Tuesday, 11th December 2018  

Vijayavani

ಪಂಚರಾಜ್ಯಗಳ ಫಲಿತಾಂಶದಲ್ಲಿ ಕೈ ಆಟ-3 ರಾಜ್ಯಗಳಲ್ಲಿ ಅಧಿಕಾರದತ್ತ ಕಾಂಗ್ರೆಸ್​ - ವರ್ಕೌಟ್​ ಆಗದ ಮೋದಿ - ಅಮಿತ್ ಷಾ ಅಲೆ        ರಾಜಸ್ಥಾನದಲ್ಲಿ ಮ್ಯಾಜಿಕ್ ನಂಬರ್ ಸನಿಹ ಕಾಂಗ್ರೆಸ್-95 ಕ್ಷೇತ್ರದಲ್ಲಿ ಕಾಂಗ್ರೆಸ್, 80 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ        ಮಧ್ಯಪ್ರದೇಶದಲ್ಲಿ ಹಾವು ಏಣಿ ಆಟ - ಕೈ ಕಮಲ ಸಮಬಲದ ಹೋರಾಟ - ಸರ್ಕಾರ ರಚನೆಗೆ ಪಕ್ಷೇತರರೇ ನಿರ್ಣಾಯಕರು        ತೆಲಂಗಾಣದಲ್ಲಿ ನಡೆಯದ ಕೈ-ಕಮಲದ ಆಟ-ಶರವೇಗದಲ್ಲಿ ಮುನ್ನುಗಿದ ಕೆಸಿಆರ್​-ನೂತನ ಸಿಎಂ ಆಗಿ ನಾಳೆ ಪ್ರಮಾಣ ವಚನ        ಛತ್ತೀಸ್​ಗಢದಲ್ಲಿ ಅಧಿಕಾರದತ್ತ ಕಾಂಗ್ರೆಸ್ - ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗ        ಮಿಜೋರಾಂನಲ್ಲಿ ಕಾಂಗ್ರೆಸ್​​​ಗೆ ಭಾರಿ ಮುಖಭಂಗ - ಅಧಿಕಾರದ ಗದ್ದುಗೆ ಹಿಡಿದ ಎಂಎನ್​​​ಎಫ್​ - 25 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ       
Breaking News

ನಿಷ್ಕಾಮ ಕರ್ಮಯೋಗಿ ಶ್ರೀರಾಘವೇಂದ್ರ ಸ್ವಾಮೀಜಿ

Sunday, 11.03.2018, 3:05 AM       No Comments

ಕರ್ನಾಟಕದ ಹಲವು ಸ್ಥಳಗಳನ್ನು ‘ಕ್ಷೇತ್ರ’ವಾಗಿಸಿದ ಕೀರ್ತಿ ಹಲವು ಸಾಧಕರಿಗೆ, ಸ್ವಾಮಿಗಳಿಗೆ ಸಲ್ಲುತ್ತದೆ. ಬೆಳಗೆರೆಯನ್ನು ತಮ್ಮ ಸಾಧನಾಕ್ಷೇತ್ರವನ್ನಾಗಿಸಿಕೊಂಡ ಬೆಳಗೆರೆ ಕೃಷ್ಣಶಾಸ್ತ್ರೀ, ನುಲೇನೂರನ್ನು ದತ್ತಕ್ಷೇತ್ರವನ್ನಾಗಿಸಿದ ಶಂಕರ ಭಗವಾನರು, ಅವಧೂತ ಕ್ಷೇತ್ರವಾಗಿಸಿದ ಧರ್ಮಪುರದ ಹನುಮಂತಮೂರ್ತಿಗಳು ಮುಂತಾದವರನ್ನು ಇಲ್ಲಿ ಹೆಸರಿಸಬಹುದು. ಇವರಂತೆ ಮಲ್ಲಾಡಿಹಳ್ಳಿಯನ್ನು ತಮ್ಮ ಸಾಧನಾಕ್ಷೇತ್ರವಾಗಿಯೂ ಜನಕ್ಷೇತ್ರವಾಗಿಯೂ ರೂಪಿಸಿದವರು ಶ್ರೀರಾಘವೇಂದ್ರ ಸ್ವಾಮೀಜಿಯವರು.

