ಭಾರತ್ ಬಂದ್: ರಾಜ್ಯಾದ್ಯಂತ ಮಿಶ್ರ ಪ್ರತಿಕ್ರಿಯೆ

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಐಟಿಯುಸಿ, ಸಿಐಟಿಯು, ಐಎನ್‍ಟಿಯುಸಿ, ಎಲ್‍ಪಿಎಫ್ ಸೇರಿದಂತೆ ಹಲವು ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್‌ಗೆ ರಾಜ್ಯಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೆಂಗಳೂರಿನ ವಿವಿಧೆಡೆ ಪ್ರತಿಭಟನೆ ನಡೆಸಿದ ಕಾರ್ಮಿಕರು ಫ್ರೀಡಂ ಪಾರ್ಕ್‌ ಬಳಿ ಸೇರಿ ತಮ್ಮ ಬೇಡಿಕೆಗೆ ಒತ್ತಾಯಿಸಿದರು. ಈ ವೇಳೆ ಕೆಲ ಕಾರ್ಮಿಕ ಸಂಘಟನೆಗಳು ತಮ್ಮ ತಮ್ಮ ಸಂಘಟನೆಗಳ ಸ್ವಪ್ರತಿಷ್ಠೆ ಮೆರೆದಿದ್ದು ಕಂಡು ಬಂದಿತು.

ಧರಣಿ ವೇಳೆ ಅಂಗನವಾಡಿ ಸಹಾಯಕಿ ಸಾವು

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕು ಶಿಡ್ಲಗುಂಡಿಯಲ್ಲಿ ಪ್ರತಿಭಟನೆ ಅಂಗನವಾಡಿ ಕಾರ್ಯಕರ್ತೆಯನ್ನು ಬಲಿ ಪಡೆದಿದೆ. ಶಾಂತವ್ವ ಚಕ್ರಸಾಲಿ ಎಂಬುವವರು ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಎಲ್ಲೆಲ್ಲಿ ಬಂದ್‌ ಯಶಸ್ವಿ: ಬಾಗಲಕೋಟೆ, ಹುಬ್ಬಳ್ಳಿ, ದಾವಣಗೆರೆ, ಹಾವೇರಿ, ವಿಜಯಪುರ, ಚಿತ್ರದುರ್ಗ.

ಎಲ್ಲೆಲ್ಲಿ ಬಂದ್‌ ವಿಫಲ: ಉಡುಪಿ, ಮಂಡ್ಯ, ರಾಮನಗರ, ದಕ್ಷಿಣಕನ್ನಡ, ಮೈಸೂರು

ಮಿಶ್ರ ಪ್ರತಿಕ್ರಿಯೆ: ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ

ಹುಬ್ಬಳ್ಳಿಯಲ್ಲಿ 144 ಸೆಕ್ಷನ್ ಜಾರಿ

ವಾಣಿಜ್ಯನಗರ ಹುಬ್ಬಳ್ಳಿಯಲ್ಲಿ ಎಐಟಿಯುಸಿ, ಸಿಐಟಿಯು, ಐಎನ್‍ಟಿಯುಸಿ, ಕಳಸಾ ಬಂಡೂರಿ ಹೋರಾಟ ಸಮಿತಿ, ಆಟೋ ಚಾಲಕರ ಮತ್ತು ಮಾಲೀಕರ ಸಂಘಟನೆಯವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು. ಕಾನೂನು ಸುವ್ಯವಸ್ಥೆಗೆ ನಗರದಲ್ಲಿ 144 ಸೆಕ್ಷನ್‌ ಜಾರಿಗೊಳಿಸಲಾಗಿತ್ತು ಮತ್ತು ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.

ಬಾಗಲಕೋಟೆಯಲ್ಲಿ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿ ಬಂದ್‌ಗೆ ಸ್ವಯಂ ಪ್ರೇರಿತರಾಗಿ ಬೆಂಬಲಿಸಿದ್ದರಿಂದ ಜಿಲ್ಲೆಯಾದ್ಯಂತ ಬಸ್ ಸಂಚಾರ ಸ್ತಬ್ಧವಾಗಿತ್ತು. ದಾವಣಗೆರೆಯ ತಾಲೂಕು ಪಂಚಾಯಿತಿಯಲ್ಲಿ ನಡೆಯುತ್ತಿದ್ದ ಕೆಡಿಪಿ ಸಭೆ ರದ್ಧು ಮಾಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ಇದರಿಂದ ಸಭೆ ಅರ್ಧಕ್ಕೆ ಮೊಟಕುಗೊಂಡಿತು. ಇನ್ನು ಏಕಾಏಕಿ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರ ಸ್ಥಗಿತಗೊಳಿಸಿದ್ದರಿಂದ ಗರ್ಭಿಣಿಯೊಬ್ಬರು ಬಸ್​ ನಿಲ್ದಾಣದ ಚೆಂಚ್ ಮೇಲೆ ಮಲಗಿ ಕಾಲಕಳೆದ ಅಮಾನವೀಯ ಘಟನೆ ನಡೆದಿದೆ.

