿಂದ ಆದರ್ಶ ಗೃಹಸ್ಥನಂತೆ ಜೀವಿಸತೊಡಗಿದ ಲಾಹಿರೀ ಮಹಾಶಯರನ್ನು ಎಲ್ಲರೂ ‘ಭಾವೋನ್ಮತ್ತ ಬಾಬು’ ಎಂದು ಆತ್ಮೀಯವಾಗಿ ಕರೆಯತೊಡಗಿದರು. ಇವರು ಅಲ್ಲಲ್ಲಿ ವಾರದ ಸತ್ಸಂಗ ಶಿಬಿರಗಳನ್ನು, ನಿಯತವಾಗಿ ಗೀತಾಸತ್ಸಂಗಗಳನ್ನು ನಡೆಸುತ್ತ ಶ್ರದ್ಧಾಳುಗಳಿಗೆ ಕ್ರಿಯಾಯೋಗದ ದೀಕ್ಷೆ ನೀಡತೊಡಗಿದರು. 1886ರಲ್ಲಿ ಲೆಕ್ಕಾಧಿಕಾರಿ ಹುದ್ದೆಯಿಂದ ನಿವೃತ್ತರಾದ ನಂತರ ಸಂಪೂರ್ಣವಾಗಿ ಆಧ್ಯಾತ್ಮಿಕ ಅನುಭೂತಿಗೆ ಒಳಗಾದರು. ದರ್ಶನಕ್ಕೆ ಹಾತೊರೆದು ಇವರ ಬಳಿಗೆ ನೂರಾರು ಜನ ಬರತೊಡಗಿದರು. ತೋಟದ ಮಾಲಿಗಳು, ಅಂಚೆಯವರು, ಸಂನ್ಯಾಸಿಗಳು, ರಾಜರು ಮತ್ತು ಗೃಹಿಣಿಯರಿಗೆ ಆಧ್ಯಾತ್ಮಿಕವಿಕಾಸದ ದಾರಿ ತೋರಿಸತೊಡಗಿದರು. ಕ್ರಿಯಾಯೋಗದ ಮೂಲಕ ಅನೇಕ ಸಮಸ್ಯೆಗಳನ್ನು ಪರಿಹರಿಸುತ್ತಿದ್ದರು. ಅವರು ಕೆಲಸ ಮಾಡುತ್ತಿದ್ದ ಕಚೇರಿಯ ಆಂಗ್ಲ ಆಧಿಕಾರಿ, ಲಾಹಿರೀ ಮಹಾಶಯರ ಸರ್ವಾತಿಶಯ ಬದಲಾವಣೆಯನ್ನು ಎಂದೋ ಗುರುತಿಸಿದ್ದ. ಅವನೊಮ್ಮೆ ದುಃಖಿತನಾಗಿದ್ದಾಗ ‘ನಿಮಗೆ ಬಂದಿರುವ ಕಷ್ಟವೇನು?’ ಎಂದು ಸಹಾನುಭೂತಿಯಿಂದ ಕೇಳಿದರು. ಅವನು ‘ಇಂಗ್ಲೆಂಡಿನಲ್ಲಿರುವ ನನ್ನ ಪತ್ನಿ ತೀವ್ರ ಕಾಯಿಲೆಗೆ ಒಳಗಾಗಿದ್ದಾಳೆ, ಹೀಗಾಗಿ ಆತಂಕದಿಂದ ಕಂಗಾಲಾಗಿದ್ದೇನೆ’ ಎಂದಾಗ ‘ಆಕೆಯ ಸಮಾಚಾರ ತಿಳಿದುಹೇಳುತ್ತೇನೆ’ ಎಂದು ಲಾಹಿರೀ ಮಹಾಶಯರು ಕೋಣೆಯನ್ನು ಬಿಟ್ಟುಹೋಗಿ ಏಕಾಂತದಲ್ಲಿ ಕ್ಷಣಕಾಲ ಕುಳಿತು ನಂತರ ಹಿಂದಿರುಗಿ ಮುಗುಳ್ನಗೆ ಬೀರುತ್ತ ‘ಆಕೆ ಗುಣಮುಖರಾಗಿದ್ದು ಈಗ ನಿಮಗೊಂದು ಪತ್ರ ಬರೆಯುತ್ತಿದ್ದಾರೆ’ ಎಂದು ಪತ್ರದ ಕೆಲ ಭಾಗಗಳನ್ನು ಹೇಳಿದರು. ಆಗ ಅಧಿಕಾರಿ ‘ನೀವು ಸಾಮಾನ್ಯ ಮನುಷ್ಯರಲ್ಲ; ಆದರೆ ನೀವು ಇಚ್ಛಾಮಾತ್ರದಿಂದಲೇ ಕಾಲದೇಶಗಳನ್ನು ದೂರತಳ್ಳಬಲ್ಲವರೆಂದು ನಂಬಲಾರೆ’ ಎಂದ. ಕೆಲ ದಿನಗಳ ನಂತರ ಬಂದ ಪತ್ನಿಯ ಪತ್ರದಲ್ಲಿ, ಕಾಯಿಲೆ ಗುಣವಾಗುತ್ತಿದ್ದ ಶುಭಸಮಾಚಾರವಿತ್ತು. ವಾರದ ಹಿಂದೆ ಮಹಾಗುರುಗಳು ಹೇಳಿದ ನುಡಿಗಟ್ಟುಗಳು ಹಾಗೆಹಾಗೆಯೇ ಇದ್ದವು. ಕೆಲ ತಿಂಗಳ ಬಳಿಕ ಅಧಿಕಾರಿಯ ಪತ್ನಿ ಭಾರತಕ್ಕೆ ಬಂದು, ಮಹಾಶಯರನ್ನು ಭೇಟಿಯಾದಳು. ಅವರನ್ನೆ ದಿಟ್ಟಿಸುತ್ತ ‘ಸ್ವಾಮಿ, ರೋಗಿಯಾಗಿದ್ದ ನನ್ನ ಹಾಸಿಗೆಯ ಬಳಿ ಭವ್ಯತೇಜಸ್ಸಿನ ಪರಿವೇಶವುಳ್ಳ ನಿಮ್ಮ ರೂಪವನ್ನೇ ಕಂಡೆ. ನಂತರ ರೋಗವೆಲ್ಲ ವಾಸಿಯಾಗಿ ನಾನು ಭಾರತಕ್ಕೆ ಬರಲು ಸಾಧ್ಯವಾಯಿತು’ ಎಂದಳು!

ಮಹಾಶಯರು ಪ್ರತಿದಿನ ಒಬ್ಬರು ಅಥವಾ ಇಬ್ಬರು ಶಿಷ್ಯರಿಗೆ ಕ್ರಿಯಾಯೋಗದ ದೀಕ್ಷೆ ನೀಡುತ್ತಿದ್ದರು. ಮಗುವಿನಂಥ ಮುಗ್ಧಸ್ವಭಾವದ ಇವರು ಸಮಾಜದ ಅಂತ್ಯಜರಲ್ಲೂ, ದಲಿತರಲ್ಲೂ ಹೊಸ ಭರವಸೆ ಮೂಡಿಸಿದರು.

