ಭರತ ಚಕ್ರವರ್ತಿಯ ಆಡಂಬರದ ದಿಗ್ವಿಜಯ

ಧರ್ಮಸ್ಥಳ: ಜಗದ ಷಡ್ಖಂಡಗಳನ್ನೂ ತನ್ನ ಆಡಳಿತಕ್ಕೆ ತೆಗೆದುಕೊಳ್ಳುವ ಮಹಾತ್ವಾಕಾಂಕ್ಷೆಯ ಭರತ ಚಕ್ರವರ್ತಿಯ ಆಡಂಬರದ ದಿಗ್ವಿಜಯ ಯಾತ್ರೆಯನ್ನು ಕಣ್ಣಿಗೆ ಕಟ್ಟುವಂತೆ ಪ್ರಸ್ತುತಪಡಿಸಿದ್ದು ಮೂರನೇ ದಿನದ ಪಂಚಮಹಾವೈಭವ.

ತ್ಯಾಗದತ್ತ ಆದಿನಾಥ ಮಹಾರಾಜರು ತೆರಳಿದ ಬಳಿಕ ಭರತ ಖಂಡವು ಸಮೃದ್ಧಿಯಿಂದ ಇರುತ್ತದೆ. ಮಹಾರಾಜರು ನಾಟ್ಯ, ಸಂಗೀತಗಳನ್ನು ಆಯೋಜಿಸುತ್ತಾ ಜನರನ್ನು ಸಂತೋಷ ಪಡಿಸುತ್ತಿರುತ್ತಾನೆ. ಈ ಸಂದರ್ಭ ಭರತನಿಗೆ ಮೂರು ಆನಂದದಾಯಕ ಸಂಗತಿಗಳು ಎದುರಾಗುತ್ತವೆ.
ಭರತನು ಪುರೋಹಿತರಲ್ಲಿ ಮೊದಲ ಸುದ್ದಿ ಕೇಳಿದಾಗ, ಅವರು ಪರಿನಿಷ್ಕರಮಣಕ್ಕೆ ತೆರಳಿರುವ ವೃಷಭದೇವರಿಗೆ ಕೇವಲ ಜ್ಞಾನ ಪ್ರಾಸ್ತಿಯಾದ ಸುದ್ದಿ ವಿವರಿಸುತ್ತಾರೆ. ಎರಡನೆಯದಾಗಿ ಭರತನ ಶಸ್ತ್ರಾಗಾರದಲ್ಲಿ ಚಕ್ರರತ್ನ ಉದಯಿಸಿದ ಸುದ್ದಿ ತಿಳಿಸುತ್ತಾನೆ. ಬಳಿಕ ಮಹಿಳೆಯು ಭರತನ ಅಂತಃಪುರದಲ್ಲಿ ಪುತ್ರರತ್ನ ಪ್ರಾಪ್ತಿಯಾದ ಸುದ್ದಿ ತಿಳಿಸುತ್ತಾಳೆ. ಅಂದರೆ ಸುಭದ್ರಾದೇವಿಯು ಪುತ್ರ ಅರ್ಕಕೀರ್ತಿಗೆ ಜನ್ಮ ನೀಡಿರುತ್ತಾಳೆ.

ಬಳಿಕ ಭರತೇಶನು ಮೊದಲಿಗೆ ವೃಷಭದೇವ ಕೇವಲ ಜ್ಞಾನ ಪಡೆದ ಸ್ಥಳಕ್ಕೆ ಭೇಟಿ ನೀಡಿ, ಸಮವಸರಣದಲ್ಲಿ ಭಾಗಿಯಾಗಿ, ಬಳಿಕ ಕ್ರಮವಾಗಿ ಎರಡೂ ಕಡೆಗಳಿಗೂ ಭೇಟಿ ನೀಡಿ ಸಂಭ್ರಮಿಸುತ್ತಾನೆ. ಈ ಸಂಭ್ರಮವು 9 ದಿನಗಳ ಕಾಲ ನವರಾತ್ರಿಯಾಗಿ ಆಚರಣೆಯಾಗಲಿ ಎಂದು ಆದೇಶಿಸಿ, ತನ್ನ ಆಪ್ತ ವರ್ಗದ ಸಲಹೆಯಂತೆ ವಿಜಯ ದಶಮಿಯ ದಿನ ಷಡ್ಖಂಡಗಳನ್ನು ಗೆಲ್ಲುವುದಕ್ಕಾಗಿ ಅಹಿಂಸಾತ್ಮಕ ದಿಗ್ವಿಜಯ ಯಾತ್ರೆ ಕೈಗೊಳ್ಳುತ್ತಾನೆ.

