ಮುಷ್ಕರ ನೀರಸ

<ಸಾರಿಗೆ ಸೇವೆ ಸ್ಥಗಿತ * ಎಂದಿನಂತೆ ತೆರೆದುಕೊಂಡಿದ್ದ ಅಂಗಡಿ, ಹೋಟೆಲ್‌ಗಳು * ಜನಜೀವನ ಅಬಾಧಿತ>

ವಿಜಯವಾಣಿ ಸುದ್ದಿಜಾಲ ಮಂಗಳೂರು/ಉಡುಪಿ
ರಾಷ್ಟ್ರಮಟ್ಟದ ಮುಷ್ಕರಕ್ಕೆ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ವ್ಯಕ್ತವಾಗಿದ್ದು ನೀರಸ ಪ್ರತಿಕ್ರಿಯೆ.

ಮಂಗಳವಾರ ರಜೆ ಘೋಷಿಸಿದ್ದರಿಂದ ಶಾಲಾ ಕಾಲೇಜುಗಳು ಕಾರ್ಯನಿರ್ವಹಿಸಲಿಲ್ಲ. ಬಸ್ ನೌಕರ ವರ್ಗ ಮುಷ್ಕರಕ್ಕೆ ಮುಂದಾಗಿದ್ದರಿಂದ ಒಂದಷ್ಟು ಮಟ್ಟಿಗೆ ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡು, ಜನಸಾಮಾನ್ಯರಿಗೆ ತೊಂದರೆಯಾಯಿತು. ಇಷ್ಟನ್ನು ಹೊರತುಪಸಿದರೆ, ಬಹುತೇಕ ಕಡೆ ಜನಜೀವನ ಎಂದಿನಂತೆಯೇ ಇತ್ತು. ಕೆಎಸ್ಸಾರ್ಟಿಸಿ ಬಸ್, ಕೆಲ ಖಾಸಗಿ ಬಸ್, ಬಹುತೇಕ ಆಟೊ, ಟ್ಯಾಕ್ಸಿಗಳು ಸಂಚರಿಸುತ್ತಿದ್ದವು. ಅಂಗಡಿ, ಮಳಿಗೆ, ಕಚೇರಿ, ಬ್ಯಾಂಕ್ ತೆರೆದಿದ್ದವು.

ದ.ಕ. ಜಿಲ್ಲೆಯ ಬೆಳ್ಳಾರೆ, ಬಂಟ್ವಾಳ, ಬೆಳ್ತಂಗಡಿಯಲ್ಲಿ ಜನಜೀವನ ಎಂದಿನಂತಿತ್ತು. ಪುತ್ತೂರು, ಸುಳ್ಯದಲ್ಲಿ ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸುರತ್ಕಲ್, ಮೂಲ್ಕಿ, ಕಿನ್ನಿಗೋಳಿ ಮುಂತಾದೆಡೆ ಮುಷ್ಕರಕ್ಕೆ ಜನರ ಸಹಮತ ಇರಲಿಲ್ಲ. ಉಳ್ಳಾಲದಲ್ಲೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಜಿಲ್ಲೆಯ ಇತರ ಕಡೆಗಳಲ್ಲೂ ಜನ ಮುಷ್ಕರಕ್ಕೆ ವಿಮುಖರಾಗಿದ್ದರು. ಎಂಆರ್‌ಪಿಎಲ್‌ನಲ್ಲಿ ಎಂಆರ್‌ಪಿಎಲ್ ಎಂಪ್ಲಾಯೀಸ್ ಅಸೋಸಿಯೇಶನ್, ಎಂಆರ್‌ಪಿಎಲ್ ಒಎನ್‌ಜಿಸಿ ಕರ್ಮಚಾರಿ ಸಂಘ ಆಶ್ರಯದಲ್ಲಿ ಉತ್ಪಾದನೆ ಸ್ಥಗಿತಗೊಳಿಸದೆ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು.

