ಉಚ್ಚಂಗಿದುರ್ಗದಲ್ಲಿ ಸಂಭ್ರಮದ ಭರತ ಹುಣ್ಣಿಮೆ

ಹರಪನಹಳ್ಳಿ: ಮುತ್ತೈದೆ ಹುಣ್ಣಿಮೆ ಎಂದು ಪ್ರಸಿದ್ಧ ಪಡೆದಿರುವ ಭರತ ಹುಣ್ಣಿಮೆ ಆಚರಣೆ ತಾಲೂಕಿನ ಉಚ್ಚಂಗಿದುರ್ಗದಲ್ಲಿ ಮಂಗಳವಾರ ಸಂಭ್ರಮ, ಸಡಗರದಿಂದ ನೆರವೇರಿತು.

ರಾಜ್ಯ, ಹೊರ ರಾಜ್ಯದಿಂದ ಆಗಮಿಸಿದ್ದ ಸಾವಿರಾರು ಭಕ್ತರು ಉಚ್ಚಂಗೆಮ್ಮ ನಿನ್ನಾಲ್ಕು ಉದೋ, ಉದೋ ಘೋಷ ಘೋಷ ಕೂಗುತ್ತಾ ಬೆಟ್ಟವೇರಿ ಭಕ್ತಿಯಲ್ಲಿ ಮಿಂದೆದ್ದರು. ಬೇವಿನ ಉಡುಗೆ, ಪಡ್ಲಗಿ ತುಂಬಿಸುವ ಸಾಂಪ್ರದಾಯಿಕ ಆಚರಣೆಗಳು ನಡೆದವು. ಜೋಗತಿ ಯರು, ಜೋಗಪ್ಪರು ಹಳೆಯ ಸಾಮಗ್ರಿ ತೊರೆದು, ಹೊಸದಾಗಿ ಹಸಿರು ಬಳೆ, ಬಿಳಿ ಮತ್ತು ಕೆಂಪು ಮುತ್ತಿನಹಾರ, ಪಡ್ಲಗಿ ಧರಿಸಿ ಆನೆಹೊಂಡ, ಅರಿಶಿನ ಹೊಂಡದ ಆವರಣದಲ್ಲಿ ಪೂಜೆ ಸಲ್ಲಿಸಿದರು.

ಬಳ್ಳಾರಿ ಜಿಲ್ಲೆ ಮತ್ತು ತಾಲೂಕು ಆಡಳಿತ, ಮುಜರಾಯಿ ಹಾಗೂ ಕಂದಾಯ, ಪೊಲೀಸ್ , ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು. ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರಾ, ಡ್ರೋಣ್ ವ್ಯವಸ್ಥೆ ಮಾಡಲಾಗಿತ್ತು. ಡಿವೈಎಸ್ಪಿ ನಾಗೇಶ್ ಐತಾಳು, ಸಿಪಿಐ ಡಿ.ದುರುಗಪ್ಪ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. 40 ವರ್ಷದಿಂದ ಜಡೆ ಬಿಟ್ಟಿದ್ದ ಚಳ್ಳಕೆರೆ ತಾಲೂಕಿನ ದೇವದಾಸಿ ಮಹಿಳೆ ಶಿವಮ್ಮ ಸ್ವಯಂ ಪ್ರೇರಿತರಾಗಿ ಕೂದಲು ತೆಗೆಸಿದರು.