Tuesday, 11th December 2018  

Vijayavani

ಪಂಚರಾಜ್ಯಗಳ ಫಲಿತಾಂಶದಲ್ಲಿ ಕೈ ಆಟ-3 ರಾಜ್ಯಗಳಲ್ಲಿ ಅಧಿಕಾರದತ್ತ ಕಾಂಗ್ರೆಸ್​ - ವರ್ಕೌಟ್​ ಆಗದ ಮೋದಿ - ಅಮಿತ್ ಷಾ ಅಲೆ        ರಾಜಸ್ಥಾನದಲ್ಲಿ ಮ್ಯಾಜಿಕ್ ನಂಬರ್ ಸನಿಹ ಕಾಂಗ್ರೆಸ್-95 ಕ್ಷೇತ್ರದಲ್ಲಿ ಕಾಂಗ್ರೆಸ್, 80 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ        ಮಧ್ಯಪ್ರದೇಶದಲ್ಲಿ ಹಾವು ಏಣಿ ಆಟ - ಕೈ ಕಮಲ ಸಮಬಲದ ಹೋರಾಟ - ಸರ್ಕಾರ ರಚನೆಗೆ ಪಕ್ಷೇತರರೇ ನಿರ್ಣಾಯಕರು        ತೆಲಂಗಾಣದಲ್ಲಿ ನಡೆಯದ ಕೈ-ಕಮಲದ ಆಟ-ಶರವೇಗದಲ್ಲಿ ಮುನ್ನುಗಿದ ಕೆಸಿಆರ್​-ನೂತನ ಸಿಎಂ ಆಗಿ ನಾಳೆ ಪ್ರಮಾಣ ವಚನ        ಛತ್ತೀಸ್​ಗಢದಲ್ಲಿ ಅಧಿಕಾರದತ್ತ ಕಾಂಗ್ರೆಸ್ - ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗ        ಮಿಜೋರಾಂನಲ್ಲಿ ಕಾಂಗ್ರೆಸ್​​​ಗೆ ಭಾರಿ ಮುಖಭಂಗ - ಅಧಿಕಾರದ ಗದ್ದುಗೆ ಹಿಡಿದ ಎಂಎನ್​​​ಎಫ್​ - 25 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ       
Breaking News

ಪುನರುತ್ಥಾನಪರ್ವದ ಮಹಾಸಾಧಕ

Sunday, 25.02.2018, 3:05 AM       No Comments

ಅಧ್ಯಾತ್ಮ-ವಿಜ್ಞಾನ, ದರ್ಶನ-ವಿಜ್ಞಾನ, ಸಮಾಜವಾದ-ಅಧ್ಯಾತ್ಮವಾದ ಇವುಗಳ ನಡುವಣ ಭಿನ್ನತೆಗಳನ್ನು ತೊಲಗಿಸಿದ ಸ್ವಾಮಿ ವಿವೇಕಾನಂದರು ಸರ್ವಜನೋನ್ನತಿ, ಸಾಮಾಜಿಕ ಸಾಮರಸ್ಯ, ಶಿಕ್ಷಣಪ್ರಸಾರ- ಈ ತ್ರಿತ್ವಮುಖದ ನೆಲೆಯಲ್ಲಿ ರಾಷ್ಟ್ರಾಭ್ಯುದಯ ದರ್ಶನವನ್ನು ಪ್ರತೀತಗೊಳಿಸಿದರು.

ಆಧುನಿಕ ಪುನರುತ್ಥಾನದ ಬೀಜಾಂಕುರಗಳು ಭಾರತದ ಮೂರು ಭಾಗಗಳಲ್ಲಿ ಆದುವು. ಮೊದಲನೆಯದು ಬಂಗಾಳ, ಎರಡನೆಯದು ಮಹಾರಾಷ್ಟ್ರ, ಮೂರನೆಯದು ಕರ್ನಾಟಕ! ಈ ಮೂರೂ ಸಾಂಸ್ಕೃತಿಕ ಪ್ರದೇಶಗಳು ವಿವಿಧ ಬಗೆಯ ಉತ್ಕ್ರಾಂತಿಗಳಿಗೆ ಕಾರಣವಾದುವು. ಇವುಗಳಲ್ಲಿ ವಂಗಪ್ರದೇಶವು ತನ್ನ ದಿವ್ಯಪ್ರಭೆಯಿಂದ ವಿರಾಜಮಾನವಾಯಿತು. ಇದು ಭಾರತದ ಸಾಂಸ್ಕೃತಿಕ-ಧಾರ್ವಿುಕ ಮತ್ತು ಸಾಮಾಜಿಕ ಅರುಣೋದಯಕ್ಕೆ ಪರೋಕ್ಷವಾಗಿ ಕಾರಣವಾದುದನ್ನು ಮರೆಯು ವಂತಿಲ್ಲ. ಇದೇ ಸಂದರ್ಭದಲ್ಲಿ ಬಂಕಿಮಚಂದ್ರ-ರವೀಂದ್ರರು ಸಾಹಿತ್ಯ ಪುನರುತ್ಥಾನಕ್ಕೆನಾಂದಿ ಹಾಡಿದರೆ; ನಂದಲಾಲ್ ಬೋಸ್ ಮುಂತಾದವರು ಕಲೆಯ ಉಜ್ವಲಕ್ಕೆ ಕಾರಣರಾದರು. ಅಂತೆಯೆ, ನಾನಾ ರಂಗದಲ್ಲಿ ಹೊಸಹೊಸ ಆವಿಷ್ಕಾರಗಳು ನಡೆದುವು. ಇದೆಲ್ಲದರ ಹಿಂದೆ ನಿಂತು ಭಾರತೀಯ ನವೋದಯಕ್ಕೆ ಶ್ರೀಕಾರ ಹಾಕಿದವರು ಸ್ವಾಮಿ ವಿವೇಕಾನಂದರು. ಅವರ 155ರ ಜನ್ಮಸಂಭ್ರಮದಲ್ಲಿ ನಾವೀಗ ಇದ್ದೇವೆ.

