More

    ಡ್ರಗ್ಸ್ ನಿಯಂತ್ರಿಸದಿದ್ದರೆ ಶಿಕ್ಷಣ ಸಂಸ್ಥೆ ವಿರುದ್ಧ ಕ್ರಮ; ‘ವಿಜಯವಾಣಿ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್

    ಡ್ರಗ್ಸ್ ನಿಯಂತ್ರಿಸದಿದ್ದರೆ ಶಿಕ್ಷಣ ಸಂಸ್ಥೆ ವಿರುದ್ಧ ಕ್ರಮ; ‘ವಿಜಯವಾಣಿ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ ತಡೆಯಲು ಹಲೋ ನೇಬರ್ ಯೋಜನೆ, ಡ್ರಗ್ಸ್ ದಂಧೆ ತಡೆಯಲು ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ ಸೇರಿ ಬೆಂಗಳೂರು ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಕಾರ್ಯಪ್ರವೃತ್ತರಾಗಿದ್ದಾರೆ. ಶುಕ್ರವಾರ ವಿಜಯವಾಣಿ ಕಚೇರಿಯಲ್ಲಿ ಆಯೋಜಿಸಿದ್ದ ಫೋನ್​ಇನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕಮಿಷನರ್, ಪೊಲೀಸ್ ಇಲಾಖೆ ಕಾರ್ಯವೈಖರಿ, ಭ್ರಷ್ಟಾಚಾರ ಹಾಗೂ ಅಪರಾಧ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಹೇಗಿರಬೇಕು ಎಂಬುದರ ಕುರಿತು ಹಂಚಿಕೊಂಡ ಸಮಗ್ರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    ನಗರದಲ್ಲಿರುವ ಉನ್ನತ ಶಿಕ್ಷಣ ಸಂಸ್ಥೆಗಳು ದೇಶ ವಿದೇಶಗಳ ವಿದ್ಯಾರ್ಥಿಗಳನ್ನು ಆಕರ್ಷಿಸುವ ಜತೆಗೆ ಮಾದಕವಸ್ತು ಹಾವಳಿಯೂ ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸಲು ಗಂಭೀರ ಕ್ರಮ ಕೈಗೊಳ್ಳುವ ಬಗ್ಗೆ ಪೊಲೀಸರು ನಿರ್ಧರಿಸಿದ್ದಾರೆ. ಇದಕ್ಕಾಗಿ, ಮಾದಕವಸ್ತು ಹಾವಳಿ ತಡೆಗಟ್ಟಲು ವಿಫಲರಾದ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿ ವಿರುದ್ಧ ಮಾದಕವಸ್ತು ತಡೆ ಕಾಯ್ದೆ (ಎನ್​ಡಿಪಿಎಸ್) ಅಸ್ತ್ರ ಬಳಸುವುದಾಗಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಕೆ ನೀಡಿದ್ದಾರೆ.

    ‘ವಿಜಯವಾಣಿ, ದಿಗ್ವಿಜಯ 247 ನ್ಯೂಸ್’ ಫೋನ್ ಇನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಭಾಸ್ಕರ್ ರಾವ್ ಅವರಿಗೆ ಬೆಂಗಳೂರಿನ ವಿವಿಧೆಡೆಗಳಿಂದ ಕರೆ ಮಾಡಿದ ಸಾರ್ವಜನಿಕರು ಬೆಂಗಳೂರಿನ ಶಿಕ್ಷಣ ಸಂಸ್ಥೆಗಳ ಸುತ್ತಮತ್ತ ಇರುವ ಮಾದಕದ್ರವ್ಯ ಜಾಲದ ಬಗ್ಗೆ ದೂರಿದರು.

    ಶಾಲೆ-ಕಾಲೇಜುಗಳ ಸುತ್ತಮುತ್ತ ಮಾದಕವಸ್ತು ಸರಬರಾಜು, ಸೇವನೆ ವಿಚಾರ ಅತ್ಯಂತ ಗಂಭೀರವಾದದ್ದು. ಇದನ್ನು ಸಹಿಸಲು ಸಾಧ್ಯವಿಲ್ಲ. ಇಂತಹ ಚಟುವಟಿಕೆ ತಮ್ಮ ಸಂಸ್ಥೆಯೊಳಗೆ ಹಾಗೂ ಸುತ್ತಮುತ್ತ ನಡೆಯದಂತೆ, ತಮ್ಮ ವಿದ್ಯಾರ್ಥಿಗಳು ಈ ವ್ಯಸನಕ್ಕೆ ಅಂಟಿಕೊಳ್ಳದಂತೆ ತಡೆಯುವುದು ಪ್ರಾಂಶುಪಾಲ ಮತ್ತು ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಕರ್ತವ್ಯ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದಿದ್ದರೆ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲ ಹಾಗೂ ಆಡಳಿತ ಮಂಡಳಿಯೇ ಇದಕ್ಕೆ ನೇರ ಹೊಣೆಯಾಗಬೇಕಾಗುತ್ತದೆ. ಹಾಗಾಗಿ ಅವರ ವಿರುದ್ಧ ಎನ್​ಡಿಪಿಎಸ್ ಅಡಿ ಪ್ರಕರಣ ದಾಖಲಿಸಲಾಗುತ್ತದೆ ಎಂದು ಎಚ್ಚರಿಸಿದರು.

