Tuesday, 11th December 2018  

Vijayavani

ಪಂಚರಾಜ್ಯಗಳ ಫಲಿತಾಂಶದಲ್ಲಿ ಕೈ ಆಟ-3 ರಾಜ್ಯಗಳಲ್ಲಿ ಅಧಿಕಾರದತ್ತ ಕಾಂಗ್ರೆಸ್​ - ವರ್ಕೌಟ್​ ಆಗದ ಮೋದಿ - ಅಮಿತ್ ಷಾ ಅಲೆ        ರಾಜಸ್ಥಾನದಲ್ಲಿ ಮ್ಯಾಜಿಕ್ ನಂಬರ್ ಸನಿಹ ಕಾಂಗ್ರೆಸ್-95 ಕ್ಷೇತ್ರದಲ್ಲಿ ಕಾಂಗ್ರೆಸ್, 80 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ        ಮಧ್ಯಪ್ರದೇಶದಲ್ಲಿ ಹಾವು ಏಣಿ ಆಟ - ಕೈ ಕಮಲ ಸಮಬಲದ ಹೋರಾಟ - ಸರ್ಕಾರ ರಚನೆಗೆ ಪಕ್ಷೇತರರೇ ನಿರ್ಣಾಯಕರು        ತೆಲಂಗಾಣದಲ್ಲಿ ನಡೆಯದ ಕೈ-ಕಮಲದ ಆಟ-ಶರವೇಗದಲ್ಲಿ ಮುನ್ನುಗಿದ ಕೆಸಿಆರ್​-ನೂತನ ಸಿಎಂ ಆಗಿ ನಾಳೆ ಪ್ರಮಾಣ ವಚನ        ಛತ್ತೀಸ್​ಗಢದಲ್ಲಿ ಅಧಿಕಾರದತ್ತ ಕಾಂಗ್ರೆಸ್ - ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗ        ಮಿಜೋರಾಂನಲ್ಲಿ ಕಾಂಗ್ರೆಸ್​​​ಗೆ ಭಾರಿ ಮುಖಭಂಗ - ಅಧಿಕಾರದ ಗದ್ದುಗೆ ಹಿಡಿದ ಎಂಎನ್​​​ಎಫ್​ - 25 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ       
Breaking News

ಜ್ಞಾನ-ವೈರಾಗ್ಯಗಳ ಮಹಾನಿಧಿ ಶ್ರೀಗೌರೀಶಂಕರರು

Tuesday, 22.05.2018, 3:05 AM       No Comments

ಶ್ರೀಗೌರೀಶಂಕರರು ಉತ್ತರ ಮತ್ತು ದಕ್ಷಿಣಭಾರತದ ಜ್ಞಾನಸಮನ್ವಯೀ ಸೇತುವೆಯಾಗಿದ್ದರು, ಏಕಾಂತದಲ್ಲಿಯೇ ಲೋಕಾಂತವನ್ನು ಸಮರಸಗೊಳಿಸಿದರು. ನಾನಾ ಶಾಸ್ತ್ರಗಳ ನಾನಾ ದರ್ಶನಗಳ ಪರ್ವತವೇ ಆಗಿದ್ದ ಅವರು ಆಧುನಿಕ ಕರ್ನಾಟಕದ ಶಿವಸಂತರಾಗಿ ಬೆಳಗಿದರು.

ಮಹಾಸಂತರಲ್ಲಿ ಕೆಲವರು ಜ್ಞಾನಯೋಗದ ಪರಾಕಾಷ್ಠೆ ಮುಟ್ಟಿರುತ್ತಾರೆ. ಇನ್ನು ಕೆಲವರು ವೈರಾಗ್ಯದ ಪರಮಸಿದ್ಧಿಯನ್ನು ಹೊಂದಿರುತ್ತಾರೆ. ಮತ್ತೂ ಕೆಲವರು ಭಕ್ತಿಯ ನೆಲೆಯನ್ನು ಗಟ್ಟಿಯಾಗಿ ಹಿಡಿದು ನಡೆದಿರುತ್ತಾರೆ. ಆದರೆ, ಕೆಲವರು ಮಾತ್ರ ಈ ಮೂರೂ ತತ್ತ್ವಗಳನ್ನು ಮುಪ್ಪುರಿಮಾಡಿಕೊಂಡು ಜ್ಞಾನ, ವೈರಾಗ್ಯ, ಭಕ್ತಿಗಳ ಸಮನ್ವಯದಲ್ಲಿ ಲೋಕಕ್ಕೆ ಬೆಳಕನ್ನೇ ಸುರಿಸುತ್ತಾರೆ. ಅಂಥವರಲ್ಲಿ ಮೈಸೂರಿನ ಅರಮನೆ ಪಂಚಗವಿ ಮಠದ ಶ್ರೀ ಗೌರೀಶಂಕರ ಸ್ವಾಮಿಗಳು ಅನನ್ಯರು; ಸಕಲರಿಗೂ ಮಾನ್ಯರು ಮತ್ತು ಗೌರವಾರ್ಹರು.

