Tuesday, 11th December 2018  

Vijayavani

ಪಂಚರಾಜ್ಯಗಳ ಫಲಿತಾಂಶದಲ್ಲಿ ಕೈ ಆಟ-3 ರಾಜ್ಯಗಳಲ್ಲಿ ಅಧಿಕಾರದತ್ತ ಕಾಂಗ್ರೆಸ್​ - ವರ್ಕೌಟ್​ ಆಗದ ಮೋದಿ - ಅಮಿತ್ ಷಾ ಅಲೆ        ರಾಜಸ್ಥಾನದಲ್ಲಿ ಮ್ಯಾಜಿಕ್ ನಂಬರ್ ಸನಿಹ ಕಾಂಗ್ರೆಸ್-95 ಕ್ಷೇತ್ರದಲ್ಲಿ ಕಾಂಗ್ರೆಸ್, 80 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ        ಮಧ್ಯಪ್ರದೇಶದಲ್ಲಿ ಹಾವು ಏಣಿ ಆಟ - ಕೈ ಕಮಲ ಸಮಬಲದ ಹೋರಾಟ - ಸರ್ಕಾರ ರಚನೆಗೆ ಪಕ್ಷೇತರರೇ ನಿರ್ಣಾಯಕರು        ತೆಲಂಗಾಣದಲ್ಲಿ ನಡೆಯದ ಕೈ-ಕಮಲದ ಆಟ-ಶರವೇಗದಲ್ಲಿ ಮುನ್ನುಗಿದ ಕೆಸಿಆರ್​-ನೂತನ ಸಿಎಂ ಆಗಿ ನಾಳೆ ಪ್ರಮಾಣ ವಚನ        ಛತ್ತೀಸ್​ಗಢದಲ್ಲಿ ಅಧಿಕಾರದತ್ತ ಕಾಂಗ್ರೆಸ್ - ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗ        ಮಿಜೋರಾಂನಲ್ಲಿ ಕಾಂಗ್ರೆಸ್​​​ಗೆ ಭಾರಿ ಮುಖಭಂಗ - ಅಧಿಕಾರದ ಗದ್ದುಗೆ ಹಿಡಿದ ಎಂಎನ್​​​ಎಫ್​ - 25 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ       
Breaking News

ಕ್ರಿಯಾಯೋಗದ ಮಹಾಸಂತ ಪರಮಹಂಸ ಯೋಗಾನಂದ

Sunday, 08.04.2018, 3:05 AM       No Comments

ಯೋಗತತ್ತ್ವ’ದ ನೆಲೆಯನ್ನು ಸಾರಿದ ಮಹಾಸಂತರಲ್ಲಿ ಪೂರ್ಣಾವತಾರಿ ಶ್ರೀಬಾಬಾಜೀ, ಇವರ ಶಿಷ್ಯರು ಮಹಾವತಾರರಾದ ಶ್ರೀಲಾಹಿರೀ ಜೀ ಹಾಗೂ ಇವರ ಶಿಷ್ಯರೇ ಆದ ಸ್ವಾಮಿ ಶ್ರೀಯುಕ್ತೇಶ್ವರ ಗಿರಿ ಪ್ರಮುಖರು. ‘ಎಲ್ಲ ಧರ್ಮಗಳ ಸಂತರು ವಿಶ್ವಪ್ರಿಯನ ಮೂಲಕವೇ ಬ್ರಹ್ಮಾನುಭೂತಿ ಪಡೆಯಲು ಸಾಧ್ಯ. ಪರಮಾತ್ಮನು ನಿರ್ಗಣ ಮತ್ತು ಅಚಿಂತ್ಯನೇ ಆಗಿದ್ದಾನೆ. ವೈಯಕ್ತಿಕ ಆಸ್ತಿಕತೆ ಮತ್ತು ಪರಾತ್ಪರತೆಯ ದರ್ಶನ ವೇದೋಪನಿಷತ್ತು-ಗೀತೆಗಳಲ್ಲಿ ನಿರೂಪಿತವಾಗಿವೆ. ಇವು ವಿರೋಧ ತತ್ತ್ವಗಳಲ್ಲ, ಸಮನ್ವಯಗಳನ್ನು ಹೇಳುತ್ತವೆ. ಭಕ್ತಿ ಮತ್ತು ಜ್ಞಾನ ಪ್ರಧಾನತಃ ಒಂದೇ. ಪರಮಾತ್ಮನನ್ನು ಆಶ್ರಯಿಸುವುದು ಮತ್ತು ಶರಣಾಗತಿ ಇವು ದೈವೀಕೃಪೆಗೆ ಮುಕ್ತಗೊಳಿಸಿಕೊಳ್ಳುವ ಪರಮೋಚ್ಚ ಮಾರ್ಗಗಳು’- ಹೀಗೆಂದು ಯೋಗದ ಸಮನ್ವಯವನ್ನು ಕ್ರಿಯಾಯೋಗದ ಮೂಲಕ ಜಗತ್ತಿಗೆ ಸಾರಿದವರು ಪರಮಹಂಸ ಯೋಗಾನಂದರು.