    ಸರಗಳ್ಳತನ, ದರೋಡೆ, ಸಂಚಾರ ಪೊಲೀಸರು ಲಂಚಗುಳಿತನ, ಪೊಲೀಸ್ ಸಿಬ್ಬಂದಿ ಸಮಸ್ಯೆ, ಸಂಚಾರದಟ್ಟಣೆ, ಮಹಿಳಾ ಸುರಕ್ಷತೆ ಸೇರಿ ಬೆಂಗಳೂರಿನ ಹಲವು ಭಾಗಗಳಿಂದ ಬಂದ ಸಾರ್ವಜನಿಕರ ಕರೆಗಳಿಗೆ ಭಾಸ್ಕರ ರಾವ್ ಸಮಾಧಾನಚಿತ್ತದಿಂದ ಉತ್ತರಿಸಿದರು. ಒಡವೆ, ವಾಹನ, ಮಕ್ಕಳಿಗೆ ದ್ವಿಚಕ್ರ ವಾಹನ ನೀಡುವುದು ಸೇರಿ, ಕಾನೂನು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಹಾಗೂ ಪಾಲಕರು ನಿರ್ವಹಿಸಬೇಕಾದ ಜವಾಬ್ದಾರಿಯನ್ನೂ ಮನವರಿಕೆ ಮಾಡಿಕೊಟ್ಟರು.

    ಕೇಸ್ ದಾಖಲಿಸಿ, ಡಿಟೆಕ್ಟ್ ಮಾಡಿ!

    ಡ್ರಗ್ಸ್ ಮಾರಾಟ ಸಂಬಂಧ 2017ರಲ್ಲಿ 18, 2018ರಲ್ಲಿ 340, 2019ರಲ್ಲಿ 960 ಪ್ರಕರಣ ದಾಖಲಾಗಿವೆ. ಇದನ್ನು ನೋಡಿದರೆ ಡ್ರಗ್ಸ್ ದಂಧೆ ಹೆಚ್ಚಾಗುತ್ತಿರುವುದು ಸ್ಪಷ್ಟವಾಗುತ್ತದೆ. ಆದರೆ, ಕೇಸ್ ಹೆಚ್ಚಾದರೆ ವಾಸ್ತವದಲ್ಲಿ ಪೊಲೀಸರು ಸಮರ್ಪಕವಾಗಿ ಕೆಲಸ ಮಾಡುತ್ತಿದ್ದಾರೆ ಎಂದರ್ಥ. ಹೀಗಾಗಿ ಹೆಚ್ಚೆಚ್ಚು ಕೇಸ್ ದಾಖಲಿಸಿ, ಪ್ರಕರಣಗಳನ್ನು ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸಿ ಎಂದು ಸೂಚನೆ ಕೊಟ್ಟಿರುವುದಾಗಿ ಭಾಸ್ಕರ್ ರಾವ್ ಹೇಳಿದರು.

    ಕಾಲೇಜುಗಳ ವಿವರ ಪಡೆದ ಕಮಿಷನರ್

    ಫೋನ್​ಇನ್​ನಲ್ಲಿ ಬಂದ ಸಾಕಷ್ಟು ಕರೆಗಳು ಡ್ರಗ್ಸ್ ದಂಧೆಗೆ ಸಂಬಂಧಿಸಿದ್ದಾಗಿದ್ದವು. ವಿದ್ಯಾರ್ಥಿಗಳು ಮಾದಕವಸ್ತು ಅಮಲಿನಲ್ಲಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ, ಕ್ರಮ ಕೈಗೊಳ್ಳಿ ಎಂದು ಕಮಿಷನರ್​ಗೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಭಾಸ್ಕರ್ ರಾವ್, ಅವರಿಂದಲೇ ಡ್ರಗ್ಸ್ ದಂಧೆ ನಡೆಯುವ ಕಾಲೇಜುಗಳ ಮಾಹಿತಿ ಪಡೆದರು. ಯಲಹಂಕ, ಕೆ.ಆರ್.ಪುರ ಸುತ್ತಮುತ್ತಲಿನ ಕಾಲೇಜುಗಳಲ್ಲಿ ಡ್ರಗ್ಸ್ ದಂಧೆ ನಡೆಯುವ ಬಗ್ಗೆ ವಿವರ ಸಿಕ್ಕ ಹಿನ್ನೆಲೆಯಲ್ಲಿ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟರು.

    ಕನಿಷ್ಠ 10 ವರ್ಷ ಜೈಲು 

    ಮಾದಕವಸ್ತುಗಳ ಸಾಗಣೆ ಹಾಗೂ ಮಾರುವವರಿಗೆ ಎನ್​ಡಿಪಿಎಸ್ ಅಡಿ ಕನಿಷ್ಠ 10ರಿಂದ 20 ವರ್ಷ ಕಠಿಣ ಶಿಕ್ಷೆ, 1-2 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ. ವೈಯಕ್ತಿಕ ಬಳಕೆಗೆ ಅಕ್ರಮವಾಗಿ ಸಣ್ಣ ಪ್ರಮಾಣದ ಮಾದಕವಸ್ತು ಹೊಂದಿದ್ದರೆ 1 ವರ್ಷ ಸೆರೆವಾಸ ಅಥವಾ ದಂಡ ವಿಧಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts