Tuesday, 11th December 2018  

Vijayavani

ಪಂಚರಾಜ್ಯಗಳ ಫಲಿತಾಂಶದಲ್ಲಿ ಕೈ ಆಟ-3 ರಾಜ್ಯಗಳಲ್ಲಿ ಅಧಿಕಾರದತ್ತ ಕಾಂಗ್ರೆಸ್​ - ವರ್ಕೌಟ್​ ಆಗದ ಮೋದಿ - ಅಮಿತ್ ಷಾ ಅಲೆ        ರಾಜಸ್ಥಾನದಲ್ಲಿ ಮ್ಯಾಜಿಕ್ ನಂಬರ್ ಸನಿಹ ಕಾಂಗ್ರೆಸ್-95 ಕ್ಷೇತ್ರದಲ್ಲಿ ಕಾಂಗ್ರೆಸ್, 80 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ        ಮಧ್ಯಪ್ರದೇಶದಲ್ಲಿ ಹಾವು ಏಣಿ ಆಟ - ಕೈ ಕಮಲ ಸಮಬಲದ ಹೋರಾಟ - ಸರ್ಕಾರ ರಚನೆಗೆ ಪಕ್ಷೇತರರೇ ನಿರ್ಣಾಯಕರು        ತೆಲಂಗಾಣದಲ್ಲಿ ನಡೆಯದ ಕೈ-ಕಮಲದ ಆಟ-ಶರವೇಗದಲ್ಲಿ ಮುನ್ನುಗಿದ ಕೆಸಿಆರ್​-ನೂತನ ಸಿಎಂ ಆಗಿ ನಾಳೆ ಪ್ರಮಾಣ ವಚನ        ಛತ್ತೀಸ್​ಗಢದಲ್ಲಿ ಅಧಿಕಾರದತ್ತ ಕಾಂಗ್ರೆಸ್ - ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗ        ಮಿಜೋರಾಂನಲ್ಲಿ ಕಾಂಗ್ರೆಸ್​​​ಗೆ ಭಾರಿ ಮುಖಭಂಗ - ಅಧಿಕಾರದ ಗದ್ದುಗೆ ಹಿಡಿದ ಎಂಎನ್​​​ಎಫ್​ - 25 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ       
Breaking News

ತತ್ತ್ವ ಪ್ರಚಾರಕ, ರಾಜಯೋಗಿ ಚಿಕ್ಕಲಿಂಗಣ್ಣಸ್ವಾಮಿ

Sunday, 22.04.2018, 3:04 AM       No Comments

ಮೈಸೂರಿನಲ್ಲಿ ಅನೇಕ ಯೋಗಿಗಳೂ ಸಂನ್ಯಾಸಿಗಳೂ ಸಾಧುಸಂತರೂ ಅವಧೂತರೂ ಆಗಿಹೋದರು. ಕೆಲವರು ಜನಪ್ರಿಯರಾದರೆ, ಮತ್ತೆ ಕೆಲವರು ಎಲೆಮರೆಯ ಕಾಯಂತೆ ಸಂದುಹೋದರು. ಅಂಥವರಲ್ಲಿ ಶ್ರೀಸಹಜಾನಂದ ಭಾರತೀ ಸ್ವಾಮಿಗಳ ಶಿಷ್ಯರಾದ ಗಂಗಡಿಕಾರ ಒಕ್ಕಲಿಗ ಸಮುದಾಯದ ಚಿಕ್ಕಲಿಂಗಣ್ಣನವರೂ ಒಬ್ಬರು. ಇವರು ತತ್ತ್ವಜಿಜ್ಞಾಸೆ, ತತ್ತ್ವಪ್ರಸಾರವನ್ನು ಜೀವನದುದ್ದಕ್ಕೂ ನಡೆಸಿದರು. ಸಹಸ್ರಾರು ಜನರಿಗೆ ವೇದಾಂತದ ರಹಸ್ಯವನ್ನು ತಿಳಿಸಿದರು. ಪದ್ಮಪತ್ರದ ಜಲಬಿಂದುವಿನಂತೆ, ಸಂಸಾರದಲ್ಲಿದ್ದೂ ಅದನ್ನು ದಾಟುವ ಬಗೆಯನ್ನು ಶಿಷ್ಯರಿಗೆ ತಿಳಿಸಿಕೊಟ್ಟರು.

