ಚಿಕ್ಕಬಳ್ಳಾಪುರ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ವಿರೋಧಿಸಿ ವಿವಿಧ ಸಂಘಟನೆಗಳು ಕರೆ ನೀಡಿರುವ ಬಂದ್ಗೆ ಬೆಂಬಲ ನೀಡುವುದಾಗಿ ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡ ಹೇಳಿದ್ದಾರೆ.
ಕಾರ್ಮಿಕರ ಹೋರಾಟಕ್ಕೆ ಸಹಮತ ವ್ಯಕ್ತಪಡಿಸಿದ ಬಚ್ಚೇಗೌಡ, ಮಗು ಅಳದೆ ಇದ್ದರೆ ತಾಯಿ ಹಾಲು ಕೊಡೋದಿಲ್ಲ. ಹಾಗೇ ಜನರು ಕಷ್ಟ ಹೇಳಿಕೊಳ್ಳದೆ ಇದ್ದರೆ ಸರ್ಕಾರ ಕಣ್ಣು ತೆರೆಯೋದಿಲ್ಲ ಎಂದಿದ್ದಾರೆ.
ದೇಶದಲ್ಲಿ ಶೇ.50ರಷ್ಟು ಮಂದಿ ಅಸಂಘಟಿತ ವಲಯದ ಕಾರ್ಮಿಕರು ಇದ್ದಾರೆ. ಅವರ ಬಗ್ಗೆ ಸರ್ಕಾರ ಗಮನಹರಿಸಬೇಕು. ಕಾಸ್ಟ್ ಆಫ್ ಲಿವಿಂಗ್ ದಿನೇದಿನೆ ಹೆಚ್ಚಾಗುತ್ತಿದೆ. ಕುಟುಂಬ ನಿರ್ವಹಣೆಗೆ ಹಣದ ಅವಶ್ಯಕತೆ ಜಾಸ್ತಿಯಾಗಿದೆ. ಕಾರ್ಮಿಕರ ಶ್ರಮಕ್ಕೆ ತಕ್ಕಂತೆ ವೇತನ ಸಿಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಬೇಕು ಎಂದು ಬಚ್ಚೇಗೌಡ ಹೇಳಿದ್ದಾರೆ.
ಸರ್ಕಾರಿ ಬಸ್ ಚಾಲಕ-ನಿರ್ವಾಹಕರಿಗೆ 8 ಗಂಟೆ ಕೆಲಸ ಎನ್ನುತ್ತಾರೆ. ಆದರೆ ದಿನಕ್ಕೆ 12-16ಗಂಟೆ ಕೆಲಸ ಮಾಡಿಸುತ್ತಿದ್ದಾರೆ. ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ಸಂಬಳ ಯಾರು ಕೊಡುತ್ತಾರೆ? ಅಸಂಘಟಿತ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಇಲ್ಲ. ಹೀಗೆ ಕಾರ್ಮಿಕರಿಗೆ ಹಲವು ಸಮಸ್ಯೆಗಳು ಇವೆ. ಹಾಗಂತ ಹೋರಾಟ ಮಾಡಿ ಎಂದು ನಾನು ಅವರಿಗೆ ಹೇಳೋದಿಲ್ಲ ಎಂದಿದ್ದಾರೆ. (ದಿಗ್ವಿಜಯ ನ್ಯೂಸ್)