ಜನನ-ಬಾಲ್ಯ: ರಾಘವೇಂದ್ರರು ಹುಟ್ಟಿದ್ದು ಕೇರಳದಲ್ಲಿ, 1891ರಲ್ಲಿ. ತಾಯಿ ಪದ್ಮಾಂಬಾಳ್, ತಂದೆ ಅನಂತ ಪದ್ಮನಾಭ ನಂಬೂದಿರಿ. ರಾಘವೇಂದ್ರರು ಹುಟ್ಟಿದಾಗ ಪ್ರಜ್ಞೆಯೇ ಇಲ್ಲದೆ, ಕಣ್ಣನ್ನು ತೆರೆಯದೇ ಇದ್ದಾಗ, ಮನೆದೇವತೆ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರಕ್ಕೆ ಮಗುವನ್ನು ಕರೆದುಕೊಂಡು ಹೋದರೆ ಸರಿಹೋದಿತೆಂದು ಪದ್ಮಾಂಬಾಳ್ ಗಂಡನಲ್ಲಿ ಅಲವತ್ತುಕೊಂಡರು. ಇರುವ ಜಾಗ ಬಿಟ್ಟು ಹೊರಡುವುದಾದರೂ ಹೇಗೆ? ಆದರೆ, ಪತ್ನಿಯ ಒತ್ತಾಯಕ್ಕೆ ನಂಬೂದಿರಿ ಒಪ್ಪಬೇಕಾಯಿತು. ಮನೆಗೆ ಬೀಗಹಾಕಿ ಕಾಲ್ನಡಿಗೆಯಲ್ಲೇ ಹೊರಟರು. ಪ್ರಸಿದ್ಧ ಜ್ಯೋತಿಷಿಯಾಗಿದ್ದ ನಂಬೂದಿರಿ, ಹೀಗೆ ಕೇರಳ ಬಿಟ್ಟು ಕರ್ನಾಟಕಕ್ಕೆ ಬಂದು ದಕ್ಷಿಣ ಕನ್ನಡದ ಬಾರಕೂರು ತಲುಪಿದರು. ಅವರಿಗೆ ಕನ್ನಡ ಬಾರದು, ಆದರೆ ಸಂಸ್ಕೃತ ಗೊತ್ತಿತ್ತು. ನಂಬೂದಿರಿ ದಂಪತಿಗೆ ಅಲ್ಲಿ ನರಸಿಂಹಯ್ಯ-ಪುತಲೀಬಾಯಿ ಎಂಬ ದಂಪತಿಯ ಪರಿಚಯವಾಗಿ ಅವರ ಮನೆಯಲ್ಲಿ ಕೆಲಕಾಲ ತಂಗಿದರು. ಸಮೀಪದ ಭರ್ತಿ ಗ್ರಾಮದ ವೇದಪಾರಂಗತ ರಾಮಚಂದ್ರಶಾಸ್ತ್ರಿಗಳು ನಂಬೂದಿರಿ ಅವರ ವಿದ್ವತ್ತನ್ನು ಕೇಳಿ ಬಾರಕೂರಿಗೆ ಬಂದು ಪರಿಚಯ ಮಾಡಿಕೊಂಡರು. ಅವರ ನಡುವೆ ಸ್ನೇಹ ಬೆಳೆಯಿತು! ಮಗುವಿಗೆ ಔಷಧೋಪಚಾರ ನಡೆಯುತ್ತಿತ್ತು. ಗ್ರಹಗತಿ ಬದಲಾವಣೆಯಿಂದ ಮಗುವಿನಲ್ಲೂ ಸುಧಾರಣೆ ಕಾಣಿಸಿಕೊಳ್ಳತೊಡಗಿತು! ಇದನ್ನು ಕಂಡ ರಾಮಚಂದ್ರಶಾಸ್ತ್ರಿಗಳು ಬಾರಕೂರಿನಲ್ಲೇ ಉಳಿಯಲು ತಿಳಿಸಿದರು. ಅದೇ ಹೊತ್ತಿಗೆ ಮಂತ್ರಾಲಯದ ಪೀಠಸ್ಥರಾದ ಶ್ರೀರಾಘವೇಂದ್ರ ಯತಿಗಳು ಅಲ್ಲಿಗೆ ಬಂದಿದ್ದ ವಿಷಯ ತಿಳಿದ ಪದ್ಮಾಂಬಾಳ್, ಅವರನ್ನು ಭೇಟಿಯಾಗಿ ಮಗುವಿನ ಬಗೆಗೆ ಹೇಳಿದಾಗ ‘ನಿನ್ನ ಕಂದ ಮಂತ್ರಾಲಯದ ಮೂಲರಾಘವೇಂದ್ರರ ಆಶೀರ್ವಾದದಿಂದ ಕೀರ್ತಿಶಾಲಿಯಾಗುತ್ತಾನೆ’ ಎಂದು ಹರಸಿದರು. ಸಂತೋಷಿಸಿದ ತಾಯಿ ವಿಷಯವನ್ನು ಗಂಡನಿಗೆ ತಿಳಿಸಿದಳು. ಆದರೆ ‘ಅತಿಸಂತೋಷ ದುಃಖಕ್ಕೆ ಮೂಲ’ ಎನ್ನುವಂತೆ ಪದ್ಮಾಂಬಾಳ್ ಹಾಸಿಗೆ ಹಿಡಿದವರು ಮೇಲಕ್ಕೇಳಲಿಲ್ಲ. ಕೊನೆಗೆ ಭರ್ತಿಯ ರಾಮಚಂದ್ರ ಶಾಸ್ತ್ರಿಗಳ ಸೂಚನೆಯ ಮೇರೆಗೆ ಮಗುವಿನ ಪಾಲನೆಗೆ ಪುತಲೀಬಾಯಿ-ನರಸಿಂಹಯ್ಯ ದಂಪತಿ ಒಪ್ಪಬೇಕಾಯಿತು. ಇದು ನಡೆದದ್ದು 1906ರ ಯುಗಾದಿಯಂದು. ಆಗ ರಾಘವೇಂದ್ರನಿಗೆ 15 ವರ್ಷ. ನಂಬೂದಿರಿಗಳು ಮಗುವನ್ನು ಪುತಲೀಬಾಯಿ-ನರಸಿಂಹಯ್ಯ ದಂಪತಿಗೆ ವಹಿಸಿ, ನಾಣ್ಯಗಳ ಗಂಟೊಂದನ್ನು ಕೊಟ್ಟರು. ಜನ್ಮನಾಮ ಕುಮಾರಸ್ವಾಮಿಯಾಗಿದ್ದರೂ, ಮಂತ್ರಾಲಯದ ರಾಘವೇಂದ್ರ ಶ್ರೀಗಳ ಅನುಗ್ರಹದಿಂದಾಗಿ ‘ರಾಘವೇಂದ್ರ’ ಎಂಬ ಮರುನಾಮಕರಣವಾಯಿತು. ನಂಬೂದಿರಿ ಹಿಮಾಲಯದತ್ತ ಹೊರಟರು. ಇತ್ತ ಸ್ವಲ್ಪಕಾಲಕ್ಕೆ, ಮಸುಕಾಗಿದ್ದ ರಾಘವೇಂದ್ರನ ‘ಪ್ರಜ್ಞಾಸ್ತರ’ ಸಾಕು ತಾಯ್ತಂದೆಯರ ಚಿಕಿತ್ಸೆ, ಪ್ರೀತಿಯಿಂದಾಗಿ ಕ್ರಮೇಣ ಕಳಚತೊಡಗಿತು; ಭಾವನೆಗಳು ತಿಳಿಯತೊಡಗಿದವು. ಪ್ರೌಢಶಾಲೆಯಲ್ಲಿ ಓದಬೇಕಾಗಿದ್ದವ ಆ ಊರಿನ ‘ಐಗಳ ಮಠ’ಕ್ಕೆ ಓದಲು ಹೋಗತೊಡಗಿದ. ಅಲ್ಲಿ ಅಮರ, ಶ್ಲೋಕ, ಕನ್ನಡ ಪದ್ಯಗಳನ್ನು ಹೇಳಿಕೊಡುತ್ತಿದ್ದರು. ಅಲ್ಲಿ ಒಂದು ವರ್ಷವಿದ್ದು, ಬಾರಕೂರಿನ ಹೈಯರ್ ಎಲಿಮೆಂಟರಿ ಶಾಲೆಗೆ ದಾಖಲಾದ. ರಾಘವೇಂದ್ರ ಬೆಳೆದ ಹುಡುಗ, ಅಲ್ಲಿ ಓದುತ್ತಿದ್ದವರೋ ಸಣ್ಣ ಹುಡುಗರು. ಆದರೂ ರಾಘವೇಂದ್ರನಿಗೆ ಓದಿನ ಮೇಲೆ ನಿಗಾ ಬೆಳೆೆಯಿತು. ಇಂಗ್ಲಿಷ್ ಬಿಟ್ಟು ಉಳಿದ ವಿಷಯಗಳಲ್ಲಿ ಮುಂದುವರಿದ ಹುಡುಗನಾದ. ಸಂಗೀತ ಎಂದರೆ ಪಂಚಪ್ರಾಣ. ಅಲ್ಲಿ ಸಂಗೀತ ಹೇಳಿಕೊಡುತ್ತಿದ್ದ ಬೇಲೂರು ಗೋವಿಂದನಾಯಕರ ಶಿಷ್ಯನಾದ.