ಸತ್ಸಂಗ: ಮಹಾಶಯರು ಗೀತಾ ಸತ್ಸಂಗದ ಸಮಯದಲ್ಲಿ ಸಾಧಕರಿಗೆ ‘ನೀವು ಇನ್ನೊಬ್ಬರ ಸ್ವತ್ತಲ್ಲ, ಯಾರೊಬ್ಬರೂ ನಿಮ್ಮ ಸ್ವತ್ತಲ್ಲ, ನೆನಪಿಟ್ಟುಕೊಳ್ಳಿ. ಒಂದು ದಿನ ಇದ್ದಕ್ಕಿದ್ದಂತೆ ಈ ಪ್ರಪಂಚದಿಂದ ಎಲ್ಲವನ್ನೂ ಬಿಟ್ಟು ಹೊರಟುಹೋಗಬೇಕಾಗುತ್ತದೆ, ಯೋಚಿಸಿ. ಆದ್ದರಿಂದ ಈಗಲೆ ದೇವರ ಬಗ್ಗೆ ಅರಿವು ಪಡೆಯಿರಿ. ದೈವೀ ಅನುಭವವೆಂಬ ಆಕಾಶಬುಟ್ಟಿಯಲ್ಲಿ ಪ್ರತಿದಿನ ಹಾರಾಡುತ್ತ ಮುಂಬರಲಿರುವ ಮೃತ್ಯುವೆಂಬ ನಕ್ಷತ್ರಲೋಕದ ಪ್ರವಾಸಕ್ಕೆ ಸಿದ್ಧರಾಗಿರಿ. ಭ್ರಮೆಯ ಮೂಲಕ ನಿಮ್ಮನ್ನು ನೀವೇ ಮಾಂಸಮೂಳೆಗಳ ಒಂದು ಮುದ್ದೆಯೆಂದು ಕಾಣುತ್ತಿರುವಿರಿ. ಅದು ಹೆಚ್ಚೆಂದರೆ ದುಃಖಗಳ ಗೂಡು. ಎಡೆಬಿಡದೆ ಧ್ಯಾನಾಸಕ್ತರಾಗಿ, ಆಗ ನೀವು ಅನಂತಸತ್ವರೆಂದೂ, ಎಲ್ಲ ಬಗೆಯ ದುಃಖಗಳಿಗೂ ಅತೀತರಾದವರೆಂದೂ ಅರಿಯುವಿರಿ. ಕ್ರಿಯಾಯೋಗವೆಂಬ ರಹಸ್ಯ ಬೀಗದಕೈ ಸಹಾಯದಿಂದ ದೇಹವೆಂಬ ಸೆರೆಮನೆಯಿಂದ ತಪ್ಪಿಸಿಕೊಂಡು ಹೋಗಿ ಆತ್ಮನಲ್ಲಿ ನೆಲೆಸಿರಿ’ ಎಂದು ಬೋಧಿಸುತ್ತಿದ್ದರು.

ತಮ್ಮಲ್ಲಿಗೆ ಬರುತ್ತಿದ್ದ ವಿವಿಧ ಧರ್ಮಗಳ ಶಿಷ್ಯರ ಆಧ್ಯಾತ್ಮಿಕ ಪ್ರಗತಿಗಾಗಿ ಪೋ›ತ್ಸಾಹಿಸುತ್ತಿದ್ದ ಅವರು, ಕ್ರಿಯಾಯೋಗವು ಮುಕ್ತಿಗೆ ಪ್ರಾಯೋಗಿಕ ತಂತ್ರವೆಂದು ಮನವರಿಕೆ ಮಾಡಿಕೊಡುತ್ತಿದ್ದರು. ಧರ್ಮಗ್ರಂಥಗಳನ್ನು ಓದಿ ಆಚರಣೆಗೆ ತಾರದೆ ಕೇವಲ ತಾತ್ತಿ ್ವಚರ್ಚೆ ನಡೆಸುವುದನ್ನು ಬಿಡಬೇಕೆಂದು ತಿಳಿಸುತ್ತಿದ್ದರು. ಪ್ರಾಚೀನ ದರ್ಶನಗಳ ಓದುವಿಕೆ ಮಾತ್ರವಲ್ಲದೆ, ಅವನ್ನು ಅನುಭವಕ್ಕೆ ತಂದುಕೊಳ್ಳಲು ಯತ್ನಿಸುವವನೇ ನಿಜವಾದ ವಿವೇಕಿ ಎನ್ನುತ್ತಿದ್ದರು. ಪ್ರಾಪಂಚಿಕ ಜವಾಬ್ದಾರಿಗಳನ್ನು ಉಲ್ಲಂಘಿಸುವ ಶಿಷ್ಯರನ್ನು ಸೌಮ್ಯವಾಗಿ ತಿದ್ದಿ ಶಿಸ್ತು ಮೂಡಿಸುತ್ತಿದ್ದರು. ಅವರು ಕ್ರಿಯಾಯೋಗವನ್ನು 4 ಹಂತಗಳಲ್ಲಿ ಉಪದೇಶಿಸುವಂತೆ ಗೊತ್ತುಪಡಿಸಿದ್ದರು. ಕ್ರಿಯಾಯೋಗದಲ್ಲಿ ಹಲವು ಕವಲುಗಳಿವೆ; ಆದರೆ, ಅತಿಹೆಚ್ಚಿನ ಪ್ರಾಯೋಗಿಕ ಮೌಲ್ಯ ಇರುವುದು 4 ಹಂತಗಳಲ್ಲೇ ಎಂದು ನಿರ್ದೇಶಿಸುತ್ತಿದ್ದರು. ಒಮ್ಮೆ ಶಿಷ್ಯನೊಬ್ಬ ತನ್ನ ಯೋಗ್ಯತೆಯನ್ನು ಸರಿಯಾಗಿ ಪರಿಗಣಿಸುತ್ತಿಲ್ಲವೆಂಬ ಅಸಮಾಧಾನವನ್ನು ಮಹಾಶಯರ ಮುಂದೆ ವ್ಯಕ್ತಪಡಿಸಿದ. ಅದೇ ವೇಳೆಗೆ ಬೃಂದಾಭಗತ್ ಎಂಬ ನಮ್ರಶಿಷ್ಯ ಒಳಬಂದ. ಆತ ವಾರಾಣಸಿಯ ಅಂಚೆಪೇದೆ. ಮಹಾಶಯರು ನಸುನಗುತ್ತ ‘ಬೃಂದಾ ಸನಿಹದಲ್ಲಿ ಕುಳಿತುಕೋ. ಕ್ರಿಯಾಯೋಗದ ಎರಡನೆಯ ಹಂತದ ಉಪದೇಶವನ್ನು ಪಡೆ’ ಎಂದಾಗ ಆತ ಕೈಜೋಡಿಸಿ ‘ಗುರುದೇವ, ಮೊದಲ ಹಂತವೇ ನನಗೆ ದಿವ್ಯೋನ್ಮತ್ತತೆಯನ್ನು ಉಂಟುಮಾಡಿದೆ. ಅಂಚೆಪತ್ರಗಳನ್ನು ಹಂಚುವ ಕಾರ್ಯ ಸರಿಯಾಗಿ ಸಾಗುತ್ತಿಲ್ಲ. ಅದಕ್ಕಾಗಿ ಆಶೀರ್ವಾದ ಬೇಡಿ ಬಂದಿದ್ದೇನೆ’ ಎಂದ. ಆಗ ಮಹಾಶಯರು ‘ಬೃಂದಾ ಇದೀಗ ಅಧ್ಯಾತ್ಮ ಸಾಗರದಲ್ಲಿ ತೇಲುತ್ತಿದ್ದಾನೆ’ ಎಂದು ಉದ್ಘೋಷಿಸಿದರು. ಅಲ್ಲಿದ್ದ ಶಿಷ್ಯ ಇದನ್ನು ಕೇಳಿ ತಲೆತಗ್ಗಿಸಿದ. ಬೃಂದಾಭಗತ್ ತರುವಾಯದಲ್ಲಿ ಕ್ರಿಯಾಯೋಗದ ಮೂಲಕ ಅಂತರಂಗದ ಜ್ಞಾನವನ್ನು ಹೆಚ್ಚಿಸಿಕೊಂಡ. ಧರ್ಮಸೂಕ್ಷ್ಮಗಳ ವ್ಯಾಖ್ಯಾನ ಕೇಳುವುದಕ್ಕೆ ಕಾಶಿಯ ವಿದ್ವಾಂಸರು ಅವನಲ್ಲಿಗೆ ಬರುತ್ತಿದ್ದರು.

ಲಾಹಿರೀ ಮಹಾಶಯರಿಂದ ಕ್ರಿಯಾಯೋಗದ ಮಹತ್ವ ಅರಿತ ಸಾಧು-ಸಂತರಲ್ಲಿ ಶಿರಡಿ ಸಾಯಿಬಾಬಾ, ವಾರಾಣಸಿಯ ಸ್ವಾಮಿ ಭಾಸ್ಕರಾನಂದ ಸರಸ್ವತಿ, ದೇವಘರ್​ನ ಸಂನ್ಯಾಸಿ ಬಾಲಾನಂದ ಬ್ರಹ್ಮಚಾರಿ ಪ್ರಮುಖರು. ಮಹಾಶಯರ ಆಧ್ಯಾತ್ಮಿಕ ಸಿದ್ಧಿ ಗಮನಿಸಿದ ವಾರಾಣಸಿಯ ಮಹಾರಾಜ ಈಶ್ವರೀ ನಾರಾಯಣ ಸಿನ್ಹ ಬಹಾದ್ದೂರ್ ತಮ್ಮ ಮಗನೂ ಅವರಿಂದ ಅನುಗ್ರಹೀತನಾಗುವುದಕ್ಕೆ ಅವಕಾಶ ಮಾಡಿಕೊಟ್ಟರು, ಮಗನೊಂದಿಗೆ ತಾವೂ ಕ್ರಿಯಾಯೋಗದ ಉಪದೇಶ ಪಡೆದರು.

