Monday, 17th December 2018  

Vijayavani

ಸುಳ್ವಾಡಿ ವಿಷಪ್ರಸಾದ ದುರಂತ ಪ್ರಕರಣ-ಆರೋಗ್ಯ ಸಚಿವರ ಉಡಾಫೆ ಹೇಳಿಕೆ ಪ್ರಸ್ತಾಪ-ಪರಿಷತ್​ನಲ್ಲಿ ಬಿಜೆಪಿಯಿಂದ ನಿಲುವಳಿ ಸೂಚನೆ        ಶುರುವಾಯ್ತು ಪೆಥಾಯ್ ಪ್ರತಾಪ-ಆಂಧ್ರ, ತಮಿಳುನಾಡು ಕರಾವಳಿಯಲ್ಲಿ ಅಲೆಗಳ ಅಬ್ಬರ-ಚೆನ್ನೈ ಸೇರಿ ಹಲವೆಡೆ ಭಾರಿ ಮಳೆ ಸಾಧ್ಯತೆ        ಒಂದೇ ರಸ್ತೆ, ಎರಡು ಇಲಾಖೆ ಬಿಲ್-ಭೂಸೇನೆ, ಪಿಡಬ್ಲ್ಯೂಡಿ ಇಲಾಖೆ ಬಿಲ್​​ಗಾಗಿ ಪೈಪೋಟಿ-ಮುಗಿದ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದ ಕೈ ಶಾಸಕ        ಇನ್ನೂ ನಿಂತಿಲ್ಲ ‘ವಿಷ’ಪ್ರಸಾದದ ಎಫೆಕ್ಟ್-ಚಿಕಿತ್ಸೆ ಪಡೀತಿರೋ 30 ಜನ್ರ ಸ್ಥಿತಿ ಗಂಭೀರ-ಆರೋಪಿತರ ಪರ ವಕಾಲತ್ತು ವಹಿಸದಿರಲು ವಕೀಲರ ನಿರ್ಧಾರ        ಇಂದು 3 ರಾಜ್ಯ ಸಿಎಂಗಳ ಪದಗ್ರಹಣ-ರಾಜ್ಯದಿಂದ ಸಿಎಂ ಎಚ್​ಡಿಕೆ, ಸಿದ್ದುಗೆ ವಿಶೇಷ ಆಹ್ವಾನ-ಕೈ ಸಮಾರಂಭದಲ್ಲಿ ತೃತೀಯ ಶಕ್ತಿ ಪ್ರದರ್ಶನ        37ನೇ ವಸಂತಕ್ಕೆ ‘ಉಗ್ರಂ’ ಸ್ಟಾರ್ ಮುರಳಿ-37ನೇ ಬರ್ತಡೇ.. 37 ಕೆಜಿ ಕೇಕ್ ಕಟ್-ಫ್ಯಾನ್ಸ್​​ಗೆ ಭರಾಟೆ ಟೀಸರ್, ಮದಗಜ ಫಸ್ಟ್ ಪೋಸ್ಟರ್ ಗಿಫ್ಟ್       
Breaking News

ಅದ್ವೈತವಿದ್ಯಾನಿಧಿ ಶ್ರೀಸರ್ವಜ್ಞೇಂದ್ರ ಸರಸ್ವತೀ ಸ್ವಾಮಿಗಳು

Sunday, 06.05.2018, 3:05 AM       No Comments

ಆಚಾರ್ಯ ಶಂಕರ ಭಗವತ್ಪಾದರ ತತ್ತ್ವಗಳನ್ನು ಪ್ರಸಾರ ಮಾಡುತ್ತಿರುವ ಕರ್ನಾಟಕದ ಅದ್ವೈತ ಪರಂಪರೆಯ ಮಠಗಳಲ್ಲಿ ಸ್ವರ್ಣವಲ್ಲಿ ಸಂಸ್ಥಾನವೂ ಒಂದು. ಇದು ಉತ್ತರಕನ್ನಡ ಜಿಲ್ಲೆಯ ಸೋಂದಾದಲ್ಲಿದೆ. ಅತಿಪುರಾತನ ಸಂಸ್ಥಾನವೆಂಬ ಪ್ರಸಿದ್ಧಿಯನ್ನು ಇದು ಪಡೆದಿದೆ. ಕ್ರಿ.ಶ. 815-820ರ ಕಾಲಾವಧಿಯಲ್ಲಿ ಕಾಶಿ ದಶಾಶ್ವಮೇಧ ಘಾಟ್​ನಲ್ಲಿ ಶ್ರೀಮಠದ ಸ್ಥಾಪನೆ ಆಯಿತು. ಇದರ ಮೊದಲ ಸಂಸ್ಥಾನಾಧಿಪತಿಗಳು ಶ್ರೀವಿಶ್ವವಂದ್ಯ ಸರಸ್ವತಿಗಳು. ಇದು ಮುಂದೆ ಉಜ್ಜಯಿನಿ ಮಠಕ್ಕೆ ಸ್ಥಳಾಂತರಗೊಂಡು ನಂತರ ಗೋಕರ್ಣ, ಕಡತೋಕಾ, ಸಹಸ್ರಲಿಂಗಕ್ಕೆ ಬಂದು 1556ರಲ್ಲಿ ಸೋಂದಾ ಸ್ಥಳದಲ್ಲಿ ನೆಲೆನಿಂತಿತೆಂದು ಚಾರಿತ್ರಿಕ ವಿವರಗಳು ಹೇಳುತ್ತವೆ. ಶ್ರೀ ಚಂದ್ರಶೇಖರ ಸರಸ್ವತಿಗಳಿಂದ ಸ್ವರ್ಣವಲ್ಲೀ ಮಠ ಸ್ಥಾಪನೆ ಆಯಿತು. ಈ ಸಂಸ್ಥಾನದ 44ನೆಯವರು ಶ್ರೀ ಸರ್ವಜ್ಞೇಂದ್ರ ಸರಸ್ವತಿಗಳು. ಸಂಸ್ಥಾನವು ಇತಿಹಾಸದುದ್ದಕ್ಕೂ ತ್ಯಾಗಿಗಳಿಗೆ ನಿವೃತ್ತಿಮಾರ್ಗ, ಸಂಸಾರಿಗಳಿಗೆ ಪ್ರವೃತ್ತಿಮಾರ್ಗವನ್ನು ಬೋಧಿಸುತ್ತ ಬಂದಿದೆ.

ಜನನ-ಸಂನ್ಯಾಸ: ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳ ಕರಕಮಲ ಸಂಜಾತರೇ ಶ್ರೀಸರ್ವಜ್ಞೇಂದ್ರ ಸರಸ್ವತಿಗಳು. ಇವರು ಭರತನಹಳ್ಳಿ ಸೀಮೆಯ ಕಂಪ್ಲಿ ಗ್ರಾಮದ ಗಣಪತಿ ಭಟ್ಟ ಮತ್ತು ಗೌರಿ ದಂಪತಿಗೆ 1906ರ ಏಪ್ರಿಲ್ 27ರಂದು ಜನಿಸಿದರು. ಪೂರ್ವಾಶ್ರಮದ ಹೆಸರು ವೆಂಕಟರಮಣ. ಕಂಪ್ಲಿಯ ಶ್ರೀಮಹಾಗಣಪತಿ ದೇವಾಲಯದ ಅರ್ಚಕರಾದ ಇವರ ತಂದೆ ಸಾತ್ವಿಕರು. ತಾಯಿ ಹೆಸರಿಗೆ ತಕ್ಕಂತೆ ಮಹಾಗೌರಿ. ವೆಂಕಟರಮಣನಿಗೆ 7ನೆಯ ವರ್ಷಕ್ಕೆ ಉಪನಯನವಾಯಿತು. ಅಣ್ಣ ಪರಮೇಶ್ವರ, ತಮ್ಮ ಸುಬ್ರಾಯ. ಕಡುಬಡತನವಿದ್ದರೂ ದೈವದ ಬೆಳಕಿನಲ್ಲಿ ಕುಟುಂಬ ಸಾಗುತ್ತಿತ್ತು. ಚಿಕ್ಕಂದೇ ಮಂತ್ರಪಾಠ, ಕನ್ನಡದ ಶಿಕ್ಷಣ ವೆಂಕಟರಮಣನಿಗೆ ದೊರಕಿತು.