ಜನನ-ವಿದ್ಯಾಭ್ಯಾಸ: ಆಗ ಮೈಸೂರಿನಲ್ಲಿ ಆಳುತ್ತಿದ್ದ ಶ್ರೀಕೃಷ್ಣರಾಜ ಒಡೆಯರ್ ಪ್ರಜಾಹಿತೈಷಿಗಳೂ ಆಶ್ರಿತವತ್ಸಲರೂ ಆಗಿದ್ದರು. ಗಂಗಡಿಕಾರ ಒಕ್ಕಲಿಗ ಸಮುದಾಯದ ನಂಜಪ್ಪ ಎಂಬುವರು ಅವರ ಅರಮನೆಯ ಊಳಿಗಕ್ಕೆ ಸೇರಿದ್ದರು. ಇವರಿಗೆ ಲಿಂಗಣ್ಣ, ಕಪಿನೀಪತಯ್ಯ ಎಂಬ ಗಂಡುಮಕ್ಕಳಿದ್ದರು. ಲಿಂಗಣ್ಣ ಮುನಿಸಿಪಾಲಿಟಿಯಲ್ಲಿ ದರೋಗನಾಗಿದ್ದರೆ, ಕಪಿನೀಪತಯ್ಯ ಚಿಲ್ಲರೆ ಅಂಗಡಿ ಇಟ್ಟುಕೊಂಡಿದ್ದ. ಕಪಿನೀಪತಯ್ಯ ಸತ್ಯಸಂಧ, ಸರಳವಾಗಿ ಬದುಕುತ್ತಿದ್ದ. ಇವನಿಗೆ 1863ರ ನವೆಂಬರ್ 3ರಂದು ಗಂಡುಮಗು ಜನಿಸಿತು. ಚಿಕ್ಕಲಿಂಗಣ್ಣ ಎಂದು ಹೆಸರಿಟ್ಟನು. ಕೆಲವು ವರ್ಷಗಳ ನಂತರ ತಿಮ್ಮಮ್ಮ, ಲಿಂಗಮ್ಮ, ನಂಜಪ್ಪ ಜನಿಸಿದರು. ಕಪಿನೀಪತಯ್ಯರ ಅಣ್ಣ ದರೋಗ ಲಿಂಗಣ್ಣನವರಿಗೆ ಮಕ್ಕಳಿರಲಿಲ್ಲ. ತಮ್ಮನ ಮಗ ಚಿಕ್ಕಲಿಂಗಣ್ಣನನ್ನು ಕಂಡರೆ ಅವರಿಗೆ ಪಂಚಪ್ರಾಣ. ಲಿಂಗಣ್ಣನವರಿಗೆ ಅಧ್ಯಾತ್ಮದಲ್ಲಿ ಆಸಕ್ತಿ. ಇವರ ಮನೆಗೆ ಅರಮನೆಯ ವಿದ್ವಾಂಸರು ಬಂದು ಹೋಗುತ್ತಿದ್ದರು. ಚಿಕ್ಕಲಿಂಗಣ್ಣನವರ ಅಜ್ಜ ನಂಜಪ್ಪನವರಿಗೆ ಮೊಮ್ಮಗನೆಂದರೆ ಅತಿಶಯವಾದ ಪ್ರೀತಿ. ಇವರು ಕಾಲವಾದ ಮೇಲೆ ಅಣ್ಣ-ತಮ್ಮ ಆಸ್ತಿಯನ್ನು ವಿಭಾಗಮಾಡಿಕೊಂಡು ತಮ್ಮತಮ್ಮ ಮನೆಗಳಲ್ಲಿ ಇರುತ್ತಿದ್ದರು. ಆದರೆ, ಚಿಕ್ಕಲಿಂಗಣ್ಣನನ್ನು ಮಾತ್ರ ದರೋಗ ಲಿಂಗಣ್ಣ ವಾಚಾದತ್ತುಪುತ್ರನನ್ನಾಗಿ ಮಾಡಿಕೊಂಡು ಮನೆಯಲ್ಲೇ ಇಟ್ಟುಕೊಂಡರು. ಚೌಲಾದಿ ಸಂಸ್ಕಾರ, ಅಕ್ಷರಾಭ್ಯಾಸ ಮಾಡಿಸಿದರು.

ದರೋಗ ಲಿಂಗಣ್ಣನವರಿಗೆ ಚಿಕ್ಕಲಿಂಗಣ್ಣನನ್ನು ಉತ್ತಮ ವಿದ್ವಾಂಸನನ್ನಾಗಿ ರೂಪಿಸಬೇಕೆಂಬ ಹಂಬಲ. ಆಗ ಶ್ರೀಕರಿಗಿರಿ ಆಚಾರ್ಯ ಎಂಬ ಕನ್ನಡ-ಸಂಸ್ಕೃತ ಉಭಯಭಾಷಾ ವಿದ್ವಾಂಸರು ಕೇವಲ 6 ತಿಂಗಳಲ್ಲಿ ವ್ಯಾಕರಣ, ಅಲಂಕಾರ, ಛಂದಸ್ಸು ಪ್ರಾಚೀನಕಾವ್ಯಗಳ ಅಭ್ಯಾಸವನ್ನು ಮಾಡಿಸಿದರು. ಚಿಕ್ಕಲಿಂಗಣ್ಣನಿಗೆ ಭಾಗವತ, ಭಾರತಗಳಲ್ಲದೆ, ಷಡಕ್ಷರ ಕವಿಯ ಕಾವ್ಯಗಳ ಕಂಠಪಾಠವೂ ನಡೆಯಿತು. ಆತ ಅಷ್ಟೇ ಶ್ರದ್ಧೆಯಿಂದ ಕಲಿತು ಸೈ ಎನಿಸಿಕೊಂಡ. ಒಮ್ಮೆ ವಿದ್ವಾಂಸರು ಸೇರಿ ಚಿಕ್ಕಲಿಂಗಣ್ಣನ ಕಾವ್ಯಪಾಠಗಳನ್ನು ಓದಿಸಿ, ಕೇಳಿ ಅಚ್ಚರಿಗೊಂಡರು. ಆಗವನಿಗೆ ಕೇವಲ 9 ವರ್ಷ. 6 ತಿಂಗಳಲ್ಲೆ ಚಿಕ್ಕಲಿಂಗಣ್ಣನನ್ನು ವಿದ್ವಾಂಸನನ್ನಾಗಿ ಮಾಡಿದ ಕರಿಗಿರಿ ಆಚಾರ್ಯರಿಗೆ ದರೋಗ ಲಿಂಗಣ್ಣನವರು ತಮ್ಮ ಜಮೀನನ್ನೇ ಉಂಬಳಿಯಾಗಿ ನೀಡಿ ಸನ್ಮಾನಿಸಿದರು. ತಮ್ಮ ದತ್ತುಪುತ್ರ ಸಂಸ್ಕೃತದಲ್ಲೂ ಜ್ಞಾನ ಸಂಪಾದಿಸಬೇಕೆಂಬ ಅಪೇಕ್ಷೆ ಅವರಿಗಾಯಿತು. ಆಗ ಕವಿಕುಲತಿಲಕ ಸೋಸಲೆ ಅಯ್ಯಾಶಾಸ್ತ್ರಿಗಳ ಬಳಿ ಚಿಕ್ಕಲಿಂಗಣ್ಣನನ್ನು ಬಿಟ್ಟರು. ಆಗ ಚಿಕ್ಕಲಿಂಗಣ್ಣನಿಗೆ 12 ವರ್ಷ. ಒಂದು ಶುಭಮುಹೂರ್ತದಲ್ಲಿ ಬ್ರಾಹ್ಮಣರೊಬ್ಬರಿಂದ ಶ್ರೀಶಿವಪಂಚಾಕ್ಷರಿ ಮಹಾಮಂತ್ರೋಪದೇಶವೂ ಆಯಿತು.

