ಭಾರತ್ ಬಂದ್‌ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ

ಬೆಳಗಾವಿ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ದೇಶಾದ್ಯಂತ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಎರಡು ದಿನಗಳ ಭಾರತ್ ಬಂದ್‌ಗೆ ಮೊದಲ ದಿನ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಸ್ ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಒಳಗೊಂಡು ಗ್ರಾಮೀಣ ಪ್ರದೇಶಗಳಲ್ಲಿ ಪ್ರಯಾಣಿಕರು ಸಮಸ್ಯೆ ಎದುರಿಸಿದರು.

ಮತ್ತೊಂದೆಡೆ ಜಿಲ್ಲೆಯಾದ್ಯಂತ ಶಾಲೆ ಕಾಲೇಜುಗಳನ್ನು ಹೊರತು ಪಡಿಸಿ ಸರ್ಕಾರಿ ಕಚೇರಿಗಳು, ನ್ಯಾಯಾಲಯ ಕಲಾಪಗಳು, ಮಾರುಕಟ್ಟೆಗಳಲ್ಲಿ ವ್ಯಾಪಾರು ವಹಿವಾಟು ಎಂದಿನಂತೆ ನಡೆಯಿತು. ಗೋಕಾಕ, ಸವದತ್ತಿ, ರಾಮದುರ್ಗ, ಬೈಲಹೊಂಗಲ, ಹುಕ್ಕೇರಿ. ಚಿಕ್ಕೋಡಿ, ಅಥಣಿ, ಮೂಡಲಗಿ, ಕಿತ್ತೂರು ಒಳಗೊಂಡು ವಿವಿಧ ಪಟ್ಟಣ ಪ್ರದೇಶಗಳಲ್ಲಿ ಖಾಸಗಿ ವಾಹನಗಳು, ಆಟೋಗಳು ಎಂದಿನಂತೆ ಸಂಚರಿಸಿದವು.

ಜಿಲ್ಲೆಯಾದ್ಯಂತ ವಿವಿಧ ಕಡೆ ಮಂಗಳವಾರ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ಸಾರಿಗೆ ಬಸ್ ಸಂಚಾರ, ಬ್ಯಾಂಕ್‌ಗಳ ವಹಿವಾಟು, ಆಟೋಗಳ ಸಂಚಾರ ಸ್ಥಗಿತಗೊಂಡಿತ್ತು. ಬೆಳಗಾವಿ ನಗರ ಒಳಗೊಂಡು ವಿವಿಧ ಪಟ್ಟಣಗಳಲ್ಲಿ ಕಾರ್ಮಿಕ ಸಂಘಟನೆಗಳು ನಡೆಸಿದ ಪ್ರತಿಭಟನೆ ಮೆರವಣಿಗೆ ಸಮಯದಲ್ಲಿ ಆಯಾ ಮಾರ್ಗದಲ್ಲಿನ ಅಂಗಡಿಗಳನ್ನು ಬಂದ್ ಮಾಡಿ ನಂತರ ತೆರೆಯಲಾಯಿತು. ಇದನ್ನು ಹೊರತುಪಡಿಸಿದರೆ ಜನಜೀವನ, ಖಾಸಗಿ ವಾಹನಗಳ ಓಡಾಟ ಎಂದಿನಂತಿತ್ತು. ಆದರೆ, ಸರ್ಕಾರಿ ಕಚೇರಿಗಳಲ್ಲಿ ಜನದಟ್ಟಣೆ ಕಮ್ಮಿ ಇತ್ತು.

ಎರಡು ದಿನಗಳ ಭಾರತ್ ಬಂದ್ ಹಿನ್ನೆಲೆಯಲ್ಲಿ ಮೊದಲ ದಿನದ ಬಂದ್ ಪ್ರತಿಭಟನೆಗೆ ಮಾತ್ರ ಸೀಮಿತವಾಗಿತ್ತು. ಬೆಳಗ್ಗೆ ಗ್ರಾಮೀಣ ಭಾಗಗಳಲ್ಲಿ ಸಾರಿಗೆ ಬಸ್‌ಗಳು ಸಂಚರಿಸಿದವು. ಹೋಟೆಲ್, ಕಿರಾಣಿ ಅಂಗಡಿಗಳು ತೆರೆದಿದ್ದರಿಂದ ಜನಸಾಮಾನ್ಯರಿಗೆ ಯಾವುದೇ ಸಮಸ್ಯೆಯಾಗಲಿಲ್ಲ. ಜಿಲ್ಲೆಯಾದ್ಯಂತ ಬಂದ್ ಶಾಂತಯುತವಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಬಂದೊಬಸ್ತ್ ವ್ಯವಸ್ಥೆಯನ್ನು ಪೊಲೀಸರು ಬಿಗಿಗೊಳಿಸಿದ್ದರು.