ವೆಂಕಟರಮಣ ಮುಂದೆ ಮಹಾವಿದ್ವಾಂಸ, ಇಲ್ಲವೇ ಪರಮಯೋಗಿ ಆಗುತ್ತಾನೆಂದು ಜ್ಯೋತಿಷಿಗಳು ಹೇಳಿದ್ದು ಗಣಪತಿ ಭಟ್ಟರಿಗೆ ನೆನಪಿತ್ತು. ಗಣಪತಿ ಭಟ್ಟರ ಅಕಾಲಿಕ ಮರಣದಿಂದಾಗಿ ಅವರ ತಮ್ಮ ರಾಮಕೃಷ್ಣ ಭಟ್ಟರ ಆಶ್ರಯಕ್ಕೆ ಗಣಪತಿ ಭಟ್ಟರ ಸಂಸಾರ ಬಂದಿತು. ಮಂಚಿಕೇರಿಯ ಶಾಲೆಗೆ ವೆಂಕಟರಮಣನನ್ನು ಸೇರಿಸಲಾಯಿತು. ಚಿಕ್ಕಂದೇ ಅವರಲ್ಲಿ ತಿಳಿವಳಿಕೆ, ಸಮಯಸ್ಪೂರ್ತಿ, ಮಂತ್ರೋಚ್ಚಾರಣೆಯಲ್ಲಿ ಸ್ಪಷ್ಟತೆ ಕಾಣುತ್ತಿತ್ತು. ಶಾಲಾಭ್ಯಾಸದ ಜತೆಗೆ ಗೋಸೇವೆ, ಬ್ರಾಹ್ಮಣರ ಆತಿಥ್ಯ, ದೇವತಾರ್ಚನೆಯ ಕಡೆಗೆ ಹೆಚ್ಚಿನ ಗಮನ ಇರುತ್ತಿತ್ತು. ಈ ಸಮಯದಲ್ಲೆ ಸ್ವರ್ಣವಲ್ಲಿ ಸಂಸ್ಥಾನದ ಮದ್ಗಂಗಾಧರೇಂದ್ರ ಸರಸ್ವತೀ ಯತಿವರ್ಯರು ಉತ್ತರಾಧಿಕಾರಿಯನ್ನು ಅನ್ವೇಷಿಸುತ್ತಿದ್ದರು. ಅವರು ಸೀಮೆಯ ಆಪ್ತರಿಗೂ ಹೇಳಿದ್ದರು. ಅವರ ಅನ್ವೇಷಣೆಯಲ್ಲಿ ಅರಳಿಮಕ್ಕಿಯ ವೆಂಕಟರಮಣನ ಹೆಸರು ಮುನ್ನೆಲೆಗೆ ಬಂದಿತು. ಸೀಮಾಧ್ಯಕ್ಷರು ವೆಂಕಟರಮಣ ಭಟ್ಟರನ್ನು ಕರೆಸಿ ಶ್ರೀಸಂಸ್ಥಾನದ ಅಪೇಕ್ಷೆಯನ್ನು ತಿಳಿಸಿದರು. ಸಂಸ್ಥಾನದ ಪೀಠಾಧಿಪತಿಯನ್ನಾಗಿಸಲು ಆಯ್ಕೆ ಆದಾಗ ತಾಯಿಗೊ ತಳಮಳ! ವೆಂಕಟರಮಣನನ್ನು ಕರೆದುಕೊಂಡು ಹೋಗಲು ಮಠದಿಂದ ಮೇನೆ ಬಂದಿತು. ವಟು, ಸಿದ್ಧಿವಿನಾಯಕನ ಬಳಿಹೋಗಿ ‘ಎಲ್ಲರಿಗೂ ಒಳ್ಳೆಯದನ್ನು ಮಾಡು’ ಎಂದು ಪ್ರಾರ್ಥಿಸಿ ಮೇನೆ ಹತ್ತಿದಾಗ ಎಲ್ಲರಿಗೂ ಅಚ್ಚರಿ. ಹತ್ತು ವರ್ಷದ ಬಾಲಕ ಶ್ರೀಮಠಕ್ಕೆ ಬಂದು ಹಿರಿಯ ಗುರುಗಳ ಬಳಿ ನಿಂತ, ಸ್ವಾಮಿಗಳು ವಟುವನ್ನು ನೋಡಿದರು. ಸಂನ್ಯಾಸಿಗೆ ಹೇಳಿ ಮಾಡಿಸಿದ ಅಂಗಲಕ್ಷಣ. 1917ರ ಜನವರಿ 31ರಂದು ಕಾಷಾಯವಸ್ತ್ರದಂಡಾದಿಧಾರಣೆಯೊಂದಿಗೆ ಸಂನ್ಯಾಸ ಸ್ವೀಕಾರ ಆಯಿತು. ಶ್ರೀಸರ್ವಜ್ಞೇಂದ್ರ ಸರಸ್ವತೀ ಸ್ವಾಮಿಗಳೆಂಬ ಅಭಿದಾನವಾಯಿತು. ಗಂಗಾಧರೇಂದ್ರ ಸರಸ್ವತಿಯವರು ಕಿರಿಯ ಯತಿಗೆ ತಂದೆ-ತಾಯಿ ಆದರು. ನಿರಂತರ ತತ್ತೊ್ವೕಪದೇಶ ಮಾಡಿದರು, ದೇವತಾರ್ಚನೆಯ ವಿಧಿ-ವಿಧಾನಗಳನ್ನು ಹೇಳಿಕೊಟ್ಟರು. ಆಶ್ರಮಧರ್ಮ ಬೋಧಿಸುವಾಗ ‘ನೋಡಿ ಚಿಕ್ಕಗುರುಗಳೇ ಈ ಮಠ, ಆಸ್ತಿ, ಸಂಪತ್ತು, ದೇವರು, ಎಲ್ಲವೂ ಭಕ್ತರದೇ. ದಂಡ-ಕಮಂಡಲಗಳು ಮಾತ್ರ ನಮ್ಮ ಆಸ್ತಿ. ಕೌಪೀನ ಕಾಷಾಯ ವಸ್ತ್ರಗಳೇ ನಮ್ಮ ಸಂಪತ್ತು’ ಎನ್ನುತ್ತಿದ್ದರು.

ಸ್ವಾಧ್ಯಾಯ-ಪರ್ಯಟನ: ಗಂಗಾಧರೇಂದ್ರರು 1918ರ ಜುಲೈ 28ರಂದು ಮುಕ್ತರಾದರು. ಆಗ ಸರ್ವಜ್ಞೇಂದ್ರರಿಗೆ ಕೇವಲ 12ರ ಪ್ರಾಯ. ಹಿರಿಯ ಗುರುಗಳನ್ನು ಕಳೆದುಕೊಂಡ ವ್ಯಥೆ. ದೈವಚಿಂತನೆಯಲ್ಲೇ ಕಾಲಕಳೆದರು. ತಾಯಿ-ಅಣ್ಣ ಧೈರ್ಯ ತುಂಬಿದರು. ರಕ್ಷಕ ಸಮಿತಿ ಮಠದ ನಿರ್ವಹಣೆಗೆ ನಿಂತಿತು. ಆಲೇಸರ ಉಮಾಮಹೇಶ್ವರ ಹೆಗಡೆ ಶ್ರೀಮಠದ ಜವಾಬ್ದಾರಿ ಹೊತ್ತರು. ಗೋಕರ್ಣದಿಂದ ಹೊಸ್ಮನೆ ಗಣೇಶ ಶಾಸ್ತ್ರಿಗಳನ್ನು ಕರೆತಂದು ನಾಟಕಾಂತ ಸಾಹಿತ್ಯದ ಅಭ್ಯಾಸದ ಜತೆಗೆ ಪಾರಮಾರ್ಥಿಕ ಸೂಕ್ಷ್ಮಗಳನ್ನು ತಿಳಿಸಿಕೊಟ್ಟರು. ಸಾಹಿತ್ಯಾಧ್ಯಯನದ ನಂತರ ವೇದಾಂತಾಧ್ಯಯನ ಮಾಡಬೇಕೆಂಬ ಆಸೆ ಗುರುಗಳನ್ನು ಕಾಡಿತು. ಹಾನಗಲ್ ಮಹಾದೇವ ಶಾಸ್ತ್ರಿಗಳನ್ನು ಕರೆತಂದರು. ಮೈಸೂರು ಅರಸರಿಂದ ‘ನ್ಯಾಯ ಪಂಚಾನನ’ ಪ್ರಶಸ್ತಿ ಪಡೆದಿದ್ದ ಇವರು ವಿರೂಪಾಕ್ಷಶಾಸ್ತ್ರಿಗಳ ಸತೀರ್ಥ್ಯರು. ಶ್ರೀಸರ್ವಜ್ಞೇಂದ್ರರಲ್ಲಿ ಅಡಗಿದ್ದ ಕಾವ್ಯರಚನಾ ಕೌಶಲ ಬೆಳಕಿಗೆ ಬಂತು. ‘ಪ್ರಹ್ಲಾದ ಚರಿತಂ’ ನಾಟಕವನ್ನು ಆ ಸಮಯದಲ್ಲೆ ಬರೆದರು! ಈ ನಡುವೆ ಮಹಾದೇವ ಶಾಸ್ತ್ರಿಗಳಿಗೆ ಅನಾರೋಗ್ಯವಾಗಿ ಹಾನಗಲ್​ಗೆ ಹಿಂತಿರುಗಿದರು. ವೇದಾಂತ-ನ್ಯಾಯಗಳ ಸಮರ್ಥ ಅಧ್ಯಯನವಾಗಬೇಕೆಂಬ ಹಂಬಲ. ಮಠದ ಪರಿಸ್ಥಿತಿ ಇದಕ್ಕೆ ಅನುಕೂಲವಾಗಿರಲಿಲ್ಲ. ಆದರೆ, ದೈವದ ಆಣತಿಯಂತೆ ಮೈಸೂರಿಗೆ ಬಂದು ಶ್ರೀಮನ್ಮಹಾರಾಜ ಸಂಸ್ಕೃತ ಮಹಾಪಾಠಶಾಲೆಯಿರುವ ಆಗಮತೊಟ್ಟಿಯಲ್ಲಿ ವಾಸ್ತವ್ಯ ಹೂಡಿ ವಿದ್ಯಾಭ್ಯಾಸಕ್ಕೆ ನಿಂತರು. ಇಲ್ಲಿ ಶ್ರೀವಿದ್ಯಾಭಿನವ ವಾಲುಕೇಶ್ವರ ಭಾರತೀ ಸ್ವಾಮಿಗಳಿಂದ ವೇದಾಂತ ಪಾಠ ಆಯಿತು. ಈ ನಡುವೆ ಮೈಸೂರು ಪ್ರಭುಗಳಿಂದ ಹಲವು ಅನುಕೂಲಗಳು ಒದಗಿಬಂದವು. ಸರ್ವಜ್ಞೇಂದ್ರರ ತಪಶ್ಶಕ್ತಿ ವೃದ್ಧಿಯಾಗುತ್ತ ಹೋಯಿತು. ಇವರನ್ನು ಕಾಣಲು ಸಾಲಿಗ್ರಾಮ ಶ್ರೀಕಂಠಶಾಸ್ತ್ರೀ, ಶೃಂಗೇರಿ ಕೃಷ್ಣಶಾಸ್ತ್ರೀ, ಕಾನಕಾನಹಳ್ಳಿ ನಾರಾಯಣ ಶಾಸ್ತ್ರೀ, ಚಿತ್ರದುರ್ಗದ ವಿರೂಪಾಕ್ಷಶಾಸ್ತ್ರೀ ಬರುತ್ತಿದ್ದುದುಂಟು. ಶ್ರೀಸಂಸ್ಥಾನಕ್ಕೆ ಸಿಕ್ಕ ರಾಜಾಶ್ರಯ, ಮಹಾವಿದ್ವಾಂಸರ ಸಹವಾಸ, ಗುರುಗಳ ಉಪದೇಶ ಸ್ವಾಮಿಗಳನ್ನು ಪ್ರಕಾಶಮಾನರನ್ನಾಗಿ ಮಾಡಿತು. ಶ್ರೀಕೃಷ್ಣರಾಜ ಪ್ರಭುಗಳಿಂದ ಸನ್ಮಾನಿತರಾಗಿ, ಶ್ರೀಚಕ್ರೋಪಾಸನೆ ಶೃಂಗೇರಿಕೂಡ್ಲಿ ಜಗದ್ಗುರುಗಳ ಸಮಕ್ಷಮದಲ್ಲಿ ಪರಿಗ್ರಹಿಸಲ್ಪಟ್ಟಿತು. ಮೈಸೂರಿನ ವಿದ್ಯಾಭ್ಯಾಸ ಮುಗಿಸಿ ಪ್ರಭುಗಳಿಂದ ಸನ್ಮಾನಿತರಾಗಿ ಸ್ವರ್ಣವಲ್ಲಿಗೆ ಹಿಂತಿರುಗಿದರು.

16 ಸೀಮೆಯ ಸಂಸ್ಥಾನವಾದ ಮಠ ಆರ್ಥಿಕವಾಗಿ ಸಬಲವಾಗಿರಲಿಲ್ಲ. 1928 ರಿಂದ 1932 ರ ವರೆಗೆ ಶಿರಸಿಯ ಜನಜೀವನ ದುರ್ಭರವಾಗಿತ್ತು. ಸರಕಾರದ ದಬ್ಬಾಳಿಕೆ, ಬ್ರಿಟಿಷರ ಆಧಿಪತ್ಯ ಇವುಗಳಿಂದ ಜನ ಜರ್ಜರಿತಗೊಂಡಿದ್ದರು. ಈ ನಡುವೆ ಅಡಿಕೆ ಬೆಳೆಗಾರರ ಸಂಘ ಶಿರಸಿಯಲ್ಲಿ ಸ್ಥಾಪಿತಗೊಂಡು ಸಬಲವಾಯಿತು. ಶ್ರೀಮಠದ ಆರ್ಥಿಕ ಸಬಲತೆಗೆ ಇದು ಕಾರಣವಾಯಿತು. ಭಕ್ತರೂ ಶಿಷ್ಯರೂ ಶ್ರೀಮಠವನ್ನು ಬೆಳೆಸತೊಡಗಿದರು. ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕಾರ್ಯಕ್ರಮಗಳು ನಡೆಯತೊಡಗಿದುವು.