ಉತ್ಥಾನಪರ್ವ: ರಾಘವೇಂದ್ರ ಓದಿನಲ್ಲಿ ಮುಂದು. ಬಾರಕೂರಿನಲ್ಲಿ ಪ್ರೌಢಶಾಲೆ ಇರಲಿಲ್ಲ, ಕುಂದಾಪುರಕ್ಕೆ ಹೋಗಬೇಕಾಗುತ್ತಿತ್ತು. ಆಗ ರಾಘವೇಂದ್ರನಿಗೆ 21ರ ಪ್ರಾಯ. ಕುಂದಾಪುರದ ಸರ್ಕಾರಿ ಪ್ರೌಢಶಾಲೆಗೆ ಸೇರಿದ್ದಾಯಿತು. ಇವರ ಸಹಪಾಠಿ ಪಾಂಡೇಶ್ವರ ಗಣಪತಿರಾಯರು. ಉತ್ತಮ ಗೆಳೆಯ, ಸಾಹಿತ್ಯಪ್ರೇಮಿ! ಪ್ರತಿನಿತ್ಯ ಬಾರಕೂರಿನಿಂದ ಬಂದುಹೋಗಲು ತೊಂದರೆ. ಹೀಗಾಗಿ, ಕುಂದಾಪುರದಲ್ಲಿ ಚಿಕ್ಕಕೋಣೆ ಹಿಡಿದು ಉಳಿಯಬೇಕಾಯಿತು. ಬೆಳಗ್ಗೆ ಬೇಗ ಎದ್ದು ಕೆರೆಯಲ್ಲಿ ಮಿಂದು ಕುಂದೇಶ್ವರಸ್ವಾಮಿಯ ದರ್ಶನ ಮಾಡುತ್ತಿದ್ದದ್ದು ವಾಡಿಕೆ! ಆಗ ಪ್ರೌಢಶಾಲೆಯಲ್ಲಿ ಐರೋಡಿ ಶಿವರಾಮಯ್ಯ ಕನ್ನಡ ಪಂಡಿತರಾಗಿದ್ದರು. ಅವರ ಬೋಧನೆಯ ಬೆಳಕಿನಲ್ಲಿ ಪಂಪ-ರನ್ನ-ಜನ್ನರ ಕಾವ್ಯಗಳ ಓದು ಸಾಗಿತು! ಒಮ್ಮೆ ಬಾರಕೂರಿಗೆ ಸ್ವಾಮಿ ನಿತ್ಯಾನಂದರು ಬಂದು ನರಸಿಂಹಯ್ಯನವರ ಮನೆಯಲ್ಲಿ ಒಂದುರಾತ್ರಿ ಉಳಿದರು. ಅವರ ಭವ್ಯವ್ಯಕ್ತಿತ್ವಕ್ಕೆ ಜನ ಮರುಳಾದರು. ಅವರು ಹೊರಡುವ ಹಿಂದಿನ ರಾತ್ರಿ ರಾಘವೇಂದ್ರನಿಗೆ ‘ತಾರಕಯೋಗ’ವನ್ನು ಉಪದೇಶಿಸಿದರು. ಇದು ಶಕ್ತಿಪಾತ ಯೋಗವೆಂದೇ ಪ್ರಸಿದ್ಧಿ. ಅದು ರಾಘವೇಂದ್ರರ ಬದುಕಿನಲ್ಲಿ ಸಿದ್ಧಿಯಾಗಿ ಪರಿಣಮಿಸಿತು! ಅದರ ಗುಂಗಿನಲ್ಲೇ ಉಳಿದರು. ಸ್ವಾಮೀಜಿ ಬಾರಕೂರು ಬಿಟ್ಟಮೇಲೆ ರಾಘವೇಂದ್ರ ಶಾಲೆಗೆ ಹಿಂತಿರುಗಿದ! ಐರೋಡಿ ಶಿವರಾಮಯ್ಯನವರಿಗೆ ಎಲ್ಲ ಅನುಭವಗಳನ್ನು ನಿವೇದಿಸಿಕೊಂಡ. ಶಿಷ್ಯನ ಪ್ರಗತಿ ಗುರುಗಳಿಗೆ ಆನಂದ ತಂದಿತು. ರಾಘವೇಂದ್ರನ ಬದುಕು ಬದಲಾಗುವ ಪ್ರಸಂಗವೂ ಒದಗಿತು!

