ಕಾರವಾರ: ಇಲ್ಲಿನ ವಾಣಿಜ್ಯ ಬಂದರು ಎರಡನೇ ಹಂತದ ವಿಸ್ತರಣೆ ಹಾಗೂ ಅಲೆ ತಡೆಗೋಡೆ ಕಾಮಗಾರಿ ವಿರೋಧಿಸಿ ಪ್ರತಿಭಟನೆ ನಡೆಸಿದ್ದ ಮೀನುಗಾರ ಮುಖಂಡರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಅಲೆ ತಡೆಗೋಡೆ ಕಾಮಗಾರಿ ಗುತ್ತಿಗೆ ಪಡೆದ ಹೈದ್ರಾಬಾದ್ ಮೂಲದ ಕಂಪನಿ ಪೊಲೀಸ್ ಭದ್ರತೆಯಲ್ಲಿ ಸೋಮವಾರ ಬೆಳಗ್ಗೆ ಕಾಮಗಾರಿ ಆರಂಭಿಸಿತ್ತು.
ಅದನ್ನು ತಡೆಯಲು ಮುಂದಾದ ಮೀನುಗಾರ ಮುಖಂಡ ಗಣಪತಿ ಮಾಂಗ್ರೆ, ಪ್ರಸಾದ ಕಾರವಾರಕರ್, ರಾಜು ತಾಂಡೇಲ, ವಿನಾಯಕ ಹರಿಕಂತ್ರ ಸೇರಿ 25 ಕ್ಕೂ ಹೆಚ್ಚು ಮುಖಂಡರನ್ನು ಬಂಧಿಸಿ ಪೊಲೀಸ್ ಗ್ರೌಂಡ್ ನಲ್ಲಿ ಇಡಲಾಗಿದೆ.
ಡಿವೈಎಸ್ ಪಿ ಶಂಕರ ಮಾರಿಹಾಳ, ಜಿ.ಟಿ.ನಾಯ್ಕ ನೇತೃತ್ವದಲ್ಲಿ 250 ಕ್ಕೂ ಹೆಚ್ಚು ಪೊಲೀಸರು ನಿಂತು ತಡೆಗೋಡೆ ಕಾಮಗಾರಿ ನಡೆಯಲು ಅನುವು ಮಾಡಿಕೊಟ್ಟಿದ್ದಾರೆ.
ಉಳಿದ 200 ಕ್ಕೂ ಅಧಿಕ ಮೀನುಗಾರರು ಮೀನು ಮಾರುಕಟ್ಟೆ ಬಂದ್ ಮಾಡಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ನಗರದಲ್ಲಿ ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಮುಚ್ಚಲಾಗಿದೆ.