70 ವರ್ಷದ ಕಾಂಗ್ರೆಸ್​ ಸಾಧನೆಯನ್ನು ಬಿಜೆಪಿ 4 ವರ್ಷದಲ್ಲಿ ಮಾಡಿದೆ ಎಂಬುದು ಸತ್ಯ ಎಂದ ರಾಹುಲ್​ ಗಾಂಧಿ

ನವದೆಹಲಿ: ಕಾಂಗ್ರೆಸ್ ಸರ್ಕಾರ​ 70 ವರ್ಷದಲ್ಲಿ ಮಾಡಿದ ಸಾಧನೆಗೂ ಹೆಚ್ಚನ್ನು ಕೇಂದ್ರದ ಬಿಜೆಪಿ ಸರ್ಕಾರ ಕೇವಲ 4 ವರ್ಷದಲ್ಲಿ ಮಾಡಿದೆ ಎಂಬ ಪ್ರಧಾನಿ ಮೋದಿ ಅವರ ವಾದ ಸತ್ಯವೇ ಆಗಿದೆ ಎಂದು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಅವರು ವ್ಯಂಗ್ಯವಾಡಿದರು.

ಇಂಧನ ದರ ಏರಿಕೆ ಹಿನ್ನೆಲೆಯಲ್ಲಿ ಸೋಮವಾರ ಕರೆ ನೀಡಲಾಗಿದ್ದ ಭಾರತ್​ ಬಂದ್​ ಪ್ರತಿಭಟನಾ ರ್ಯಾಲಿಯನ್ನು ಉದ್ದೇಶಿಸಿ ದೆಹಲಿಯ ರಾಮಲೀಲ ಮೈದಾನದಲ್ಲಿ ಮಾತನಾಡಿದ ಅವರು ಪ್ರಧಾನಿ ನೇತೃತ್ವದ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗದುಕೊಂಡರು.

ದೇಶದ್ಯಾಂತ ದ್ವೇಷ ಭಾವನೆ ಹರಡಿದೆ. ಒಬ್ಬ ಭಾರತೀಯ ಇನ್ನೊಬ್ಬರ ಜತೆ ಜಗಳವಾಡುತ್ತಿದ್ದಾನೆ. 70 ವರ್ಷಗಳಲ್ಲಿ ರೂಪಾಯಿ ಮೌಲ್ಯ ಡಾಲರ್​ ಎದರು ಅತ್ಯಂತ ಕೆಳಮಟ್ಟಕ್ಕೆ ತಲುಪಿದೆ. ಇಂಧನ ದರ ಮುಗಿಲು ಮುಟ್ಟುತ್ತಿದೆ. ಅಡುಗೆ ಅನಿಲ ಪ್ರತಿ ಯೂನಿಟ್​ಗೆ 800 ರೂ. ಇದೆ. ದೇಶವು ವಿಭನೆಯಾಗುತ್ತಿದ್ದು, ಕಷ್ಟದ ಪರಿಸ್ಥಿತಿಯಲ್ಲಿದೆ. ಅಲ್ಲದೆ, ಯುವಕರು ಕೂಡ ಇಂತಹ ಪರಿಸ್ಥಿತಿಯಿಂದ ದಣಿದಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.

ಇಂದು ಮತ್ತೆ ಭಾರತೀಯ ರೂಪಾಯಿ ಮೌಲ್ಯ ಅಮೆರಿಕ ಡಾಲರ್​ ಎದುರು ಕುಸಿದಿದ್ದು, 72.67 ರೂ. ರಷ್ಟು ತಲುಪಿದೆ. ವ್ಯಾಪಾರ ಕೊರತೆ ವಿಸ್ತರಣೆ ಹಾಗೂ ಆಮದುದಾರರಿಂದ ಯುಎಸ್​ ಡಾಲರ್​ಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಇತರೆ ಕರೆನ್ಸಿಗಳ ವಿರುದ್ಧ ಡಾಲರ್​ಗೆ ಹೆಚ್ಚಿನ ಬಲ ಬಂದಿದೆ.

ಸಣ್ಣ ವ್ಯವಹಾರಗಳು ನಾಶಗೊಂಡಿವೆ. ನೋಟು ಅಮಾನ್ಯೀಕರಣ ಹಿಂದಿನ ಕಾರಣ ಏನೆಂಬುದು ಇದುವರೆಗೂ ಯಾರಿಗೂ ತಿಳಿದಿಲ್ಲ. ತುಂಬಾ ಜನ ಮೋದಿ ಅವರನ್ನು ನಂಬಿದ್ದಾರೆ. ನಾಲ್ಕು ವರ್ಷಗಳನ್ನು ಪೂರೈಸಿದ್ದು, ಸರ್ಕಾರ ಏನು ಮಾಡಿದೆ ಎಂಬುದನ್ನು ನೋಡಲು ಜನರು ಸಮರ್ಥರಾಗಿದ್ದಾರೆ ಎಂದು ಕಿಡಿಕಾರಿದರು.

ದೇಶಕ್ಕೆ ಏನು ಬೇಕು? ಯುವಕರಿಗೆ ಏನು ಬೇಕು? ಎಂಬುದರ ಬಗ್ಗೆ ಪ್ರಧಾನಿ ಮೋದಿ ಅವರು ಮಾತನಾಡುತ್ತಿಲ್ಲ. ಅವರು ಯಾವ ಜಗತ್ತಿನಲ್ಲಿದ್ದಾರೆ ಎಂಬುದು ಅವರಿಗೇ ಗೊತ್ತಿಲ್ಲ. ಅವರು ಬರೀ ಭಾಷಣಗಳನ್ನು ಮಾಡುತ್ತಿರುತ್ತಾರೆ ಎಂದು ವ್ಯಂಗ್ಯವಾಡಿದರು. (ಏಜೆನ್ಸೀಸ್​)