ಜನನ-ವಿದ್ಯಾಭ್ಯಾಸ: ಗೌರೀಶಂಕರರು ಮೈಸೂರು ಜಿಲ್ಲೆ ಟಿ. ನರಸೀಪುರ ತಾಲೂಕಿನ ಉಕ್ಕಲಗೆರೆ ಗ್ರಾಮದಲ್ಲಿ 1895ರಲ್ಲಿ ಜನಿಸಿದರು. ತಂದೆ ಬೆಟ್ಟದಮಠದ ಲಿಂಗಪ್ಪ, ತಾಯಿ ಲಿಂಗಮ್ಮ. ಗೌರೀಶಂಕರರು ಬಾಲ್ಯದಲ್ಲಿ ಎಲ್ಲರಂತೆ ಆಟ ಆಡುತ್ತ ಕಳೆದವರೇ. ಆದರೆ, ಓರಗೆಯ ಹುಡುಗರಿಗಿಂತ ವಿಶಿಷ್ಟ ವ್ಯಕ್ತಿತ್ವ ಅವರಲ್ಲಿ ತೋರುತ್ತಿತ್ತು, ಅಲೌಕಿಕದ ನಡೆನುಡಿಯಿತ್ತ್ತು. ಉಕ್ಕಲಗೆರೆಯ ನೈಸರ್ಗಿಕ ಸೌಂದರ್ಯ, ಅಂತರಂಗದ ಶಿವಸೌಂದರ್ಯ ಒಂದಕ್ಕೊಂದು ಬೆರೆತಿದ್ದವು. 8ನೇ ವರ್ಷದಲ್ಲಿ ಮೈಸೂರಿಗೆ ಬಂದರು. 4 ವರ್ಷ ಸಂಸ್ಕೃತ-ಕನ್ನಡ ಪ್ರಾಥಮಿಕ ವಿದ್ಯಾಭ್ಯಾಸ ಆಯಿತು! ಸುಪ್ತವಾಗಿದ್ದ ಜ್ಞಾನ-ವೈರಾಗ್ಯ-ಭಕ್ತಿಗಳು ಇಲ್ಲಿ ಅರಳಿದವು. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿದ್ದ ಅರಮನೆ ಪಂಚಗವಿ ಮಠದ ವಿರಕ್ತಾಶ್ರಮ ಸ್ವೀಕಾರ ಮಾಡುವ ಪ್ರಸಂಗ ಒದಗಿತು. ಅರಮನೆ-ಗುರುಮನೆ ಒಂದಾದವು. ಮಠದ ಉಸ್ತುವಾರಿಕೆ ಅರಮನೆಯದೇ ಆಗಿತ್ತು. 12 ವರ್ಷದ ಗೌರೀಶಂಕರರು ಮುಂದಿನ 6 ವರ್ಷ ಸಂಸ್ಕೃತ ಪಾಠಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದರು. ಆದರೆ, ವ್ಯಾಸಂಗಮುಖಕ್ಕೆ ಮೈಸೂರು ಕಿರಿದೆನಿಸಿ ಜ್ಞಾನಾರ್ಜನೆಗಾಗಿ ಕಾಶಿಗೆ ಹೊರಡಲು ತಯಾರಾದರು. ವೀರಶೈವ ಸಮಾಜದ ಮುಖಂಡರಾದ ಪರಮಶಿವಯ್ಯ ಶಾಂತವೀರಪ್ಪ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್​ರ ಸಹಾಯ ದೊರಕಿ ಶ್ರೀಗಳು 1914ರಲ್ಲಿ ಕಾಶಿಗೆ ತೆರಳಿದರು.

ಅವರು ಕಾಶಿಗೆ ಹೊರಟ ಹೊತ್ತಿನಲ್ಲೆ ಮೈಸೂರು ರಾಜಮನೆತನದ ರಾಣಿವಾಸದವರೊಬ್ಬರು ಜೀವಿತದ ಕೊನೆಯನ್ನು ಕಾಶಿಯಲ್ಲಿ ಕಳೆಯಬೇಕೆಂದು ನಿಶ್ಚಯಿಸಿ ಅಲ್ಲಿಗೆ ತೆರಳಿದ್ದರು. ಗೌರೀಶಂಕರರು ಆಕೆಯ ಆಶ್ರಯ ಬೇಡಿದರೆ, ಆ ತಾಯಿಯು ಗೌರೀಶಂಕರರನ್ನು ಗುರುವಾಗಿ ಸ್ವೀಕರಿಸಿದರು. ವಿದ್ಯಾಭ್ಯಾಸ ಅವ್ಯಾಹತವಾಗಿ ಸಾಗಿ 6 ಆಚಾರ್ಯ ಪರೀಕ್ಷೆಗಳಲ್ಲಿ ಉನ್ನತದರ್ಜೆಯಲ್ಲಿ ಉತ್ತೀರ್ಣರಾದರು. ಸಂಸ್ಕೃತ, ಇಂಗ್ಲಿಷ್, ಇತಿಹಾಸ, ಸಮಾಜಶಾಸ್ತ್ರ, ದರ್ಶನ, ಮನೋವಿಜ್ಞಾನ ಮೊದಲಾದ 12 ಸ್ನಾತಕೋತ್ತರ ಪದವಿಗಳನ್ನು ಅನತಿ ಕಾಲದಲ್ಲೆ ಪಡೆದರು. ಪ್ರಾಯಶಃ, ಒಟ್ಟು 18 ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದ ಏಕೈಕ ವಿರಕ್ತರು ಇವರೊಬ್ಬರೇ. ಕನ್ನಡ-ಸಂಸ್ಕೃತ-ಇಂಗ್ಲಿಷ್ ಭಾಷಾಪ್ರಭುತ್ವದ ಜತೆ ಹಿಂದಿ, ಪಾಳಿ, ಪ್ರಾಕೃತ, ಬಂಗಾಳಿ, ಭೋಜಪುರಿ, ಉರ್ದು, ಪಾರ್ಸಿ, ಫ್ರೆಂಚ್, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಪ್ರಭುತ್ವ ಪಡೆದರು. ಉಪನಿಷತ್ತು, ಆಗಮ, ಮೀಮಾಂಸಾ, ಪುರಾಣಗಳು, ಮಹಾಕಾವ್ಯಗಳು ಸೇರಿ ಹಲವು ವಿಷಯಗಳಲ್ಲಿ ಆಳಜ್ಞಾನವನ್ನು ಆಯಾಯ ಆಚಾರ್ಯರಿಂದಲೇ ಪಡೆದರು!