ಚಕ್ರರತ್ನದೊಂದಿಗೆ ರಥಾರೂಢನಾದ ಭರತೇಶ: ಶಸ್ತ್ರಾಗಾರದಲ್ಲಿ ಚಕ್ರರತ್ನ ಉದಯಿಸಿದ ಬಳಿಕ ಪುರೋಹಿತರ ಸಲಹೆಯಂತೆ ತನ್ನ ಸಮಸ್ತ ಚತುರಂಗಬಲದೊಂದಿಗೆ ಚಕ್ರರತ್ನವನ್ನೂ ಮುನ್ನೆಲೆಯಲ್ಲಿರಿಸಿ ರಥಾರೂಢನಾಗಿ ಹೊರಡುವ ಭರತೇಶ, ಆತನ ಸೇನಾಪಡೆಯ ಗಾಢತೆಯನ್ನು ಪರಿಚಯಿಸಿತು. ಅಂಗ, ವಂಗ, ಕಳಿಂಗ, ಕಾಂಭೋಜ, ಕಾಂತಾರ, ಕೇರಳ, ಕೊಂಕಣ, ಗಾಂಧಾರ ಮಗಧ ಕಾಶಿ ಹೀಗೆ 55 ದೇಶಗಳನ್ನೂ ಗೆದ್ದು ವೃಷಭಾಚಲ ಪರ್ವತವೇರಿ, ಅಲ್ಲಿನ ಶಾಸನದಲ್ಲಿದ್ದ ಹೆಸರು ಅಳಿಸಿ, ತನ್ನ ಹೆಸರು ಬರೆಯಿಸಿ ಅಯೋಧ್ಯಾನಗರಿ ಪ್ರವೇಶಕ್ಕೆ ಅಣಿಯಾಗುವಲ್ಲಿಗೆ ಚಕ್ರರತ್ನ ನಿಲ್ಲುತ್ತದೆ. ಇದಕ್ಕೇನು ಕಾರಣವೆನ್ನುವ ಪ್ರಶ್ನೆ, ಇನ್ನೂ ಗೆಲ್ಲುವುದು ಬಾಕಿ ಇದೆ, ನಿನ್ನ ತಮ್ಮಂದಿರನ್ನು ಗೆದ್ದಾಗಿಲ್ಲ ಎಂಬಲ್ಲಿಗೆ ಭರತನ ಸವಾಲು ವಿಸ್ತರಿಸುತ್ತದೆ.