ಜನನ-ಬಾಲ್ಯ: ಗೋರಖ್​ಪುರದಲ್ಲಿ 1893ರ ಜನವರಿ 5ರಂದು ಜನಿಸಿದ ಇವರ ಜನ್ಮನಾಮ ಮುಕುಂದ. ತಂದೆ ಭಗವತೀ ಚರಣ ಘೊಷ್ (1853-1942) ದಯಾಮಯಿಯಾದರೆ, ತಾಯಿ ಜ್ಞಾನಪ್ರಭಾ ಘೊಷ್ (1868-1904) ಪ್ರೀತಿಯ ಮಹಾಪರ್ವತವೇ ಆಗಿದ್ದರು. ಮುಕುಂದ ಅಣ್ಣಂದಿರ ಜತೆ ಹೊರಗೆ ಆಟವಾಡುತ್ತಲೇ, ಮನೆಯೊಳಗೆ ಆಗಾಗ್ಗೆ ಧ್ಯಾನಕ್ಕೆ ಕೂರುತ್ತಿದ್ದುದೂ ಉಂಟು. ಮುಕುಂದ ಚಿಕ್ಕವನಿರುವಾಗಲೇ ತಾಯಿ ಅಕಾಲಿಕ ಮರಣಕ್ಕೀಡಾದಾಗ ಭಗವತೀ ಚರಣರು ಸಂಸಾರದ ಜವಾಬ್ದಾರಿ ಹೊರಬೇಕಾಯಿತು. ಆಗ ಇವರಿಗೆ ಆಧ್ಯಾತ್ಮಿಕವಾಗಿಯೂ ಮಾನಸಿಕವಾಗಿಯೂ ಒತ್ತಾಸೆಯಾದವರು ಲಾಹಿರೀ ಮಹಾಶಯರೇ. ಅವರಿಂದ ಕ್ರಿಯಾಯೋಗದ ದೀಕ್ಷೆ ಪಡೆದು ಭವದ ನೆರಳನ್ನು ಘೊಷರು ದಾಟಿದರು. ಮುಕುಂದ 8 ವರ್ಷದವನಿದ್ದಾಗ ಲಾಹಿರೀ ಮಹಾಶಯರ ಭಾವಚಿತ್ರದ ಮೂಲಕ ಬೆಳಕಿನ ಅನುಗ್ರಹವಾಯಿತು. ಅವನಿಗೆ ಬಾಲ್ಯದಿಂದಲೂ ಒಂದಲ್ಲ ಒಂದು ರೋಗ ಕಾಡುತ್ತಿತ್ತು. ಒಮ್ಮೆ ಏಷ್ಯಾಟಿಕ್ ಕಾಲರಾ ಬಂದಾಗ, ತಾಯಿಯ ಸೂಚನೆಯಂತೆ ಲಾಹಿರಿ ಮಹಾಶಯರ ಭಾವಚಿತ್ರಕ್ಕೆ ತಲೆಬಾಗಿದ. ಅಲ್ಲಿಂದ ಬಂದ ಬೆಳಕು ಅವನನ್ನು ರೋಗಮುಕ್ತಗೊಳಿಸಿತು. ತಾಯಿ ಜ್ಞಾನಪ್ರಭಾ ತಮ್ಮ ಗುರುಗಳಲ್ಲಿಟ್ಟಿದ್ದ ಅಚಲನಿಷ್ಠೆಯ ಪರಿಣಾಮ ಇದಾಗಿತ್ತು. ಮುಕುಂದ ಚಿಕ್ಕವನಾಗಿದ್ದಾಗ ವಾರಾಣಸಿಯಲ್ಲಿದ್ದ ಗುರುಗಳ ಮನೆಗೆ ಅವರು ಹೋದಾಗ ‘ಇವನು ಯೋಗಿಯಾಗಿ ಆಧ್ಯಾತ್ಮಿಕ ಶಿಖರವೇರುತ್ತಾನೆ. ಅನೇಕರನ್ನು ಭಗವಂತನ ಸಾಮ್ರಾಜ್ಯಕ್ಕೆ ಕರೆದೊಯ್ಯುತ್ತಾನೆ’ ಎಂದಿದ್ದನ್ನು ತಾಯಿ ಮರಣದ ಕಾಲದಲ್ಲಿ ಮುಕುಂದನಿಗೆ ಹೇಳಿದರು.