ಗುರುಗಳ ಅನುಗ್ರಹ: ಚಿಕ್ಕಲಿಂಗಣ್ಣನ ವಿದ್ಯಾದಾಹ ಕಡಿಮೆ ಆಗಲಿಲ್ಲ. ಆಗ ಮೈಸೂರು ಮಹಾರಾಜ ಕಾಲೇಜಿನಲ್ಲಿ ಸೀನಿಯರ್ ಕನ್ನಡಪಂಡಿತರಾಗಿದ್ದ ಚಿಟಕಿ ಸಿದ್ಧಲಿಂಗಶಾಸ್ತ್ರಿಗಳಲ್ಲಿ ವ್ಯಾಸಂಗ ಮಾಡಿ ಭಾಷೆ-ಸಾಹಿತ್ಯ-ಶಾಸ್ತ್ರದ ರಹಸ್ಯಗಳನ್ನು ಪಡೆದ. ಆಗ ಈತನ ಸಹಧ್ಯಾಯಿಗಳಾಗಿದ್ದವರು ಡಾ. ಆರ್. ಶಾಮಾಶಾಸ್ತ್ರಿ, ಆಸ್ಥಾನ ವಿದ್ವಾನ್ ಬೆಟ್ಟಹಲಸೂರು ವೆಂಕಟರಾಮಾಶಾಸ್ತ್ರಿ, ಕಲಾವಿದರಾಗಿ ಮುಂದೆ ಹೆಸರು ಪಡೆದ ಲಕ್ಷ್ಮೀಪತಿಶಾಸ್ತ್ರೀ ಮುಂತಾದವರು. ನಾಗಮಂಗಲ ತಾಲೂಕಿನ ಕದವಳ್ಳಿ ಗ್ರಾಮದ ರಂಗೇಗೌಡರ ಪುತ್ರಿ ಚಿಕ್ಕಮ್ಮನೊಂದಿಗೆ 1883ರಲ್ಲಿ ವಿವಾಹವಾಯಿತು. ದರೋಗ ಲಿಂಗಣ್ಣ ಜವಳಿ ಅಂಗಡಿಯನ್ನು ಚಿಕ್ಕಲಿಂಗಣ್ಣನಿಗೆ ಬಿಟ್ಟುಕೊಟ್ಟರು. ಅವನು ಅಂಗಡಿ ನೋಡಿಕೊಂಡರೂ ಸದ್ವಾ್ಯಸಂಗವನ್ನು ಮಾತ್ರ ಬಿಟ್ಟುಕೊಡಲಿಲ್ಲ. ಇತ್ತ ಸಂಸಾರದ ಚಕ್ರವನ್ನು ಸುಗಮವಾಗಿ ನಡೆಸಿದರು. ತಮ್ಮ ಬಳಿ ಬಂದ ಬ್ರಹ್ಮಚಾರಿ, ಸಂನ್ಯಾಸಿ, ನಿರ್ಗತಿಕರಿಗೆ ಸಹಾಯ ಮಾಡಿದ್ದುಂಟು. ಈ ನಡುವೆ ಭಾರತ-ರಾಮಾಯಣಗಳ ಪ್ರವಚನ ಮಾಡುತ್ತಿದ್ದರು. 1896ರಲ್ಲಿ ಮೈಸೂರಿನಲ್ಲಿ ಪ್ಲೇಗ್ ಕಾಣಿಸಿ ಜನ ದಿಕ್ಕಾಪಾಲಾದರು. ಚಿಕ್ಕಲಿಂಗಣ್ಣ ಹೆಂಡತಿಯನ್ನು ಕರೆದುಕೊಂಡು ನಾಗಮಂಗಲದ ಕದವಳ್ಳಿ ಗ್ರಾಮಕ್ಕೆ ಬಂದರು. ಅಲ್ಲಿ ಭಾರತ-ಪುರಾಣ ಪ್ರವಚನಗಳು ಆದುವು. ಗ್ರಾಮೋದ್ಧಾರ ಆಗಬೇಕಾದರೆ ಧರ್ಮವೇ ಮೂಲವೆಂದು ಜನಕ್ಕೆ ತಿಳಿಸಿದರು. ಜನ ಅವರ ಮಾತು ಕೇಳಿ ಪರವಶರಾದದ್ದುಂಟು. ಕೆಲವು ತಿಂಗಳಾದ ಮೇಲೆ ಚಿಕ್ಕಲಿಂಗಣ್ಣ ಮೈಸೂರಿಗೆ ಹಿಂದಿರುಗಿದರು. ಕಾಲಕ್ರಮೇಣ ಅವರಲ್ಲಿ ವಿರಕ್ತಿ ಬೆಳೆಯುತ್ತ ಹೋಯಿತು. ಅನುಭಾವಶಾಸ್ತ್ರಕ್ಕೆ ಸಂಬಂಧಿಸಿದ ಗ್ರಂಥಗಳ ವ್ಯಾಸಂಗ ಹೆಚ್ಚಾಯಿತು. ಒಮ್ಮೆ ವೃದ್ಧಬ್ರಾಹ್ಮಣರೊಬ್ಬರ ಮೂಲಕ ‘ವಾಸಿಷ್ಠರಾಮಾಯಣ’ದ ಪರಿಚಯವಾಗಿ, ಅದರ ಗಾಢಾಧ್ಯಯನ ಮಾಡಿದರು. ಆ ಕೃತಿಯ ಮೂಲಕ ಇವರ ದೃಷ್ಟಿಕೋನವೇ ಬೇರೆಯಾಯಿತು. ಈ ನಡುವೆ ತಂದೆ ತೀರಿಕೊಂಡರು. ತಾಯಿಗೆ ಅಸ್ವಸ್ಥತೆ! ಆಕೆಗೊ ಮಗನಿಗೆ ಮಕ್ಕಳಿಲ್ಲವೆಂಬ ಚಿಂತೆ. ಮರುಮದುವೆಗೆ ಒತ್ತಾಯ ಮಾಡಿದರು. ತಾಯಿಯ ಇಷ್ಟಾರ್ಥ ನೆರವೇರಿಸಲು ಚಿಕ್ಕಲಿಂಗಣ್ಣ ಅವರು ಮಾಸ್ತಮ್ಮ ಎಂಬ ಕನ್ಯಾರತ್ನವನ್ನು ಕೈಹಿಡಿದರು. ಸ್ವಲ್ಪ ದಿನಗಳಲ್ಲಿ ತಾಯಿ ತೀರಿಕೊಂಡರು. ಚಿಕ್ಕಲಿಂಗಣ್ಣನವರಿಗೆ ವ್ಯಾಪಾರದ ಕಡೆ ಗಮನ ಕಡಿಮೆಯಾಗಿ ತತ್ತ್ವ ತಿಳಿಯುವ ಹಂಬಲ ಬೆಳೆಯತೊಡಗಿತು. ಮಹಲಿಂಗರಂಗನ ‘ಅನುಭವಾಮೃತ’ವನ್ನು ಯಾರಾದರೂ ಪ್ರವಚನ ಮಾಡುತ್ತಿದ್ದರೆ ಅಲ್ಲಿಗೆ ಹೋಗುತ್ತಿದ್ದರು. 1904ರಿಂದ 1908ರವರೆಗೆ ಅನುಭವಾಮೃತ, ವಿವೇಕಾಭರಣ, ಜ್ಞಾನಸಿಂಧು ಮುಂತಾದ ಗ್ರಂಥಗಳ ವ್ಯಾಸಂಗ ಮಾಡಿದರು.