ಜನನ: ಸ್ವಾಮಿ ವಿವೇಕಾನಂದರು ಜನ್ಮತಾಳಿದ್ದು ಕೊಲ್ಕತ್ತದಲ್ಲಿ. 1863 ಜನವರಿ 12 ರಂದು ಜನನ. ಇವರ ತಂದೆ-ತಾಯಿಗಳು ನರೇಂದ್ರನಾಥ ದತ್ತ ಎಂದು ಹೆಸರಿಟ್ಟರು. ಆದರೆ, ಪ್ರೀತಿಯಿಂದ ‘ನರೇನ್’ ಎಂದೇ ಕರೆಯುತ್ತಿದ್ದರು. ನರೇಂದ್ರನದು ಸೂಕ್ಷ್ಮಮನಸ್ಸು. ಆತನ ಪರೇಂಗಿತ ಪ್ರಜ್ಞೆ ಅನೇಕ ಸಂದರ್ಭಗಳಲ್ಲಿ ವ್ಯಕ್ತವಾಗುತ್ತಿತ್ತು. ತಾಯಿಯ ಎಲ್ಲ ಗುಣಗಳು ನರೇಂದ್ರನಲ್ಲಿ ಮನೆಮಾಡಿಕೊಂಡಿದ್ದವು. ನರೇಂದ್ರನಿಗೆ ಸಾಧು-ಸಂತರ ಬಗೆಗೆ ಅಪರಿಮಿತ ಆಸಕ್ತಿ ಮತ್ತು ಭಕ್ತಿ. ಓದಿನಲ್ಲಿ ಸದಾ ಮುಂದು. ಏಕಸಂಧಿಗ್ರಾಹಿ. ಬಾಲ್ಯದಲ್ಲಿದ್ದಾಗ ಅನೇಕ ಬಾರಿ ಅವಮಾನಿತರಾದದ್ದುಂಟು. ಆಗ ಮುಗ್ಧಬಾಲಕ ತನ್ನ ನೋವನ್ನು ಹೇಳಿಕೊಂಡಾಗ: ‘ಮಗು, ನೀನು ನಿನ್ನ ಜೀವನದುದ್ದಕ್ಕೂ ಪರಿಶುದ್ಧವಾಗಿರಬೇಕು, ಪವಿತ್ರನಾಗಿರಬೇಕು. ಆತ್ಮಗೌರವವನ್ನು ಯಾವಾಗಲೂ ಕಾಪಾಡಿಕೊಳ್ಳಬೇಕು. ಇಷ್ಟು ಮಾತ್ರವಲ್ಲ, ಇತರರ ಗೌರವಕ್ಕೆ ಧಕ್ಕೆ ಬಂದಾಗ ಅದನ್ನು ಪರಿಹರಿಸಬೇಕು. ಯಾವಾಗಲೂ ಸಮಾಧಾನದಿಂದ ಇರುವುದನ್ನು ಅಭ್ಯಾಸ ಮಾಡಿಕೊ. ಆದರೆ, ಸಮಯ ಬಂದಾಗ ಕಲ್ಲೆದೆಯವನಾಗಬೇಕು’ ಎಂದು ತಾಯಿ ಭುವನೇಶ್ವರಿದೇವಿ ನರೇಂದ್ರನನ್ನು ಸಮಾಧಾನಿಸಿದ್ದುಂಟು! ಇದು ಬಾಲಕ ನರೇಂದ್ರನ ವ್ಯಕ್ತಿತ್ವ ಅಪೂರ್ವವಾಗಿ ರೂಪುಗೊಳ್ಳಲು ಸಹಾಯಕವಾಯಿತು. ಸ್ವಾಮಿ ವಿವೇಕಾನಂದರು ತಮ್ಮ ಪರಿವ್ರಜನದ ಸಮಯದಲ್ಲಿ ತಾಯಿಯ ಮಾತನ್ನು ನೆನೆಯುತ್ತಿದ್ದರು. ರಾಮಕೃಷ್ಣರ ಸಮನ್ವಯ ದೃಷ್ಟಿಯನ್ನು ಸಾರಿದರು. ಅವರೊಮ್ಮೆ ತಾಯಿಯ ಬಗೆಗೆ ಹೇಳುತ್ತ- ‘ಯಾವನು ತನ್ನ ತಾಯಿಯನ್ನು ಅಕ್ಷರಶಃ ಪೂಜಿಸಿ ಗೌರವಿಸುವುದಿಲ್ಲವೋ ಅವನು ಎಂದಿಗೂ ದೊಡ್ಡ ವ್ಯಕ್ತಿಯಾಗಲಾರ’ ಎಂದಿದ್ದರು. ನರೇಂದ್ರ ಹೈಸ್ಕೂಲಿನಲ್ಲಿದ್ದಾಗಲೇ ‘ಬ್ರಹ್ಮಸಮಾಜ’ದ ಪ್ರಭಾವಕ್ಕೆ ಸಿಕ್ಕಿಹಾಕಿಕೊಂಡಿದ್ದುಂಟು. ರಾಮಕೃಷ್ಣ ಪರಮಹಂಸರು ಆಗ ದಕ್ಷಿಣೇಶ್ವರದ ಕಾಳಿಮಂದಿರದಲ್ಲಿ ಇರುತ್ತಿದ್ದರು. ಅವರ ಕೀರ್ತಿ ನರೇಂದ್ರನಿಗೆ ತಿಳಿಯಿತು. ಯುವಕ ನರೇಂದ್ರ ಆಗ ಕಾಲೇಜಿನಲ್ಲಿ ಓದುತ್ತಿದ್ದ.

1881ರ ನವೆಂಬರ್ ತಿಂಗಳ ಒಂದು ದಿನ ರಾಮಕೃಷ್ಣರನ್ನು ಕಾಣಲು ನರೇಂದ್ರನಾಥದತ್ತ ಅವರಲ್ಲಿಗೆ ಹೋದ. ಅವನನ್ನು ಕಂಡೊಡನೆ ರಾಮಕೃಷ್ಣರು ಆನಂದತುಂದಿಲರಾದರು. ‘ನಾನು ನಿನ್ನನ್ನೆ ಕಾಯುತ್ತಿದ್ದೆ’ ಎಂದರು. ಈ ಮಾತಿನ ಹಿಂದು-ಮುಂದು ನರೇಂದ್ರನಿಗೆ ಅರ್ಥವಾಗಲಿಲ್ಲ. ಅವರ ಮಂದಸ್ಮಿತ ನಗು ಮತ್ತು ಸರಳತೆ ಅವನನ್ನು ಅತ್ತ ಕಡೆ ಸೆಳೆಯಿತು. ಆದಿನ ರಾಮಕೃಷ್ಣರನ್ನು ‘ದೇವರನ್ನು ಕಂಡಿದ್ದೀರಾ’ ಎಂಬ ನರೇಂದ್ರನ ಪ್ರಶ್ನೆಗೆ ‘ಕಂಡಿದ್ದೇನೆ’ ಎಂಬ ಉತ್ತರದಿಂದ ದಿಗ್​ಭ್ರಾಂತ ಆದದ್ದುಂಟು! ನರೇಂದ್ರನು ಇಷ್ಟು ದೃಢವಾಗಿ ಯಾರಿಂದಲೂ ಉತ್ತರವನ್ನು ನಿರೀಕ್ಷಿಸಿರಲಿಲ್ಲ. ಆದರೆ, ರಾಮಕೃಷ್ಣರ ಈ ಉತ್ತರ, ನರೇಂದ್ರನನ್ನು ದಕ್ಷಿಣೇಶ್ವರದತ್ತ ಮರಳಿಮರಳಿ ಸೆಳೆಯಲು ಕಾರಣವಾಯಿತು.