ಭಗವತೀ ಚರಣರು ಕಾಯಂ ನೌಕರರಾಗಿ ಕಲ್ಕತ್ತದಲ್ಲೇ ನೆಲೆಸಿದ್ದರು. ಪ್ರೌಢಶಾಲೆಯಲ್ಲಿ ಓದುತ್ತಿದ್ದ ಮುಕುಂದನಿಗೆ ಹಿಮಾಲಯಕ್ಕೆ ಹೋಗಬೇಕೆಂಬ ಬಯಕೆಯಾಯಿತು. ಒಮ್ಮೆ ಕಂಬಳಿ, ಪಾದರಕ್ಷೆ, ಕೌಪೀನ, ಜಪಸರ, ಲಾಹಿರೀ ಮಹಾಶಯರ ಭಾವಚಿತ್ರ ಹಾಗೂ ಗೀತೆಯ ಪುಸ್ತಕಗಳನ್ನು ಬಟ್ಟೆಯಲ್ಲಿ ಗಂಟುಕಟ್ಟಿ ಹೊರಡಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ತಂದೆಗೆ ಇದು ತಿಳಿದು ‘ಪ್ರೌಢಶಾಲಾ ವಿದ್ಯಾಭ್ಯಾಸ ಮುಗಿಸು, ನಂತರ ನೋಡೋಣ’ ಎಂದು ಬುದ್ಧಿವಾದ ಹೇಳಿದರು. ಈ ನಡುವೆ ಗಂಧಬಾಬಾ, ಹುಲಿಸ್ವಾಮಿ, ನಾಗೇಂದ್ರನಾಥ ಬಾದುರಿ, ಮಾಸ್ಟರ್ ಮಹಾಶಯ, ವಿಜ್ಞಾನಿ ಜಗದೀಶ ಚಂದ್ರಬೋಸ್ ಇವರನ್ನು ಮುಕುಂದ ಭೇಟಿಯಾದ. ಮಾಸ್ಟರ್ ಮಹಾಶಯನ ಜತೆ ಕಾಳಿಘಾಟಿಗೆ ಹೋಗಿ ಕಾಳಿ ಆರಾಧನೆ ಮಾಡಿದ, ರಾಮಕೃಷ್ಣ ಪರಮಹಂಸರ ಬಗೆಗೆ ಕೇಳಿ ಕೆಲಹೊತ್ತು ಧ್ಯಾನಸ್ಥನಾದ. ಈ ನಡುವೆ ಪ್ರೌಢಶಾಲಾ ವ್ಯಾಸಂಗದ ಅಂತಿಮವರ್ಷದ ಪರೀಕ್ಷೆಗೆ ಕುಳಿತ. ತರುವಾಯದಲ್ಲಿ ಆಧ್ಯಾತ್ಮಿಕ ಶಿಕ್ಷಣಕ್ಕೆಂದು ವಾರಾಣಾಸಿಯ ‘ಶ್ರೀ ಭಾರತಧರ್ಮ ಮಹಾಮಂಡಲ’ಕ್ಕೆ ಸೇರಿದ. ಅಲ್ಲಿ ಉಪವಾಸ ಮಾಡುತ್ತ, ಸ್ವಾಮಿ ದಯಾನಂದರ ಸೂಚನೆಯಂತೆ ಧ್ಯಾನ-ತಪಸ್ಸಿನ ಅಭ್ಯಾಸ ಮುಂದುವರಿಸಿದ. ಒಮ್ಮೆ ಕಾಷಾಯವಸ್ತ್ರ ಧರಿಸಿದ್ದ ಸಂತರ ದರ್ಶನವಾಯಿತು. ಅವರು ಸೂಜಿಗಲ್ಲಿನಂತೆ ಸೆಳೆದರು. ಅವರ ನಿರರ್ಗಳ ವಾಗ್ಝರಿ ಶಿಷ್ಯನ ಹೃದಯಕ್ಕೆ ಹರಿಯಿತು. ಅವರು ‘ನನ್ನ ಆಶ್ರಮ ಮತ್ತು ಸರ್ವಸ್ವವನ್ನು ಕೊಡುವೆ ಬಾ’ ಎಂದಿದ್ದಕ್ಕೆ ಮುಕುಂದ ‘ಜ್ಞಾನ ಮತ್ತು ದೈವಸಾಕ್ಷಾತ್ಕಾರ ಪಡೆಯುವುದಕ್ಕೆ ಮಾತ್ರ ಬರುತ್ತೇನೆ’ ಎಂದು ದೃಢವಾಗಿ ಹೇಳಿದ. ಆಗ ಸ್ವಾಮಿಗಳು ‘ನನ್ನ ಹೆಸರು ಸ್ವಾಮಿ ಶ್ರೀಯುಕ್ತೇಶ್ವರ ಗಿರಿ, ನನ್ನ ಆಶ್ರಮ ಕಲ್ಕತ್ತೆಗೆ ಸಮೀಪದ ಸಿರಾಂಪುರದಲ್ಲಿದೆ’ ಎಂದಾಗ ಮುಕುಂದನಿಗೆ ಅಚ್ಚರಿಯಾಯಿತು.

