ಭಾರತ್ ಬಂದ್ ಹೈಜಾಕ್

ನಿರಂತರ ತೈಲ ಬೆಲೆ ಏರಿಕೆ ಖಂಡಿಸಿ ಸೋಮವಾರ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಕರೆ ನೀಡಿದ್ದ ‘ಭಾರತ್ ಬಂದ್’ ದೇಶದ ಜನರ ಆಕ್ರೋಶ, ಅಸಮಾಧಾನ ತೋರ್ಪಡಿಕೆಗಿಂತಲೂ ಹೆಚ್ಚಾಗಿ ರಾಜಕೀಯ ಪಕ್ಷಗಳ ಬೇಳೆ ಬೇಯಿಸಿಕೊಳ್ಳುವುದಕ್ಕೇ ವೇದಿಕೆಯಾಯಿತು. ಹಲವು ರಾಜ್ಯಗಳಲ್ಲಿ ನಾಗರಿಕರು, ವ್ಯಾಪಾರಿಗಳೇ ಸ್ವಯಂಪ್ರೇರಿತವಾಗಿ ರಸ್ತೆಗಳಿಯದೆ ಶಾಂತಿಯುತ ಮಾರ್ಗದಲ್ಲಿ ಸಾಂಕೇತಿಕವಾಗಿ ಬಂದ್​ಗೆ ಬೆಂಬಲ ಸೂಚಿಸಿದ್ದು ಒಂದೆಡೆಯಾದರೆ, ಬಂದ್​ನಿಂದ ಪರಿಹಾರ ಸಾಧ್ಯವಿಲ್ಲ ಎನ್ನುವ ಮತ್ತೊಂದು ವರ್ಗ ಎಂದಿನಂತೆ ದೈನಂದಿನ ಚಟುವಟಿಕೆಯಲ್ಲಿ ಭಾಗಿಯಾಗಿತ್ತು. ಆದರೆ ಬಂದ್ ಯಶಸ್ವಿಗೊಳಿಸಲೇಬೇಕೆಂಬ ಉದ್ದೇಶದಿಂದ ಕೆಲವು ರಾಜಕೀಯ ಪಕ್ಷಗಳ ನಾಯಕರು ವಿವಿಧೆಡೆ ಬಲವಂತದಿಂದ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿಸಿದ್ದರಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತು. ಹಲವೆಡೆ ಕಿಡಿಗೇಡಿಗಳು ಅಂಗಡಿಗಳು, ತರಕಾರಿ ಅಂಗಡಿ, ಹೋಟೆಲ್​ಗಳಿಗೆ ನುಗ್ಗಿ ದಾಂಧಲೆ ನಡೆಸಿದ್ದರಿಂದಾಗಿ ವ್ಯಾಪಾರಿಗಳು ನಷ್ಟ ಅನುಭವಿಸಿದರು. ತಡೆಯಲು ಬಂದ ಪೊಲೀಸರನ್ನೇ ಹಿಡಿದು ಜಗ್ಗಾಡಿದರು. ಒಟ್ಟಾರೆ ರಾಜಕಾರಣವನ್ನು ಬದಿಗೊತ್ತಿ ನೋಡಿದರೆ ತೈಲ ಬೆಲೆ ಏರಿಕೆ ವಿರುದ್ಧ ಜನರ ಆಕ್ರೋಶವಂತೂ ವ್ಯಕ್ತವಾಯಿತು.

 

 

 

 

 

 

ಜನರಿಗೆ ಇಂಧನ ಬೆಲೆ ಏರಿಕೆ ಇಂದ ಕಷ್ಟವಾಗುತ್ತಿರುವ ಬಗ್ಗೆ ನಮಗೆ ತಿಳಿದಿದೆ. ಆದರೆ ಬೆಲೆ ಏರಿಕೆ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿ ಇಲ್ಲ. ಕಾಂಗ್ರೆಸ್ ದೇಶದಲ್ಲಿ ಆತಂಕದ ವಾತಾವರಣ ಸೃಷ್ಟಿಸು ತ್ತಿದೆ. ಇಂಧನ ತೆರಿಗೆಯಿಂದ ಬಂದ ಆದಾಯವನ್ನು ಬಡವರ ಕಲ್ಯಾಣ ಯೋಜನೆಗಳಿಗೆ ಬಳಸಲಾಗಿದೆ.