ಸಕಲಶಾಸ್ತ್ರಜ್ಞ: ಗೌರೀಶಂಕರರು ದ್ವೈತ, ಅದ್ವೈತ, ವಿಶಿಷ್ಟಾದ್ವೈತ, ಶಕ್ತಿವಿಶಿಷ್ಟಾದ್ವೈತಗಳಲ್ಲದೆ ಭೇದಾದ್ವೈತ, ಮುಂತಾದ ಅನ್ಯದರ್ಶನಗಳ ಚೂಲಮೂಲಗಳನ್ನು ಬಲ್ಲವರಾಗಿದ್ದರು. ಕನ್ನಡ-ಸಂಸ್ಕೃತ ಮಹಾಕಾವ್ಯಗಳ ಅನುಸಂಧಾನ ಮಾಡಿಕೊಂಡಿದ್ದರು. ಲಾಕುಳ, ಪಾಶುಪತ, ಕಾಳಾಮುಖ ಪಂಥಗಳ ಸೂಕ್ಷ್ಮಭೇದಗಳನ್ನು ಒರೆಹಚ್ಚಿ ನೋಡಬಲ್ಲ ಸಾಮರ್ಥ್ಯ ಅವರಿಗಿತ್ತು. ಒಟ್ಟಿನಲ್ಲಿ ನಾನಾ ಶಾಸ್ತ್ರಗಳ ನಾನಾ ದರ್ಶನಗಳ ಪರ್ವತವೇ ಅವರಾಗಿದ್ದರು. ಕಾಶಿಯಲ್ಲಿ ಸ್ವಾಮಿಗಳು ಉಪನ್ಯಾಸ-ಸಂವಾದಗಳಲ್ಲಿ ತೊಡಗಿದ್ದುಂಟು. ಯಾವ ವಿಷಯಕ್ಕೂ ಪೂರ್ವಸಿದ್ಧತೆ ಮಾಡಿಕೊಳ್ಳುತ್ತಿರಲಿಲ್ಲ! ಬಾಲಗಂಗಾಧರ ತಿಲಕ್, ಗಾಂಧೀಜಿ, ಕೃಪಲಾನಿ, ರಾಜಾಜಿ, ರಾಜೇಂದ್ರಪ್ರಸಾದ್, ಶ್ರೀಪ್ರಕಾಶ್ ಮುಂತಾದ ರಾಜಕೀಯ ಸಂತರು ಇವರನ್ನು ಭೇಟಿಯಾಗಿ ವಿಚಾರ-ವಿನಿಮಯ ಮಾಡುತ್ತಿದ್ದರು. ಮದನಮೋಹನ ಮಾಳವೀಯರ ಕೋರಿಕೆಯ ಮೇರೆಗೆ ಸ್ವಾಮಿಗಳು ಬನಾರಸ್ ವಿಶ್ವವಿದ್ಯಾಲಯದ ಪೊ›ಫೆಸರ್ ಹುದ್ದೆಯಲ್ಲಿ ಕೆಲಕಾಲ ಇದ್ದುದುಂಟು. ಆಗ ವಿ.ವಿ.ಯಿಂದ ಅವರು ವೇತನ ಪಡೆಯುತ್ತಿರಲಿಲ್ಲ. ಕಾಶಿಯಲ್ಲಿದ್ದಾಗ ತಮ್ಮ ಕಾಯಕವನ್ನು ತಾವೇ ಮಾಡಿಕೊಳ್ಳುತ್ತಿದ್ದರು. ಲಿಂಗಪೂಜಾ ನಿಷ್ಠೆಗೆ, ಆಚಾರ ಪರಿಪಾಲನೆಗೆ ಎಂದೂ ಭಂಗ ತಂದುಕೊಂಡವರಲ್ಲ.