ಭರತ-ಬಾಹುಬಲಿಯ ಹಿನ್ನೆಲೆ, ಅವರ ಬದುಕಿನ ಪರಿಚಯ ನೀಡುವ ಅಂಗವಾಗಿ ಹಮ್ಮಿಕೊಂಡಿರುವ ಐದು ದಿನಗಳ ವಿಶಾಲ ಸಂಗೀತ-ನೃತ್ಯ-ನಾಟಕ ಎಲ್ಲವನ್ನೂ ಒಳಗೊಂಡ ರೂಪಕ ಪ್ರಕಾರ ಪಂಚಮಹಾವೈಭವ. ಮೊದಲೆರಡು ದಿನ ನವಯುಗಾರಂಭ, ಆದಿನಾಥ ಮಹಾರಾಜರ ಆಡಳಿತದ ವೈಭವ, ಅವರ ಮಕ್ಕಳ ಬಾಲಲೀಲೆ, ಅವರ ಶಿಕ್ಷಣ, ಆದಿನಾಥರ ಮಕ್ಕಳಿಗೆ ಅರಸೊತ್ತಿಗೆ ನೀಡುವುದು, ಬಳಿಕ ತ್ಯಾಗದೆಡೆಗೆ ಹೋಗುವ ಕಥೆಯನ್ನು ಕಟ್ಟಿಕೊಟ್ಟಿದ್ದರೆ ಮೂರನೇ ದಿನದಂದು ಭರತನ ಬದುಕಿನ ವೈಭವಕ್ಕೆ ಮೀಸಲಾಗಿತ್ತು. ಅಯೋಧ್ಯೆಯನ್ನಾಳುವ ಭರತನಿಗೆ ತ್ರಿವಿಧ ರತ್ನಗಳು ಪ್ರಾಪ್ತವಾದ ಬಳಿಕ ಚಕ್ರರತ್ನದ ಉದ್ದೇಶ ದಿಗ್ವಿಜಯ ಎನ್ನುವುದನ್ನು ರಾಜಪುರೋಹಿತರು ಮನದಟ್ಟು ಮಾಡುತ್ತಾರೆ.

ಸುಡುಬಿಸಿಲು, ಧೂಳಿನ ನಡುವೆಯೂ ಅಯೋಧ್ಯಾಪತಿ ಭರತ ಚಕ್ರವರ್ತಿಗಳಿಗೆ ಜಯವಾಗಲಿ, ಅಯೋಧ್ಯಾಧೀಶರಿಗೆ ಜಯವಾಗಲಿ ಎಂಬ ಬಹುಪರಾಕಿನ ನುಡಿಗಳೊಂದಿಗೆ ದಿಗ್ವಿಜಯ ಯಾತ್ರೆ ಸಾಗಿತು. ರಾಜಭಟರು ಭರತ ಚಕ್ರವರ್ತಿಗೆ ಜಯಘೋಷ ಮಾಡುವುದರೊಂದಿಗೆ ಇತರ ದೇಶದ ಅರಸರು ಕಪ್ಪಕಾಣಿಕೆಗಳನ್ನೊಪ್ಪಿಸುವಂತೆ ಆಜ್ಞಾಪಿಸುತ್ತಾ ಸಾಗಿದರು. 55 ದೇಶಗಳನ್ನು ಗೆದ್ದು ಬೀಗುತ್ತಾ ಮರಳಿ ಬರುವಾಗ ರಾಶಿ ರಾಶಿ ಕಪ್ಪಕಾಣಿಕೆಯುಳ್ಳ ರಥ, ಪಲ್ಲಕ್ಕಿಗಳು, ಶರಣಾದ ರಾಜವಂಶಗಳ ಪ್ರತಿನಿಧಿಗಳು ಯಾತ್ರೆಗೆ ಸೇರಿಕೊಂಡರು.