ತಾರಕಯೋಗದ ಉಪದೇಶ ಪಡೆದ ಮೇಲೆ ಅವರೊಳಗೆ ಅಂತರ್ನಿಹಿತವಾಗಿದ್ದ ಆಧ್ಯಾತ್ಮಿಕ ಹಸಿವು ಉದ್ದೀಪನಗೊಂಡು ದಿನೇದಿನೆ ಬೆಳೆಯತೊಡಗಿತು. ಆದರೆ, ಹಿಂಗಿಸುವ ಸಾಧನೆ ಮಾತ್ರ ತಿಳಿಯಲಿಲ್ಲ. ಒಮ್ಮೆ ಕುಂದೇಶ್ವರ ದೇಗುಲದ ಬಳಿಯ ಮನೆಯಲ್ಲಿ ಸಿದ್ಧಾರೂಢರ ಭಾವಚಿತ್ರ ಇವರಿಗೆ ಕಾಣಿಸಿತು. ಆ ಮನೆಯ ಯಜಮಾನರು ಸಿದ್ಧಾರೂಢರ ಮಹಿಮೆಯನ್ನು ವರ್ಣಿಸಿದಾಗ, ಅವರನ್ನು ಕಾಣುವ ಹಂಬಲ ಬಲಿಯಿತು. ಲೌಕಿಕದ ಓದಿಗಿಂತ ಅಲೌಕಿಕ ಸೆಳೆತ ಹೆಚ್ಚಾಯಿತು. ಒಂದು ದಿನ ಮನೆಬಿಟ್ಟು ಶಿವಮೊಗ್ಗೆಗೆ ಹೋಗುವ ಬಸ್ಸಿಗೆ ಬಂದು ಅಲ್ಲಿಂದ ಗೃಹಸ್ಥರೊಬ್ಬರ ನೆರವಿನಿಂದ ಹುಬ್ಬಳ್ಳಿ ತಲುಪಿದರು. ಸಿದ್ಧಾರೂಢಮಠ ಆಕರ್ಷಿಸಿತು, ಆದರೆ ಸ್ವಾಮಿಗಳನ್ನು ನೋಡುವುದೇ ದುಸ್ತರವಾಯಿತು. 2 ತಿಂಗಳು ಕಾದಮೇಲೆ ಸ್ವಾಮಿಗಳು ಕಂಡರು. ಅವರ ಪಾದಹಿಡಿದು ದೇವರನ್ನು ತೋರಿಸಬೇಕೆಂದೂ ಆಧ್ಯಾತ್ಮಿಕ ಹಸಿವು ನೀಗಿಸಬೇಕೆಂದೂ ಕೋರಿದರು. ಅವರು ‘ನಿನ್ನ ಗುರು ಬೇರೆ ಇದ್ದಾನಪ್ಪ, ನಾನಲ್ಲ’ ಎಂದಾಗ ನಿಜಗುರುವನ್ನು ಹುಡುಕಲು ಪ್ರಾರಂಭಿಸಿದರು.

ಹುಬ್ಬಳ್ಳಿಯಿಂದ ರೈಲು ಹತ್ತಿ ಅವರು ತುಮಕೂರಿಗೆ ಬಂದಾಗ ಅಂಬಾಪ್ರಸಾದಿತ ನಾಟಕ ಕಂಪನಿಯ ಜಾಹೀರಾತು ಕಾಣಿಸಿತು. ಅಲ್ಲಿ ಶಿವರಾಮಕಾರಂತರೂ ಸೇರಿಕೊಂಡಿದ್ದರು. ಅವರು ರಂಗನಾಥ ಭಟ್ ಥಾಮನ್​ಕರ್ ಬಳಿ ಕರೆದೊಯ್ದರು. ಇವರಿಗೆ ಲೆಕ್ಕ ಬರೆಯುವ ಕೆಲಸ ನೀಡಲಾಯಿತು. ಆಗಾಗ್ಗೆ ನಾಟಕಗಳಲ್ಲಿ ಪಾತ್ರವನ್ನೂ ವಹಿಸಬೇಕಾಗುತ್ತಿತ್ತು. ಅಲ್ಲಿ ವರ್ಷಗಳೇ ಕಳೆದವು. ಈ ನಡುವೆ, ಹರಿದ್ವಾರದ ಸಂತರಲ್ಲೊಬ್ಬರಾದ ಸ್ವಾಮಿ ಶಿವಾನಂದರು ಮುಂಬೈ ಪ್ರಾಂತ್ಯದಲ್ಲಿ ಆಧ್ಯಾತ್ಮಿಕ ಪ್ರವಚನ ನೀಡುತ್ತಿದ್ದ ಸುದ್ದಿ ಮರಾಠಿ ಪತ್ರಿಕೆಯೊಂದರಲ್ಲಿ ಬಂದಿತ್ತು. ಅವರು ಉಳಿದುಕೊಂಡಿದ್ದ ವಿಳಾಸಕ್ಕೆ ಪತ್ರ ಬರೆದು ತಮ್ಮ ಆಧ್ಯಾತ್ಮಿಕ ಹಂಬಲ ತೋಡಿಕೊಂಡರು. ಸ್ವಲ್ಪ ದಿನಕ್ಕೆ ಪಂಢರಪುರ ವಿಳಾಸದಿಂದ ಇಂಗ್ಲಿಷಿನಲ್ಲಿ ಪತ್ರ ಬಂದಿತ್ತು. ‘ನನ್ನ ಪ್ರೀತಿಯ ಸೋದರ’ ಎಂಬ ಅವರ ಸಂಬೋಧನೆಯಿಂದ ರಾಘವೇಂದ್ರರಿಗೆ ರೋಮಾಂಚನವೇ ಆಯಿತು! ‘ನಿನ್ನ ಪತ್ರ ತಲುಪಿದೆ. ನಿನ್ನನ್ನು ಕರೆದುಕೊಳ್ಳಲು ನನಗೆ ಮುಜುಗರ. ನಾನೋ ಪರಿವ್ರಾಜಕ. ನೀನು ಅಧ್ಯಾತ್ಮಪಿಪಾಸು. ಸಾಧನೆ ಮುಂದುವರಿಸು. ಆ ಜಗನ್ನಿಯಾಮಕ ನಿನ್ನ ಇಚ್ಛೆ ಈಡೇರಿಸಲಿ’ ಎಂಬ ಸಾಲುಗಳು ಮುದ ನೀಡಿದವು! ನಾಟಕ ಕಂಪನಿ ತೊರೆಯುವುದೇ ಸರಿಯೆನಿಸಿತು. ಆದರೆ ಹೇಗೆ? ರಂಗನಾಥ ಭಟ್ಟರ ಕುಟುಂಬ ರಾಘವೇಂದ್ರರಿಗೆ ಆಶ್ರಯ ನೀಡಿತ್ತು. ಅವರು ಒಪ್ಪಿ ಕಳುಹಿಸುವುದು ಸಾಧ್ಯವಿಲ್ಲವೆಂದು ಮನವರಿಕೆ ಆದ ಮೇಲೆ ಒಂದು ಮುಂಜಾನೆ ಕಂಪನಿ ಬಿಟ್ಟು ಹೊರಟರು. ಸೊಲ್ಲಾಪುರದಿಂದ ಪಂಢರಪುರಕ್ಕೆ ರಸ್ತೆಯಲ್ಲಿ ನಡೆಯಲಾರಂಭಿಸಿದರು. ಆದರೆ, ಶಿವಾನಂದರು ಹಿಂದಿನ ದಿನವೇ ಅಲ್ಲಿಂದ ಪೂನಾಕ್ಕೆ ಹೊರಟದ್ದು ತಿಳಿಯಿತು. ರಾಘವೇಂದ್ರರು ಪಟ್ಟುಬಿಡದೆ ಹಿಂಬಾಲಿಸಿ ಅವರನ್ನು ಕಂಡು, ಯೋಗ, ವ್ಯಾಯಾಮ, ಪ್ರಾಣಾಯಾಮ ವಿದ್ಯೆಗಳನ್ನು ಕಲಿಯುತ್ತ, ವೇದಾಂತ ಪ್ರವಚನ ಕೇಳುತ್ತ ಹಲವು ತಿಂಗಳು ಕಳೆದರು. ಶಿವಾನಂದರ ಗುರು ಪ್ರೊ. ಮಾಣಿಕರಾವ್​ರಿಂದ ವ್ಯಾಯಾಮ-ಯೋಗಸಾಧನೆಯ ಸಿದ್ಧಿ ಪಡೆದರು.