ತಾಯ್ನಾಡಿಗೆ: ಸ್ವಾಮಿಗಳು ಹೀಗೆ ಕಾಶಿಯಲ್ಲಿ 33 ವರ್ಷ ಸ್ವಾಧ್ಯಾಯ- ಪ್ರವಚನಗಳಲ್ಲಿಯೂ ವೈರಾಗ್ಯಭಾವನೆಯಲ್ಲೂ ವಿಹರಿಸುತ್ತಿದ್ದರು. ಈ ನಡುವೆ ತಾಯ್ನಾಡಿಗೆ ಹಿಂದಿರುಗುವ ಅಪೇಕ್ಷೆಯನ್ನು ತಾಯಿಯವರಿಗೆ ತಿಳಿಸಿದಾಗ ಅವರು ಒಪ್ಪಲಿಲ್ಲ. ಕೆಲ ದಿನಗಳ ನಂತರ ತಾಯಿ ಲಿಂಗೈಕ್ಯರಾದರು. ಅವರ ಔರ್ಧ್ವದೈಹಿಕ ಕ್ರಿಯೆಗಳನ್ನು ಮುಗಿಸಿ, ಪುಸ್ತಕಗಳೊಂದಿಗೆ 1946ರಲ್ಲಿ ಬೆಂಗಳೂರಿಗೆ ಹಿಂದಿರುಗಿದರು. ಸುತ್ತೂರುಮಠದ ಶ್ರೀಶಿವರಾತ್ರಿ ರಾಜೇಂದ್ರಸ್ವಾಮಿಗಳು ಮತ್ತು ಭಕ್ತಮಂಡಳಿಯಿಂದ ಸ್ವಾಗತ ಸಿಕ್ಕಿತು. ಇದು ಅಭೂತಪೂರ್ವ ಪ್ರಸಂಗ. ಸುತ್ತೂರು ಶ್ರೀಗಳು ಉಳಿಯಲು ವ್ಯವಸ್ಥೆ ಮಾಡಿದರು. ಸಿದ್ಧಗಂಗಾ ಮಠದ ಶ್ರೀ ಶಿವಕುಮಾರಸ್ವಾಮಿಗಳು ಬಂದು ದರ್ಶನಾಶೀರ್ವಾದದ ಲಾಭ ಪಡೆದರು. ಬೆಂಗಳೂರಿನ ಸಂಘ-ಸಂಸ್ಥೆಗಳು ಉಪನ್ಯಾಸಗಳಿಗೆ ಆಹ್ವಾನಿಸಿದವು. 1946ರ ಚೈತ್ರ ಮಾಸದಲ್ಲಿ ಬೆಂಗಳೂರಿನಿಂದ ಮೈಸೂರಿಗೆ ತೆರಳಿ ಅರಮನೆ ಪಂಚಗವಿಮಠದಲ್ಲಿ ಉಳಿದುಕೊಂಡರು. ಮೈಸೂರಿನ ನಾನಾಕಡೆ ಉಪನ್ಯಾಸಗಳು ಜರುಗಿದವು. ಕಿರಿದರಲ್ಲಿ ಪಿರಿದರ್ಥವನ್ನು ಹೇಳುವ ಅಸೀಮ ಸಾಮರ್ಥ್ಯ ಶ್ರೀಗಳವರದಾಗಿತ್ತು.

ಸ್ವಾಮಿಗಳ ಪ್ರವಚನ, ಕಾವ್ಯಪ್ರತಿಭೆ, ಪಾಂಡಿತ್ಯ, ವೈರಾಗ್ಯಭಾವ, ಭಕ್ತಿಯ ಪರಾಕಾಷ್ಠೆ ಎಲ್ಲರನ್ನೂ ಆನಂದಪರವಶಗೊಳಿಸುತ್ತಿತ್ತು! ಉತ್ತರಕರ್ನಾಟಕ ಮೊದಲಾದ ಕಡೆಗಳಿಂದ ಉಪನ್ಯಾಸಕ್ಕೆ ಕೋರಿಕೆಗಳು ಬರತೊಡಗಿದವು. ಸಿದ್ಧಗಂಗಾ ಶ್ರೀಗಳ ಕೋರಿಕೆಯ ಮೇರೆಗೆ 1951ರ ಶ್ರಾವಣಮಾಸದ ಕೊನೆಯ 4-5 ದಿನಗಳ ಮಟ್ಟಿಗೆ ದಯಮಾಡಿಸಿ ಅವರು ನೀಡಿದ ಉಪನ್ಯಾಸ ಎಲ್ಲರ ಕಣ್ಣನ್ನು ತೆರೆಸಿತು! ಸಿದ್ಧಗಂಗಾ ಶ್ರೀಗಳು ಮನಮುಟ್ಟಿ ಅಭಿವಂದಿಸಿದರು. ಅಲ್ಲಮಪ್ರಭು, ಬಸವಣ್ಣ, ಅಕ್ಕಮಹಾದೇವಿ, ಸಿದ್ಧರಾಮ ಮುಂತಾದವರ ಕುರಿತಾದ ಉಪನ್ಯಾಸಗಳು ಎಲ್ಲರನ್ನೂ ಎಚ್ಚರಗೊಳಿಸಿತು. ವಚನಗಳ ತಾತ್ತಿ್ವಕ ಸಂಪತ್ತು ಮತ್ತು ಶಿವಾನುಭಾವದ ನೆಲೆಗಳನ್ನು ಎಳೆಎಳೆಯಾಗಿ ಬಿಡಿಸಿ ತೋರಿಸಿದರು. ಶ್ರೀಮೃತ್ಯುಂಜಯ ಮಹಾಸ್ವಾಮಿಗಳವರ ಮಠದಲ್ಲಿ ಜಗದ್ಗುರು ಶ್ರೀಮುರುಘರಾಜೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ಶಿವಾನುಭವ ಸಮ್ಮೇಳನ ಪ್ರತಿವರ್ಷ ನೆರವೇರುತ್ತಿತ್ತು. 1951ರಲ್ಲಿ ಮೃತ್ಯುಂಜಯ ಶ್ರೀಗಳ ಕೋರಿಕೆಯ

ಮೇರೆಗೆ ಗೌರೀಶಂಕರ ಶ್ರೀಗಳು ಧಾರವಾಡಕ್ಕೆ ದಯಮಾಡಿಸಿ ‘ಸಿದ್ಧರಾಮನ ಸಂಪಾದನೆ’ ಕುರಿತು ಅವಿಚ್ಛಿನ್ನವಾಗಿ ಮಾತನಾಡಿದ್ದು ಕೇಳಿ ಸಿದ್ಧರಾಮನೇ ಮಾತಿನರೂಪ ಧರಿಸಿ ಎಲ್ಲರ ಮನಸ್ಸನ್ನು ಹೊಕ್ಕ ದಿವ್ಯಾನುಭವವಾಯಿತು. ಶ್ರೀಮುರುಘರಾಜೇಂದ್ರರು ಭಾಷಣ ಮುಗಿದ ಮೇಲೆ ಅಪ್ಪಿಕೊಂಡು ‘ಇಂಥ ಅದ್ಭುತ ಪಾಂಡಿತ್ಯವನ್ನು ಹೇಗೆ ಸಂಪಾದಿಸಿದೆಯಪ್ಪಾ?’ ಎಂದು ಉದ್ಗರಿಸಿದರಂತೆ.

ಗ್ರಂಥರಚನೆ: ಗೌರೀಶಂಕರರು ಬರೆದದ್ದು ಕಡಿಮೆ. ಅವರು ಆಚಾರ್ಯ ಶಂಕರರ ‘ಶಿವಾನಂದಲಹರಿ’ಯಂತೆ ‘ಬಸವಾನಂದಲಹರಿ’ಯನ್ನು ಸಂಸ್ಕೃತದಲ್ಲಿ ಬರೆದರು. ಇದು ಬಸವಣ್ಣನವರ ಜೀವನ-ತತ್ತಾ್ವಲೋಕವನ್ನು ನಿರೂಪಿಸುತ್ತದೆ. ವೀರಶೈವ ಸಿದ್ಧಾಂತದ ಹಿನ್ನೆಲೆಯಲ್ಲಿ ಅವರು ಗೀತೆಯ 200 ಶ್ಲೋಕಗಳಿಗೆ ಸಮನ್ವಯಿಸಿ ಭಾಷ್ಯರಚನೆ ಮಾಡಿದ್ದರಂತೆ. ಆದರೆ, ಹಸ್ತಪ್ರತಿ ನಮಗೆ ದೊರಕಿಲ್ಲ. ‘ಗೀತಾಭಾಷ್ಯ ರಚನೆ ನನ್ನ ಪಾಲಿನ ಕೆಲಸ’ ಎಂದು ಸುತ್ತೂರು ಶ್ರೀಗಳ ಬಳಿ ಹಲವು ಬಾರಿ ಹೇಳಿದ್ದುಂಟು. ಶ್ರೀಗಳು ಗುಬ್ಬಿವೀರಣ್ಣ ಅವರಿಗೆ ಬಸವೇಶ್ವರ ಮತ್ತು ಅಕ್ಕಮಹಾದೇವಿ ಕತೆಗಳ ಹಸ್ತಪ್ರತಿ ನೀಡಿದ್ದರು. ಅಕ್ಕಮಹಾದೇವಿ ಕುರಿತ 21 ದೃಶ್ಯಗಳ ನಾಟಕವನ್ನು ಬರೆದುಕೊಟ್ಟಿದ್ದರು. ಅಪೂರ್ಣಗೊಂಡ ‘ಅಕ್ಕ ಮಾದೇವಿ’ ಐದು ಆಶ್ವಾಸಗಳ ಮಹಾಕಾವ್ಯ ಅವರ ನಿರ್ಯಾಣದ ನಂತರ ಮುದ್ರಣಗೊಂಡಿತು. ಮಹಾಕವಿ ಷಡಕ್ಷರಿ ಆದ ಮೇಲೆ ಚಂಪೂಕಾವ್ಯದ ಪುನರುಜ್ಜೀವನ ಗೌರೀಶಂಕರ ಶ್ರೀಗಳಿಂದ ನೆರವೇರಿತು. ಕನ್ನಡ ಮತ್ತು ಸಂಸ್ಕೃತ ಚಂಪೂ ಪದ್ಧತಿಯನ್ನು ವಿಶಿಷ್ಟರೀತಿಯಿಂದ ಈ ಕಾವ್ಯದಲ್ಲಿ ಹೊಂದಿಸಿದ್ದಾರೆ!

