ಬಂದ್​ಗೆ ಶಿವಮೊಗ್ಗ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ

ಶಿವಮೊಗ್ಗ: ತೈಲ ಬೆಲೆ ಏರಿಕೆ ಖಂಡಿಸಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್​ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೊಷಿಸಲಾಗಿತ್ತು. ಸರ್ಕಾರಿ ಹಾಗೂ ಖಾಸಗಿ ಬಸ್​ಗಳು ಬೆಳಗ್ಗೆಯಿಂದ ಸಂಜೆವರೆಗೂ ರಸ್ತೆಗಿಳಿಯಲಿಲ್ಲ. ಇದನ್ನು ಹೊರತುಪಡಿಸಿದರೆ ಜಿಲ್ಲೆಯಲ್ಲಿ ಜನ ಜೀವನ ಸಹಜ ಸ್ಥಿತಿಯಲ್ಲಿತ್ತು.

ತೀರ್ಥಹಳ್ಳಿಯಲ್ಲಿ ಬಂದ್ ಸಂಪೂರ್ಣ ಯಶಸ್ವಿಯಾಗಿತ್ತು. ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಕಾರ್ಗಲ್​ನಲ್ಲೂ ಬಂದ್​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ತಾಳಗುಪ್ಪದಲ್ಲಿ ಜನರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಆಯನೂರು, ರಿಪ್ಪನ್​ಪೇಟೆ, ಹೊಸನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಶಿವಮೊಗ್ಗದಲ್ಲಿ ಬೆಳಗ್ಗೆಯಿಂದ ಪ್ರಮುಖ ವಾಣಿಜ್ಯ ಕೇಂದ್ರಗಳಾದ ಗಾಂಧಿ ಬಜಾರ್, ನೆಹರು ರಸ್ತೆ, ದುರ್ಗಿಗುಡಿ ಮುಂತಾದ ಭಾಗಗಳಲ್ಲಿ ಕೆಲ ಅಂಗಡಿಗಳು ಮುಚ್ಚಲ್ಪಟ್ಟಿದ್ದವು. ಮಧ್ಯಾಹ್ನದ ನಂತರ ವ್ಯಾಪಾರಿ ಕೇಂದ್ರಗಳು ಸಹಜ ಸ್ಥಿತಿಗೆ ಮರಳಿದವು. ಬೆಳಗ್ಗೆಯಿಂದಲೂ ನಗರದ ವ್ಯಾಪ್ತಿಯಲ್ಲಿ ಆಟೋ ಸಂಚಾರ ಇತ್ತು. ಸರ್ಕಾರಿ ಕಚೇರಿಗಳು ತೆರೆದಿದ್ದರೂ ಸಾರ್ವಜನಿಕರು ಎಂದಿಗಿಂತಲೂ ಕಡಿಮೆಯಿದ್ದರು.

ತಾಲೂಕು ಹಾಗೂ ಹೋಬಳಿ ಕೇಂದ್ರಗಳಲ್ಲಿ ಕಾಂಗ್ರೆಸ್ ಪ್ರಮುಖರು ಪ್ರತಿಭಟನೆ ನಡೆಸಿದರು. ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಂಜೆ ವೇಳೆಗೆ ಸಹಜ ಸ್ಥಿತಿಗೆ: ಶಿವಮೊಗ್ಗ ನಗರದಲ್ಲಿ ಬಹುತೇಕ ವಾಣಿಜ್ಯೋದ್ಯಮಿಗಳು ಕಾದು ನೋಡುವ ತಂತ್ರಕ್ಕೆ ಶರಣಾಗಿದ್ದು ವಿಶೇಷವಾಗಿತ್ತು. ಬೆಳಗ್ಗೆಯಿಂದ ಬಂದ್​ನ ಪ್ರಭಾವ ಹೇಗಿದೆ ಎಂದು ನಿಧಾನವಾಗಿ ತಿಳಿದುಕೊಳ್ಳುವ ಪ್ರಯತ್ನವನ್ನು ಹಲವರು ಮಾಡಿದರು. ಬೆಳಗ್ಗೆ 11ರ ವೇಳೆಗೆ ಪ್ರತಿಭಟನೆಯ ಕಾವು ಅಷ್ಟಾಗಿ ಕಾಣದ ಕಾರಣ ಕ್ರಮೇಣವಾಗಿ ಅಂಗಡಿ ಮುಂಗಟ್ಟು ತೆರೆಯಲಾಯಿತು. ಸಂಜೆ 4ರ ವೇಳೆಗೆ ವ್ಯಾಪಾರ ವಹಿವಾಟು ಸಹಜ ಸ್ಥಿತಿಗೆ ಮರಳಿದವು. ಖಾಸಗಿ ಬಸ್ ಹಾಗೂ ಕೆಎಸ್​ಆರ್​ಟಿಸಿ ಬಸ್ ಸಂಚಾರ ಸಂಜೆ 5ರ ವೇಳೆಗೆ ಆರಂಭವಾಯಿತು.