ಬಿಗಿ ಬಂದೋಬಸ್ತ್: ದ.ಕ. ಜಿಲ್ಲಾದ್ಯಂತ ಯಾವುದೇ ಅಹಿತಕರ ಘಟನೆಯಿಲ್ಲದೆ ಮುಷ್ಕರ ಶಾಂತಿಯುತವಾಗಲು ಪೊಲೀಸರ ಬಿಗುವಿನ ಬಂದೋಬಸ್ತ್ ಕೂಡ ಸಹಕಾರಿಯಾಯಿತು. ನಗರ ಮತ್ತು ಜಿಲ್ಲಾ ವ್ಯಾಪ್ತಿಯ ಎಲ್ಲ್ಲ ಆಯಕಟ್ಟಿನ ಸ್ಥಳದಲ್ಲೂ ಹೆಚ್ಚುವರಿ ತುಕಡಿಗಳನ್ನು ನಿಯೋಜಿಸಿದ್ದು ಕಿಡಿಗೇಡಿಗಳು ಯಾವುದೇ ಕಾನೂನು ಹದಗೆಡಿಸುವ ಕೃತ್ಯಗಳಿಗೆ ಮುಂದಾಗದಂತೆ ಪೊಲೀಸರು ನಿಗಾ ವಹಿಸಿದ್ದರು. ಉಡುಪಿ ಜಿಲ್ಲೆಯಲ್ಲಿಯೂ ಸಾಕಷ್ಟು ಪೊಲೀಸರನ್ನು ನಿಯೋಜಿಸಲಾಗಿದ್ದು, ಅಹಿತಕರ ಘಟನೆ ನಡೆದಿಲ್ಲ.

ಉಡುಪಿಯಲ್ಲಿ ಪರಿಣಾಮ ಬೀರದ ಮುಷ್ಕರ: ಉಡುಪಿ ಜಿಲ್ಲೆಯಲ್ಲಿಯೂ ಮುಷ್ಕರ ಜನಜೀವನದ ಮೇಲೆ ಅಷ್ಟೇನೂ ಪರಿಣಾಮ ಬೀರಲಿಲ್ಲ. ಸಾರಿಗೆ ಸೇವೆ ಸ್ಥಗಿತಗೊಂಡಿದ್ದು, ಅಂಗಡಿ, ಮುಂಗಟ್ಟು, ಹೋಟೆಲ್‌ಗಳು ತೆರೆದುಕೊಂಡಿದ್ದವು. ರಜೆ ಘೋಷಣೆಯಿಂದಾಗಿ ಶಾಲಾ ಕಾಲೇಜುಗಳು ಕಾರ್ಯ ನಿರ್ವಹಿಸಲಿಲ್ಲ. ನಗರದ ಕೆಎಂ ಮಾರ್ಗ, ಮಣಿಪಾಲ, ಕುಂಜಿಬೆಟ್ಟು, ಬನ್ನಂಜೆ, ಕಲ್ಸಂಕ, ತೆಂಕಪೇಟೆ, ರಥಬೀದಿ, ಕುಂಜಿಬೆಟ್ಟು, ಕಡಿಯಾಳಿ, ಮಲ್ಪೆ ಭಾಗದಲ್ಲಿ ಎಂದಿನಂತೆ ಅಂಗಡಿ ಮುಂಗಟ್ಟು, ಹೋಟೆಲ್‌ಗಳು ತೆರೆದುಕೊಂಡಿದ್ದವು. ಬಂದ್ ಜನಜೀವನದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.

ವಿಮಾ ನೌಕರರು, ಕೆಲ ಬ್ಯಾಂಕ್ ಉದ್ಯೋಗಿಗಳು, ಪೋಸ್ಟಲ್ ಯೂನಿಯನ್‌ಗಳು ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರಿಂದ ವಿಮಾ, ಬ್ಯಾಂಕ್, ಅಂಚೆ, ಬಿಎಸ್‌ಎನ್‌ಎಲ್ ಸೇವೆಯಲ್ಲಿ ವ್ಯತ್ಯಯ ಉಂಟಾಯಿತು.