ಈ ಕಾವ್ಯದಲ್ಲಿ ಕಂಡುಬರುವ ಹಳಗನ್ನಡ ಭಾಷಾಸಂಪತ್ತು, ಅಲಂಕಾರ ವೈವಿಧ್ಯ, ಕಲ್ಪನಾಶಕ್ತಿ, ನಿರೂಪಣೆ, ಭಾವನಿರ್ಭರತೆಗಳು ಎಂಥವರನ್ನೂ ನಿಬ್ಬೆರಗಾಗಿಸುತ್ತವೆ. ಅವರು ಕರ್ನಾಟಕದ ಹಲವು ಕಡೆ ಉಪನ್ಯಾಸ ನೀಡಿದ್ದುಂಟು. ಅವನ್ನು ಪಂ.ಚೆನ್ನಪ್ಪ ಎರೇಸೀಮೆ ಅಕ್ಷರರೂಪಕ್ಕೆ ಇಳಿಸಿದ್ದಾರೆ. ಆ ಲೇಖನಗಳಲ್ಲಿ ವೇದ, ಉಪನಿಷತ್ತು, ಶರಣತತ್ತ್ವ, ಶಿವಯೋಗ, ಷಟ್​ಸ್ಥಲ ವಿವೇಚನೆ, ಅದ್ವೈತಭಕ್ತಿ ಅನಾವರಣಗೊಂಡಿವೆ. ಅಲ್ಲಮ-ಬಸವಣ್ಣ-ಅಕ್ಕಮಹಾದೇವಿ ಕುರಿತ ಉಪನ್ಯಾಸಗಳು ಅವರ ಆಳ ಅಧ್ಯಯನವನ್ನು ಸೂಚಿಸುತ್ತವೆ.

ಪ್ರಸಂಗಗಳು: ಗೌರೀಶಂಕರರು ಕಾಶಿಯಲ್ಲಿ ತರ್ಕಶಾಸ್ತ್ರ ಅಭ್ಯಾಸ ಮಾಡುತ್ತಿರುವಾಗ, ಮಹಾವಿದ್ವಾನ್ ಬಾಲಕೃಷ್ಣ ಮಿಶ್ರಾ ಎಂಬುವರು ಅವರಿಗೆ ತರ್ಕಪಾಠ ಮಾಡುತ್ತಿದ್ದರು. ಆ ಕಾಲದಲ್ಲಿ ಬ್ರಾಹ್ಮಣೇತರರು ಮನೆಯ ಹೊರಗಡೆ ಮಾರುದೂರದಲ್ಲಿ ಕುಳಿತು ಪಾಠ ಕೇಳಬೇಕಾಗಿತ್ತು. ಅವರ ಮನೆಯ ಯಾವ ವಸ್ತುವನ್ನೂ ಮುಟ್ಟುವಂತಿರಲಿಲ್ಲ. ಆದರೆ, ಕ್ರಮೇಣ ಗುರು-ಶಿಷ್ಯರಲ್ಲಿ ಆತ್ಮೀಯತೆ ಬೆಳೆಯತೊಡಗಿತು. ದಿನದ ಬಹುಕಾಲ ಅವರ ಸನ್ನಿಧಿಯಲ್ಲಿಯೇ ಶ್ರೀಗಳು ಇರುತ್ತಿದ್ದರು. ಮುಂದೆ ತರ್ಕಶಾಸ್ತ್ರದಲ್ಲಿ ಉನ್ನತಶ್ರೇಣಿ ಪಡೆದರು. ಇವರಿಗೆ ಆ ಕಾಲಕ್ಕೆ 9 ಸಾವಿರ ರೂ. ಬೆಲೆಬಾಳುವ ‘ರಿಪ್ಪನ್’ ಸ್ಮಾರಕ ಕಂಕಣ ದೊರಕಿತು. ಹೃಷಿಕೇಶದ ಸ್ವಾಮಿ ಶಿವಾನಂದರು ಮೈಸೂರಿಗೆ ಬಂದಾಗ, ಗೌರೀಶಂಕರರು ಕಾರಿನ ಬಳಿಹೋಗಿ ಸ್ವಾಗತಿಸಿದರಂತೆ. ಇದು ಅವರ ವಿನಯಸಂಪನ್ನತೆಗೆ ಸಾಕ್ಷಿ. ಕಾಶಿಯಲ್ಲಿ ಪ್ರಾಚಾರ್ಯರಾಗಿದ್ದಾಗ ಮದನಮೋಹನ ಮಾಳವೀಯರ ಕೋರಿಕೆಯಂತೆ ಪ್ರತಿವರ್ಷ ನಡೆಯುವ ಪಂಡಿತಸಭೆಗೆ ಇವರು ಆಹ್ವಾನಿತರಾಗಿದ್ದರು. ಆ ದಿನ ಮಾಳವೀಯರು ಸಭೆಯಲ್ಲಿದ್ದರು. ವ್ಯಾಸಪೀಠದ ಮೇಲೆ ಗೌರೀಶಂಕರರು ಕುಳಿತಾಗ ಮಡಿವಂತ ಬ್ರಾಹ್ಮಣರು ಸಹಿಸಲಿಲ್ಲ. ಆಗ ವಿಷಾದಗೊಂಡು ವ್ಯಾಖ್ಯಾನ ಮಾಡದೆ ಹಿಂದಿರುಗಿದರು. ಆದರೆ, ವ್ಯವಸ್ಥಾಪಕರು ಕ್ಷಮೆ ಕೇಳಿ ಕರೆದುಕೊಂಡು ಬಂದರು. ನಂತರ ವ್ಯಾಸಪೀಠದ ಮೇಲೆ ಕುಳಿತು ಸ್ವಾಮಿಗಳು ಸಂಸ್ಕೃತದಲ್ಲಿ ಉಪನ್ಯಾಸ ನೀಡಿದರು. ಆಗ ಜಾತಿಯ ದುರಭಿಮಾನವನ್ನು ತಿಳಿಸುವ ಕನ್ನಡ ವಚನವೊಂದನ್ನು ಸಂಸ್ಕೃತಕ್ಕೆ ಅನುವಾದಿಸಿ ಉಪನ್ಯಾಸ ನೀಡಿ, ಜಾತೀಯತೆ ದೇಶದ ಐಕ್ಯತೆಗೂ ಪ್ರಗತಿಗೂ ಮಾರಕವೆಂದು ತಿಳಿಸಿದರು.