ಅಂತಿಮ ದಿನಗಳು: 1886ರಲ್ಲಿ, ಮಹಾವತಾರ ಬಾಬಾಜಿ ಅವರಿಂದ ಉಪದೇಶ ಪಡೆದ 25 ವರ್ಷಗಳ ನಂತರ ಲಾಹಿರೀ ಮಹಾಶಯರು ಉದ್ಯೋಗದಿಂದ ನಿವೃತ್ತರಾದರು. ನಿವೃತ್ತಿಯ ನಂತರ ಶಿಷ್ಯರ ಸಂಖ್ಯೆ ಬೆಳೆಯುತ್ತ ಹೋಯಿತು. ನಿಶ್ಚಲ ಪದ್ಮಾಸನ ಹಾಕಿ ದಿನದ ಬಹುಭಾಗವನ್ನು ಮನೆಯಲ್ಲಿ ಮೌನವಾಗಿಯೇ ಕಳೆಯುತ್ತಿದ್ದ ಅವರ ಕಣ್ಣುಗಳು ಅರ್ಧನಿಮೀಲಿತ ಸ್ಥಿತಿಯಲ್ಲಿರುತ್ತಿದ್ದವು. ಉಸಿರಾಡದೆ, ನಿದ್ರಿಸದೆ, ನಾಡಿ ಚಲಿಸದೆ ಹಾಗೂ ಹೃದಯದ ಮಿಡಿತವಿಲ್ಲದೆ, ಗಂಟೆಗಟ್ಟಲೆ ಎವೆಮಿಟುಕಿಸದೆ ಇರುವಂಥ ಅತಿಮಾನವ ಲಕ್ಷಣಗಳು ಗೋಚರವಾಗುತ್ತಿದ್ದವು.

ಅವರು ಶಿಷ್ಯ ಪಂಚಾನನ ಭಟ್ಟಾಚಾರ್ಯರಿಗೆ ಕಲ್ಕತ್ತೆಯಲ್ಲಿ ‘ಆರ್ಯಮಂಡಳಿ ವಿದ್ಯಾಸಂಸ್ಥೆ’ ಎಂಬ ಯೋಗಕೇಂದ್ರ ಸ್ಥಾಪಿಸಲು ಅನುಮತಿಸಿದರು. ಇದು ಯೌಗಿಕ ಔಷಧ-ಮೂಲಿಕೆಗಳನ್ನು ಹಂಚುತ್ತಿತ್ತು. ಇದಲ್ಲದೆ ಮೊಟ್ಟಮೊದಲ ಬಾರಿಗೆ ಬಂಗಾಲಿಭಾಷೆಯಲ್ಲಿ ಭಗವದ್ಗೀತೆಯ ಸಹಸ್ರಾರು ಪ್ರತಿಗಳನ್ನು ಕಡಿಮೆ ಬೆಲೆಯಲ್ಲಿ ಪ್ರಕಟಿಸಲಾಯಿತು. ಲಾಹಿರೀ ಮಹಾಶಯರು ಯಾವ ಪುಸ್ತಕವನ್ನೂ ಬರೆಯಲಿಲ್ಲ; ಆದರೆ, ಧರ್ಮಗ್ರಂಥಗಳಿಗೆ ತಮ್ಮ ವ್ಯಾಖ್ಯಾನ ಏನೆಂದು ತಿಳಿಹೇಳುತ್ತಿದ್ದರು. ಯೋಗವೆಂಬುದು ರಹಸ್ಯಗರ್ಭಿತ ಸಾಧನೆ ಎಂಬ ಅಪಪ್ರಥೆಯನ್ನು ನಿವಾರಿಸಿದರು. ‘ಕ್ರಿಯಾಯೋಗದ ವಿಜ್ಞಾನ ಸಾರ್ವಕಾಲಿಕವಾದುದು. ಅದು ಗಣಿತ ಶಾಸ್ತ್ರದಂತೆ ಖಚಿತವಾದದ್ದು’ ಎಂದು ಮನವರಿಕೆ ಮಾಡಿಕೊಟ್ಟರು. ಇಂದಿನ ಪ್ರಪಂಚದ ಆವಶ್ಯಕತೆಗೆ ತಕ್ಕಂತೆ ಪ್ರಾಯೋಗಿಕ ಸಂದೇಶವನ್ನು ಹರಡಿದರು. ಪ್ರಾಚೀನ ಭಾರತದಲ್ಲಿದ್ದ ಅತ್ಯುತ್ತಮ ಆರ್ಥಿಕ ಮತ್ತು ಧಾರ್ವಿುಕ ಸ್ಥಿತಿಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು. ‘ಪ್ರತಿಯೊಬ್ಬನೂ ತನ್ನ ಅನ್ನವನ್ನು ತಾನೇ ಸಂಪಾದಿಸಬೇಕು. ಕಷ್ಟದಲ್ಲಿರುವವರನ್ನು ರಕ್ಷಿಸಬೇಕು. ಏಕಾಂತದಲ್ಲಿ ಯೋಗಸಾಧನೆ ಮಾಡಬೇಕು’ ಎಂದು ಅವರು ಹೇಳುತ್ತಿದ್ದರು. ಇವರ ಶಿಷ್ಯರಲ್ಲಿ್ಲ ಶ್ರೀಯುಕ್ತೇಶ್ವರಗಿರಿ, ಹರಿನಾರಾಯಣ, ಪಲೌದಿ, ಭೂಪೇಂದ್ರನಾಥ ಸನ್ಯಾಲ್, ಪಂಚಾನನ ಭಟ್ಟಾಚಾರ್ಯ, ರಾಮಗೋಪಾಲ್ ಮಜುಂದಾರ್ ಪ್ರಸಿದ್ಧರು.

‘ಕಾಶಿಬಾಬಾ’ ಎಂದೇ ಹೆಸರಾದ ಲಾಹಿರೀ ಮಹಾಶಯರು

ಪ್ರಾಣೋತ್ಕ›ಮಣ ಮಾಡುವಾಗ ಉತ್ತರಾಭಿಮುಖವಾಗಿ ಪದ್ಮಾಸನದಲ್ಲಿ ಕುಳಿತರು. ದೇಹವನ್ನು ಮೂರು ಬಾರಿ ತಿರುಗಿಸಿ ಮಹಾಸಮಾಧಿಗೆ ಏರಿದರು. ‘ನಾನೀಗ ನನ್ನ ಮನೆಗೆ ಹೋಗುತ್ತಿದ್ದೇನೆ. ಸಮಾಧಾನಚಿತ್ತನಾಗಿದ್ದೇನೆ, ಮತ್ತೊಮ್ಮೆ ಅವತರಿಸುತ್ತೇನೆ’ ಎನ್ನುತ್ತ 1895ರ ಸೆಪ್ಟೆಂಬರ್ 26ರಂದು ಈ ಲೋಕದಿಂದ ತಿರೋಹಿತರಾದರು. 67 ಸಂವತ್ಸರಗಳ ಕಾಲ ಕ್ರಿಯಾಯೋಗದ ಭೂಮಿಕೆಯಲ್ಲಿ ವಿಹರಿಸಿದ ಅವರು, ಬಳಿ ಬಂದವರನ್ನು ಉನ್ನತ ಆಧ್ಯಾತ್ಮಿಕಸ್ತರಕ್ಕೆ ಒಯ್ದರು. ಸಹಸ್ರಾರು ಶಿಷ್ಯರನ್ನು ಯೋಗಭೂಮಿಕೆಗೆ ಯೋಗದಾನ ಮಾಡಿದರು.

(ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು)