ಕೆ.ಆರ್.ಪೇಟೆ: ವಿದ್ಯಾರ್ಥಿಗಳು ಹಾಗೂ ಯುವಜನರಲ್ಲಿ ಸೇವಾ ಮನೋಭಾವನೆ, ಶಿಸ್ತು, ಸಂಯಮ ಮತ್ತು ದೇಶಭಕ್ತಿಯನ್ನು ತುಂಬುವ ಕೆಲಸವನ್ನು ಭಾರತ ಸೇವಾದಳ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುತ್ತಿದೆ ಎಂದು ಸಾರಂಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ದಿನೇಶ್ ಹೇಳಿದರು.
ತಾಲೂಕಿನ ಬೆಡದಹಳ್ಳಿಯ ಶ್ರೀ ಪಂಚಭೂತೇಶ್ವರ ಕ್ಷೇತ್ರದಲ್ಲಿ ಭಾರತ ಸೇವಾದಳದ ಸಹಯೋಗದಲ್ಲಿ ಆಯೋಜಿಸಿದ್ದ ಒಂದು ತಿಂಗಳ ವಸತಿ ಸಹಿತ ಉಚಿತ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
50ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಒಗ್ಗೂಡಿಸಿ 30 ದಿನ ಶಿಬಿರದಲ್ಲಿ ಭಾಗವಹಿಸುವಂತೆ ಮಾಡಲಾಗಿದ್ದು, ಇಲ್ಲಿ ಸಂಸ್ಕಾರದೊಂದಿಗೆ ಸಮಗ್ರ ವ್ಯಕ್ತಿತ್ವ ರೂಪಿಸುವ ದಿಕ್ಕಿನಲ್ಲಿ ಮಕ್ಕಳನ್ನು ಅಣಿಗೊಳಿಸಲಾಗಿದೆ. ಗ್ರಾಮೀಣ ಮಕ್ಕಳು ನಾಲ್ಕು ಗೋಡೆಗಳ ಬಂಧನದಿಂದ ಮುಕ್ತರಾಗಿ ಹಲವು ಕಲಿಕೆಗಳನ್ನು ಕಲಿಯುವ ಮೂಲಕ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ ಎಂದರು.
ಬೆಡದಹಳ್ಳಿ ಪಂಚಭೂತೇಶ್ವರ ಮಠದ ಪೀಠಾಧಿಪತಿಗಳಾದ ಶ್ರೀ ರುದ್ರಮುನಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಭಾರತೀಪುರ ಗ್ರಾಮ ಪಂಚಾಯಿತಿ ಸದಸ್ಯ ಸುನೀಲ್, ಶ್ರೀ ಮಠದ ಕಾರ್ಯದರ್ಶಿ ಕಾಂತರಾಜು, ಶಿಬಿರದ ಸಂಚಾಲಕ ಕಾಡುಮೆಣಸ ಚಂದ್ರು, ಖಜಾಂಚಿ ಮಹೇಶ್ ಇದ್ದರು.