ಶಿವಾನಂದರ ಸೂಚನೆಯಂತೆ ರಾಘವೇಂದ್ರರು ‘ಕೈವಾಲ್ಯಾಶ್ರಮ’ಕ್ಕೆ ಹೊರಟರು. ಇದು ಆಯುರ್ವೆದ ಮತ್ತು ಸಿದ್ಧವೈದ್ಯ ಆಚಾರ್ಯ ಬಾಬಾ ಲಕ್ಷ್ಮಣದಾಸ್ ಸಾಧು ಅವರ ಆಶ್ರಮ! ಅಲ್ಲಿ ಬಾಬಾರನ್ನು ಕಂಡು ಪೂರ್ವಾಶ್ರಮದ ವಿವರಗಳನ್ನೆಲ್ಲ ತಿಳಿಸಿದರು. ಪರೀಕ್ಷೆ ಮಾಡಿದ ನಂತರ ಬಾಬಾ ಆಶ್ರಮಕ್ಕೆ ಸೇರಿಸಿಕೊಂಡರು. ಅಲ್ಲಿ ರಾಘವೇಂದ್ರರು ಆಯುರ್ವೆದದ ಮೂಲಗ್ರಂಥಗಳನ್ನು ಅಧ್ಯಯನ ಮಾಡಿ, ಶಿವಾನಂದರ ಬಳಿಗೆ ವಾಪಸಾದರು. ಅವರ ಸೂಚನೆಯಂತೆ ಭಟ್ಕಳದಲ್ಲಿ ಪ್ರಾರಂಭಿಸಲಾದ ವ್ಯಾಯಾಮಶಾಲೆಯ ಉದ್ಘಾಟನೆಗೆ ಹೊರಟರು. ಇದು ರಾಘವೇಂದ್ರರ ಬದುಕಿಗೆ ಹೊಸಪರ್ವವೇ ಆಯಿತು.

ನಿಷ್ಕಾಮಕರ್ಮಯೋಗಿ: ವಿವಿಧ ವಿದ್ಯೆಗಳಲ್ಲಿ ಪಾರಂಗತರಾದ ರಾಘವೇಂದ್ರರು, ರಾಷ್ಟ್ರಸೇವೆ, ಸಮಾಜಸೇವೆಗೆ ಜೀವನವನ್ನು ಮುಡಿಪಿಡಬೇಕೆಂದು ನಿರ್ಧರಿಸಿದರು. ಆಲೂರು ವೆಂಕಟರಾಯರು, ದ.ರಾ. ಬೇಂದ್ರೆ, ರಂಗನಾಥ ದಿವಾಕರ, ಪಲಿಮಾರು ಮಠದ ಸ್ವಾಮಿಗಳು ಶಿವಾನಂದರಿಗೆ ಪತ್ರ ಬರೆದು ಕನ್ನಡ ನೆಲದಲ್ಲಿ ಯೋಗ ಮತ್ತು ವ್ಯಾಯಾಮ ಪ್ರಚಾರ-ಪ್ರಸಾರಕ್ಕಾಗಿ ಸಮರ್ಥಶಿಷ್ಯರೊಬ್ಬರ ಬೇಡಿಕೆ ಇಟ್ಟಿದ್ದರು. ತಾವು ‘ಕರ್ನಾಟಕೀ’ ಎಂದು ಪ್ರೀತಿಯಿಂದ ಕರೆಯುತ್ತಿದ್ದ ರಾಘವೇಂದ್ರರಿಗೆ ಆ ಜವಾಬ್ದಾರಿ ವಹಿಸಿ ವರೋಡಾದಿಂದ ಕರ್ನಾಟಕಕ್ಕೆ ಕಳುಹಿಸಿದರು ಶಿವಾನಂದರು. ರಾಘವೇಂದ್ರರು ಉಡುಪಿಗೆ ಬಂದು ಪಲಿಮಾರು ಶ್ರೀಗಳನ್ನು ಕಂಡು ಯೋಗಪ್ರದರ್ಶನ ನೀಡಿದರು. ಇದು ಅಲ್ಲಿನ ಜನರನ್ನು ಚಕಿತಗೊಳಿಸಿತು. ನಂತರ ತೀರ್ಥಹಳ್ಳಿಗೆ ಬಂದು ಯೋಗದ ಮಹಿಮೆ ಸಾರಿದರು, ಆಸನದ ಹಲವು ಬಗೆಗಳನ್ನು ತಿಳಿಹೇಳಿದರು. ಶಿರಾಳಕೊಪ್ಪ, ನ್ಯಾಮತಿ, ಹಾರ್ನಹಳ್ಳಿ, ಶಿಕಾರಿಪುರ ಮುಂತಾದ 50 ಸ್ಥಳಗಳಲ್ಲಿ ಶಿಬಿರಗಳನ್ನು ನಡೆಸಿ 1943ರಲ್ಲಿ ಮಲ್ಲಾಡಿಹಳ್ಳಿಗೆ ಬಂದು ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಂಡರು. ಊರಿನ ಸ್ವಚ್ಛತಾಕಾರ್ಯಕ್ಕೆ ಮುಂದಾದರು. ತರುಣರಿಗೆ ವ್ಯಾಯಾಮ ಹೇಳಿಕೊಟ್ಟರು, ರೋಗಿಗಳಿಗೆ ಔಷಧ ನೀಡಿದರು, ಕಾಲರಾ ಬೇನೆಯನ್ನು ಸರ್ಕಾರಿ ವೈದ್ಯರ ಸಹಾಯದಿಂದ ನಿವಾರಿಸಿದರು. ಹೀಗೆ ರಾಘವೇಂದ್ರರು ಕ್ರಮೇಣ ಜನರ ಬಾಯಲ್ಲಿ ರಾಘವೇಂದ್ರ ಸ್ವಾಮಿಗಳಾದರು. ಮುಂದೆ ಒಬ್ಬ ಅಜ್ಜಿಯ ಒತ್ತಾಯದಿಂದ ಪರಪ್ಪಸ್ವಾಮಿಗಳ ಮಠ ನಿರ್ವಣಗೊಂಡಿತು. ಇದೇ ವೇಳೆ ಸೂರ್ಯನಾರಾಯಣ ರಾವ್ ಎಂಬುವರು ಸ್ವಾಮಿಗಳ ಸೇವೆಗೆ ನಿಂತರು. ಅವರು ಕಾಲಕ್ರಮೇಣ ‘ಸೂರದಾಸಜೀ’ ಎಂದು ಪ್ರಸಿದ್ಧರಾದರು. ಮಲ್ಲಾಡಿಹಳ್ಳಿಯಲ್ಲಿ ತಲೆಯೆತ್ತಿದ ವ್ಯಾಯಾಮಶಾಲೆ, ವಾಚನಾಲಯ, ಗ್ರಂಥಭಂಡಾರ, ಆಸ್ಪತ್ರೆ, ಪರಪ್ಪಸ್ವಾಮಿ ಮಠಗಳು ಅನಾಥ ಸೇವಾಶ್ರಮಕ್ಕೆ ಶೋಭೆ ತಂದವು. ಏಳನೆಯ ವರ್ಷದ ಕೊನೆಯ ದಿನ ಶಂಕರಲಿಂಗ ಭಗವಾನರು ಬರಬೇಕಿತ್ತು. ಅವರು ಬಳ್ಳಾರಿ ಕಡೆ ಪ್ರವಾಸಕ್ಕೆ ಹೋಗಿದ್ದರು. ರಾಘವೇಂದ್ರ ಸ್ವಾಮಿಗಳು ಊರಿನವರಿಗೆ ಏಳುವರ್ಷಗಳ ಹಿಂದೆ ತಿಳಿಸಿದಂತೆ- ಸಪ್ರಾಹದ ಕೊನೆಯ ದಿನ ಹೊರಡುವ ವಿಷಯ ತಿಳಿಸಿದಾಗ ಊಟಕ್ಕೆ ಕುಳಿತಿದ್ದವರು ಊಟಮಾಡಲು ನಿರಾಕರಿಸಿದರು. ಆಗ ಹಿರಿಯರೊಬ್ಬರು ಬಂದು ‘ಅನಾಥಸೇವಾಶ್ರಮ’ವನ್ನು ಬಿಟ್ಟುಹೋಗದಂತೆ ಸ್ವಾಮಿಗಳನ್ನು ಕೋರಿದರು. ಸ್ವಾಮಿಗಳು ಮುಂದೆ ಆಶ್ರಮಕ್ಕೆ ಭದ್ರಬುನಾದಿ ಹಾಕಿದರು. ಮಲ್ಲಾಡಿಹಳ್ಳಿಗೆ ಭೇಟಿನೀಡಿದ ಜನಸಾಮಾನ್ಯರು, ಗಣ್ಯರು ಆಶ್ರಮದಲ್ಲಿನ ಶಿಸ್ತಿಗೆ ಬೆರಗಾದದ್ದುಂಟು. ಸ್ವಾರ್ಥವಿಲ್ಲದೆ ದುಡಿದ ಜೀವವೊಂದು ಇಲ್ಲಿ ಬೆಳಗಿತು. ಈ ನಡುವೆ ಆಶ್ರಮದಲ್ಲಿ ಸಂಕಷ್ಟಗಳು ಎದುರಾದರೂ, ಕ್ರಮೇಣ ಮಂಜಿನಂತೆ ಕರಗಿದವು.