| ರವಿಶಂಕರ್ ಪ್ರಸಾದ್, ಕೇಂದ್ರ ಸಚಿವ


ಬಂದ್ ಪ್ರಾಯೋಜಿತ ಬೆಂಬಲ ಸಮಯೋಚಿತ

ಇಂಧನ ದರ ಏರಿಕೆ ಖಂಡಿಸಿ ಕಾಂಗ್ರೆಸ್, ಜೆಡಿಎಸ್, ಎಡಪಕ್ಷಗಳು ಕರೆ ನೀಡಿದ್ದ ಭಾರತ್ ಬಂದ್​ಗೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕರ್ನಾಟಕವೂ ಸೇರಿ ಬಹುತೇಕ ರಾಜ್ಯಗಳ ಕೆಲವೆಡೆ ಬಲವಂತದ ಬಂದ್ ಹಾಗೂ ಹಿಂಸಾಚಾರ ಪ್ರಕರಣಗಳು ನಡೆದಿವೆ. ರಾಜ್ಯದ ಹಲವೆಡೆ ವಿವಿಧ ಸಂಘಟನೆಗಳು ಪ್ರತಿಭಟಿಸಿದರೆ, ಮತ್ತೆ ಕೆಲವೆಡೆ ನಗರ ಪ್ರದೇಶಗಳು ಮಾತ್ರ ಬಂದ್ ಆಗಿವೆ. ಹಲವು ಜಿಲ್ಲೆಗಳಲ್ಲಿ ಕೆಎಸ್​ಆರ್​ಟಿಸಿ-ಖಾಸಗಿ ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿದ್ದರೆ, ಕೆಲವೆಡೆ ಮಧ್ಯಾಹ್ನದ ಬಳಿಕ ಸಂಚರಿಸಿವೆ. ಇದರ ಲಾಭ ಪಡೆದ ಆಟೋಗಳು ಹೆಚ್ಚು ದರ ವಸೂಲಿ ಮಾಡಿರುವ ದೂರುಗಳು ಕೇಳಿಬಂದಿವೆ. ರಾಜ್ಯದ ಎಲ್ಲ ಶಾಲಾ-ಕಾಲೇಜುಗಳಿಗೆ ಮೊದಲೇ ರಜೆ ಘೋಷಣೆಯಾಗಿದ್ದರಿಂದ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗಲಿಲ್ಲ.

ರಾಜಧಾನಿಯಲ್ಲೂ ಪರದಾಟ

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವೂ ಬಂದ್​ಗೆ ಬೆಂಬಲ ನೀಡಿದ್ದ ಹಿನ್ನೆಲೆಯಲ್ಲಿ ಕೆಎಸ್​ಆರ್​ಟಿಸಿ, ಬಿಎಂಟಿಸಿ ಸೇರಿ ಎಲ್ಲ ಸರ್ಕಾರಿ ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ಆಪ್ ಆಧಾರಿತ ಟ್ಯಾಕ್ಸಿ ಸೇವೆಯಲ್ಲೂ ವ್ಯತ್ಯಯವಿದ್ದರಿಂದ ಕೆಲವು ಆಟೋ, ಟ್ಯಾಕ್ಸಿಗಳು ದುರುಪಯೋಗಪಡಿಸಿಕೊಂಡು 4-5 ಕಿ.ಮೀ. ಪ್ರಯಾಣಕ್ಕೂ 500-800 ರೂಪಾಯಿ ಸುಲಿಗೆ ಮಾಡಿವೆ ಎಂಬ ಆರೋಪಗಳು ಕೇಳಿಬಂದಿವೆ. ಬಂದ್​ನಲ್ಲಿ ಭಾಗವಹಿಸಿದರೆ ವೇತನವಿಲ್ಲ ಎಂದು ನೌಕರರಿಗೆ ಎಚ್ಚರಿಕೆ ನೀಡಿದ್ದ ಸಾರಿಗೆ ನಿಗಮಗಳೇ ಸೋಮವಾರ ಉಲ್ಟಾ ಹೊಡೆದಿದ್ದವು. ಬಿಎಂಟಿಸಿ ನೌಕರರು ಕೆಲಸಕ್ಕೆ ಹಾಜರಾದರೂ ಘಟಕ ವ್ಯವಸ್ಥಾಪಕರು ಬಸ್ ನೀಡಲು ನಿರಾಕರಿಸಿದ್ದರಿಂದ ಮಾತಿನ ಚಕಮಕಿ ನಡೆದಿವೆ.

ಹಿರಿಯರಿಗೆ ಉಚಿತ ಸೇವೆ: ಗಿರಿನಗರದ ಸಭಾಪತಿ ಎನ್ನುವವರು ಪ್ರತಿ ಬಾರಿಯಂತೆ ಸ್ವಂತ ವಾಹನದಲ್ಲಿ 22ಕ್ಕೂ ಅಧಿಕ ಹಿರಿಯ ನಾಗರಿಕರು ಹಾಗೂ ರೋಗಿಗಳನ್ನು ಹೋಗಬೇಕಾದ ಸ್ಥಳಗಳಿಗೆ ಬಿಟ್ಟುಬಂದಿದ್ದಾರೆ. ಇನ್ನು ಬಸ್ ಅವಲಂಬಿಸಿದ್ದ ಸರ್ಕಾರಿ ನೌಕರರು ಸೇವೆಗೆ ಗೈರಾಗಿದ್ದರು. ಐಟಿ ಕಂಪನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹಲವು ಖಾಸಗಿ ಕಂಪನಿ, ಸಂಸ್ಥೆಗಳು ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಮೆಟ್ರೋದಲ್ಲಿ ಜನಸಂಚಾರ ವಿರಳವಾಗಿತ್ತು. ಆದರೆ, ಮಧ್ಯಾಹ್ನ 3ರಿಂದ ರಾಜಧಾನಿ ಯಥಾಸ್ಥಿತಿಗೆ ಮರಳಿತ್ತು. ವಿಧಾನಸೌಧದ ಬಹುತೇಕ ಕಚೇರಿಗಳು ಸೋಮವಾರ ಭಣಗುಡುತ್ತಿದ್ದವು.

ಸಿಟ್ಟಾಗಿ ತೆರಳಿದ ಪಿ.ಜಿ.ಆರ್. ಸಿಂಧ್ಯ

ಜೆಡಿಎಸ್​ನ ಮೇಲ್ಮನೆ ಸದಸ್ಯ ಶರವಣ ಕುದುರೆ ಸವಾರಿ ಮಾಡಿಕೊಂಡು ಬೆಂಗಳೂರಿನ ಟೌನ್​ಹಾಲ್​ಗೆ ಆಗಮಿಸುತ್ತಿದ್ದಂತೆ ಹೋರಾಟದ ದಿಕ್ಕು ತಪ್ಪಿಸುತ್ತಿದ್ದೀರಿ, ಕುದುರೆ ಯಿಂದ ಕೆಳಗಿಳಿಯಿರಿ ಎಂದು ಪ್ರತಿಭಟನಾ ನಿರತರು ಕೂಗಿದರು. ಶರವಣ ಬಂದ ಸಂದರ್ಭ ಎಲ್ಲರೂ ಅವರತ್ತಲೇ ಗಮನ ಹರಿಸಿದ್ದರು. ಕುದುರೆ ಯಿಂದ ಇಳಿದು ಬನ್ನಿ ಎಂದು ಕರೆದರೂ ಸ್ವಲ್ಪ ಹೊತ್ತು ಶರವಣ ಕುದುರೆಯಲ್ಲೇ ಕುಳಿತುಕೊಂಡಿದ್ದ ಹಿನ್ನೆಲೆಯಲ್ಲಿ ಇವರ ನಡೆಗೆ ಮುನಿಸಿಕೊಂಡ ಜೆಡಿಎಸ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಿ.ಜಿ.ಆರ್. ಸಿಂಧ್ಯ ಪ್ರತಿಭಟನೆ ಬಿಟ್ಟು ವಾಹನದಲ್ಲಿ ಹೊರಟರು.

ದಕ್ಷಿಣಕನ್ನಡ-ಉಡುಪಿಯಲ್ಲಿ ಅಹಿತಕರ

ಮಂಗಳೂರು/ಉಡುಪಿ: ದಕ್ಷಿಣಕನ್ನಡ-ಉಡುಪಿ ಜಿಲ್ಲೆಯಲ್ಲಿ ಬಂದ್​ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಲ್ಲಲ್ಲಿ ಅಹಿತಕರ ಪ್ರಕರಣಗಳು ನಡೆದಿವೆ.

ಬಂಟ್ವಾಳ ಶಾಸಕ ರಾಜೇಶ್ ನಾಯ್್ಕ ಕಾರಿನ ಮೇಲೆ ನರಹರಿ ನಗರದಲ್ಲಿ ಬಂದ್ ನಿರತರು ಕಲ್ಲು ತೂರಿದ್ದಾರೆ. ರಸ್ತೆಗಿಳಿದ ಹಾಗೂ ರಸ್ತೆ ಬದಿ ನಿಲ್ಲಿಸಿದ್ದ ಕೆಲ ಬಸ್​ಗಳು ಮತ್ತು ತೆರೆದಿದ್ದ ಹೋಟೆಲ್​ಗಳ ಮೇಲೆ ಕಲ್ಲು ತೂರಲಾಗಿದೆ. ಮಂಗಳೂರಿನಲ್ಲಿ ಪೊಲೀಸರು ಬಂದ್​ಗೆ ಸಹಕಾರ ನೀಡುತ್ತಿದ್ದಾರೆ ಎಂದು ಆರೋಪಿಸಿದ ಬಿಜೆಪಿ ಶಾಸಕ ವೇದವ್ಯಾಸ ಕಾಮತ್, ಪೊಲೀಸ್ ಆಯುಕ್ತರ ಜತೆ ಬಿರುಸಿನ ಮಾತುಕತೆ ನಡೆಸಿದರು.

