ನಾಟಿಂಗ್​ಹ್ಯಾಂನಲ್ಲಿ ‘ಭಾರತ್​’ ಬಾಲಿವುಡ್​ ಸಿನಿಮಾ ವೀಕ್ಷಿಸಿದ ಟೀಂ ಇಂಡಿಯಾ ಆಟಗಾರರು…

ನಾಟಿಂಗ್​ಹ್ಯಾಂ: ವಿಶ್ವಕಪ್​ನಲ್ಲಿ ಭಾರತ ಕ್ರಿಕೆಟ್​ ತಂಡ ಗೆಲುವಿನ ಓಟದಲ್ಲಿದೆ. ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ, ಎರಡನೇ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾದ ವಿರುದ್ಧವೂ ಜಯ ಸಾಧಿಸಿ ಈ ಬಾರಿಯ ವಿಶ್ವಕಪ್​ ಗೆಲ್ಲುವ ಫೆವರಿಟ್​ ತಂಡ ಎನಿಸಿದೆ.

ಗೆಲುವಿನ ಸಂತಸದಲ್ಲಿರುವ ಕ್ರಿಕೆಟ್​ ಆಟಗಾರರು ಮಂಗಳವಾರ ನಾಟಿಂಗ್​ಹ್ಯಾಂನಲ್ಲಿ ಬಾಲಿವುಡ್​ ಸಿನಿಮಾ ಭಾರತ್​ನ್ನು ಜತೆಯಾಗಿ ವೀಕ್ಷಿಸಿದ್ದಾರೆ. ಸಲ್ಮಾನ್ ಖಾನ್​ ಹಾಗೂ ಕತ್ರೀನಾ ಕೈಫ್​ ಅಭಿನಯದ ಈ ಸಿನಿಮಾ ಕಳೆದ ವಾರ ಈದ್​ ಹಬ್ಬದಂದು ಬಿಡುಗಡೆಯಾಗಿದೆ. ವಿಶ್ವಕಪ್​ ಮೂರನೇ ಪಂದ್ಯಕ್ಕೆ ಸಜ್ಜಾಗುತ್ತಿರುವ ಟೀಂ ಇಂಡಿಯಾ ಆಟಗಾರರು ಭಾರತ್​ ಸಿನಿಮಾ ಮೂಲಕ ಮನರಂಜನೆ ಕಂಡುಕೊಂಡಿದ್ದಾರೆ.

ಆಲ್​ರೌಂಡರ್​ ಕೇದಾರ್​ ಜಾಧವ್​ ಸಲ್ಮಾನ್ ಖಾನ್​ ಅಭಿಮಾನಿಯೆಂದು ತಾವೇ ಹೇಳಿಕೊಂಡಿದ್ದಾರೆ. ಮಂಗಳವಾರ ಮಹೇಂದ್ರ ಸಿಂಗ್​ ಧೋನಿ, ಗಾಯಗೊಂಡು ವಿಶ್ವಕಪ್​ನಿಂದ ಹೊರಬಿದ್ದಿರುವ ಶಿಖರ್​ ಧವನ್​, ಹಾರ್ದಿಕ್​ ಪಾಂಡ್ಯಾ, ಕೆ.ಎಲ್​.ರಾಹುಲ್​ ಸೇರಿ ಇನ್ನೂ ಕೆಲವರು ಜತೆಯಾಗಿ ಸಿನಿಮಾ ವೀಕ್ಷಿಸಿದ್ದಾರೆ. ನಂತರ ತಮ್ಮೆಲ್ಲರ ಫೋಟೋವನ್ನೂ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿರುವ ಜಾಧವ್​, ಭಾರತ್​ ಸಿನಿಮಾ ನೋಡಲು ಆಗಮಿಸಿದ ಭಾರತ ತಂಡ ಎಂದು ಕ್ಯಾಪ್ಷನ್​ ನೀಡಿದ್ದಾರೆ.

ನಾಳೆ ನಾಟಿಂಗ್​ಹ್ಯಾಂನಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್​ ವಿರುದ್ಧ ತನ್ನ ಮೂರನೇ ಪಂದ್ಯ ಆಡಲಿದೆ.

Leave a Reply

Your email address will not be published. Required fields are marked *