ಪರಮಾರ್ಥಪಥ: 1906ರಲ್ಲಿ ಒಂದು ದಿನ ಬೆಂಗಳೂರಿನಿಂದ ಶ್ರೀಸಚ್ಚಿದಾನಂದ ಸಹಜಾನಂದ ಭಾರತೀ ಸ್ವಾಮಿಗಳು ಮೈಸೂರಿಗೆ ದಯಮಾಡಿಸಿರುವ ವಿಷಯ ತಿಳಿಯಿತು. ಚಿಕ್ಕಲಿಂಗಣ್ಣ ಅವರನ್ನು ಕಂಡಾಗ ತಾವು ಎದುರುನೋಡುತ್ತಿದ್ದ ಗುರು ಇವರೇ ಎಂಬುದು ನಿಶ್ಚಿತವಾಯಿತು. ಪ್ರತಿನಿತ್ಯ ಗುರುಸೇವೆ ಮಾಡತೊಡಗಿದರು. ಸಹಜಾನಂದ ಸ್ವಾಮಿಗಳಿಗೆ ಚಿಕ್ಕಲಿಂಗಣ್ಣನವರ ಅನನ್ಯಭಕ್ತಿ, ಜ್ಞಾನ, ವೈರಾಗ್ಯಗಳು ತಿಳಿಯಿತು. ದೇಹದ ಅನಿತ್ಯತೆ, ಆತ್ಮದ ಶಾಶ್ವತತೆ ಚಿಕ್ಕಲಿಂಗಣ್ಣನವರಿಗೂ ಮನವರಿಕೆ ಆಯಿತು. ಸ್ವಾಮಿಗಳು ‘ಪಂಚದಶಿ’ ಪ್ರಕರಣ ಗ್ರಂಥದ ನಾಟಕದೀಪ ಎಂಬ ಮುಖ್ಯಭಾಗವನ್ನು ಚಿಕ್ಕಲಿಂಗಣ್ಣನವರಿಗೆ ಹೇಳತೊಡಗಿದರು. ಈ ಮಧ್ಯೆ ಚಿಕ್ಕಲಿಂಗಣ್ಣ ಮುಂತಾದ ಸಚ್ಛಿಷ್ಯರಿಗೆ ಸ್ವಾಮಿಗಳು ಪವಿತ್ರ ಹಂಸಮಂತ್ರೋಪದೇಶವನ್ನು ಅನುಗ್ರಹಿಸಿದರು.