ಸಂಘಟನೆಗಳ ಶಕ್ತಿ ಪ್ರದರ್ಶನ

ಭಾರತ್ ಬಂದ್ ನಿಮಿತ್ತ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಎಐಟಿಯುಸಿ, ಎಐಬಿಇಎ, ಎ ಎಸ್‌ಎಂ ಆರ್ ಎ, ಕೆಎಸ್ ಆರ್‌ಟಿಸಿ ಎಐಐಇಎ, ಬಿಎಸ್‌ಎನ್‌ಎಲ್, ಅಂಗನವಾಡಿ, ಆಶಾ ಕಾರ್ಯಕರ್ತರು, ಗ್ರಾಪಂ ಸಿಬ್ಬಂದಿ ಸಂಘ, ಸಿಐಟಿಯು, ಬ್ಯಾಂಕ್ ನೌಕರರು, ಆಟೋ ಚಾಲಕರು ಹಾಗೂ ಮಾಲೀಕರು, ಎಲ್ ಐಸಿ, ಅಂಚೆ ಕಚೇರಿ ಸಿಬ್ಬಂದಿ ಒಳಗೊಂಡು ಒಟ್ಟು 17 ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು. ಬೆಳಗಾವಿ ನಗರದ ಸಂಭಾಜೀ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು. ಮತ್ತೊಂದೆಡೆ ಸಂಘಟನೆಗಳು ತಮ್ಮ ನೂರಾರು ಕಾರ್ಯಕರ್ತರೊಂದಿಗೆ ಶಕ್ತಿ ಪ್ರದರ್ಶನ ಮಾಡಿದವು.

ರಾಜಕೀಯ ಪ್ರೇರಿತ ಬಂದ್

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ದೇಶ್ಯಾದ್ಯಂತ ಕಾಮಿಕರ ಸಂಘಟನೆಗಳು ಕರೆ ನೀಡಿದ್ದ ಬಂದ್‌ಗೆ ಜಿಲ್ಲೆಯ ರೈತಪರ ಸಂಘಟನೆಗಳು ಬೆಂಬಲ ನೀಡದೆ ದೂರ ಉಳಿದಿದ್ದರು. ಕೆಲ ರೈತ ಸಂಘಟನೆಗಳು ಭಾರತ್ ಬಂದ್‌ಗೆ ಸಂಪೂರ್ಣ ವಿರೋಧ ವ್ಯಕ್ತಪಡಿಸಿದವು. ಇದೊಂದು ರಾಜಕೀಯ ಪ್ರೇರಿತ ಬಂದ್ ಆಗಿದ್ದು, ಇದರಿಂದ ಏನೂ ಪ್ರಯೋಜನ ಇಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿ ಮಂಗಳವಾರ ಅಂಗಡಿಗಳು ಬಂದ್

ಬೆಳಗಾವಿ ನಗರದಲ್ಲಿ ಪ್ರತಿ ಮಂಗಳವಾರ ಶೇ.50 ರಷ್ಟು ಅಂಗಡಿ ಮುಂಗ್ಗಟ್ಟುಗಳಿಗೆ ವಾರದ ರಜೆ ಇತ್ತು. ಹೀಗಾಗಿ ಸಹಜವಾಗಿಯೇ ಅಂಗಡಿಗಳು ಬಂದ್ ಆಗಿದ್ದವು. ಭಾರತ ಬಂದ್‌ಗೂ, ಅಂಗಡಿ ಬಂದಾಗಿರುವುದಕ್ಕೂ ಸಂಬಂಧವಿಲ್ಲ ಎಂದು ಅಂಗಡಿ ಮಾಲೀಕರು, ವ್ಯಾಪಾರಿಗಳು ತಿಳಿಸಿದರು.