ಹಾವೇರಿಯಲ್ಲಿ ಗೊಟಗೋಡಿ ಗ್ರಾಮದ ಬಳಿ ಇರುವ ಜಾನಪದ ವಿಶ್ವವಿದ್ಯಾಲಯದಲ್ಲಿ ಜ.9 ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ಜನವರಿ 18ಕ್ಕೆ ಮುಂದೂಡಲಾಗಿದೆ. ವಿಜಯಪುರದ ಮುದ್ದೇಬಿಹಾಳದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನಾಕಾರರು ಹಾಗೂ ಪೊಲೀಸರ ಮಧ್ಯೆ ಕೆಲಕಾಲ ವಾಗ್ವಾದ ನಡೆದಿದೆ. ಚಿತ್ರದುರ್ಗದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಕಟ್ಟಡ ಕಾರ್ಮಿಕರು, ಸಿಪಿಐ ಸೇರಿದಂತೆ ಎಐಟಿಯುಸಿ ಸಂಯುಕ್ತ ಸಂಘಟನೆಗಳು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿವು.

ರಾಮನಗರದಲ್ಲಿ ಡಿಸಿಗೆ ಮನವಿ

ಮನಗರದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಕಾರ್ಮಿಕರು ಬೇಡಿಕೆಗಳ ಈಡೇರಿಕೆಗೆ ಜಿಲ್ಲಾಧಿಕಾರಿಗೆ ಮನವಿ ಪತ್ತ ಸಲ್ಲಿಸಿದರು. ಉಡುಪಿ ಜಿಲ್ಲೆಯಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಉಡುಪಿಯ ಸಿಟಿ ಬಸ್​ ನಿಲ್ದಾಣದ ಬಳಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಬಸ್ ಚಾಲಕರು ಮತ್ತು ಕಾರ್ಮಿಕ ಸಂಘಟನೆ ಮುಖಂಡರ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಮಂಡ್ಯದಲ್ಲಿ ಭಾರತ್​ ಬಂದ್​ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಾಹನ ಸಂಚಾರ, ವ್ಯಾಪಾರ ವಹಿವಾಟು ಎಂದಿನಂತೆ ಇತ್ತು. ಮೈಸೂರಿನಲ್ಲಿ ಟೌನ್​ ಹಾಲ್​ ಬಳಿ ಪ್ರತಿಭಟನೆ ಮಾಡಲಾಯಿತು.

ನಾಳೆಯೂ ಸಹ ಸಿಲಿಕಾನ್‌ ಸಿಟಿಯಲ್ಲಿ ಮುಷ್ಕರ ಮುಂದುವರಿಯಲಿದ್ದು, ಫ್ರೀಡಂ ಪಾರ್ಕ್ ನಿಂದ ರಾಜಭವನದವರೆಗೂ ಜಾಥಾ ನಡೆಸಲು ಕಾರ್ಮಿಕ ಸಂಘಟನೆಗಳು ತೀರ್ಮಾನ ತೆಗೆದುಕೊಂಡಿವೆ. ಇಂದಿನಂತೆ ನಾಳೆಯೂ ಬಸ್​ ಸಂಚಾರ ವ್ಯತ್ಯವಾಗುವ ಸಾಧ್ಯತೆ ಇದೆ. ಅತ್ತಿಬೆಲೆ, ಬೊಮ್ಮಸಂದ್ರ, ಜಿಗಣಿ ಕೈಗಾರಿಕಾ ಪ್ರದೇಶಗಳ ಕಾರ್ಖಾನೆಗಳು ನಾಳೆ ಬಂದ್​ ಆಗಲಿವೆ. (ದಿಗ್ವಿಜಯ ನ್ಯೂಸ್‌)