ಗುರುವಿನೊಡನೆ: ವಾರಾಣಸಿಯಲ್ಲಿ 27 ದಿನಗಳಿದ್ದು ರೈಲಿನಲ್ಲಿ ಸಿರಾಂಪುರಕ್ಕೆ ತೆರಳಿ, ಯುಕ್ತೇಶ್ವರರ ಆಶ್ರಮಕ್ಕೆ ಬಂದ. ಗುರುಗಳು ಕೆಲದಿನಗಳಲ್ಲಿ ಕ್ರಿಯಾಯೋಗದ ದೀಕ್ಷೆ ನೀಡಿದರು. ಅವರ ಆಣತಿಯಂತೆ ಕಲ್ಕತ್ತೆಗೆ ಮರಳಿ ಕಾಲೇಜು ಸೇರಿಕೊಂಡ. ಬಿಡುವಾದಾಗ ಆಶ್ರಮಕ್ಕೆ ಹೋಗುತ್ತಿದ್ದ. ಸ್ವಾಮಿಗಳ ಸಾನ್ನಿಧ್ಯ ಎಲ್ಲ ಕಷ್ಟಗಳನ್ನು ನೀಗಿಸುತ್ತಿತ್ತು. ಗುರು-ಶಿಷ್ಯರು ಹಲವು ರಾತ್ರಿಗಳನ್ನು ಆಧ್ಯಾತ್ಮಿಕ ಚರ್ಚೆಯಲ್ಲೇ ಕಳೆಯುತ್ತಿದ್ದರು. ಗುರುಗಳ ಅಪೂರ್ವ ಆಧ್ಯಾತ್ಮಿಕ ಸ್ಪರ್ಶವನ್ನು ಮುಕುಂದ ಅನುಭವಿಸುತ್ತಿದ್ದ. ಯೌಗಿಕ ಸ್ಥಿತಿಯ ನೆಲೆಗಳನ್ನು ಪ್ರಯೋಗದ ಮೂಲಕ ಗುರುಗಳು ಮಾಡಿ ತೋರಿಸುತ್ತಿದ್ದರು. ಸವಿಕಲ್ಪ ಸಮಾಧಿಯಿಂದ ನಿರ್ವಿಕಲ್ಪ ಸಮಾಧಿಯವರೆಗೂ ಹೋಗುವ ರಹಸ್ಯವನ್ನು ಮುಕುಂದ ಅವರಿಂದ ಪಡೆದ. ಒಮ್ಮೆ ಸ್ವಾಮೀಜಿ ‘ಸೃಷ್ಟಿಯು ನಿಯಮಕ್ಕೆ ಬದ್ಧವಾದುದು. ವಿಜ್ಞಾನಿಗಳು ಹೊರವಿಶ್ವದಲ್ಲಿ ಕಾರ್ಯಪ್ರವೃತ್ತವಾದ ನಿಯಮಗಳನ್ನು ತಿಳಿಯುತ್ತಾರೆ. ಅವು ಪ್ರಕೃತಿಸಹಜ ನಿಯಮಗಳೆನಿಸುತ್ತವೆ. ಆದರೆ, ಸುಪ್ತ ಆಧ್ಯಾತ್ಮಿಕ ಸ್ತರಗಳನ್ನು ಮತ್ತು ಪ್ರಜ್ಞೆಯ ಅಂತಃಸಾಮ್ರಾಜ್ಯವನ್ನು ಆಳುವುದಕ್ಕೆ ಸೂಕ್ಷ್ಮ ನಿಯಮಗಳಿವೆ. ಯೌಗಿಕ ವಿಜ್ಞಾನದ ಮೂಲಕವಷ್ಟೇ ಅವನ್ನು ತಿಳಿಯಲು ಸಾಧ್ಯ. ಇದು ಆತ್ಮಸಾಕ್ಷಾತ್ಕಾರ ಪಡೆದ ಯೌಗಿಕ ವಿಜ್ಞಾನಿಗೆ ಮಾತ್ರ ಸಾಧ್ಯ’ವೆಂದು ಯೋಗವಿಜ್ಞಾನದ ರಹಸ್ಯಗಳನ್ನು ತಿಳಿಸಿಕೊಟ್ಟರು. ಮುಕುಂದ 1915ರ ಜೂನ್​ನಲ್ಲಿ ಕಲ್ಕತ್ತ ವಿಶ್ವವಿದ್ಯಾಲಯದಿಂದ ಹೆಚ್ಚಿನ ಅಂಕಗಳೊಂದಿಗೆ ತತ್ತ್ವಶಾಸ್ತ್ರ ಪದವಿ ಗಳಿಸಿದಾಗ ತಂದೆಗೆ ಅಮಿತಾನಂದವಾಯಿತು.