ರಾಮಕೃಷ್ಣರ ಅಧ್ಯಾತ್ಮದ ವಿದ್ಯುದಾಲಿಂಗನಕ್ಕೆ ನರೇಂದ್ರ ಒಳಗಾಗಿದ್ದ. ಅವರ ಬಳಿ ಇದ್ದಾಗ ಒಮ್ಮೊಮ್ಮೆ ರಚ್ಚೆಹಿಡಿದ ಮಕ್ಕಳಂತೆ ಇರುತ್ತಿದ್ದ! ಒಂದು ದಿನ ತನಗೆ ಮಹಾಸಮಾಧಿಯ ಅನುಭವ ಬೇಕೆಂದು ನರೇಂದ್ರ ಬೇಡಿಕೆ ಇಟ್ಟ. ರಾಮಕೃಷ್ಣರು ಆತನ ತಲೆಯ ಮೇಲೆ ಹಸ್ತಸಂಯೋಗ ಮಾಡಿದ ತಕ್ಷಣ ಸಮಾಧಿಗೊಳಗಾಗಿಬಿಟ್ಟ. ಈ ಅನುಭವ ಅಸಾಧಾರಣವಾಗಿತ್ತು. ರಾಮಕೃಷ್ಣರ ಜತೆಗಿನ ಐದುವರ್ಷಗಳ ಒಡನಾಟ ಅಂತಿಮವಾಗಿ ದೀಕ್ಷೆ ಪಡೆಯುವುದರ ಮೂಲಕ ಅಧ್ಯಾತ್ಮಜೀವನಕ್ಕೆ ಪ್ರವೇಶ ಪಡೆದಂತಾಯಿತು. 1886ನೆಯ ಇಸವಿಯಲ್ಲಿ ನರೇಂದ್ರ ಸಂನ್ಯಾಸದೀಕ್ಷೆಯನ್ನು ಸ್ವೀಕಾರ ಮಾಡಿದ ನಂತರ ಸ್ವಾಮಿ ವಿವೇಕಾನಂದ ಎಂಬ ಹೆಸರನ್ನು ವಿಧ್ಯುಕ್ತವಾಗಿ ಪಡೆದರು. 1886 ಅಕ್ಟೋಬರ್ 19ರಂದು ಬಾರಾನಗರದಲ್ಲಿ ಆಶ್ರಮವೊಂದನ್ನು ಪ್ರಾರಂಭ ಮಾಡಿದರು. ಸ್ವಾಮಿ ವಿವೇಕಾನಂದರು ಆಸೇತು ಹಿಮಾಚಲದವರೆಗೂ ಪರಿವ್ರಾಜಕರಾಗಿ ದೇಶವನ್ನು ಸುತ್ತಿದರು. ಅವರು ಪರಿವ್ರಜನದ ಸಮಯದಲ್ಲಿ ಭರತಖಂಡದ ಬಡತನವನ್ನು ಕಂಡರು. ಅಲ್ಲಲ್ಲಿ ಕಪಟವೇಷದ ಸಾಧುಗಳನ್ನು ಗಮನಿಸಿದರು. ಇದರ ಜತೆಗೆ ಆ ಕಾಲದಲ್ಲಿ ಭಾರತದಲ್ಲಿದ್ದ ಅನೇಕ ಸಾಮಂತರಾಜರ ಪ್ರತ್ಯಕ್ಷ ಭೇಟಿಯೂ ಆಯಿತು. ಜೈಪುರ, ಬರೋಡಾ, ಮೈಸೂರು, ಮದ್ರಾಸ್ ಪ್ರಾಂತ್ಯದಲ್ಲಿದ್ದ ರಾಜರು ಸ್ವಾಮಿ ವಿವೇಕಾನಂದರನ್ನು ಆದರದಿಂದ ಸ್ವಾಗತಿಸಿದರು. ಸ್ವಾಮೀಜಿಯ ಪ್ರಗಲ್ಭ ವಿದ್ವತ್ತು, ವಾಕ್​ಶಕ್ತಿ, ಜ್ಞಾನ-ವಿಜ್ಞಾನ-ಅಧ್ಯಾತ್ಮಗಳ ಬಗೆಗೆ ಇದ್ದ ಅತುಲಸಾಮರ್ಥ್ಯಗಳು ಪ್ರಾಂತ್ಯರಾಜರನ್ನು ಮೂಕವಿಸ್ಮಿತರನ್ನಾಗಿಸಿತು. ರಾಷ್ಟ್ರಧರ್ಮವು ಲೋಕೋತ್ತರಗೊಳ್ಳಬೇಕಾದರೆ, ಆಂತರಿಕಶಕ್ತಿಯ ಅಗತ್ಯ ಇರುವುದನ್ನು ವಿವೇಕಾನಂದರು ಎಲ್ಲಕಡೆ ತಿಳಿಹೇಳಿದರು. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಹೇಳುವ:

