ಲೋಕಸಭೆ ಚುನಾವಣೆಯಲ್ಲಿ ಶಿವಸೇನೆ ನಮ್ಮೊಂದಿಗೆ ಇರಲಿದೆ: ಅಮಿತ್​ ಷಾ

ಮುಂಬೈ: ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಶಿವಸೇನೆಯೊಂದಿಗೆ ಮೈತ್ರಿ ಸಾಧಿಸುವ ವಿಶ್ವಾಸವಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ತಿಳಿಸಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್​ ಈಗಾಗಲೇ ಶಿವಸೇನೆಯ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಮೈತ್ರಿ ಕುರಿತು ಮಾತುಕತೆ ಅಂತಿಮವಾಗುವವರೆಗೆ ನಾನು ಆ ಕುರಿತು ಮಾತನಾಡುವುದಿಲ್ಲ. ನನ್ನ ಮಟ್ಟದಲ್ಲಿ ಮತ್ತು ಫಡ್ನವಿಸ್​ ಅವರ ಮಟ್ಟದಲ್ಲಿ ಈಗಾಗಲೇ ಮಾತುಕತೆ ನಡೆದಿದೆ. ಶಿವಸೇನೆಯ ಮುಖ್ಯಸ್ಥ ಉದ್ಧವ್​ ಠಾಕ್ರೆ ಜತೆಗೂ ಮಾತುಕತೆ ನಡೆಸಲಾಗಿದೆ ಎಂದು ಅಮಿತ್​ ಷಾ ಮುಂಬೈನಲ್ಲಿ ತಿಳಿಸಿದ್ದಾರೆ.

ಕಳೆದ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದ ಕಲ್ಯಾಣ್​ ಮತ್ತು ಪುಣೆಯ ಮೆಟ್ರೋ ಕಾರಿಡಾರ್​ನ ಶಂಕುಸ್ಥಾಪನೆ ಸಮಾರಂಭವನ್ನು ಶಿವಸೇನೆ ಬಹಿಷ್ಕರಿಸಿತ್ತು. ಜತೆಗೆ ಬುಧವಾರ ತನ್ನ ಮುಖವಾಣಿ ಸಾಮ್ನಾದಲ್ಲಿ ಕಾರ್ಯಕ್ರಮದಲ್ಲಿ ಇದ್ದ ಖಾಲಿ ಕುರ್ಚಿಗಳ ಫೋಟೋ ಪ್ರಕಟಿಸಿತ್ತು. ಜತೆಗೆ ಮೋದಿ ಅಲೆ ಕಡಿಮೆಯಾಗುತ್ತಿದೆ ಎಂದು ಸುದ್ದಿ ಪ್ರಕಟಿಸಿತ್ತು.

ಇದೇ ಸಂದರ್ಭದಲ್ಲಿ ಶಿವಸೇನೆಯ ನಾಯಕ ಸಂಜಯ್​ ರೌತ್​ ಮೈತ್ರಿ ಕುರಿತು ಮಾತನಾಡಿದ್ದು, ಅಮಿತ್​ ಷಾ ಅವರಿಗೆ ಮೈತ್ರಿಯಲ್ಲಿ ವಿಶ್ವಾಸವಿದ್ದರೆ ನಾನು ಅವರಿಗೆ ಶುಭ ಹಾರೈಸುತ್ತೇನೆ. ಆದರೆ ಇದುವರೆಗೆ ಮೈತ್ರಿ ಕುರಿತು ಯಾವುದೇ ಮಾತುಕತೆ ನಡೆದಿಲ್ಲ ಎಂದು ತಿಳಿಸಿದ್ದರು. (ಏಜೆನ್ಸೀಸ್​)