ಶ್ರೀಸ್ವರ್ಣವಲ್ಲಿ ಸಮೀಪವೇ ಮಾಧ್ವರ ಪವಿತ್ರಯಾತ್ರಾ ಸ್ಥಳವಿತ್ತು. ಅದು ವಾದಿರಾಜರ ತಪೋಭೂಮಿ. ಆಗಾಗ್ಗೆ ಉಡುಪಿ ಶಿರೂರು ಮಠದ ಶ್ರೀಲಕ್ಷ್ಮೀಂದ್ರತೀರ್ಥರು ಬರುತ್ತಿದ್ದರು. ಅವರು ಸರ್ವಜ್ಞೇಂದ್ರರ ತಪಃಪ್ರಭಾವ ತಿಳಿದು ಪ್ರತ್ಯಕ್ಷ ಭೇಟಿಗೆ ಹೇಳಿಕಳಿಸಿದರು. ಅದು ಸ್ಮಾರ್ತ-ಮಾಧ್ವ ಸಂಘರ್ಷದ ಕಾಲ. ‘ನೀವು ಬರುವುದು ಬೇಡ’ ಎಂದು ಹೇಳಿಕಳಿಸಿದರು! ಇನ್ನೊಮ್ಮೆ ಶಿರೂರು ಶ್ರೀಗಳು ವಾದಿರಾಜರ ತಪೋಭೂಮಿಗೆ ಬಂದಾಗ ಬರುವೆನೆಂದು ಹೇಳಿಕಳಿಸಿದರು. ಆದರೆ, ಸರ್ವಜ್ಞೇಂದ್ರರು ಬರಲು ನಿರಾಕರಿಸಿದರು. ಅದಕ್ಕೆ ಶಿರೂರು ಶ್ರೀಗಳು ‘ಅಯ್ಯಾ ಗುರುಗಳಿಗೆ ಹೇಳು. ಮತ ಬೇರೆಯಾದರೂ ನೀತಿ ಒಂದೇ. ಸಂನ್ಯಾಸಧರ್ಮ ಎಲ್ಲ ಯತಿಗಳಿಗೂ ಸಮಾನ. ಭಕ್ತರು ಬರುವಂತೆ ಒಮ್ಮೆ ಲಕ್ಷ್ಮೀನರಸಿಂಹ ದರ್ಶನಕ್ಕೆ ಬರುತ್ತೇವೆ’ ಎಂದು ಹೇಳಿಕಳಿಸಿದರು. ಹೀಗೆ ಹೇಳಿದ ಮರುವರ್ಷ ಶಿರೂರು ಶ್ರೀಗಳು ನೇರವಾಗಿ ಸ್ವರ್ಣವಲ್ಲಿಗೆ ಬಂದು, 2-3 ದಿನ ಉಳಿದು ‘ದ್ವೈತ-ಅದ್ವೈತವಾದಗಳು ಬದಿಗಿರಲಿ; ಅದು ನಮ್ಮ ವಿಚಾರಧಾರೆ. ಭಗವಂತನನ್ನು ಸೇರಲು ಕಲ್ಪಿಸಿಕೊಂಡ ಕಲ್ಪಿತಮಾರ್ಗ. ಸಂನ್ಯಾಸಿಗಳಿಗೆ ವೈರವೆಲ್ಲಿದೆ? ಎಲ್ಲವೂ ತನ್ನನ್ನು ತಾನು ತಿಳಿದು ಭವಬಂಧ ಕಳೆಯಲು ಅಲ್ವೆ? ಯತಿಗಳು ದ್ವೇಷಾಸೂಯೆ ಬಿಟ್ಟವರು. ಬರುವ ಮಕರ ಸಂಕ್ರಮಣಕ್ಕೆ ನಮ್ಮ ಪರ್ಯಾಯ. ನೀವು ಉಡುಪಿಗೆ ಬರಬೇಕು’ ಎಂದು ಆಗ್ರಹಿಸಿದರು. ಮರುವರ್ಷ ಸರ್ವಜ್ಞೇಂದ್ರರು ಉಡುಪಿಗೆ ಹೋದಾಗ ಸಂಸ್ಥಾನದ ಸಮಸ್ತ ರಾಜಮರ್ಯಾದೆಯೊಂದಿಗೆ ಶ್ರೀಕೃಷ್ಣಮಠಕ್ಕೆ ಕರೆಸಿಕೊಂಡರು. ಇದೊಂದು ಐತಿಹಾಸಿಕ ಸಂದರ್ಭ. ಮಾಧ್ವಸಂಸ್ಥಾನದಲ್ಲಿ ಸ್ಮಾರ್ತಸಂಸ್ಥಾನದ ರಾಜಮರ್ಯಾದೆ ಆಯಿತು. ಅಷ್ಟಮಠದ ಯತಿಗಳಿಂದ ಯಥೋಚಿತ ಸನ್ಮಾನವಾಯಿತು. ಅಲ್ಲಿಂದ ಧರ್ಮಸ್ಥಳಕ್ಕೆ ಹೋಗಿ ಶ್ರೀಚಕ್ರಾರಾಧನೆಯಿಂದ ಜಗನ್ಮಾತೆಯನ್ನು, ರುದ್ರಾಭಿಷೇಕದಿಂದ ಮಂಜುನಾಥನನ್ನು ಅರ್ಚಿಸಿದರು. ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀಮಂಜಯ್ಯ ಹೆಗ್ಗಡೆಯವರಿಂದ ಆತಿಥ್ಯ ಸ್ವೀಕರಿಸಿ, ಉಡುಪಿಗೆ ಮರಳಿದರು. ಮರುದಿನ ಮಠಕ್ಕೆ ಹಿಂತಿರುಗುವ ತವಕ ವ್ಯಕ್ತಪಡಿಸಿದಾಗ ಲಕ್ಷ್ಮೀಂದ್ರತೀರ್ಥರು ‘ಉಡುಪಿ ಬೇಸರವಾಯಿತೇ? ಕೃಷ್ಣಸಾನ್ನಿಧ್ಯ ನಿಮಗೆ ಬೇಡವೇ?’ ಎಂದು ತಡೆಯುತ್ತಿದ್ದರು. ಶ್ರೀಸಂಸ್ಥಾನದವರ ಪೂಜಾನುಷ್ಠಾನದಲ್ಲಿರುವ ಸಮಯಪಾಲನೆ, ಯತಿಗಳಲ್ಲಿ ಇರಬೇಕಾದ ಆಶ್ರಮ ಶ್ರದ್ಧೆ, ಪ್ರಗಲ್ಭ ಪಾಂಡಿತ್ಯ, ಕಾವ್ಯಪ್ರತಿಭೆಗೆ ಶಿರೂರು ಯತಿಗಳು ಮಾರುಹೋಗಿದ್ದರು. ನಂತರವೂ ಗುರುಗಳು ಹಲವು ಬಾರಿ ಉಡುಪಿಗೆ ಹೋಗಿಬಂದದ್ದುಂಟು.