ಕ್ಲೈಬ್ಯಂ ಮಾ ಸ್ಮ ಗಮಃ ಪಾರ್ಥ ನೈತತ್ತ್ವಯುಪಪದ್ಯತೇ

ಕ್ಷುದ್ರಂ ಹೃದಯದೌರ್ಬಲ್ಯಂ ತ್ಯಕ್ತೊ್ವೕತ್ತಿಷ್ಠ ಪರಂತಪ ||2-3||

ಎಂಬ ಮಾತಿನ ಭಾವವನ್ನು ಸಾರಿದರು. ನಾವು ಮೊದಲು ನಮ್ಮಲ್ಲಿರುವ ಹೇಡಿತನವನ್ನು ಬಿಡಬೇಕು. ನಮ್ಮಲ್ಲಿರುವ ಎಲ್ಲ ಬಗೆಯ ಕೀಳು ಮನೋಭಾವವನ್ನು ಬುಡ ಸಮೇತ ಕಿತ್ತುಹಾಕಬೇಕು. ನಮ್ಮ ಹೃದಯವನ್ನು ನಿರ್ಮಲ ಮಾಡಿಕೊಳ್ಳಬೇಕು! ಇದು ರಾಷ್ಟ್ರದಲ್ಲಿರುವ ಪ್ರತಿಯೊಬ್ಬರೂ ಮಾಡಬೇಕಾದದ್ದು. ಇದು ವ್ಯಕ್ತಿಯಿಂದ ಪ್ರಾರಂಭವಾಗಿ ಕುಟುಂಬ, ಸಮುದಾಯ, ಸಮಾಜ, ದೇಶ ಮತ್ತು ಜಗತ್ತು- ಈ ತತ್ತ್ವವನ್ನು ಅನುಸರಿಸಬೇಕು! ಸ್ವಾಮಿ ವಿವೇಕಾನಂದರು ಗೀತೆಯ ಅಂತಸ್ಸತ್ವವನ್ನು ಈ ಶ್ಲೋಕದ ಮೂಲಕವೇ ಲೋಕಕ್ಕೆ ಸಾರಿದರು. ಅವರು ತಮ್ಮ ಪರಿವ್ರಜನದ ಸಮಯದಲ್ಲಿ ‘ಮಾನವನಿರ್ವಣ ಶಿಕ್ಷಣ ಮತ್ತು ಮಾನವನಿರ್ವಣ ಧರ್ಮ’ದ ಕಡೆ ಒತ್ತಿಟ್ಟು ಹೇಳಿದರು. ಇವು ಉಪನಿಷತ್ತಿನ ಸಾರವೆಂದು ಹೇಳಿ ಉಪನಿಷತ್ತುಗಳಿಗೆ ನಾವು ಮರಳಿ ಹೋಗೋಣವೆಂದು ಹೇಳಿದರು.

ವಿಶ್ವಧರ್ಮ ಸಮ್ಮೇಳನ: 1893 ಅಕ್ಟೋಬರ್ 11 ರಂದು ಚಿಕಾಗೋದಲ್ಲಿ ವಿಶ್ವಧರ್ಮ ಸಮ್ಮೇಳನ ಏರ್ಪಾಡಾಗಿತ್ತು. ಮೈಸೂರು ಮಹಾರಾಜರ ಉದಾರ ಸಹಾಯದಿಂದ ಅಮೆರಿಕಗೆ ಸ್ವಾಮೀಜಿ ಪ್ರಯಾಣ ಬೆಳೆಸಿದರು. ಅಲ್ಲಿ ಯಾರ ಪರಿಚಯವೂ ಸ್ವಾಮಿ ವಿವೇಕಾನಂದರಿಗೆ ಇರಲಿಲ್ಲ. ಆದರೆ, ದೈವಾನುಕೂಲದಿಂದ ವಿಶ್ವಧರ್ಮ ಸಮ್ಮೇಳನದಲ್ಲಿ ಉಪನ್ಯಾಸ ಮಾಡಲು ಹೇಗೊ ಅವಕಾಶವಾಯಿತು. ಸ್ವಾಮಿ ವಿವೇಕಾನಂದರ ವಾಣಿ ಅಮೆರಿಕದ ಜನರಲ್ಲಿ ಮಿಂಚನ್ನುಂಟು ಮಾಡಿತು. ಅನೇಕ ಜನರ ಬದುಕಿಗೆ ಪ್ರೇರಣೆ ಒದಗಿಸಿತು. ಅವರ ಉಪನ್ಯಾಸಗಳು ಅಮೆರಿಕ ಜನರ ಅಂತಶ್ಶಕ್ತಿಯನ್ನು ಸಂವರ್ಧನಗೊಳಿಸಿತು. ವಿಶ್ವಧರ್ಮ ಸಮ್ಮೇಳನ ಆದನಂತರ ಎಲ್ಲ ಕಡೆಯಿಂದಲೂ ಉಪನ್ಯಾಸ ಮತ್ತು ಸಂವಾದಗಳಿಗೆ ಕರೆಬಂದುವು! ಸ್ವಾಮಿ ವಿವೇಕಾನಂದರು 1893 ರಿಂದ 1896ರವರೆಗೆ ಅಮೆರಿಕ-ಯುರೋಪ್​ಗಳಲ್ಲಿ ವಿವಿಧೆಡೆ ಉಪನ್ಯಾಸಗಳನ್ನು ನೀಡಿದರು. ಸ್ವಾಮಿ ವಿವೇಕಾನಂದರಿಂದ ಆ ಸಮಯದಲ್ಲಿ ಪ್ರಭಾವಿತರಾದ ಮಹನೀಯರು ಹಲವರಿದ್ದರು. 1893ರ ಜೂನ್-ಜುಲೈ ತಿಂಗಳಿನಲ್ಲಿ ‘ಎಂಪ್ರೆಸ್ ಆಫ್ ಇಂಡಿಯಾ’ ಹಡಗಿನಲ್ಲಿ ಜಪಾನಿನಿಂದ ಕೆನಡಾಕ್ಕೆ ಪ್ರಯಾಣಿಸುತ್ತಿರುವಾಗ ಜೆಮ್ಡ್​ಜಿ ಟಾಟಾ ಅವರ ಮನಸ್ಸಿನಲ್ಲಿ ಸ್ವಾಮೀಜಿಯವರು ಭಾರತದಲ್ಲಿ ಸಮುನ್ನತ ಸ್ತರದ ವಿಜ್ಞಾನಮಂದಿರದ ಸ್ಥಾಪನೆಯ ಅಗತ್ಯದ ಸಂಕಲ್ಪವನ್ನು ಬಿತ್ತಿದರು. ಮುಂದೆ 1909-11ರಲ್ಲಿ ಇದು ಕಾರ್ಯಾರಂಭವಾಯಿತು. ಅದರಂತೆಯೇ ಅಮೆರಿಕದ ಶ್ರೀಮಂತ ಜಾನ್ ರಾಕ್​ಫೆಲ್ಲರ್​ನಿಗೆ ಸೇವಾತತ್ತ್ವದ ಮಹತ್ವವನ್ನು ಮನಗಾಣಿಸಿ ಕೊಟ್ಟರು. ಅವರು, ‘ಸೇವೆ ನೀಡುವವರು ಸೇವೆ ಪಡೆಯುವವರಿಗೆ ಋಣಿಯಾಗಿರಬೇಕು. ಅವರುಗಳು ಇಲ್ಲದಿದ್ದಲ್ಲಿ ನಾವು ಸೇವೆ ಮಾಡುವುದಾದರೂ ಯಾರಿಗೆ?’ ಸೇವೆಯೂ ಒಂದು ವಿಧಾನವೆಂದು ಹೇಳಿ ಸೇವೆಯ ಸಾಮಾಜಿಕ ಮಹತ್ವವನ್ನೂ ಆಧ್ಯಾತ್ಮಿಕೋನ್ನತಿಯನ್ನೂ ಸಾರಿದರು. ಇದು ಅಂತಿಮವಾಗಿ ರಾಕ್​ಫೆಲ್ಲರ್ ಫೌಂಡೇಷನ್ ಸ್ಥಾಪನೆಗೆ ಕಾರಣವಾಯಿತು.