ಮುಕುಂದ ಆಧ್ಯಾತ್ಮಿಕ ಅನುಸಂಧಾನದಲ್ಲೇ ಇರುತ್ತಿದ್ದ. ಪದವಿಯ ನಂತರ ಸಂನ್ಯಾಸದೀಕ್ಷೆ ಕೊಡುತ್ತೇನೆಂಬ ಯುಕ್ತೇಶ್ವರರ ಮಾತನ್ನು ಅವರಿಗೆ ನೆನಪಿಸಿದಾಗ ಬಾಹ್ಯಾಚರಣೆಯಿಲ್ಲದೆ, ವಿದ್ವನ್ಮಾರ್ಗದಲ್ಲಿ ಮುಕುಂದನನ್ನು ಸ್ವಾಮಿಯನ್ನಾಗಿ ಮಾಡಿ, ಅವನ ಅಪೇಕ್ಷೆಯಂತೆ ‘ಯೋಗಾನಂದ’ ಎಂಬ ಅಭಿಧಾನ ನೀಡಿದರು. ‘ಪರಮಾತ್ಮನ ಸಾಯುಜ್ಯದಿಂದ ಆನಂದ’ ಎಂಬುದು ಇದರರ್ಥವಾಗಿತ್ತ್ತು. ಯುಕ್ತೇಶ್ವರರ ಪರಮಾಶೀರ್ವಾದದಲ್ಲಿ ಯೋಗಾನಂದರಿಗೆ ಕೆಲ ವಿಶಿಷ್ಟ ಅನುಭವ ಗಳಾದವು. ಯೋಗಾನಂದರು ಧ್ಯಾನದಲ್ಲಿದ್ದಾಗ ಅಣ್ಣ ಅನಂತ ಕಾಯಿಲೆಯಿಂದ ಹಾಸಿಗೆ ಹಿಡಿದಿರುವುದು ಅಂತರ್ವಾಣಿಯಿಂದ ತಿಳಿದು ಮನೆಗೆ ಭೇಟಿಕೊಟ್ಟು ಸಾಂತ್ವನ ಹೇಳಿದರು.

ಯುಕ್ತೇಶ್ವರರಿಂದ ಹರಿದುಬಂದ ಯೋಗವಿಜ್ಞಾನ ಯೋಗಾನಂದರಿಂದ ವ್ಯಾಪಕವಾಗಿ ಸುಪ್ರಸಿದ್ಧವಾಯಿತು. ‘ಕ್ರಿಯಾಯೋಗ’ ಎಂದರೆ ಗೊತ್ತಾದ ಕ್ರಿಯೆಯ ಮೂಲಕ ಅನಾದ್ಯನಂತ ಪರಮಾತ್ಮನೊಡನೆ ಕೂಡುವುದು. ಇದು ಮಾನವನ ರಕ್ತದಿಂದ ಇಂಗಾಲವನ್ನು ಹೊರಹಾಕಿ ಆಮ್ಲಜನಕವನ್ನು ಪೂರೈಸುವ ಒಂದು ಸರಳ ಮನಶ್ಶರೀರ ಶಾಸ್ತ್ರಪದ್ಧತಿ. ಈ ವಿಜ್ಞಾನ ಬಲು ಪುರಾತನವಾದುದು. ಭಗವದ್ಗೀತೆಯಲ್ಲಿ, ‘ಉಚ್ಛಾ್ವಸದ ಗಾಳಿಯನ್ನು ನಿಃಶ್ವಾಸದ ಗಾಳಿಗೆ ಅರ್ಪಿಸಿ, ನಿಃಶ್ವಾಸದ ಗಾಳಿಯನ್ನು ಉಚ್ಛಾ್ವಸದ ಗಾಳಿಗೆ ಅರ್ಪಿಸಿ, ಯೋಗಿಯಾದವನು ಎರಡೂ ಉಸಿರಾಟಗಳನ್ನು ನಿಷ್ಪರಿಣಾಮಗೊಳಿಸುತ್ತಾನೆ. ತನ್ಮೂಲಕ ಹೃದಯದಿಂದ ‘ಪ್ರಾಣ’ವನ್ನು ಬಿಡುಗಡೆ ಮಾಡಿ ಪ್ರಾಣಶಕ್ತಿಯನ್ನು ತನ್ನ ಅಧೀನಕ್ಕೆ ತಂದುಕೊಳ್ಳುತ್ತಾನೆ’ ಎಂದು ಹೇಳಿದೆ. ಆಗ ಯೋಗಿಯು ದೇಹದ ಅಂಗಾಂಗಗಳು ನಾಶವಾಗುವುದನ್ನು ತಡೆಗಟ್ಟುತ್ತಾನೆ. ಕ್ರಿಯಾಯೋಗದಲ್ಲಿ ದೈಹಿಕ ಶಿಕ್ಷಣವೂ ಮನೋನಿಯಂತ್ರಣವೂ ಪ್ರಣವದ ಧ್ಯಾನವೂ ಜತೆಗೂಡಿರುತ್ತವೆ. ಇದು ಅಂತಿಮವಾಗಿ ‘ಪ್ರಾಣಾಯಾಮ’ದ ಸಾಧನೆಗೆ ಕಾರಣವಾಗುತ್ತದೆ. ಕ್ರಿಯಾಯೋಗವು ದೇಹ-ಮನಸ್ಸುಗಳ ಮೇಲೆ ಪ್ರಭುತ್ವ ಸಾಧಿಸಲು ಶಕ್ಯವಾಗುತ್ತದೆ. ಅಂತಿಮವಾಗಿ ಮರಣವೂ ಹಿಂದೆ ಸರಿಯುತ್ತದೆ. ಈ ಕ್ರಿಯಾಯೋಗವೇ ನಿಜವಾದ ಅಗ್ನಿಕಾರ್ಯ. ಹಿಂದಿನ ಮತ್ತು ಇಂದಿನ ಬಯಕೆಗಳೆಲ್ಲ ದೈವೀಪ್ರೇಮವೆಂಬ ಅಗ್ನಿಗೆ ಆಹುತಿಯಾಗುತ್ತದೆ. ಕೊಳೆ ಕಳೆದುಕೊಂಡ ಮಾನವ ಪರಿಶುದ್ಧನಾಗುತ್ತಾನೆ. ಯೋಗಾನಂದರು ಕ್ರಿಯಾಯೋಗ ವಿಜ್ಞಾನವನ್ನು ಸರಳವಾಗಿಯೂ ಶಾಸ್ತ್ರಬದ್ಧವಾಗಿಯೂ ವಿಶ್ವಕ್ಕೆ ಸಾರಿದರು.