ಬ್ಯಾಂಕ್‌ಗಳು ತೆರೆದುಕೊಂಡಿದ್ದರೂ ಹಣಕಾಸು ವ್ಯವಹಾರ ಇರಲಿಲ್ಲ. ಅಂಚೆ ಇಲಾಖೆ ಕಚೇರಿಯಲ್ಲಿಯೂ ಇದೇ ಪರಿಸ್ಥಿತಿ ಕಂಡುಬಂತು. ಸದಾ ಜನರಿಂದ ಗಿಜಿಗುಡಿತ್ತಿದ್ದ ನಗರದ ಸರ್ವೀಸ್, ಸಿಟಿ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸೋಮವಾರ ಖಾಲಿಯಾಗಿತ್ತು. ಆಸ್ಪತ್ರೆ, ಪ್ರವಾಸ, ಇನ್ನಿತರೆ ಕೆಲಸ ಕಾರ್ಯಗಳಿಗೆ ಪಕ್ಕದ ಜಿಲ್ಲೆ, ದೂರದ ಊರುಗಳಿಂದ ಬಂದಿದ್ದವರಿಗೆ ಬಸ್ ಇಲ್ಲದೆ ಸಮಸ್ಯೆಯಾಯಿತು. ಪೆಟ್ರೋಲ್ ಬಂಕ್, ಮೈದಾನ, ಗ್ಯಾರೇಜ್‌ಗಳಲ್ಲಿ ಬಸ್‌ಗಳನ್ನು ಪಾರ್ಕ್ ಮಾಡಲಾಗಿತ್ತು. ಕೆಎಸ್‌ಆರ್‌ಟಿಸಿ ಬಸ್‌ಗಳು ರಸ್ತೆಗೆ ಇಳಿದಿಲ್ಲ. ನಗರದಲ್ಲಿ ಎಂದಿನಂತೆ ಜನರ ಓಡಾಟವಿತ್ತು. ಸ್ವಂತ ಬೈಕ್, ಕಾರುಗಳಲ್ಲಿ ಜನರು ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.

ಕೃಷ್ಣ ಮಠದಲ್ಲಿ ಭಕ್ತರ ಸಂಖ್ಯೆ ಕಡಿಮೆ: ಮುಷ್ಕರ ಪರಿಣಾಮ ಮತ್ತು ರಜೆ ಸೀಸನ್ ಮುಗಿದ ಹಿನ್ನೆಲೆಯಲ್ಲಿ ಕೃಷ್ಣ ಮಠಕ್ಕೆ ಭಕ್ತರ ಭೇಟಿ ಸಂಖ್ಯೆ ಕಡಿಮೆಯಾಗಿದೆ. ಮಠದ ಭೊ ೀಜನ ಶಾಲೆಯಲ್ಲಿ ಪ್ರತಿನಿತ್ಯ 8 ರಿಂದ 10 ಸಾವಿರ ಮಂದಿ ಭೋಜನ ಪ್ರಸಾದ ಸ್ವೀಕರಿಸುತ್ತಿದ್ದು, ಮಂಗಳವಾರ 3 ಸಾವಿರ ಭಕ್ತರು ಮಾತ್ರ ಅನ್ನಪ್ರಸಾದ ಸ್ವೀಕರಿಸಿದರು.