ಪಾಶ್ಚಾತ್ಯ ಸಮಾಜಕ್ಕೆ ನವಯುಗ ಮಹತ್ವವನ್ನು ಹೇಳಿ, ವೃಷ್ಟಿ-ಸಮಷ್ಟಿಗಳ ಸಮನ್ವಯತೆಯನ್ನು ತಿಳಿಸಿ 1897 ಜನವರಿ 15 ರಂದು ಶ್ರೀಲಂಕಾ (ಕೊಲಂಬೊ)ಗೆ ಆಗಮಿಸಿದರು. ಅಲ್ಲಿಯ ಜನ ಸ್ವಾಮಿ ವಿವೇಕಾನಂದರ ಭವ್ಯಗಾತ್ರವನ್ನೂ ಶಕ್ತಿಸ್ವರೂಪವಾದ ವಾಣಿಯನ್ನೂ ಕೇಳಿ ಧನ್ಯರಾದರು. ಆ ವಿಭೂತಿಪುರುಷ ಅದೇ ತಿಂಗಳ ಕೊನೆಯವಾರ ಮದರಾಸಿಗೆ ಆಗಮಿಸಿದರು. ಆಗ ಅವರನ್ನು ಸ್ವಾಗತಿಸಲು ಜನಸಾಗರವೇ ನೆರೆದಿತ್ತು. ಮುಂದೆ ಕೊಲ್ಕತ್ತದಲ್ಲಿ ಅಭಿನಂದನ ಸಮಾರಂಭಗಳು ನಡೆದುವು. ಅವರ ವಿದ್ಯುದಮೃತವಾಣಿಗೆ ಪುಳಕಿತರಾದರು. ಸೋದರಿ ನಿವೇದಿತಾ, ಹಿರಿಯ ಯತಿಗಳಾದ ಸ್ವಾಮಿ ಶಿವಾನಂದರು, ಸ್ವಾಮಿ ಬ್ರಹ್ಮಾನಂದರು, ಸ್ವಾಮಿ ಪ್ರೇಮಾನಂದರು ಇತರ ಎಲ್ಲ ಹಿರಿಯ ಸಂತರು ಸ್ವಾಮಿ ವಿವೇಕಾನಂದರ ಸೂಚನೆಯ ಗಣ್ಯತೆಗೆ ತಲೆಬಾಗಿದರು. 1897 ಮೇ 1ರಂದು ಕೊಲ್ಕತ್ತದಲ್ಲಿ ರಾಮಕೃಷ್ಣ ಮಠವು ವಿಧ್ಯುಕ್ತವಾಗಿ ಸ್ಥಾಪನೆ ಆಯಿತು. ರಾಮಕೃಷ್ಣರು ಸಮನ್ವಯಿಸಿದ ತತ್ತ್ವಗಳನ್ನು ಅನುಷ್ಠಾನಕ್ಕೆ ತರಲು ಎಲ್ಲರೂ ಕಟಿಬದ್ಧರಾದರು.