ಅಭಿವೃದ್ಧಿಪಥ: ವೇದ-ಜ್ಯೋತಿಷ-ಆಯುರ್ವೆದದಂಥ ವಿದ್ಯೆಗಳು ಖಿಲವಾಗುತ್ತಿರುವುದು ಕಂಡ ಗುರುಗಳಲ್ಲಿ ಅವು ಉಳಿಯಬೇಕೆನ್ನುವ ಮನೀಷೆ ಉಂಟಾಗಿ ಆಡಳಿತ ಮೊಕ್ತೇಸರರನ್ನೂ ಸಮಿತಿಯ ಸದಸ್ಯರನ್ನೂ ಕರೆಸಿ ವಿಚಾರಿಸಿದರು. 1956ರ ಮಾರ್ಚ್ 15ರಂದು ಶ್ರೀರಾಜರಾಜೇಶ್ವರೀ ಸಂಸ್ಕೃತ ಪಾಠಶಾಲೆಯನ್ನು ಶ್ರೀಮಠದಲ್ಲಿ ಪ್ರಾರಂಭಿಸಿದರು. ಇಲ್ಲಿ ಗುರುಕುಲ ಪದ್ಧತಿಯಂತೆ ಪ್ರಾಚೀನ ಆಕಾಂಕ್ಷಾ ಪ್ರಣಾಳಿಯ ಪಾಠ ಶುರುವಾಯಿತು. ಉಚಿತ ಊಟ-ವಸತಿ ಏರ್ಪಾಟಾದವು. ಸ್ವಾಮಿಗಳು ಕರ್ನಾಟಕದ ಹಲವೆಡೆ ಸಂಚರಿಸುತ್ತ ಧಮೋಪದೇಶ, ಶಾಸ್ತ್ರೋಪದೇಶ ಮಾಡಿದರು. 1962ರಲ್ಲಿ ಗೋಶಾಲೆ ಪ್ರಾರಂಭವಾಯಿತು. ‘ಬ್ರಾಹ್ಮಣರ ಸಂಪತ್ತು ಗೋವುಗಳೇ. ಅವುಗಳ ಯೋಗಕ್ಷೇಮ ಕೃಷಿಕನದು. ಅವನ್ನು ಉದಾಸೀನ ಮಾಡಿದರೆ ಅನ್ನಕ್ಕೆ ದುರ್ಭಿಕ್ಷವಾಗುತ್ತದೆ’ ಎಂದು ಹೇಳಿ ದೀಪಾವಳಿಯಂದು ಗೋಪೂಜೆ ಮಾಡಿ ಪಶುಪಾಲಕನನ್ನು ಸನ್ಮಾನಿಸುತ್ತಿದ್ದರು. ಮಠ ಜೀಣೋದ್ಧಾರಗೊಂಡು ಧಾರ್ವಿುಕ ಮತ್ತು ಪ್ರವಾಸಿ ತಾಣವೂ ಆಯಿತು. ಈ ನಡುವೆ ಸ್ವಾಮಿಗಳಿಗೆ ಗಂಗಾಸ್ನಾನದ ಇಚ್ಛೆ ಪ್ರಬಲವಾಗಿ ಭಕ್ತರನ್ನು ಕೇಳಿದಾಗ, ಅವರು ಯಾತ್ರೆಗೆ ವ್ಯವಸ್ಥೆ ಮಾಡಿಕೊಟ್ಟರು. 1963ರಲ್ಲಿ ಉತ್ತರ ಭಾರತದ ಪ್ರವಾಸ ಕೈಗೊಂಡರು. ಕೊಲ್ಲಾಪುರಕ್ಕೂ ಹೋಗಿ ಮಹಾಲಕ್ಷ್ಮಿಯನ್ನು ಆರಾಧಿಸಿದರು. ಮುಂಬಯಿಯ ದ್ವಾರಕಾನಾಥ ಮಠ, ಕಾಶಿಯ ವಿಶ್ವನಾಥನನ್ನು ದರ್ಶನ ಮಾಡಿದರು. ಅಲ್ಲಿಂದ ಗಯಾಕ್ಷೇತ್ರಕ್ಕೆ ಭಕ್ತರ ಜತೆ ತೆರಳಿದರು. ಕಾಶಿಗೆ ಬಂದು ವಿದ್ವತ್​ಸಭೆ ಏರ್ಪಡಿಸಿದರು. ಆ ಸಭೆಗೆ ವಿದ್ವಾಂಸ ಮೂರ್ಧನ್ಯರಾದ ಶ್ರೀರಾಜರಾಜೇಶ್ವರ ಶಾಸ್ತ್ರಿಗಳು ಬಂದರು. ಅಲ್ಲಿ ‘ಬ್ರಹ್ಮಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವನಾಪರಃ’ ಪೂರ್ವಪಕ್ಷ ಮಂಡಿತವಾಯಿತು. ಆಚಾರ್ಯರ ಭಾಷ್ಯಪಂಕ್ತಿಗಳು ಹೊಮ್ಮಿದವು. ವಿದ್ವಾಂಸರ ಒರೆಗಲ್ಲಿಗೆ ಪೂರ್ವಪಕ್ಷ ಹೆಚ್ಚು ನಿಲ್ಲಲಿಲ್ಲ. ರಾಜರಾಜೇಶ್ವರ ಶಾಸ್ತ್ರಿಗಳ ಸಿದ್ಧಾಂತ ಬಿಂದುವಿನೊಂದಿಗೆ ವಿದ್ವತ್​ಸಭೆ ಮುಕ್ತಾಯವಾಯಿತು. ಅಲ್ಲಿಂದ ಪ್ರಯಾಗ, ಅಯೋಧ್ಯೆಗೂ ಭೇಟಿಕೊಟ್ಟರು. ಹರಿದ್ವಾರದಲ್ಲಿ ಗಂಗೆಗೆ ನಮಿಸಿ, ದೆಹಲಿ ತಲುಪಿದರು. ಆಗಿನ ರಾಷ್ಟ್ರಪತಿ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಸ್ವಾಮಿಗಳನ್ನು ಪುರಸ್ಕರಿಸಿದರು.