ಮೈಸೂರಿನಲ್ಲಿ ಹಲವು ವರ್ಷ ಇದ್ದ ಸಹಜಾನಂದ ಭಾರತೀ ಸ್ವಾಮಿಗಳು ಬೆಂಗಳೂರಿಗೆ ಹೊರಡಲು ಅನುವಾದರು. ಆಗ ಶಿಷ್ಯರ, ಭಕ್ತರ ಕೋರಿಕೆಯ ಮೇರೆಗೆ ಚಿಕ್ಕಲಿಂಗಣ್ಣನವರನ್ನೇ ಪ್ರವಚನಕ್ಕೆ ಸ್ವಾಮಿಗಳು ನಿಯೋಜಿಸಿದರು. ಜನ ಅವರನ್ನು ಸ್ವಾಮಿಗಳೆಂದೇ ಸಂಬೋಧಿಸತೊಡಗಿದರು. 1910ರಲ್ಲಿ ಭಾರತೀ ಗುರುಗಳು ಮೈಸೂರಿಗೆ ಬಂದರು. ಚಿಕ್ಕಲಿಂಗಣ್ಣನವರನ್ನು ಚಾಮುಂಡಿ ಬೆಟ್ಟದ ಅಂದಾನಪ್ಪನವರ ಗವಿಗೆ ಕರೆದುಕೊಂಡುಹೋಗಿ ಮಹಾವಾಕ್ಯೋಪದೇಶವನ್ನು ಅನುಗ್ರಹಿಸಿದರು. ಅನಂತರ ಪಂಚದಶೀ ಮಹಾವಾಕ್ಯವಿವೇಕವನ್ನು ಸಾಂಪ್ರದಾಯಿಕ ಮಾರ್ಗದಿಂದ ಶ್ರವಣ ಮಾಡಿಸಿದರು.

