ರಾಷ್ಟ್ರವ್ಯಾಪಿ ಮುಷ್ಕರಕ್ಕೆ ದೇಶಾದ್ಯಂತ ಮಿಶ್ರ ಪ್ರತಿಕ್ರಿಯೆ: ಹಲವೆಡೆ ಪ್ರತಿಭಟನೆಯಿಂದ ಜನಜೀವನ ಅಸ್ತವ್ಯಸ್ತ

ನವದೆಹಲಿ: ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಎರಡು ದಿನಗಳ ಕಾಲ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ಕೊಟ್ಟಿರುವ ರಾಷ್ಟ್ರವ್ಯಾಪಿ ಮುಷ್ಕರ ಇಂದಿನಿಂದ ಆರಂಭವಾಗಿದ್ದು, ಮೊದಲ ದಿನವೇ ರಾಷ್ಟ್ರಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ದೇಶದ ಹಲವು ನಗರಗಳಲ್ಲಿ ಬಂದ್​ನಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದ್ದು, ಸಾರಿಗೆ ಸಂಚಾರ, ಬ್ಯಾಂಕ್​ ಸೇವೆಯಲ್ಲಿ ವ್ಯತ್ಯಯ ಹಾಗೂ ಇನ್ನಿತರ ಸೇವೆಗಳ ಮೇಲೆ ಪರಿಣಾಮ ಬೀರಿದೆ. ಆದರೆ, ಕೆಲವು ನಗರಗಳಲ್ಲಿ ಜನ ಜೀವನ ಎಂದಿನಂತೆ ಸಾಗಿದ್ದು, ಬಂದ್​ ಯಾವುದೇ ಪರಿಣಾಮ ಬೀರಿಲ್ಲ.

ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ 10 ಕಾರ್ಮಿಕ ಸಂಘಟನೆಗಳು ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ. ಇದರೊಂದಿಗೆ ಮತ್ತಿತರ ಬೇಡಿಕೆಗಳನ್ನು ಸಂಘಟನೆಗಳು ಸರ್ಕಾರದ ಮುಂದಿಟ್ಟಿವೆ.

ದೇಶದೆಲ್ಲೆಡೆ ಹೇಗಿದೆ ಪ್ರತಿಭಟನೆ?
ಕೇಂದ್ರ ಕಾರ್ಮಿಕ ಸಂಘಟನೆಯ ಸದಸ್ಯರು ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿ ಪ್ರಯಾಣಿಕರನ್ನು ತಡೆದು ಪ್ರತಿಭಟನೆಯನ್ನು ನಡೆಸಿದ್ದಾರೆ. ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳನ್ನು ರೂಪಿಸುವಂತೆ ಒತ್ತಾಯಿಸಿದ್ದಾರೆ. ಇದೇ ವೇಳೆ ನಡೆದ ಟ್ರಾಫಿಕ್​ ಚಳವಳಿಯಿಂದ ರಾಷ್ಟ್ರೀಯ ಹೆದ್ದಾರಿ 16ರಲ್ಲಿ ಸಂಚಾರ ಅಸ್ತವ್ಯಸ್ತವಾಯಿತು.

ಪಶ್ಚಿಮ ಬಂಗಾಳದಲ್ಲೂ ಬಂದ್​ ಬಿಸಿ ತಟ್ಟಿದ್ದು, ಪ್ರತಿಭಟನಾಕಾರರು ಹೌರಾದಲ್ಲಿ ರೈಲು ಮಾರ್ಗವನ್ನು ಬಂದ್​​ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜಧಾನಿ ಕೋಲ್ಕತದಲ್ಲಿ ಬಂದ್​ಗೆ ಬೆಂಬಲ ವ್ಯಕ್ತಪಡಿಸಿದ ಸಿಪಿಎಂ ಪಕ್ಷದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಇತ್ತ ಅಸನ್ಸೋಲ್​ನಲ್ಲಿ ನಡೆದ ಪ್ರತಿಭಟನೆಯಲ್ಲಿ ಟಿಎಂಸಿ ಹಾಗೂ ಸಿಪಿಎಂ ಕಾರ್ಯಕರ್ತರ ನಡುವೆ ಸಂಘರ್ಷ ಉಂಟಾದ ಘಟನೆ ನಡೆದಿದೆ.

ಬೃಹತ್​ ಮುಂಬೈ ವಿದ್ಯುತ್ ಸರಬರಾಜು ಮತ್ತು ಸಾರಿಗೆಯ(BEST) ಸಿಬ್ಬಂದಿ ಸೋಮವಾರ ಮಧ್ಯರಾತ್ರಿಯಿಂದಲೇ ಪ್ರತಿಭಟನೆಯನ್ನು ಆರಂಭಿಸಿದ್ದಾರೆ. ಮುಂಬೈ ಮಹಾನಗರ ಪಾಲಿಕೆಯ(BMC) ಪ್ರಮುಖ ಬಜೆಟ್​ನೊಂದಿಗೆ ಬೆಸ್ಟ್​ ಬಜೆಟ್​ ಅನ್ನು ವಿಲೀನಗೊಳಿಸಿ ಉದ್ಯೋಗ ಸೇವೆ ಹಾಗೂ ಇತರ ಸೇವೆಗಳನ್ನು ನೀಡಬೇಕೆಂದು ಒತ್ತಾಯಿಸಿದ್ದಾರೆ.

ಅಸ್ಸಾಂನ ಗುಹಾವಟಿಯಲ್ಲಿ ಪ್ರತಿಭಟನಾಕಾರರು ರೈಲು ತಡೆದು ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿದ್ದಾರೆ. ಇತ್ತ ರಾಷ್ಟ್ರ ರಾಜಧಾನಿಯ ಪತ್ಪರಗಂಜ್​ನಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿ​ ಅಖಿಲ ಭಾರತ ಕಾರ್ಮಿಕ ಸಂಘಟನೆಯ ಒಕ್ಕೂಟ(AICCTU) ಪ್ರತಿಭಟನೆ ನಡೆಸಿ, ಸಾರ್ವಜನಿಕ ಹಾಗೂ ಸರ್ಕಾರಿ ವಲಯದ ಖಾಸಗೀಕರಣವನ್ನು ವಿರೋಧಿಸಿದ್ದಾರೆ. ಅಲ್ಲದೆ, ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳನ್ನು ರೂಪಿಸುವಂತೆ ಒತ್ತಾಯಿಸಿದ್ದಾರೆ.

ದೇವರ ನಾಡು ಕೇರಳಕ್ಕೂ ಭಾರತ್​ ಬಂದ್​ ಬಿಸಿ ತಟ್ಟಿದೆ. ಸಾಮಾಜಿಕ ಭದ್ರತಾ ಯೋಜನೆ, ಕನಿಷ್ಠ ವೇತನಕ್ಕೆ ಒತ್ತಾಯಿಸಿ ವಿವಿಧ ಸಂಘಟನೆಗಳು ಕೊಚ್ಚಿ ಹಾಗೂ ತಿರುವನಂತಪರದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. (ಏಜೆನ್ಸೀಸ್​)