ಉಡುಪಿಯಲ್ಲಿ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದಾಗ ಎಸ್ಪಿ ಲಕ್ಷ್ಮಣ್ ನಿಂಬರಗಿ ಖುದ್ದು ಲಾಠಿ ಬೀಸಿ ಕಾರ್ಯಕರ್ತರನ್ನು ಚದುರಿಸಿದರು. ಘರ್ಷಣೆ ವೇಳೆ, ಬಿಜೆಪಿ ನಗರ ಅಧ್ಯಕ್ಷ ಪ್ರಭಾಕರ ಪೂಜಾರಿ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಕಲ್ಲಿನಿಂದ ಹೊಡೆದು ಗಾಯಗೊಳಿಸಿದರು. ಇದರಿಂದ ರೊಚ್ಚಿಗೆದ್ದ ಬಿಜೆಪಿ ಕಾರ್ಯಕರ್ತರು ಬನ್ನಂಜೆ ಎಸ್​ಪಿ ಕಚೇರಿ ಬಳಿ ಕಾಂಗ್ರೆಸ್ ಕಾರ್ಯರ್ತರನ್ನು ತರಾಟೆಗೆ ತೆಗೆದುಕೊಂಡರು. ಪರಿಸ್ಥಿತಿ ಕೈಮೀರುತ್ತಿರುವಾಗ ಪೊಲೀಸರು ಮಧ್ಯಪ್ರವೇಶಿಸಿ ಗಲಾಟೆ ಮಾಡಬೇಡಿ ಎಂದು ಮನವಿ ಮಾಡಿದರು. ಪುಂಡಾಟ ಮುಂದುವರಿದಾಗ ತಾಳ್ಮೆ ಕಳೆದುಕೊಂಡ ಎಸ್​ಪಿ ಅನಿವಾರ್ಯವಾಗಿ ಲಾಠಿ ಚಾರ್ಜ್​ಗೆ ಆದೇಶಿಸಿದರು. ಬಿಜೆಪಿ ಕಾರ್ಯಕರ್ತ, ತಾಪಂ ಸದಸ್ಯ ಶರತ್ ಬೈಲಕೆರೆ, ಕಾಂಗ್ರೆಸ್ ಕಾರ್ಯಕರ್ತ, ನಗರಸಭೆ ಸದಸ್ಯ ರಮೇಶ್ ಕಾಂಚನ್​ಗೆ ಏಟು ಬಿದ್ದಿದೆ.

ಪ್ರಧಾನಿ ಮೋದಿಗೆ ಜೈಕಾರ ಹಾಕಿದ ಚೈತ್ರಾ ಕುಂದಾಪುರ ಮೇಲೆ ಹಲ್ಲೆ

ಉಡುಪಿ: ನಗರದ ಕಡಿಯಾಳಿಯಲ್ಲಿ ಅಂಗಡಿ ಬಂದ್ ಮಾಡುವಂತೆ ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸಿದ್ದಕ್ಕೆ ವ್ಯಾಪಾರಿ ಪ್ರತಿರೋಧ ಒಡ್ಡಿದಾಗ ಅಂಗಡಿಯಲ್ಲಿದ್ದ ಹಿಂದು ಸಂಘಟನೆ ಕಾರ್ಯಕರ್ತೆ ಚೈತ್ರಾ ಕುಂದಾಪುರ ಒತ್ತಾಯಪೂರ್ವಕ ಬಂದ್ ಮಾಡಲು ಅವಕಾಶವಿಲ್ಲ ಎನ್ನುತ್ತ ಮೋದಿ.. ಮೋದಿ.. ಎಂದು ಜೈಕಾರ ಕೂಗಿದರು. ಬಿಜೆಪಿ ಕಾರ್ಯಕರ್ತರೂ ಅಲ್ಲಿಗೆ ಧಾವಿಸಿ, ಕಾಂಗ್ರೆಸ್ ಕಾರ್ಯಕರ್ತರ ಜತೆ ವಾಗ್ವಾದಕ್ಕಿಳಿದರು. ನೂಕಾಟ-ತಳ್ಳಾಟವೂ ನಡೆಯಿತು. ಚೈತ್ರಾ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಬೈಕ್ ಸವಾರನಿಗೆ ಥಳಿತ

ಮಗಳಿಗೆ ಚಿಕಿತ್ಸೆ ಕೊಡಿಸಲು ಹೊನ್ನಾಳಿ ಲಿಂಗಾಪುರದಿಂದ ಬೈಕ್​ನಲ್ಲಿ ಪತ್ನಿ ಜತೆ ಹೊರಟಿದ್ದ ವ್ಯಕ್ತಿಯೊಬ್ಬರಿಗೆ ಶಿವಮೊಗ್ಗ-ಚಿತ್ರದುರ್ಗ ಹೆದ್ದಾರಿಯ ಕೈಮರ ಬಳಿ ಪ್ರತಿಭಟಿಸುತ್ತಿದ್ದ ಜೆಡಿಎಸ್ ಕಾರ್ಯಕರ್ತರಿಂದ ಹಲ್ಲೆ ನಡೆದಿದೆ. ಈ ಗಲಾಟೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅರ್ಧ ಗಂಟೆ ವಾಹನ ಸಂಚಾರ ಅಸ್ತವ್ಯಸ್ತವಾಯಿತು.