ಅನುಷ್ಠಾನ ವೇದಾಂತ: ಸ್ವಾಮಿ ವಿವೇಕಾನಂದರು ಪ್ರತಿಯೊಂದು ರಂಗದಲ್ಲೂ ಹೊಸಹೊಸ ಕಾಣ್ಕೆಗಳನ್ನು ನೀಡಿದರು. ಅಧ್ಯಾತ್ಮ-ವಿಜ್ಞಾನ, ದರ್ಶನ-ವಿಜ್ಞಾನ, ಸಮಾಜವಾದ-ಅಧ್ಯಾತ್ಮವಾದ ಇವುಗಳ ನಡುವಣ ಭಿನ್ನತೆಗಳನ್ನು ತೊಲಗಿಸಿದರು. ಇವುಗಳ ನಡುವೆ ಇರುವ ಅಧ್ಯಾತ್ಮದ ಚಿಚ್ಛಕ್ತಿಯನ್ನು ತೆರೆದು ತೋರಿಸಿದರು. ಅವರು ಪಾಶ್ಚಾತ್ಯ ಸಮಾಜವಾದವನ್ನು ತೊಲಗಿಸಿ, ಅದರ ನೆಲೆಯಲ್ಲಿ ಆಧ್ಯಾತ್ಮಿಕ ಸಮಾಜವಾದವನ್ನು ಗಟ್ಟಿಯಾಗಿ ನಿಲ್ಲಿಸಿದರು. ಪಾಶ್ಚಾತ್ಯ ಸಮಾಜವಾದವು ಸಂಘರ್ಷದ ಮೂಲಕ ಆರ್ಥಿಕ ಪ್ರಗತಿಯನ್ನು ಬಯಸುತ್ತದೆ. ಅದರ ಬದಲು, ಪ್ರೀತಿ-ಅನುಕಂಪ-ಸಹಾನುಭೂತಿಗಳ ಪ್ರಸರಣದ ಮೂಲಕ ಆಧ್ಯಾತ್ಮಿಕ ಸಮಾಜವಾದ ನೆಲೆಯೂರಬೇಕೆಂದು ಬಯಸಿದರು. ಅವರು ಸರ್ವಜನೋನ್ನತಿ, ಸಾಮಾಜಿಕ ಸಾಮರಸ್ಯ, ಶಿಕ್ಷಣಪ್ರಸಾರ- ಈ ತ್ರಿತ್ವಮುಖದ ನೆಲೆಯಲ್ಲಿ ರಾಷ್ಟ್ರಾಭ್ಯುದಯ ದರ್ಶನವನ್ನು ಪ್ರತೀತಗೊಳಿಸಿದರು. ಸ್ವಾಮಿ ವಿವೇಕಾನಂದರು 1897 ಸೆಪ್ಟೆಂಬರಿನಿಂದ 1898 ಆಗಸ್ಟ್ ತಿಂಗಳ ವರೆಗೆ ಕಾಶ್ಮೀರ, ಪಂಜಾಬ್ ಮುಂತಾದ ಕಡೆಗಳಲ್ಲಿ ಪ್ರವಾಸ ಮಾಡಿದರು. 1898 ಡಿಸೆಂಬರ್ 9ರಂದು ಶಾರದಾಮಾತೆಯವರ ಸಮಕ್ಷಮದಲ್ಲಿ ಬೇಲೂರಿನಲ್ಲಿ ರಾಮಕೃಷ್ಣಮಠವನ್ನು ಸ್ಥಾಪನೆ ಮಾಡಿಸಿದರು. ಇದು ಮುಂದೆ ಅಧ್ಯಾತ್ಮದ ಜಾಗ್ರತಸ್ಥಳವಾಗಿ ಬೇಲೂರು ಶ್ರೀ ರಾಮಕೃಷ್ಣ ಆಶ್ರಮವಾಗಿ ಬೆಳೆಯಿತು.