ಬ್ರಹ್ಮೈಕ್ಯ: ನಂತರ ಮಠದಲ್ಲಿ ಭೌತಿಕ ಅಭಿವೃದ್ಧಿಗಳಾದವು. ಅನೇಕರು ಮಂಟಪ, ಕಟ್ಟಡಗಳನ್ನು ನಿರ್ವಿುಸಿಕೊಟ್ಟರು. ಕೃಷಿಜಮೀನಿನಲ್ಲಿ ಅಭಿವೃದ್ಧಿ ಪಥ ತೋರಿಸಿದರು. ಕಾವ್ಯಕಂಠ ಗಣಪತಿ ಮುನಿಗಳು ಮಠಕ್ಕೆ ಬಂದು ಸರ್ವಜ್ಞೇಂದ್ರರ ಪಾದಾಧಿವಂದನ ಮಾಡಿದ್ದು ಅಪೂರ್ವ ಸಂಗತಿ. ಇಬ್ಬರೂ ಅಧ್ಯಾತ್ಮ ಚರ್ಚೆ ನಡೆಸಿದರು. ದ.ರಾ. ಬೇಂದ್ರೆ, ಅ.ನ.ಕೃ.ರಂಥ ಸಾಹಿತಿಗಳು, ರಾಜಕೀಯ ಪ್ರಮುಖರು, ರಾಜ್ಯಪಾಲರು ಶ್ರೀಮಠಕ್ಕೆ ಬಂದು ಅನುಗ್ರಹೀತರಾದರು.

1990ರ ನವೆಂಬರ್ 19ರಂದು ಮುಂಜಾನೆ ಆರರಿಂದ ಹತ್ತೂವರೆವರೆಗೆ ತಾಯಿಯ ಮುಂದೆ ದೇವರ ಗುಡಿಯಲ್ಲಿ ಕುಳಿತು ಪೂಜಿಸಿದರು. ದೇವರಿಗೆ ಸಂದ ಕೊನೆಯ ಪೂಜೆ ಇದಾಗಿತ್ತು. ತೀರ್ಥಸೇವನೆ ಬಳಿಕ ಅಸ್ವಸ್ಥರಾದರು. ಶಿರಸಿಗೆ ಒಯ್ದು ವೈದ್ಯರಿಗೆ ತೋರಿಸಿದರೂ ಉಪಯೋಗವಾಗಲಿಲ್ಲ. 21ರ ರಾತ್ರಿ 10.30ರ ಸುಮಾರಿಗೆ ಸ್ವಾಮಿಗಳು ಬ್ರಹ್ಮೈಕ್ಯರಾದರು.

ಶ್ರೀಸರ್ವಜ್ಞೇಂದ್ರರು ಸ್ವರ್ಣವಲ್ಲಿ ಮಠಕ್ಕೆ ಅಖಿಲಭಾರತೀಯ ಮನ್ನಣೆ ಒದಗಿಸಿದರು. ಸ್ಮಾರ್ತ-ಮಾಧ್ವ ಸಂಸ್ಥಾನಗಳ ನಡುವೆ ಮಧುರ ಬಾಂಧವ್ಯ ಬಿತ್ತಿದರು. ಶ್ರೀಚಕ್ರೋಪಾಸನೆ ಮೂಲಕ ಶ್ರೀಮಠಕ್ಕೆ ಆಧ್ಯಾತ್ಮಿಕ ಪ್ರಭೆ ಒದಗಿಸಿದರು.

(ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು)

Leave a Reply

Your email address will not be published. Required fields are marked *

Back To Top