ರೈಲಿನಲ್ಲಿ ಜನನ

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಶಾಹುಪಾರ್ಕ್ ಗ್ರಾಮದ ನಿವಾಸಿ ಯಲ್ಲವ್ವ ಮಹೇಶ ಗಾಯಕವಾಡ ಕೊಲ್ಲಾಪುರ-ಹೈದರಾಬಾದ್ ರೈಲಿನಲ್ಲಿ ಪ್ರಯಾಣಿಸುವಾಗಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಒತ್ತಾಯದ ಬಂದ್

ಚಿಕ್ಕಮಗಳೂರು ಜಿಲ್ಲೆ ಎನ್.ಆರ್. ಪುರ ತಾಲೂಕು ಬಾಳೆಹೊನ್ನೂರಿನಲ್ಲಿ ಬೆಳಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಿದರು. ಆಗ ದಿನಸಿ ಅಂಗಡಿ ಮಾಲೀಕರೊಬ್ಬರು ಪ್ರತಿರೋಧ ತೋರಿದಾಗ ಕಾರ್ಯಕರ್ತರು ನಿಂದಿಸಿ ಅಂಗಡಿಯ ಸಾಮಗ್ರಿಗಳನ್ನು ಚೆಲ್ಲಾಡಿದರು. ಈ ಕೃತ್ಯ ಖಂಡಿಸಿ ಬಿಜೆಪಿ ಕಾರ್ಯಕರ್ತರು ಸಂಜೆ ಪ್ರತಿಭಟನೆ ನಡೆಸಿದರು. ಅಲ್ಲದೆ, ಇದರ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಕೆಎಸ್​ಆರ್​ಟಿಸಿಗೆ 5.34 ಕೋಟಿ ರೂಪಾಯಿ ನಷ್ಟ

ಕೆಎಸ್​ಆರ್​ಟಿಸಿಗೆ 5.34 ಕೋಟಿ ರೂ. ಹಾಗೂ ಬಿಎಂಟಿಸಿಗೆ ಅಂದಾಜು 4 ಕೋಟಿ ರೂ. ಆದಾಯ ನಷ್ಟವಾಗಿದೆ. ಸೋಮವಾರ ಬೆಳಗ್ಗೆ 5 ರಿಂದ ಮಧ್ಯಾಹ್ನ 3ರವರೆಗೂ ಅಂದಾಜು 3,953 ಕೆಎಸ್​ಆರ್​ಟಿಸಿ ಬಸ್ ಸ್ಥಗಿತವಾಗಿದ್ದು, 17.28 ಲಕ್ಷ ಕಿ.ಮೀ. ಸಂಚಾರ ರದ್ದಾಗಿತ್ತು. ಸೋಮವಾರ ಮಧ್ಯಾಹ್ನ 3 ರಿಂದ ಬಿಎಂಟಿಸಿ 2,181 ಬಸ್ ಕಾರ್ಯಾಚರಣೆಗೆ ಇಳಿಸಿದೆ.

ಬಸ್ ಶುಲ್ಕ ಏರಿಸುವುದಿದ್ದರೂ ಶೇ.18ಕ್ಕಿಂತ ಸ್ವಲ್ಪಮಟ್ಟಿಗೆ ಕಡಿಮೆ ಮಾಡುವ ಬಗ್ಗೆಯೂ ಪರಿಶೀಲಿಸಲಾಗುವುದು.

| ಡಿ.ಸಿ.ತಮ್ಮಣ್ಣ ಸಾರಿಗೆ ಸಚಿವ

ಕಾಂಗ್ರೆಸ್​ನಲ್ಲಿ ಸಂಘಟನೆ ಕಿಚ್ಚು

ಭಾರತ್ ಬಂದ್ ಕೇಂದ್ರದ ಮೇಲೆ ಪರಿಣಾಮ ಬೀರಿದೆಯೋ ಇಲ್ಲವೋ ರಾಜ್ಯ ಕಾಂಗ್ರೆಸ್ ಸಂಘಟನೆಗೆ ಹೊಸ ಹುರುಪು ನೀಡಿದೆ. ‘ಸಮ್ಮಿಶ್ರ’ ಸರ್ಕಾರದ ಭಾಗಿಯಾಗಿದ್ದಕ್ಕೆ ಒಳಗೇ ಬೇಸರವಿದ್ದ ‘ಕೈ’ಪಡೆಗೆ ಈ ಬಂದ್ ಸಂಘಟನಾತ್ಮಕ ಹುರುಪು ನೀಡಿದ್ದಲ್ಲದೆ, ಕೇಂದ್ರದ ವಿರುದ್ಧ ಜನಾಭಿಪ್ರಾಯ ರೂಪಿಸುವಲ್ಲಿ ದುಬಾರಿ ಇಂಧನ ಬೆಲೆಯನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆಂದು ಪಕ್ಷದ ನಾಯಕರು ಹೇಳಿಕೊಂಡಿದ್ದಾರೆ. ಬೆಲೆ ಏರಿಕೆ ಎಂದು ಯುಪಿಎ ಸರ್ಕಾರದ ವಿರುದ್ಧ ಬಾಯಿಗೆ ಬಂದಂತೆ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ಈಗ ಮೌನ ವಹಿಸಿದ್ದಾರೆ. ಜನರಲ್ಲಿ ಮೂಡಿರುವ ಆಕ್ರೋಶವನ್ನು ಕಾಂಗ್ರೆಸ್ ವ್ಯಾಪಕಗೊಳಿಸಲಿದೆ. ಹೀಗಾಗಿ ಗಣೇಶ ಹಬ್ಬದ ಬಳಿಕ ಇಂಧನ ಏರಿಕೆ ಹಾಗೂ ಕೇಂದ್ರ ಸರ್ಕಾರದ ವೈಫಲ್ಯ ವಿರುದ್ಧ ಎಲ್ಲ ಜಿಲ್ಲೆಗಳಲ್ಲಿ ಪ್ರತಿಭಟಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿಜಯವಾಣಿಗೆ ತಿಳಿಸಿದರು.