ರಾಘವೇಂದ್ರ ಸ್ವಾಮಿಗಳು ಯೋಗಪಟು, ಸಿದ್ಧವೈದ್ಯ, ವ್ಯಾಯಾಮ ಸಾಧಕ, ಸಂಗೀತಗಾರ, ಜನತಾ ಸೇವಾಕರ್ತರಾಗಿ ದುಡಿದರು. ‘ತಿರುಕ’ ಕಾವ್ಯನಾಮದಿಂದ ಹತ್ತಾರು ಕೃತಿಗಳನ್ನು ಹೊರತಂದರು. ಶಿವಾನಂದರ ಜತೆಗಿರುವಾಗಲೇ ಮರಾಠಿಯಿಂದ ಕನ್ನಡಕ್ಕೆ 2 ಕೃತಿಗಳನ್ನು ಅನುವಾದಿಸಿದ್ದರು. ‘ಪೂಜೆ’ ಎಂಬ ಕವನ ಸಂಕಲನದಿಂದ ಸಾಹಿತ್ಯಕೃಷಿ ಪ್ರಾರಂಭಿಸಿ ಕಾವ್ಯ, ಕಾದಂಬರಿ, ನಾಟಕ, ಕಥಾಸಂಕಲನ, ವಚನ-ಕೀರ್ತನ ಸಾಹಿತ್ಯ, ಆಯುರ್ವೆದ ಮತ್ತು ಯೋಗ, ವ್ಯಾಯಾಮಕ್ಕೆ ಸಂಬಂಧಿಸಿದ ಸಾಕಷ್ಟು ಕೃತಿಗಳನ್ನು ಪ್ರಕಟಿಸಿದರು. ಇವರಿಗೆ ರಾಜ್ಯಪ್ರಶಸ್ತಿಗಳು ಪ್ರಕಟಗೊಂಡಾಗ, ಕೇಂದ್ರಸರ್ಕಾರ ‘ಪದ್ಮಶ್ರೀ’ ಪುರಸ್ಕಾರಕ್ಕೆ ನಿರ್ಣಯಿಸಿದಾಗ ನಯವಾಗಿ ತಿರಸ್ಕರಿಸಿದ್ದುಂಟು.

ರಾಘವೇಂದ್ರ ಸ್ವಾಮಿಗಳ ಶತಮಾನೋತ್ಸವ 1991ರಲ್ಲಿ ಜರುಗಿತು. ‘ಜೋಳಿಗೆಯ ಪವಾಡ’ ಎಂಬ ಆತ್ಮಕತೆ 1994ರಲ್ಲಿ ಪ್ರಕಟವಾಯಿತು. 1998ರ ಆಗಸ್ಟ್ 3ರಂದು, 107ನೇ ವರ್ಷದಲ್ಲಿ ಹೃದ್ರೋಗದಿಂದ ದೇಹ ತ್ಯಜಿಸಿದ ಶ್ರೀಗಳು ನಿಷ್ಕಾಮಕರ್ಮಯೋಗಿಯಾಗಿ ಸೇವಾದೀಪ ಹಚ್ಚಿಟ್ಟ ಧನ್ಯಜೀವಿ ಎಂಬುದರಲ್ಲಿ ಎರಡು ಮಾತಿಲ್ಲ.

(ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು)

Leave a Reply

Your email address will not be published. Required fields are marked *

Back To Top