ಇವರ ಜವಳಿ ಅಂಗಡಿ ಬರುಬರುತ್ತ ವೇದಾಂತದ ಅಂಗಡಿಯಾಗಿ ಪರಿಣಮಿಸಿತು. ವೇದಾಂತ ತತ್ತ್ವ ಬಯಸುವವರು ಗಿರಾಕಿಗಳಾದರು. ಅವರಲ್ಲಿ ಬಂದವರಿಗೆ ‘ಅದ್ವೈತವೇದಾಂತ ಆರ್ಷೇಯವಾದುದು. ಅದಕ್ಕೆ ಶಾಸ್ತ್ರದ ಸಮ್ಮತಿಯಿದೆಯೆಂದೂ ಯುಕ್ತಿಯ ಹೊದಿಕೆ ಮತ್ತು ಅನುಭವದ ಆಧಾರ ಇರುವುದೆಂದೂ’ ತಿಳಿಸುತ್ತಿದ್ದರು. 1914ರಲ್ಲಿ ಭಾರತೀ ಗುರುಗಳು ನಿರ್ಯಾಣ ಹೊಂದಿದರು. ಬೆಂಗಳೂರು ಕಲಾಸಿಪಾಳ್ಯದ ಮಠದಲ್ಲಿ ಅವರ ಸಮಾಧಿ ಕಟ್ಟಿ 1915ರಲ್ಲಿ ಶ್ರೀಸಹಜಾನಂದೇಶ್ವರ ಎಂಬ ಹೆಸರಿನ ಲಿಂಗಪ್ರತಿಷ್ಠೆ ಮಾಡಿಸಿದರು. ಹಿಂದಿಯ ‘ತತ್ತಾ್ವನುಸಂಧಾನ’ ಗ್ರಂಥವನ್ನು ಕನ್ನಡಕ್ಕೆ ಅನುವಾದಿಸಿದರು. 1916ರಲ್ಲಿ ಮೈಸೂರಿನ ಸಂತೆಪೇಟೆ ಚಿಕ್ಕಮುದ್ದಪ್ಪ ಎಂಬುವರ ಮನೆಯಲ್ಲಿ ವೇದಾಂತ ಶ್ರವಣ ಮಾಡಿಸುತ್ತಿದ್ದರು. ಶ್ರೀಮನ್ಮಹಾರಾಜ ಸಂಸ್ಕೃತ ಪಾಠಶಾಲೆಯಲ್ಲಿ 19.09.1918ರಂದು ಗಣೇಶೋತ್ಸವ ನಡೆಯಿತು. ಶಾಲೆಯಲ್ಲಿ ಅದ್ವೈತ ವೇದಾಂತ ಬೋಧಿಸುತ್ತಿದ್ದ ಚಿದಂಬರ ಹರಿಹರಶಾಸ್ತ್ರಿಯವರು ತಮಿಳಿನಲ್ಲಿ ನೀಡಿದ ಉಪನ್ಯಾಸದಿಂದ ಚಿಕ್ಕಲಿಂಗಣ್ಣ ಸ್ವಾಮಿಗಳು ಪ್ರಭಾವಿತರಾದರು. ಮನೆಗೆ ಹೊರಡುವಾಗ ಸಾಷ್ಟಾಂಗ ಪ್ರಣಾಮ ಮಾಡಿ ಆಸಕ್ತಿಯನ್ನು ನಿವೇದಿಸಿಕೊಂಡರು. ಆಗ ಶಾಸ್ತ್ರಿಗಳು ‘ಮನೆಗೆ ಯಾವಾಗ ಬೇಕಾದರೂ ಬನ್ನಿ’ ಎಂದರು. ತಾನು ಚತುರ್ಥವರ್ಣದವನೆಂದೂ ವೇದಾಂತ ತಿಳಿಯಲು ಅಡ್ಡಿಯಿಲ್ಲವಾದರೆ ತಮ್ಮ ಮನೆಗೆ ಬರುವೆನೆಂದೂ ತಿಳಿಸಿದರು. ಈ ಮಾತಿಗೆ ಶಾಸ್ತ್ರಿಗಳು ‘ವೇದಾಂತಕ್ಕೆ ಆಜಾತಿ, ಈಜಾತಿ ಎಂಬ ನಿಯಮವಿಲ್ಲ. ಜ್ಞಾನಕ್ಕೆ ಸರ್ವರೂ ಅಧಿಕಾರಿಗಳೇ’ ಎಂದು ಹೇಳಿ ಮನೆಗೆ ಕರೆದುಕೊಂಡು ಹೋಗಿ ಹಲವು ವಿಷಯಗಳನ್ನು ಮನವರಿಕೆ ಮಾಡಿಕೊಟ್ಟರು.

ಚಂದ್ರಶೇಖರ ಭಾರತೀ ಸ್ವಾಮಿಗಳು ಮೈಸೂರಿನಲ್ಲಿ 10.04.1924ರಂದು ಮೊಕ್ಕಾಂ ಹೂಡಿದರು. ಈ ವಿಷಯ ಚಿಕ್ಕಲಿಂಗಣ್ಣನವರಿಗೆ ತಿಳಿದು ನೋಡಲು ಹೋದರು. ಬ್ರಹ್ಮಶ್ರೀ ಕೃಷ್ಣಶಾಸ್ತ್ರಿಗಳು ಸ್ವಾಮಿಗಳ ಭೇಟಿಗೆ ಅವಕಾಶ ಮಾಡಿಕೊಟ್ಟರು. ಚಿಕ್ಕಲಿಂಗಣ್ಣಸ್ವಾಮಿಗಳು ಗುರುಸ್ತೋತ್ರ ಮಾಡುತ್ತ ಅವರಿಗೆ ಸಾಷ್ಟಾಂಗ ಪ್ರಣಾಮ ಮಾಡಿ ಸಹಜಾನಂದ ಸ್ವಾಮಿಗಳು ಕನ್ನಡಿಸಿದ್ದ ಪಂಚದಶೀ ಮತ್ತು ವೃತ್ತಿಪ್ರಭಾಕರವನ್ನು ಕೊಟ್ಟರು. ಸ್ವಾಮಿಗಳು ಪುಸ್ತಕಗಳನ್ನು ನೋಡಿ ಹರ್ಷಪಟ್ಟು ಛಾಂದೋಗ್ಯೋಪನಿಷತ್ತಿನ ಮೂಲಕ ಸರ್ವೇಪನಿಷತ್ ತಾತ್ಪರ್ಯವನ್ನು ಉಪದೇಶಿಸಿದರು. ‘ಬ್ರಹ್ಮವು ಜೀವರೂಪದಿಂದ ವ್ಯವಹರಿಸುತ್ತಿರುತ್ತದೆ. ನಿಮ್ಮೊಳಗಿರುವ ಆತ್ಮವೇ ಬ್ರಹ್ಮ. ಇದರಲ್ಲಿ ಸರ್ವಜಗತ್ತು ಕಲ್ಪಿಸಲ್ಪಟ್ಟಿದೆ. ಇದು ಶ್ರುತಿಗಳ ತಾತ್ಪರ್ಯ’ ಎಂದು ಹೇಳಿ ಫಲಮಂತ್ರಾಕ್ಷತೆ ಕೊಟ್ಟುಕಳಿಸಿದರು. ಈ ನಡುವೆ ಮಗಳು ಕೆಂಪಮ್ಮನ ವಿವಾಹ ನೆರವೇರಿಸಿದರು. ಶಿಷ್ಯರೂ ಭಕ್ತರೂ ಸೇರಿ ಚಿಕ್ಕಲಿಂಗಣ್ಣಸ್ವಾಮಿಗಳು ಇರಲು ಮನೆಯೊಂದನ್ನು ಅರ್ಪಿಸಿದರು. ಇತ್ತ ಬೆಂಗಳೂರು ಮಠವನ್ನು ಜೀರ್ಣೇದ್ಧಾರಗೊಳಿಸಿದರು. ಇವರ ಕಿರಿಯ ಹೆಂಡತಿ ಮಾಸ್ತಮ್ಮ 1929ರಲ್ಲಿ ನಿಧನರಾದರು. ಅದರ ಮರುವರ್ಷವೇ ಅಳಿಯ ತೀರಿಕೊಂಡು, ಚಿಕ್ಕಪ್ರಾಯದ ಮಗಳು ವೈಧವ್ಯದುಃಖ ಅನುಭವಿಸಬೇಕಾಯಿತು. ಚಿಕ್ಕಲಿಂಗಣ್ಣಸ್ವಾಮಿಗಳು ಕ್ರಮಕ್ರಮವಾಗಿ ವಿರಕ್ತಿಯ ಕಡೆಗೆ ನಡೆದರು.