ಒಮ್ಮೆ ಸುತ್ತೂರು ಮಠದ ಶ್ರೀಶಿವಯೋಗಿ ಶಿವರಾತ್ರೀಶ್ವರ ಸ್ವಾಮಿಗಳು ತೀವ್ರ ವ್ಯಾಧಿಗೆ ತುತ್ತಾದರು. ಇದು ಕಿರಿಯ ಜಗದ್ಗುರುಗಳಿಗೆ ತಿಳಿದು ದುಃಖಿತರಾದರು. ಗೌರೀಶಂಕರರಿಗೆ ಎಲ್ಲವೂ ತಿಳಿದು ಮೈಸೂರಿನಿಂದ ಹೊರಡುವಾಗ ನೋಟ್​ಬುಕ್ ಮತ್ತು ಪೆನ್ನನ್ನು ತೆಗೆದುಕೊಂಡು ಹೊರಟರು. ಶಿವರಾತ್ರೀಶ್ವರರನ್ನು ಕಂಡು ಮುಖತೊಳೆಯಿಸಿ ಭಸ್ಮಧಾರಣೆ ಮಾಡಿಸಿದರು. ಸುತ್ತೂರು ಶ್ರೀಗಳು ಸ್ವಲ್ಪಹೊತ್ತಿಗೆ ಕಣ್ತೆರೆದರು. ಅವರ ಕೈಗೆ ನೋಟ್​ಬುಕ್ ಕೊಟ್ಟು ಪ್ರಣವಮಂತ್ರ ಬರೆದು ಪ್ರತಿನಿತ್ಯ ‘ಓಂ ನಮಃ ಶಿವಾಯ’ ಬರೆಯಲು ತಿಳಿಸಿದರು. ಇದಾದ ಮೇಲೆ ಅವರ ವ್ಯಾಧಿ ಇನ್ನಿಲ್ಲವಾಯಿತು. ಮುಂದೆ ಅವರು ‘ಮಂತ್ರ ಮಹರ್ಷಿ’ ಎಂಬ ಹೆಸರಿನಿಂದ ಖ್ಯಾತರಾದರು. ಬದುಕಿನಲ್ಲಿ ಬಂದ ಇಂಥ ನೂರಾರು ಪ್ರಸಂಗಗಳನ್ನು ಗೌರೀಶಂಕರರು ಜ್ಞಾನ-ವೈರಾಗ್ಯದ ಬಲದಿಂದ ಪರಿಮಾರ್ಜನಗೊಳಿಸುತ್ತಿದ್ದರು.

ಲಿಂಗೈಕ್ಯ: ಗೌರೀಶಂಕರರು ಅರಮನೆ ಮತ್ತು ಸುತ್ತೂರು ಮಠದೊಡನೆ ಅವಿನಾಭಾವ ಸಂಬಂಧ ಹೊಂದಿದ್ದರು. ನಾಲ್ವಡಿ ಕೃಷ್ಣರಾಜರಿಂದ ಪ್ರಾರಂಭವಾಗಿ ಜಯಚಾಮರಾಜೇಂದ್ರ ಒಡೆಯರ್​ವರೆಗೆ ಈ ಅನುಬಂಧ ಬೆಳೆಯಿತು. ರಾಜರು ಸ್ವಾಮಿಗಳೊಂದಿಗೆ ಹತ್ತಾರು ವಿಷಯಗಳನ್ನು ರ್ಚಚಿಸುತ್ತಿದ್ದುದುಂಟು. ಇವರಿಂದ ಪ್ರತಿನಿತ್ಯ ತೀರ್ಥ ತೆಗೆದುಕೊಳ್ಳದೆ ಮಹಾರಾಣಿಯವರ ದಿನಚರ್ಯು ಪ್ರಾರಂಭಗೊಳ್ಳುತ್ತಿರಲಿಲ್ಲ. ಸ್ವಾಮಿಗಳಿಗೆ ಆಗ 57 ವರ್ಷ. ಕಠಿಣ ತಪಶ್ಚರ್ಯು, ಅಧ್ಯಯನ, ಲಿಂಗಪೂಜೆ ಮಾಡುತ್ತಿದ್ದರು. ಅವರಿಗೆ ಒಮ್ಮೆ ಹೊಟ್ಟೆನೋವು ಕಾಣಿಸಿಕೊಂಡಿತು. ಯಾವ ಔಷಧವೂ ಉಪಯೋಗಕ್ಕೆ ಬರಲಿಲ್ಲ. ಸುತ್ತೂರು ಶ್ರೀಗಳು ಕಿಂಕರ್ತವ್ಯತಾಭಾವದಲ್ಲಿ ತೊಳಲಾಡಿದರು. ಮಹಾರಾಣಿಯೂ ತಲ್ಲಣಗೊಂಡರು, ಸಮಾಜವೂ ಮರುಗಿತು. ಸುತ್ತೂರು ಶ್ರೀಗಳು ಗೌರೀಶಂಕರರನ್ನು ವೆಲ್ಲೂರು ಆಸ್ಪತ್ರೆಗೆ ಕರೆದೊಯ್ದರು. ವ್ಯಾಧಿ ಉಲ್ಬಣಾವಸ್ಥೆಯಲ್ಲಿತ್ತು. ಅಲ್ಲಿಯ ಕ್ರೖೆಸ್ತ ವೈದ್ಯರು ಬೈಬಲ್ಲಿನ ತತ್ತ್ವದ ಮೂಲಕ ಕ್ರಿಸ್ತಪ್ರಭುವಿನ ಅನನ್ಯತೆಯನ್ನು ತಿಳಿಸಿಕೊಟ್ಟರು. ಸಿದ್ಧಗಂಗಾ ಶ್ರೀಗಳಿಗೆ ವಿಷಯ ತಿಳಿದು ವೆಲ್ಲೂರಿಗೆ ಬಂದರು. ಅವರು ಬಂದದ್ದನ್ನು ತಿಳಿದು ಪ್ರಸಾದಕ್ಕೆ ಅಣಿಮಾಡಿಸಿದರು. ಇಬ್ಬರೂ ಪ್ರಸಾದ ಸ್ವೀಕರಿಸಿದರು. ‘ಇಲ್ಲಿಯ ಚಿಂತೆ ಬಿಡಿ.

ನಿಮ್ಮದು ದೊಡ್ಡ ಸಂಸಾರ. ಅದು ಸುಸೂತ್ರವಾಗಿ ಸಾಗಲಿ’ ಎಂದು ಹೇಳಿ ಸಿದ್ಧಗಂಗಾ ಶ್ರೀಗಳನ್ನು ಕಳಿಸಿಕೊಟ್ಟರಂತೆ. ಗೌರೀಶಂಕರರು 1952ರ ಆಗಸ್ಟ್ 12ರಂದು ರಾತ್ರಿ 8.30ಕ್ಕೆ ತಮ್ಮ ಅವತಾರಕಾರ್ಯವನ್ನು ಪರಿಸಮಾಪ್ತಿಗೊಳಿಸಿದರು. ಅಂದು ಕೃಷ್ಣಜನ್ಮಾಷ್ಟಮಿ. ಮರುದಿನ ಮೈಸೂರಿಗೆ ಕಳೇಬರವನ್ನು ತಂದು ಸಮಾಧಿಕಾರ್ಯಗಳನ್ನು ನೆರವೇರಿಸಲಾಯಿತು. ಶ್ರೀಗೌರೀಶಂಕರರು ಉತ್ತರ ಮತ್ತು ದಕ್ಷಿಣಭಾರತದ ಜ್ಞಾನಸಮನ್ವಯೀ ಸೇತುವೆಯಾಗಿದ್ದರು, ಏಕಾಂತದಲ್ಲಿಯೇ ಲೋಕಾಂತವನ್ನು ಸಮರಸಗೊಳಿಸಿದರು. ಶರಣಚಿಂತನೆಗಳ ಸಮಗ್ರನೋಟವನ್ನು ನಾಡಿಗೆ ನೀಡಿ, ಆಧುನಿಕ ಕರ್ನಾಟಕದ ಶಿವಸಂತರಾಗಿ ಬೆಳಗಿದರು!

(ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು)

Leave a Reply

Your email address will not be published. Required fields are marked *

Back To Top