ಕ್ರಿಯಾಯೋಗ: ಯುವಕರಿಗೆ ಸರಿಯಾದ ಶಿಕ್ಷಣ ಕೊಡಬೇಕೆಂಬ ಅಭೀಪ್ಸೆಯಿಂದ ಯೋಗಾನಂದರು ಬಂಗಾಳದ ದಿಹಿಕಾ ಎಂಬ ಹಳ್ಳಿಯಲ್ಲಿ ಶಾಲೆಯನ್ನು ಪ್ರಾರಂಭಿಸಿದರು. ನಂತರ 1918ರಲ್ಲಿ ರಾಂಚಿಯಲ್ಲಿ ‘ಯೋಗದಾ ಸತ್ಸಂಗ ಬ್ರಹ್ಮಚರ್ಯ ವಿದ್ಯಾಲಯ’ವನ್ನು ಸ್ಥಾಪಿಸಿ, ನೈತಿಕ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನೊಳಗೊಂಡ ಶಿಕ್ಷಣಕ್ರಮವನ್ನು ರೂಪಿಸಿದರು. ಸಮಗ್ರ ಶಿಕ್ಷಣದ ಜತೆಗೆ ಯೋಗ-ಧ್ಯಾನ-ಪ್ರಾಣಾಯಾಮದ ವಿವಿಧ ಹಂತಗಳನ್ನು ಕಲಿಸತೊಡಗಿದರು. ಆಗ ರವೀಂದ್ರನಾಥ ಟ್ಯಾಗೋರರು ಶಾಂತಿನಿಕೇತನವನ್ನು ನಡೆಸುತ್ತಿದ್ದರು. ತಮ್ಮ ಆಪ್ತಕಾರ್ಯದರ್ಶಿ ಸಿ.ಎಫ್. ಆಂಡ್ರೂಸ್ ಮೂಲಕ ಟ್ಯಾಗೋರರಿಗೆ ಯೋಗಾನಂದರ ಪರಿಚಯವಾಯಿತು. ಈ ಇಬ್ಬರು ಮಹನೀಯರು ಕಲೆ, ಸಾಹಿತ್ಯ, ತತ್ತ್ವಜ್ಞಾನ, ವಿಜ್ಞಾನಗಳನ್ನು ಕುರಿತು ವಿಚಾರವಿನಿಮಯ ನಡೆಸಿದರು. ಆಗಷ್ಟೇ ವಿಶ್ವಯುದ್ಧ ಮುಗಿದಿತ್ತು. 1920ರ ಆಗಸ್ಟ್​ನಲ್ಲಿ ‘ದಿ ಸಿಟಿ ಆಫ್ ಸ್ಪಾರ್ಟ್’ ಎಂಬ ಹಡಗಿನಲ್ಲಿ ಯೋಗಾನಂದರು ಅಮೆರಿಕೆಗೆ ಹೊರಟರು. ಬೋಸ್ಟನ್​ನಲ್ಲಿನ ಧರ್ಮಸಮ್ಮೇಳನಕ್ಕೆ ಅವರು ಹೋಗಬೇಕಾಗಿತ್ತು. 1920ರ ಅಕ್ಟೋಬರ್ 6ರಂದು ನಡೆದ ಜ್ಞಾನಸಮ್ಮೇಳನದಲ್ಲಿ ಯೋಗಾನಂದರು ‘ಧರ್ಮ ಮತ್ತು ವಿಜ್ಞಾನ’ ಕುರಿತು ಉದ್ಬೋಧಕ ಉಪನ್ಯಾಸ ನೀಡಿದರು. ಅದು ಮರುದಿನ ಪತ್ರಿಕೆಯಲ್ಲಿ ಪ್ರಕಟವಾಗಿ ಅವರ ಹೆಸರು ಕೀರ್ತಿತವಾಯಿತು. ನಂತರ 1924ರಲ್ಲಿ ಖಂಡಾಂತರ ಪ್ರವಾಸ ಕೈಗೊಂಡು ವಿವಿಧೆಡೆ ಉಪನ್ಯಾಸ ನೀಡಿದರು. ಅಧ್ಯಾತ್ಮ ಜಿಜ್ಞಾಸು ವಿದ್ಯಾರ್ಥಿಗಳ ನೆರವಿನಿಂದ 1925ರ ಅಂತ್ಯದ ವೇಳೆಗೆ ಕ್ಯಾಲಿಫೋರ್ನಿಯಾದ ಲಾಸ್ ಏಂಜಲಿಸ್​ನ ‘ಮೌಂಟ್ ವಾಷಿಂಗ್ಟನ್ ಎಸ್ಟೇಟ್’ ಬೆಟ್ಟದ ಮೇಲೆ ‘ಯೋಗಕೇಂದ್ರ’ ಸ್ಥಾಪಿಸಿದರು. ಯೋಗಾನಂದರು ಅಮೆರಿಕದಲ್ಲಿದ್ದ 15 ವರ್ಷಗಳಲ್ಲಿ ನೂರಾರು ವಿದ್ಯಾರ್ಥಿಗಳು ಶಿಷ್ಯರಾಗಿ ಕ್ರಿಯಾಯೋಗದ ಮಹತ್ವ ಅರಿತರು. ಒಮ್ಮೆ ಯೋಗಾನಂದರು ಧ್ಯಾನದಲ್ಲಿರು ವಾಗ ಯುಕ್ತೇಶ್ವರರ ಧ್ವನಿ ಒಳಗಿವಿಗೆ ಕೇಳಿಸಿತು- ‘ಬೆಳಕಿನ ಬೀಡಿಗೆ ಹೋಗುತ್ತಿರುವೆ, ನೀನೂ ಬಾ’ ಎಂದಂತಾಯಿತು. 1935ರ ಮಾರ್ಚ್​ನಲ್ಲಿ ಅವರು ಹಿಂದಿರುಗುವಾಗ ಕ್ಯಾಲಿಫೋರ್ನಿಯಾ ಸಂಸ್ಥಾನದ ಕಾನೂನಿನ ಪ್ರಕಾರ ‘ಸೆಲ್ಪ್​ರಿಯಲೈಸೇಷನ್ ಫೆಲೋಷಿಪ್’ ಸಂಸ್ಥೆ ತೆರೆದರು. ಆಗಸ್ಟ್ 22ರಂದು ಮುಂಬೈ ತಲುಪಿ ಅಲ್ಲಿಂದ ಕಲ್ಕತ್ತೆಗೆ ಬಂದರು. ಅಲ್ಲಿಂದ ಸಿರಾಂಪುರದ ಆಶ್ರಮ ತಲುಪಿದಾಗ ಯುಕ್ತೇಶ್ವರರು ಶಿಷ್ಯನಿಗಾಗಿ ಕಾದಿದ್ದರು. ಯೋಗಾನಂದರು ಗುರುವಿನ ಪಾದಗಳಿಗೆ ಮಣಿದರು, ಯುಕ್ತೇಶ್ವರರು ಆಲಿಂಗಿಸಿಕೊಂಡರು.