ಕೊನೆಯ ವರ್ಷಗಳು: ಚಿಕ್ಕಲಿಂಗಣ್ಣನವರು ಬೆಂಗಳೂರಿನ ಸಹಜಾನಂದ ಸ್ವಾಮಿಗಳ ಮಠದಲ್ಲಿ ಇರುವಾಗ್ಗೆ ಅಧ್ಯಾತ್ಮ ಪ್ರಕಾಶ ಕಾರ್ಯಾಲಯದ ವೈ. ಸುಬ್ಬರಾಯರ ಪರಿಚಯವಾಗಿ ಅಧ್ಯಯನಕ್ಕೂ ಸಾಧನೆಗೂ ದಾರಿಯಾಯಿತು. ದರ್ಶನಶಾಸ್ತ್ರಗಳಲ್ಲಿ ತದ್ಧಿತರಾಗಿದ್ದ ಕೆ.ಎ. ಕೃಷ್ಣಸ್ವಾಮಿ ಅಯ್ಯರ್ ಇವರ ಜತೆ ಸೇರಿಕೊಂಡರು. ಕೃಷ್ಣಸ್ವಾಮಿ ಬರೆದ ‘ವೇದಾಂತ ಅಥವಾ ಪರಮಾರ್ಥ ತತ್ತ್ವಶಾಸ್ತ್ರ’ (‘ವೇದಾಂತ ಆರ್ ಸೈನ್ಸ್ ಆಫ್ ರಿಯಾಲಿಟಿ’) ಎಂಬ ಗ್ರಂಥದ ಚರ್ಚೆಗಳು ನಡೆಯುತ್ತಿದ್ದುವು. ಚಿಕ್ಕಲಿಂಗಣ್ಣಸ್ವಾಮಿಗಳು ಶಿಷ್ಯರಿಗೆ ‘ನೀವು ಲೋಕದಲ್ಲಿ ವ್ಯವಹಾರದಲ್ಲಿರುತ್ತೀರಿ. ಅದರ ಜತೆಗೆ ಬಿಡುವು ಮಾಡಿಕೊಂಡು ಬ್ರಹ್ಮರೂಪವಾದ ಪ್ರತ್ಯಗಾತ್ಮವನ್ನೆ ನಿತ್ಯೊà—ಹಂ, ಸ್ವಪ್ರಕಾಶೊà—ಹಂ, ಆನಂದೊà—ಹಂ, ಪೂಣೊರ್ೕಹಂ, ಅಸಂಗೊà—ಹಂ, ಅದ್ವಿತೀಯೊà—ಹಂ ಎಂಬುದಾಗಿ ಬ್ರಹ್ಮರೂಪದಿಂದ ಅನುಸಂಧಾನ ಮಾಡುತ್ತಿರಬೇಕು. ನಿಮ್ಮ ಆತ್ಮವನ್ನು ನಿಶ್ಚಯಿಸಿಕೊಳ್ಳಬೇಕು’ ಎಂದು ಉಪದೇಶಿಸುತ್ತಿದ್ದರು. ಮೈಸೂರಿನ ವಿಭಿನ್ನ ಭಾಗಗಳಲ್ಲಿ ಪಂಚದಶೀ, ವಿಚಾರಸಾಗರ, ಅನುಭವಾಮೃತ, ವಾಸಿಷ್ಠರಾಮಾಯಣ ಮುಂತಾದ ವೇದಾಂತ ಗ್ರಂಥಗಳನ್ನು ಉಪನ್ಯಾಸಕ್ಕೆ ಆರಿಸಿಕೊಳ್ಳುತ್ತಿದ್ದರು. ವಿದ್ವಾಂಸರ ಜತೆ ಚರ್ಚೆ ಮಾಡುವಾಗ, ವೇದಾಂತದ ಸೂಕ್ಷ್ಮವಿಚಾರಗಳು ಇವರಿಂದ ಪ್ರಕಟವಾಗುತ್ತಿದ್ದುವು. ಚಿಕ್ಕಲಿಂಗಣ್ಣಸ್ವಾಮಿಗಳಿಗೆ 1937ನೆಯ ವರ್ಷಕ್ಕೆ 72 ವರ್ಷ ತುಂಬಿತು. ದೇಹಸ್ಥಿತಿ ಸರಿಯಾಗಿಲ್ಲದಿದ್ದರೂ ಪಾಠ-ಪ್ರವಚನ, ಶ್ರವಣಗಳನ್ನು ಎಂದೂ ಬಿಟ್ಟಿರಲಿಲ್ಲ. 25.02.1937ರಂದು ದೇಹಾಲಸ್ಯ ಉಂಟಾಗಿ ಶರೀರದ ಬಾಧೆ ಹೆಚ್ಚಾಯಿತು. ಆದರೆ, ಮನಸ್ಸು ಬ್ರಹ್ಮಚಿಂತನೆಯಲ್ಲೆ ತೊಡಗಿತ್ತು. ಶ್ವಾಸೋಚ್ಛಾ್ವಸಗಳಲ್ಲಿ ಹಂಸಮಂತ್ರೋಚ್ಚಾರಣೆ ಕೇಳಿಬರುತ್ತಿತ್ತು. ಆ ರಾತ್ರಿ ಕಳೆದು ಮಾರನೆಯ ದಿನ ಪೂರ್ಣ ನಿಶ್ಶಕ್ತರಾದರು. ಅವರ ಸುತ್ತ ಮಗಳು ಮತ್ತು ಅಪಾರ ಶಿಷ್ಯರು ಸೇರಿದ್ದರು. ಮಧ್ಯಾಹ್ನ ಪಂಚದಶಿಯನ್ನು ಓದಲಾಯಿತು. ಸ್ವಾಮಿಗಳ ಸೂಚನೆಯಂತೆ ಮಂಚದಿಂದ ಕೆಳಗೆ ಇಳಿಸಲಾಯಿತು. ಶಿಷ್ಯರನ್ನು ನೋಡಿ ‘‘ತತ್ತ್ವಮಸಿ, ಅಹಂಬ್ರಹ್ಮಾಸ್ಮಿ ಮೊದಲಾದ ಮಹಾವಾಕ್ಯಗಳ ಅರ್ಥವನ್ನು ಚೆನ್ನಾಗಿ ತಿಳಿಯಿರಿ. ತತ್ತ್ವಮಸಿ ಎಂಬ ಮಹಾವಾಕ್ಯದಲ್ಲಿ ‘ತ್ವಂ’ ಪದಕ್ಕೆ ವಾಚ್ಯಾರ್ಥ ಅವಿದ್ಯಾ ಉಪಾಧಿಯುಳ್ಳ ಚೇತನವೆಂದೇ ಅರ್ಥ. ‘ತತ್’ ಪದಕ್ಕೆ ಮಾಯಾ ಉಪಾಧಿಯುಳ್ಳ ಚೇತನವೆಂದು ಅರ್ಥ. ಈ ಉಭಯಚೇತನಗಳಲ್ಲಿ ತೋರುವಂಥ ಜೀವೇಶ್ವರ ಭೇದ ಏನಿದ್ದರೂ ಕಲ್ಪಿತವೇ. ಇದು ಮಾಯಾ ಅವಿದ್ಯಾ ಉಪಾಧಿಯಿಂದ ಮಾತ್ರ ತೋರುತ್ತದೆ. ಚೇತನದಲ್ಲಿ ಯಾವ ಭೇದವೂ ಇಲ್ಲ. ಅಭೇದ ಜ್ಞಾನವೇ ಏಕಾತ್ಮ ಜ್ಞಾನ. ಇದೇ ಸವೋಪನಿಷತ್ತುಗಳ ಸಿದ್ಧಾಂತ. ಇದೇ ಪರತತ್ತ್ವ. ಈ ಸ್ವರೂಪವೇ ನಿಮ್ಮಗಳ ಸ್ವರೂಪವೆಂದು ದೃಢವಾಗಿ ನಂಬಿ, ವಿಚಾರದಿಂದ ತಿಳಿದು ಆನಂದಿಸಿ, ತಿಳಿಯಿತೋ..’ ಎನ್ನುತ್ತ ಬ್ರಹ್ಮೀಭೂತರಾದರು.

72ನೆಯ ವಯಸ್ಸಿನವರೆಗೂ ವೇದಾಂತ ಪ್ರಚಾರ ಮಾಡುತ್ತ ಜಿಜ್ಞಾಸು ಪ್ರವೃತ್ತಿಯುಳ್ಳವರಾಗಿ ಎಲೆಮರೆಯ ಕಾಯಂತೆ ಬದುಕಿದ್ದ ಮೈಸೂರಿನ ಪುಣ್ಯಪುರುಷರಲ್ಲಿ ಇವರೊಬ್ಬರು!

(ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು.

ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು)

Leave a Reply

Your email address will not be published. Required fields are marked *

Back To Top