ಪೊಲೀಸರ ಗಸ್ತು: ಬಂದ್ ಹಿನ್ನೆಲೆಯಲ್ಲಿ ಯಾವುದೆ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಪೊಲೀಸ್ ಇಲಾಖೆ ವ್ಯಾಪಕ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿತ್ತು. ಜಿಲ್ಲೆಯಲ್ಲಿ ಬಿಗಿ ಪೊಲೀಸ್ ಭದ್ರತೆ ವ್ಯವಸ್ಥೆ ಮಾಡಲಾಗಿತ್ತು. ಗಸ್ತು ವ್ಯವಸ್ಥೆಯನ್ನು ಬಿಗಿಗೊಳಿಸಿತ್ತು. ಶಿವಮೊಗ್ಗದಲ್ಲಿ ಭದ್ರತಾ ಮೇಲುಸ್ತುವಾರಿ ನೋಡಿಕೊಳ್ಳಲು ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಸಿಸಿ ಕ್ಯಾಮರಾಗಳನ್ನು ಒಳಗೊಂಡ ದಿವ್ಯ ದೃಷ್ಟಿ ವಾಹನವನ್ನು ಕೂಡ ಬಳಸಿಕೊಳ್ಳಲಾಗಿತ್ತು. ನಗರದ ಪ್ರಮುಖ ವೃತ್ತಗಳಲ್ಲಿ , ಕೆಎಸ್​ಆರ್​ಟಿಸಿ ಹಾಗೂ ಖಾಸಗಿ ಬಸ್ ನಿಲ್ದಾಣಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು.

ವಿವಿಧ ಸಂಘಟನೆಗಳಿಂದ ಪ್ರತಿಭಟನೆ: ಇಂಧನ ಬೆಲೆ ಏರಿಕೆಯಾಗಿರುವುದರಿಂದ ಆಟೋ ರಿಕ್ಷಾ ಬಾಡಿಗೆ ದರ ಪರಿಷ್ಕರಿಸುವಂತೆ ಒತ್ತಾಯಿಸಿ ಶಿವಮೊಗ್ಗ ಸ್ಮಾರ್ಟ್ ಸಿಟಿ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

2015ರಲ್ಲಿ ಆಟೋ ರಿಕ್ಷಾ ದರ ಅಂದರೆ ಕನಿಷ್ಠ ದರ ಮತ್ತು ಪ್ರತಿ ಕಿಲೋಮೀಟರ್ ದರ ನಿಗದಿಯಾಗಿತ್ತು. ಬಳಿಕ ದರ ಹೆಚ್ಚಳವಾಗಿದೆ. 2015ರಲ್ಲಿ ಗ್ಯಾಸ್ ದರ 31 ರೂ. ಇತ್ತು. ಆಗ ಕನಿಷ್ಠ ದರ 25 ರೂ.ಗಳೆಂದು ನಿಗದಿ ಮಾಡಲಾಗಿತ್ತು. ಈಗ ಗ್ಯಾಸ್ ದರ 50 ರೂ. ಇದೆ. ಆಟೋ ರಿಕ್ಷಾ ದರ ಹೆಚ್ಚಳವಾಗದಿರುವುದರಿಂದ ಸಂಕಷ್ಟ ಎದುರಾಗಿದೆ ಎಂದು ತಿಳಿಸಿದರು.

ಆಟೋ ಬಾಡಿಗೆಯಿಂದ ಬರುವ ಆದಾಯದಿಂದ ಗ್ಯಾಸ್ ಖರ್ಚು ಕಳೆದು ಉಳಿಯುವ ಅಲ್ಪ ಆದಾಯದಲ್ಲಿ ಜೀವನ ನಡೆಸುವುದು ಕಷ್ಟವಾಗಿರುವುದರಿಂದ ಪ್ರತಿ ವರ್ಷಕ್ಕೆ ದರ ಕನಿಷ್ಠ 5 ರೂ. ಮತ್ತು ಪ್ರತಿ ಕಿಮೀ ದರವನ್ನು ಸಹ ಹೆಚ್ಚಳ ಮಾಡಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಸಂಘದ ಪ್ರಮುಖರಾದ ಡಿ.ಕೃಷ್ಣಪ್ಪ, ಜೆ.ವಿಶ್ವನಾಥ್, ಎಸ್.ಆರ್.ರವಿ, ಖಲೀಲ್​ಖಾನ್, ಬಾಬು, ಎಸ್.ನೂರುಲ್ಲಾ ಮುಂತಾದವರಿದ್ದರು.

ಕರವೇ ಪ್ರತಿಭಟನೆ: ತೈಲ ಬೆಲೆ ಏರಿಕೆ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಲು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರಮುಖರು ಪ್ರಧಾನ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕಳೆದ ಕೆಲವು ವರ್ಷಗಳಿಂದ ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ ಸೇರಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದೆ. ಇದರಿಂದಾಗಿ ಜನತೆ ಕಂಗಾಲಾಗಿದ್ದಾರೆ. ದೇಶದಲ್ಲಿ ಮಹತ್ವದ ಬದಲಾವಣೆ ತರುವುದಾಗಿ ಆಶ್ವಾಸನೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜನಪರ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು. ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ವೆಂಕಟೇಶ್ ಹೆಗ್ಡೆ, ರಾಜ್ಯ ಸಂಘಟನಾ ಕಾರ್ಯದರ್ಶಿ ಕರಿಬಸಯ್ಯ, ಜಿಲ್ಲಾ ಸಂಚಾಲಕ ವೆಂಕಟೇಶ್, ಪ್ರಮುಖರಾದ ಧನಂಜಯ, ಯೋಗೀಶ್ ಮುಂತಾದವರಿದ್ದರು.