ಕೊನೆಯ ದಿನಗಳು: 1935ರ ನವೆಂಬರ್​ನಲ್ಲಿ ದಕ್ಷಿಣಭಾರತ ಪ್ರವಾಸ ಕೈಗೊಂಡ ಯೋಗಾನಂದರು, ಉಸ್ಮಾನಿಯಾ ವಿಶ್ವವಿದ್ಯಾಲಯ, ಬೆಂಗಳೂರಿನ ನ್ಯಾಷನಲ್ ಹೈಸ್ಕೂಲ್, ಪುಟ್ಟಣ್ಣಚೆಟ್ಟಿ ಪುರಭವನ, ಮೈಸೂರಿನ ಪುರಭವನ, ಮಹಾರಾಜ ಕಾಲೇಜು ಮೊದಲಾದೆಡೆ ಉಪನ್ಯಾಸ ನೀಡಿದರು. ನಂತರ ಮದರಾಸಿಗೆ ಹೋಗಿ ಅಲ್ಲಲ್ಲಿ ಉಪನ್ಯಾಸ ನೀಡಿದರು. ‘ಸದಾಶಿವಬ್ರಹ್ಮೇಂದ್ರ’ರ ಪವಿತ್ರಸ್ಥಳಕ್ಕೆ ಭೇಟಿ ಕೊಟ್ಟಾಗ ಅವರಿಗೆ ಅನಿರ್ವಚನೀಯ ಅನುಭವವಾಯಿತು. ನಂತರ ಶ್ರೀರಮಣ ಮಹರ್ಷಿಗಳನ್ನು ಕಾಣಲು ಅರುಣಾಚಲಕ್ಕೆ ತೆರಳಿ, ರಮಣರ ದೈವೀಪ್ರೇಮದಲ್ಲಿ ಮುಳುಗಿದರು. ಮತ್ತೆ ಯುಕ್ತೇಶ್ವರರ ಸೆಳೆತ ಪ್ರಾರಂಭವಾದಾಗ, ಆಶ್ರಮಕ್ಕೆ ಹಿಂತಿರುಗಿ ಅವರ ಜತೆ ಕೊನೆಗಾಲವನ್ನು ಕಳೆದರು. 1936ರ ಮಾರ್ಚ್ 9ರಂದು ಯುಕ್ತೇಶ್ವರರು ಮಹಾಸಮಾಧಿ ಪ್ರವೇಶಿಸಿದರು.