ಭರತೇಶನ ಅಹಂಗೆ ಚ್ಯುತಿ: ದಿಗ್ವಿಜಯ ಯಾತ್ರೆಯಲ್ಲಿ ಮರಳಿ ಬರುವಾಗ ದಾರಿಯಲ್ಲಿದೆ ವೃಷಭಾಚಲ. ಅಲ್ಲಿರುವ ಶಾಸನದಲ್ಲಿ ಚಕ್ರವರ್ತಿಗೆ ತನ್ನ ಹೆಸರು ಕೆತ್ತಿಸುವಾಸೆ. ಅದರಂತೆ ತನ್ನ ಮಂತ್ರಿಗಳೊಂದಿಗೆ ವೃಷಭಾಚಲವೇರಿ, ನಿಂತು ನೋಡಿದರೆ ಶಾಸನದಲ್ಲಿ ಅನೇಕ ಶೂರರ ಹೆಸರಿದೆ, ತನ್ನ ಹೆಸರು ಕೆತ್ತಿಸುವುದಕ್ಕೆ ಸ್ಥಳವಿಲ್ಲ. ಅದನ್ನು ಅಳಿಸಿ ವೀರಾಧಿವೀರನಾದ ತನ್ನ ಹೆಸರು ಕೆತ್ತಿಸಲು ಮುಂದಾಗುತ್ತಾನೆ. ಆಗ ಶಾಸನದೇವತೆಗಳ ಅಶರೀರವಾಣಿ, ಇಂತಹ ಕೃತ್ಯಕ್ಕೆ ಇಳಿಯುವುದು ತರವಲ್ಲ, ಒಂದು ವೇಳೆ ಕೆತ್ತಿದರೂ ಮುಂದೆ ಇನ್ನಾರೋ ಶೂರರು ನಿನ್ನ ಹೆಸರನ್ನು ಹೀಗೆಯೇ ಅಳಿಸಿಯಾರು ಎಂಬ ಎಚ್ಚರಿಕೆ, ಅಲ್ಲಿಗೆ ಭರತನಿಗೆ ಒಂದಷ್ಟು ಅಹಂ ಅಳಿಯುತ್ತದೆ, ಆದರೂ ತನ್ನ ಹೆಸರನ್ನು ಕೆತ್ತಿಸಿಯೇ ಯಾತ್ರೆ ಮುಂದುವರಿಸುತ್ತಾನೆ. ಇನ್ನೇನು ಅಯೋಧ್ಯಾಪುರದ ಪ್ರವೇಶವಾಗಬೇಕು ಎನ್ನುವಾಗ ತಿರುಗುತ್ತಾ ಸಾಗುವ ಚಕ್ರರತ್ನ ನಿಲ್ಲುತ್ತದೆ.
ಇನ್ನೂ ಎಲ್ಲರನ್ನೂ ಗೆದ್ದಾಗಿಲ್ಲ, ಸೋದರ ಬಾಹುಬಲಿಯನ್ನು ಗೆಲ್ಲಲಿಲ್ಲ ಎನ್ನುವ ಮಾಹಿತಿ ಬರುತ್ತದೆ, ಆತನನ್ನು ಶರಣಾಗುವಂತೆ ಸೂಚಿಸಲು ಮಂತ್ರಿಯನ್ನು ಕಳುಹಿಸುತ್ತಾನೆ.

ಕಳೆ ಹೆಚ್ಚಿಸಿದ ಕಲಾ ತಂಡಗಳು: ದಿಗ್ವಿಜಯ ಯಾತ್ರೆ ಹೆಸರಿದ್ದರೂ ಅರಸೊತ್ತಿಗೆ ನೆನಪಿಸುವ ಸೈನಿಕರು, ಕಾಲಾಳುಗಳೊಂದಿಗೆ ಜಾನಪದ ಸಿರಿವಂತಿಕೆ ಮೆರೆಯುವ ಹಲವು ಕಲಾತಂಡಗಳೂ ಮೆರವಣಿಗೆಯ ಸೊಗಸು ಹೆಚ್ಚಿಸಿದವು. ಅಯೋಧ್ಯೆಯಿಂದ ಹೊರಟ ಯಾತ್ರೆಯಲ್ಲಿ ತಾಲೀಮು, ಕೊಂಬು, ಕಹಳೆ, ಬಿರುದಾವಳಿ, ಘಟೋದ್ಘಜ, ಈಟಿ-ಗುರಾಣಿ ಹೊತ್ತ, ಕತ್ತಿ ಗುರಾಣಿ ಹಿಡಿದ ಸೈನಿಕರು, ನಗಾರಿ, ಜಟ್ಟಿಗಳು, ಡೊಳ್ಳು ಕುಣಿತ, ಕಾಡು ಮನುಷ್ಯರು, ಚೆಂಡೆ, ಪುರವಾಂತಿಕೆ, ನಾಸಿಕ್ ಬ್ಯಾಂಡ್, ಮರಾಠ ವಾರಿಯರ್ಸ್‌, ಜಗ್ಗಳಿಕೆ, ಶಂಖದಾಸರು, ಬಣ್ಣದ ಕೊಡೆಗಳು, ದೇವರ ಟ್ಯಾಬ್ಲೋ ಕೇರಳ ಚೆಂಡೆ, ಧ್ವಜ, ಕುದುರೆ ತಂಡಗಳು ಯಾತ್ರೆಗೆ ವೈಭವ ಒದಗಿಸಿದವು. ಮೂವರು ಸಾವಿರಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದ್ದರು.