ಮಾತಿನ ಚಕಮಕಿ: ಬೆಳಗ್ಗೆ ಉಡುಪಿಯಲ್ಲಿ ಖಾಸಗಿ ಬಸ್ ಚಾಲಕರು ಬಸ್ ಓಡಿಸದೆ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದರು. ರಿಕ್ಷಾ ಎಂದಿನಂತೆ ಕರ್ತವ್ಯ ನಿರ್ವಹಿಸಲು ಮುಂದಾಗಿದ್ದನ್ನು ಗಮನಿಸಿದ ಸಿಟಿ ಬಸ್ ಸಿಬ್ಬಂದಿ ನಾವು ಬಸ್ಸು ಓಡಿಸುತ್ತೇವೆ ಎಂದು ಕರ್ತವ್ಯಕ್ಕೆ ಅಣಿಯಾದರು. ಇದು ಕಾರ್ಮಿಕ ಸಂಘಟನೆ ಮುಖಂಡರು ಮತ್ತು ಬಸ್ ಚಾಲಕರ ಮಧ್ಯೆ ವಾಗ್ವಾದಕ್ಕೆ ಕಾರಣವಾಯಿತಾದರೂ, ಪೊಲೀಸರು ಸ್ಥಿತಿ ಶಾಂತಗೊಳಿಸಿದರು.

ಎರಡನೇ ದಿನವೂ ಇರದು ಬಿಸಿ: ಮೊದಲ ದಿನವೇ ಮುಷ್ಕರಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗದ ಕಾರಣ, ಎರಡನೇ ದಿನ ಮುಷ್ಕರ ಕ್ಷೀಣವಾಗುವ ಸಾಧ್ಯತೆ ಕಂಡುಬಂದಿದೆ. ಜನಜೀವನಕ್ಕೆ ಅಡ್ಡಿ ಉಂಟಾಗಬಾರದು ಎಂಬ ಕಾರಣಕ್ಕೆ ಎರಡನೇ ದಿನ ಬಲವಂತದ ಬಂದ್‌ಗೆ ಮುಂದಾಗುವುದಿಲ್ಲ ಎಂದು ಕಾರ್ಮಿಕ ಸಂಘಟನೆ ಮುಖಂಡರು ತಿಳಿಸಿದ್ದಾರೆ. ಬಸ್ ಸಿಬ್ಬಂದಿ ಮೊದಲ ದಿನವಷ್ಟೇ ಮುಷ್ಕರ ಎಂದು ಈ ಮೊದಲೇ ತಿಳಿಸಿರುವುದರಿಂದ ಜ.9ರಂದು ಬಸ್, ಆಟೊ ಎಂದಿನಂತೆ ಸಂಚರಿಸುವುದು ನಿಶ್ಚಿತವಾಗಿದೆ.

ಶಾಲೆ, ಕಾಲೇಜುಗಳಿಗೆ ರಜೆ ಇಲ್ಲ: ಮೊದಲ ದಿನ ಅಷ್ಟಾಗಿ ಮುಷ್ಕರದ ಬಿಸಿ ತಟ್ಟಿಲ್ಲ, ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ ಕಾಲೇಜಿಗೆ ಮೊದಲ ದಿನ ರಜೆ ನೀಡಿದ್ದೆವು, ಜ.9ರಂದು ಬಂದ್ ಪರಿಣಾಮ ಇರಲಾರದು. ಹಾಗಾಗಿ ಬುಧವಾರ ಶಾಲೆ, ಕಾಲೇಜುಗಳು ಕಾರ್ಯನಿರ್ವಹಿಸಲಿವೆ ಎಂದು ದ.ಕ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ತಿಳಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿಯೂ ಶಾಲೆ, ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.

ಬಂದ್‌ನಿಂದ ಜನರಿಗೆ ತೊಂದರೆಯಾಗಿದ್ದಕ್ಕೆ ವಿಷಾದವಿದೆ. ಸರ್ಕಾರದ ಜನವಿರೋಧಿ ನೀತಿಗಳ ಬಗ್ಗೆ ಜನರಲ್ಲಿ ಅತೃಪ್ತಿ ಇದ್ದು, ನಾವು ಕರೆ ನೀಡಿದ ಮುಷ್ಕರ ಸ್ವಯಂಪ್ರೇರಿತ ಬಂದ್ ರೂಪ ಪಡೆದು ಯಶಸ್ವಿಯಾಗಿದೆ.
-ಬಾಲಕೃಷ್ಣ ಶೆಟ್ಟಿ, ಸಿಐಟಿಯು ಮುಖಂಡ, ಉಡುಪಿ