1936ರ ಸೆಪ್ಟೆಂಬರ್​ನಲ್ಲಿ ಯೋಗಾನಂದರು ಲಂಡನ್​ಗೆ ಹಿಂದಿರುಗಿ ಅಲ್ಲಲ್ಲಿ ಯೋಗಶಿಕ್ಷಣದ ತರಗತಿ ನಡೆಸಿದರು. ಅಲ್ಲಿಂದ ಕ್ಯಾಲಿಫೋರ್ನಿಯಾದ ಎನ್​ಸಿನಿಟಾಪ್​ಗೆ ಬಂದಾಗ ಆಶ್ರಮವೊಂದು ನಿರ್ವಣಗೊಂಡಿತ್ತು. ಜೇಮ್್ಸ ಜೆ. ಲಿನ್, ಸೋದರಿ ಜ್ಞಾನಾಮಾತಾ ಮತ್ತಿತರ ಶಿಷ್ಯರು ಸೇರಿ ನಿರ್ವಿುಸಿ ಸ್ವಾಮಿಗಳಿಗೆ ಉಡುಗೊರೆಯಾಗಿ ನೀಡಿದ ಒಂದು ನಿತಾಂತ ಭವ್ಯ ಆಶ್ರಮವಾಗಿತ್ತದು. ಯೋಗಾನಂದರು ‘ಕಾಸ್ಮಿಕ್ ಚಾಂಟ್ಸ್’ ಕೃತಿಯನ್ನು ಪೂರ್ಣಗೊಳಿಸಿದ್ದು ಇಲ್ಲೇ. 1940ರಿಂದ 51ರವರೆಗೂ ಪಶ್ಚಿಮದ ಹಲವೆಡೆ ಯೋಗಶಿಕ್ಷಣದ ತರಗತಿ, ಧ್ಯಾನಶಿಬಿರಗಳನ್ನು ಪರಮಹಂಸರು ನಡೆಸಿದರು. ‘ವಿಶ್ವದ ಎಲ್ಲ ರಾಷ್ಟ್ರಗಳಿಗೂ ಹಿರಿಯಣ್ಣನಂತಿರುವ ಭಾರತ ಸಂಚಯಿಸಿರುವ ಜ್ಞಾನವು ಮಾನವ ಜನಾಂಗದ ಆಸ್ತಿ’ಯೆಂದು ಸಾರಿದರು. 1952ರ ಮಾರ್ಚ್ 7ರಂದು ಭಾರತದ ರಾಯಭಾರಿ ವಿನಯ್ ಆರ್. ಸೇನ್ ಆಯೋಜಿಸಿದ್ದ ಔತಣಕೂಟದಲ್ಲಿ ಭಾಗವಹಿಸಿ, ಅಂದೇ ಮಹಾಸಮಾಧಿ ಹೊಂದಿದರು. 59 ವರ್ಷ ಬದುಕಿದ್ದು ವಿಶ್ವವನ್ನು ಯೌಗಿಕಬಾಹುಗಳಿಂದ ಅಪ್ಪಿಕೊಂಡ ಯೋಗಾನಂದರು, ವಿಶ್ವಮಾನವ ಮತ್ತು ವಿಶ್ವದೈವೀಪ್ರಜ್ಞೆಯನ್ನು ಜಾಗೃತಗೊಳಿಸುತ್ತ ಹೋದರು. ವಿಶ್ವಭ್ರಾತೃತ್ವದ ಕಲ್ಪನೆಯನ್ನು ಎಲ್ಲರಲ್ಲೂ ಮೂಡಿಸಿದರು. ತಮ್ಮಲ್ಲಿ ಬಂದವರಿಗೆ ಕ್ರಿಯಾಯೋಗದ ದೀಕ್ಷೆ ನೀಡಿದರು. ಹತ್ತಾರು ಪುಸ್ತಕಗಳನ್ನು ಬರೆದು ಯೋಗದ ನೆಲೆಯನ್ನು ವಿಶ್ವದಾದ್ಯಂತ ವಿಸ್ತರಿಸಿದರು. ಅವರ ‘ಆಟೋಬಯಾಗ್ರಫಿ ಆಫ್ ಎ ಯೋಗಿ’ ಪ್ರಸಿದ್ಧಕೃತಿಯಾಗಿ ಸರ್ವರಿಗೂ ಮಾರ್ಗದರ್ಶಕವಾಗಿದೆ.

(ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು)

Leave a Reply

Your email address will not be published. Required fields are marked *

Back To Top