ಜನರ ಅಚ್ಚರಿ ಸಂಭ್ರಮ: ವೇದಿಕೆಯಲ್ಲಿ ನಡೆದಿದ್ದ ಪಂಚಮಹಾವೈಭವ ಬುಧವಾರ ಮೊದಲ ಬಾರಿಗೆ ರಸ್ತೆಯಲ್ಲಿ ಪ್ರದರ್ಶನಗೊಂಡಿದ್ದು ಜನರನ್ನು ಅಚ್ಚರಿಗೊಳಿಸಿತು. ಪೌರಾಣಿಕ ಕಾಲದ ರಾಜರುಗಳ ಸೈನ್ಯವನ್ನೇ ಪ್ರತಿಬಿಂಬಿಸುವಂತಹ ಸೈನಿಕರು, ಕುದುರೆ, ಕಾಲಾಳುಗಳನ್ನು ಒಳಗೊಂಡ ದಿಗ್ವಿಜಯ ಯಾತ್ರೆಯನ್ನು ಜನ ಕಣ್ತುಂಬಿಕೊಂಡರು. ಅದರಲ್ಲೂ ಭರತನ ದಿಗ್ವಿಜಯ ರಥ, ಅದರ ಮುಂದೆ ತಿರುಗುವ ಚಕ್ರರತ್ನವೂ ಗಮನ ಸೆಳೆಯಿತು. ಸಾಮಾನ್ಯ ಶೋಭಾಯಾತ್ರೆಗಿಂತ ಭಿನ್ನವಾಗಿ ಸಾಗಿ ಬಂದ ದಿಗ್ವಿಜಯ ಯಾತ್ರೆಯನ್ನು ಧರ್ಮಸ್ಥಳದಿಂದ ಶಾಂತಿವನ ವರೆಗೂ ಜನ ಇಕ್ಕೆಲಗಳಲ್ಲಿ ನಿಂತು ವೀಕ್ಷಿಸಿದರು.

ವೀಕ್ಷಿಸಿ ಸಂಭ್ರಮಿಸಿದ ಹೆಗ್ಗಡೆ ಕುಟುಂಬ: ಧರ್ಮಸ್ಥಳವನ್ನೇ ಬೆರಗುಗೊಳಿಸಿದ ಈ ರೂಪಕಯಾತ್ರೆಯನ್ನು ಡಾ.ವೀರೇಂದ್ರ ಹೆಗ್ಗಡೆ ಮತ್ತು ಕುಟುಂಬದವರು ಧರ್ಮಸ್ಥಳ ಪ್ರವೇಶ ದ್ವಾರದ ಬಳಿ ವೀಕ್ಷಿಸಿದರು. ದಿಗಂಬರ ಮುನಿಗಳು, ಆರ್ಯಿಕಾ ಮಾತಾಜಿಗಳು,ಅಸಂಖ್ಯ ಶ್ರಾವಕ, ಶ್ರಾವಕಿಯರು, ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತು ಹೊಂಬುಜ ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ವೀಕ್ಷಿಸಿದರು. ದಿಗ್ವಿಜಯ ಯಾತ್ರೆ ಮರಳುವಾಗ ಹೆಗ್ಗಡೆಯವರ ಪುತ್ರಿ ಶ್ರದ್ಧಾ, ಅಳಿಯ ಅಮಿತ್ ದಂಪತಿ, ಹರ್ಷೇಂದ್ರ ಕುಮಾರ್ ಪುತ್ರರಾದ ಶ್ರೇಯಸ್ ಹಾಗೂ ನಿಶ್ಚಲ್, ಸುರೇಂದ್ರ ಕುಮಾರ್ ಪುತ್ರಿಯರಾದ ಶ್ರುತ, ಅವರ ಪತಿ ಜಿತೇಶ್, ಮೈತ್ರಿ ಹಾಗೂ ಪತಿ ಸಿದ್ಧೇಶ್ ಸಹಿತ ಹಲವು ಕುಟುಂಬದ ಮಂದಿಯೂ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಇಂದು ಧರ್ಮಸ್ಥಳದಲ್ಲಿ ಗ್ರಂಥಗಳ ಬಿಡುಗಡೆ: ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕ ಕಾರ್ಯಕ್ರಮ ಪ್ರಯುಕ್ತ ಫೆ.14 ಸಾಯಂಕಾಲ 4ಕ್ಕೆ ಅಮೃತವರ್ಷಿಣಿ ಸಭಾಭವನದಲ್ಲಿ ಗ್ರಂಥಗಳ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.
ಪರಮಪೂಜ್ಯ 108 ಶ್ರೀ ಪುಣ್ಯಸಾಗರ ಮಹಾರಾಜರು, ವೀರಪ್ಪ ಮೊಲಿ ವಿರಚಿತ ಗದ್ಯಾನುವಾದ ಬಾಹುಬಲಿ ಅಹಿಂಸಾ ದಿಗ್ವಿಜಯ, ಪರಮಪೂಜ್ಯ 108 ಶ್ರೀ ಸಿದ್ಧಸೇನಾಚಾರ್ಯ ಮುನಿಮಹಾರಾಜರು, ಎಸ್.ಎಸ್ ಉಕ್ಕಾಲಿ ಮುಧೋಳ ವಿರಚಿತ ಆದಿಪುರಾಣ, ಪರಮಪೂಜ್ಯ 10 ಶ್ರೀ ವೀರಸಾಗರ ಮುನಿಮಹಾರಾಜರು, ಧರ್ಮಸ್ಥಳ ಶ್ರೀ ಗೊಮಟೇಶ್ವರ ಚರಿತ್ರೆ ಗ್ರಂಥಗಳನ್ನು ಅನಾವರಣ ಮಾಡುವರು. ಹೆಗ್ಗಡೆಯವರ ಪಟ್ಟಾಭಿಷೇಕ ಸುವರ್ಣ ಮಹೋತ್ಸವದ ಗ್ರಂಥಮಾಲೆಯನ್ನು (ಸುವರ್ಣ ಸಂಚಯ)ವೀರಪ್ಪ ಮೊಲಿ ಬಿಡುಗಡೆ ಮಾಡುವರು.
ಡಾ.ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ನಾಡೋಜ ಹಂಪಾ ನಾಗರಾಜಯ್ಯ, ನಾಡೋಜ ಕಮಲಾ ಹಂಪನಾ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾಪಂ ಅಧ್ಯಕ್ಷೆ ದಿವ್ಯಜ್ಯೋತಿ, ಧರ್ಮಸ್ಥಳ ಗ್ರಾಪಂ ಅಧ್ಯಕ್ಷ ಚಂದನ್ ಕಾಮತ್ ಮೊದಲಾದವರು ಭಾಗವಹಿಸಲಿದ್ದಾರೆ. ಸಾಯಂಕಾಲ 7ರಿಂದ ರಮೇಶ್ಚಂದ್ರ ಬೆಂಗಳೂರು ಸಂಯೋಜನೆಯಲ್ಲಿ ಜಾನಪದ ಗೀತ ಮಾಧುರ್ಯ ನಡೆಯಲಿದೆ.