ಬೆಂಗಳೂರು: ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಭೇಟಿ ನೀಡಿ ಅಧಿಕಾರಿ, ಸಿಬ್ಬಂದಿ ಜತೆ ರ್ಚಚಿಸಿದರು.
ರಾಮನಗರ ಜಿಲ್ಲಾ ಪೊಲೀಸ್ ವ್ಯಾಪ್ತಿಗೆ ಸೇರಿದ್ದ ಬ್ಯಾಡರಹಳ್ಳಿ ಠಾಣೆ ಇತ್ತೀಚೆಗೆ ಬೆಂಗಳೂರು ನಗರ ಪೊಲೀಸ್ ವ್ಯಾಪ್ತಿಗೆ ಸೇರಿಸಿ ಸರ್ಕಾರ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಕೆಲ ಅಧಿಕಾರಿ, ಸಿಬ್ಬಂದಿಯನ್ನು ಠಾಣೆಗೆ ಹೊಸದಾಗಿ ವರ್ಗಾವಣೆ ಮಾಡಲಾಗಿತ್ತು. ತಾಂತ್ರಿಕ ಸಮಸ್ಯೆಯಿಂದ ವೇತನ ಆಗಿರಲಿಲ್ಲ. ಜತೆಗೆ ದಾಖಲೆಗಳ ವರ್ಗಾವಣೆಯಲ್ಲೂ ಗೊಂದಲ ಮೂಡಿತ್ತು. ಇದನ್ನು ಮನಗೊಂಡ ಭಾಸ್ಕರ್ ರಾವ್, ಠಾಣೆಗೆ ಖುದ್ದು ಭೇಟಿ ಕೊಟ್ಟು ಪರಿಶೀಲಿಸಿದರು. ಮೂಲಸಮಸ್ಯೆಗಳು ಮತ್ತು ಅಧಿಕಾರಿ, ಸಿಬ್ಬಂದಿ ಕುಂದುಕೊರತೆ ಆಲಿಸಿದರು. ವೇತನ ಬಾರದಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ಕೊಟ್ಟು ಬಗೆಹರಿಸುವಂತೆ ಸೂಚನೆ ನೀಡಿದರು.
ಬ್ಯಾಡರಹಳ್ಳಿ, ಕುಂಬಳಗೂಡು ಮತ್ತು ತಲಘಟ್ಟಪುರ ಪೊಲೀಸ್ ಠಾಣೆಗಳನ್ನು ಕಮಿಷನರೇಟ್ ವ್ಯಾಪ್ತಿಗೆ ಸೇರಿಸಬೇಕೆಂದು ಸರ್ಕಾರಕ್ಕೆ ಪೊಲೀಸ್ ಇಲಾಖೆ ಪ್ರಸ್ತಾವನೆ ಸಲ್ಲಿಸಿತ್ತು.