ಅಂತಿಮ ದಿನಗಳು: ಸ್ವಾಮಿ ವಿವೇಕಾನಂದರು 1899ರ ಜೂನ್​ನಿಂದ 1900 ಡಿಸೆಂಬರ್ ವರೆಗೆ ಅಮೆರಿಕೆಗೆ ಎರಡನೆಯ ಸಲ ಪ್ರವಾಸ ಕೈಗೊಂಡರು. ಅವರು ಅನುಷ್ಠಾನ ವೇದಾಂತದ ಮಹತ್ವವನ್ನು ಅಲ್ಲಿ ತಿಳಿಸಿದರು. ಭಾರತೀಯ ಸಂಸ್ಕೃತಿಯ ಪರಮೌನ್ಯತ್ಯವನ್ನು ದೃಢವಾಗಿ ಸಾರಿದರು! ಅವರು ಹೋದಕಡೆಯಲ್ಲೆಲ್ಲ ಅಧ್ಯಾತ್ಮ-ವಿಜ್ಞಾನಗಳ ಸಮನ್ವಯತೆಯನ್ನು ಹೇಳಿದರು. ಅವೆರಡರ ನಡುವಣ ರಹಸ್ಯ ತೋರಿಸಿಕೊಟ್ಟರು. ಅವರು ತಮ್ಮ ಕೊನೆಯ ದಿನಗಳನ್ನು ಬೇಲೂರು ಮಠದಲ್ಲಿಯೇ ಕಳೆದರು. ಅವರು ಮಹಾಸಮಾಧಿ ಹೊಂದುವ ಪೂರ್ವದಲ್ಲಿ ದೇಹಾಂತ್ಯದ ಬಗೆಗೆ ಸುಳಿವನ್ನು ನೀಡಿದ್ದರು. ಮಹಾಸಮಾಧಿಯ ಹಿಂದಿನ ದಿನ ರಾಮಕೃಷ್ಣರ ಸಮನ್ವಯ ಸಿದ್ಧಾಂತವನ್ನೂ ತಾನು ರೂಪಿಸಿದ ಅನುಷ್ಠಾನ ವೇದಾಂತವನ್ನೂ ಪ್ರಚುರಪಡಿಸುವ ವಿವಿಧ ಬಗೆಗಳನ್ನು ಶಿಷ್ಯರಿಗೆ ತಿಳಿಹೇಳಿದರು! 1902 ಜುಲೈ 4 ರಂದು ರಾತ್ರಿ 9.10 ನಿಮಿಷಕ್ಕೆ ಅವರು ಮಹಾಸಮಾಧಿ ಹೊಂದಿದರು. ಆ ಸಂದರ್ಭದಲ್ಲಿ ಅವರ ಮುಖಮಂಡಲ ಪ್ರಜ್ವಲವಾಗಿತ್ತು. ಸ್ವಾಮೀಜಿ ಬಳಿಯಿದ್ದ ಬ್ರಹ್ಮಚಾರಿ ವಿಷಯ ತಿಳಿಸಿದೊಡನೆ ಸ್ವಾಮಿ ಪ್ರೇಮಾನಂದ, ನಿತ್ಯಾನಂದ, ಅದ್ವೈತಾನಂದ ಮುಂತಾದವರು ಓಡಿ ಬಂದರು. ಸ್ವಾಮಿ ಬೋಧಾನಂದರು ನಾಡಿ ಹಿಡಿಯಲು ಯತ್ನಿಸಿದರು. ಆದರೆ, ಸ್ವಾಮೀಜಿಯವರು ಭ್ರೂಮಧ್ಯದಲ್ಲಿ ಪ್ರಾಣೋತ್ಕ್ರಮಣ ಮಾಡಿದ್ದು ನಿಶ್ಚಯವಾಗಿತ್ತು. ಮರುದಿನ ಮಧ್ಯಾಹ್ನ 2 ಗಂಟೆಗೆ ರಾಮಕೃಷ್ಣ ಮಠದ ವಿಧಿಯಂತೆ ಅಗ್ನಿಸಂಸ್ಕಾರ ನೆರವೇರಿತು.

ರಾಜಾರಾಮ ಮೋಹನರಾಯ್, ರಾಮಕೃಷ್ಣ ಪರಮಹಂಸ, ಸ್ವಾಮಿ ದಯಾನಂದ ಸರಸ್ವತಿ ಭಾರತದ ನವೋತ್ಥಾನಕ್ಕೆ ಅಂಕುರಾರ್ಪಣೆ ಮಾಡಿದರಷ್ಟೆ. ಇವರ ನಂತರ ಸಮಗ್ರಭಾರತದ ನವೋತ್ಥಾನಪರ್ವಕ್ಕೆ ನಾಂದಿ ಹಾಡಿದ ಸ್ವಾಮಿ ವಿವೇಕಾನಂದರು ಆಚಾರ್ಯ ಶಂಕರ ಭಗವತ್ಪಾದರ ಬಳಿಕ ಹಿಂದೂಧರ್ಮದ ಶಕ್ತಿಮತ್ವದ ಉದ್ಘೋಷಕರಾದದ್ದು ಪೂರ್ಣಸತ್ಯವೇ ಸರಿ!

(ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು)

Leave a Reply

Your email address will not be published. Required fields are marked *

Back To Top