ಭರಮಸಾಗರ: ಸರ್ವರ್ ಸಮಸ್ಯೆ ಸರಿಪಡಿಸಿ ಪಡಿತರ ವಿತರಣೆ ಸರಳವಾಗಿಸಲು ರಾಜ್ಯ ಸರ್ಕಾರ ಮತ್ತು ಆಹಾರ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುತ್ತಿದೆ ಎಂದು ಪಡಿತರ ವಿತರಕರ ಸಂಘದ ತಾಲೂಕಾಧ್ಯಕ್ಷ ಮರುಳಸಿದ್ದಪ್ಪ ಹೇಳಿದರು.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆ ಸಮರ್ಪಕವಾಗಿ ನಡೆಯುತ್ತಿದೆ. ಆದರೆ, ಸರ್ವರ್ ಸಮಸ್ಯೆಯಿಂದ ಪ್ರತಿ ತಿಂಗಳು ಫಲಾನುಭವಿಗಳ ಹೆಬ್ಬೆಟ್ಟಿನ ಗುರುತು ಪಡೆಯಲು ತೊಂದರೆ ಆಗುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಸಮಸ್ಯೆ ಪಡಿತರ ವಿತರಕರು ಮತ್ತು ಫಲಾನುಭವಿಗಳ ನಡುವೆ ಮಾತಿನ ಚಕಮಕಿ, ಘರ್ಷಣೆಗೂ ಕಾರಣವಾಗುತ್ತಿದೆ. ಈ ತೊಂದರೆ ರಾಜ್ಯಾದ್ಯಂತ ಇದ್ದು ಶೀಘ್ರವೇ ಸರಿಪಡಿಸುವುದಾಗಿ ಉಪ ನಿರ್ದೇಶಕ ಮಧುಸೂದನ್ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಬಹಳಷ್ಟು ಪಡಿತರದಾರರು ಕೂಲಿ ಕಾರ್ಮಿಕರಾಗಿದ್ದು, ಕೆಲಸಕ್ಕೆ ತೆರಳದೆ ಹೆಬ್ಬೆಟ್ಟಿನ ಗುರುತು ನೀಡಲು ದಿನವಿಡಿ ಕಾದು ನಿಲ್ಲುವ ಪರಿಸ್ಥಿತಿ ಇದೆ. ಈ ಕುರಿತು ಸಂಬಂಧಿಸಿದ ಸಚಿವರು ಹಾಗೂ ಅಧಿಕಾರಿಗಳಿಗೆ ಪಡಿತರ ವಿತರಕರ ಸಂಘವೂ ಮನವಿ ಸಲ್ಲಿಸಿದೆ. ಶೀಘ್ರವೇ ಸಮಸ್ಯೆ ಸರಿಹೋಗಲಿದ್ದು, ಪಡಿತರದಾರರು ಆತಂಕಪಡುವ ಅಗತ್ಯವಿಲ್ಲ ಎಂದರು.
ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಚಮನ್ ಶೇಖರ್, ಸುಧೀಂದ್ರ, ಗ್ರಾಹಕರಾದ ವಿಶಾಲಾಕ್ಷಿ, ರಾಮಣ್ಣ, ರಾಷ್ಟ್ರೀಯ ಕಿಸಾನ್ ಸಂಘದ ಸದಸ್ಯರಿದ್ದರು.