ಬಿಜೆಪಿ ತಿರುಗೇಟು

ಮೈಸೂರಿನಲ್ಲಿ ಬಿಜೆಪಿ ಕಾರ್ಯಕರ್ತರು 101 ಗಣಪತಿ ದೇವಸ್ಥಾನದಲ್ಲಿ ಪ್ರಧಾನಿ ಮೋದಿ ಹೆಸರಿನಲ್ಲಿ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಭಾರತ್ ಬಂದ್ ವಿರೋಧಿಸಿ ಬಿಜೆಪಿಯ ಮಂಡ್ಯ ನಗರಾಧ್ಯಕ್ಷ ಅರವಿಂದ್ ಬೆಳಗ್ಗೆ 11ರಿಂದ ಸಂಜೆ 4 ಗಂಟೆ ತನಕ ಉಚಿತವಾಗಿ ಬಾದಾಮಿ ಹಾಲು ವಿತರಿಸಿದರು.

ಭಾರತ್ ಬಂದ್ ದುರುದ್ದೇಶದಿಂದ ಕೂಡಿದೆ. ತೈಲ ಬೆಲೆ ಏಕೆ ಏರಿದೆ ಎಂದು ಜಗತ್ತಿಗೇ ಗೊತ್ತು. ಕರ್ನಾಟಕದಲ್ಲಿ ರಾಜ್ಯ ಸರ್ಕಾರವೇ ಕೇಂದ್ರ ಸರ್ಕಾರದ ವಿರುದ್ಧ ಷಡ್ಯಂತ್ರ ಮಾಡಿ ಶಾಲಾ- ಕಾಲೇಜು ಬಂದ್ ಮಾಡಿಸಿ, ಜನರ ದಿಕ್ಕು ತಪ್ಪಿಸಲು ಯತ್ನಿಸಿದೆ.

| ಬಿ.ಎಸ್.ಯಡಿಯೂರಪ್ಪ ಬಿಜೆಪಿ ಅಧ್ಯಕ್ಷ

ಕಾಂಗ್ರೆಸ್ ಕಾರ್ಯಕರ್ತರ ದುಂಡಾವರ್ತನೆ ನಡುವೆಯೂ ರಾಜ್ಯದಲ್ಲಿ ಜನಸಾಮಾನ್ಯರು ಭಾರತ ಬಂದ್ ತಿರಸ್ಕರಿಸಿದ್ದು, ಬಂದ್ ಸಂಪೂರ್ಣ ವಿಫಲವಾಗಿದೆ.

| ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ

ಈ ಹಿಂದೆ ಬಿಜೆಪಿ ಮಂಗಳೂರು ಚಲೋ ನಡೆಸಿದ್ದಾಗ, ಪ್ರತಿಭಟಿಸುವವರನ್ನು ಚಪ್ಪಲಿಯ್ಲ ಹೊಡೆಯಬೇಕು ಎಂದು ಸಚಿವ ಯು.ಟಿ. ಖಾದರ್ ಹೇಳಿದ್ದರು. ಈಗೇಕೆ ಸá-ಮ್ಮನಿದ್ದಾರೆ. ಈಗ ಅವರು ಚಪ್ಪಲಿ ಎಲ್ಲಿಟ್ಟ್ಟುಕೊಂಡಿದ್ದಾರೆ? ನಾವು ಚಪ್ಪಲಿಯಲ್ಲಿ ಯಾರಿಗೆ ಹೊಡೆಯಬೇಕು?

| ಪ್ರತಾಪ್​ಸಿಂಹ ಸಂಸದ, ಮೈಸೂರು

ಆಮ್ ಆದ್ಮಿಗೆ ಕಪಾಳಮೋಕ್ಷ

ಬೆಳಗಾವಿ ಕನ್ನಡ ಸಾಹಿತ್ಯ ಭವನದ ಬಳಿ ನಡೆದ ಪ್ರತಿಭಟನೆ ಸಂದರ್ಭ ಪೆಟ್ರೋಲ್ ದರ ಏರಿಸಲೇಬೇಕೆಂದು ತಪ್ಪಾಗಿ ಘೋಷಣೆ ಕೂಗಿದ ಕಾರ್ಯಕರ್ತನಿಗೆ ಆಮ್ ಆದ್ಮಿ ಪಕ್ಷದ ಮುಖಂಡ ಸದಾನಂದ ಭಾಮನೆ ಕಪಾಳಮೋಕ್ಷ ಮಾಡಿದ್ದು, ವಿಡಿಯೋ ವೈರಲ್ ಆಗಿದೆ.


ಬಲವಂತದ ಭಾರತ್ ಬಂದ್​ಗೆ ಕೆಲ ರಾಜ್ಯಗಳ ಜನಜೀವನ ಅಸ್ತವ್ಯಸ್ತ

ನವದೆಹಲಿ: ಇಂಧನ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕರೆ ನೀಡಿದ್ದ ಭಾರತ್ ಬಂದ್​ಗೆ ವಿಪಕ್ಷಗಳ ಸಾಥ್ ಸಹ ಸಿಕ್ಕಿತ್ತು. ಆದರೆ, ಸೋಮವಾರ ಬಹುತೇಕ ರಾಜ್ಯಗಳಲ್ಲಿ ಹಿಂಸಾಚಾರ ನಡೆದಿದೆ. ಕೆಲವೆಡೆ ಪ್ರತಿಭಟನಾಕಾರರು ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಿದ್ದಾರೆ.

ಮುಂಬೈ, ಪಟನಾ, ಅಹಮದಾಬಾದ್, ರಾಂಚಿಯ ಕೆಲವೆಡೆ ಪ್ರತಿಭಟನಾಕಾರರು ಟೈರ್​ಗಳನ್ನು ಸುಟ್ಟು, ವಾಹನಗಳ ಮೇಲೆ ಕಲ್ಲುತೂರಾಡಿ ಜಖಂಗೊಳಿಸಿದ್ದಲ್ಲದೆ, ರೈಲು ಮತ್ತು ಬಸ್​ಗಳ ಮೇಲೂ ಕಲ್ಲು ತೂರಾಟ ನಡೆಸಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಇದರಿಂದ ಜನಜೀವನ ತೀವ್ರ ಅಸ್ತವ್ಯಸ್ತವಾಗಿತ್ತು.

ಕೇರಳ, ಬಿಹಾರ, ಒಡಿಶಾ ಮತ್ತು ಅರುಣಾಚಲ ಪ್ರದೇಶದಲ್ಲಿ ಅಂಗಡಿಗಳು ಮುಚ್ಚಿದ್ದವು. ವ್ಯಾಪಾರ ಸಂಪೂರ್ಣ ಸ್ಥಗಿತವಾಗಿತ್ತು. ಆದರೆ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಮಿಜೋರಾಂನಲ್ಲಿ ನೀರಸ ಪ್ರತಿಕ್ರಿಯೆ ಸಿಕ್ಕಿದೆ. ಬಂದ್​ಗೆ ಬೆಂಬಲಿಸಿದ 21 ಪಕ್ಷಗಳು ಹಾಗೂ ಜನಸಾಮಾನ್ಯರಿಗೆ ಕಾಂಗ್ರೆಸ್ ಧನ್ಯವಾದ ಅರ್ಪಿಸಿದೆ.

ಇಂಧನ ಬೆಲೆ ಏರಿಕೆ ಬಗ್ಗೆ ಪ್ರಧಾನಿ ಮೋದಿ ಮೌನ ವಹಿಸಿದ್ದಾರೆ. ಕೃಷಿಕರ ಸ್ಥಿತಿ, ಮಹಿಳಾ ದೌರ್ಜನ್ಯ ವಿರುದ್ಧವೂ ಒಂದು ಮಾತೂ ಪ್ರತಿಕ್ರಿಯಿಸಿಲ್ಲ. ಪ್ರತಿಭಟನೆ ಹಿನ್ನೆಲೆ ವಿಪಕ್ಷಗಳು ಒಂದೇ ವೇದಿಕೆಯಲ್ಲಿ ಒಟ್ಟಾಗಿರುವುದು ಸಂತೋಷ. ನಾವು ಬಿಜೆಪಿಯನ್ನು ಸೋಲಿಸುತ್ತೇವೆ.

| ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ

ರಾಹುಲ್ ಮಾರ್ಚ್

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೈಲಾಸ ಮಾನಸ ಸರೋವರ ಯಾತ್ರೆಯಿಂದ ತಂದಿದ್ದ ಪವಿತ್ರ ನೀರನ್ನು ರಾಜ್​ಘಾಟ್​ನಲ್ಲಿ ಅರ್ಪಿಸಿದರು. ಬಳಿಕ ಕಾಂಗ್ರೆಸ್ ಮುಖಂಡರು, ವಿಪಕ್ಷಗಳ ನಾಯಕ ರೊಂದಿಗೆ ಅಲ್ಲಿಂದ ರಾಮಲೀಲಾ ಮೈದಾನದವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿದರು.

ಎರಡು ವರ್ಷದ ಬಾಲಕಿ ಸಾವು

ಬಿಹಾರದ ಜೆಹಾನಾಬಾದ್​ನಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ 2 ವರ್ಷದ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಆಂಬುಲೆನ್ಸ್​ಗೆ ಪ್ರತಿಭಟನಾಕಾರರು ತಡೆ ಹಾಕಿದ ಹಿನ್ನೆಲೆ ದಾರಿಯಲ್ಲೇ ಬಾಲಕಿ ಮೃತಪಟ್ಟಿದ್ದಾಳೆ. ಬಾಲಾಬಿಘಾ ಗ್ರಾಮ ಬೇಬಿ ಕುಮಾರ್ ಮೃತ ಬಾಲಕಿ.

ಮತ್ತೆ ಏರಿದ ಇಂ‘ಧನ’!

ಭಾರತ್ ಬಂದ್ ನಡುವೆಯೇ ಸೋಮವಾರ ಪೆಟ್ರೋಲ್ ಬೆಲೆ ಪ್ರತಿ ಲೀಟರ್​ಗೆ 23 ಪೈಸೆ, ಡೀಸೆಲ್ ಬೆಲೆ ಪ್ರತಿ ಲೀಟರ್​ಗೆ 22 ಪೈಸೆ ಹೆಚ್ಚಳವಾಗಿದೆ. ಇದರಿಂದಾಗಿ ನವದೆಹಲಿಯಲ್ಲಿ ಪೆಟ್ರೋಲ್ ಬೆಲೆ 80.73 ರೂ., ಡೀಸೆಲ್ 72.83 ರೂ. ತಲುಪಿದೆ. ಆಗಸ್ಟ್ ಮಧ್ಯವಾರದಿಂದ ಇದುವರೆಗೂ ಪೆಟ್ರೋಲ್ ಪ್ರತಿ ಲೀ.ಗೆ 3.65 ರೂ., ಡೀಸೆಲ್ 4.06 ರೂಪಾಯಿ ಹೆಚ್ಚಳ ಕಂಡಿದೆ. ಮಹಾರಾಷ್ಟ್ರದ ಪರ್ಭಾನಿಯಲ್ಲಿ ಸೋಮವಾರ ಪೆಟ್ರೋಲ್ ಬೆಲೆ ಪ್ರತಿ ಲೀ.ಗೆ 89.97 ರೂಪಾಯಿ ದಾಖಲಾಗಿದೆ. ಪೆಟ್ರೋಲ್​ಗೆ ದೇಶದಲ್ಲೇ ಅತಿ ಹೆಚ್ಚಿನ ಬೆಲೆ ಇದಾಗಿದೆ.

ರಮ್ಯಾ ಪೆ‘ಟ್ರೋಲ್’

ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಟ್ವಿಟರ್​ನಲ್ಲಿ ಬಾಲಿವುಡ್ ನಟ ಆಮಿರ್ ಖಾನ್ ಅವರ ದಂಗಲ್ ಸಿನಿಮಾದ ಚಿತ್ರಗಳನ್ನು ಬಳಸಿ ಬಿಜೆಪಿಗೆ ಟಾಂಗ್ ಕೊಟ್ಟಿದ್ದರು. ಇದಕ್ಕೆ ಟ್ವೀಟಿಗರು ರಮ್ಯಾಗೆ ತಿರುಗೇಟು ನೀಡಿ ಟ್ರೋಲ್ ಮಾಡಿದ್ದಾರೆ. ಯುಪಿಎ ಅವಧಿಯಲ್ಲಿ ಪೆಟ್ರೋಲ್ ಬೆಲೆ ಎಂದು ಒಳ್ಳೆಯ ದೇಹದಾರ್ಢ್ಯವುಳ್ಳ ಕುಸ್ತಿ ಪಟು ಆಮಿರ್ ಖಾನ್ ಅವರ ಫೋಟೋ ಒಂದು ಕಡೆ ಇತ್ತು. ಅದರ ಬದಿಯಲ್ಲಿ ಎನ್​ಡಿಎ ಅವಧಿಯಲ್ಲಿ ಪೆಟ್ರೋಲ್ ಎಂಬ ಶೀರ್ಷಿಕೆ ಅಡಿಯಲ್ಲಿ ದಪ್ಪ ಹೊಟ್ಟೆ ಬಿಟ್ಟುಕೊಂಡು ನಿಂತಿರುವ ಆಮಿರ್ ಖಾನ್​ರ ಚಿತ್ರವನ್ನು ಪೋಸ್ಟ್ ಮಾಡಿದ್ದರು.