ಕೋಟೆನಾಡಲ್ಲಿ ಬಂದ್​ಗೆ ಉತ್ತಮ ಪ್ರತಿಕ್ರಿಯೆ

ಬಾಗಲಕೋಟೆ: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕರೆ ನೀಡಿದ್ದ ಭಾರತ ಬಂದ್​ಗೆ ಸೋಮವಾರ ಜಿಲ್ಲಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಸರ್ಕಾರಿ, ಖಾಸಗಿ ಬಸ್​ಗಳ ಸಂಚಾರ ಸ್ಥಗಿತಗೊಂಡ ಪರಿಣಾಮ ಸಾರ್ವಜನಿಕರು ತೀವ್ರ ಪರದಾಡಿದರು. ಕೋಟೆನಾಡಿಗೂ ಬಂದ್ ಬಿಸಿ ಜೋರಾಗಿ ತಟ್ಟಿತು.

ಬಂದ್ ಹಿನ್ನೆಲೆ ಬೆಳಗ್ಗೆ 6 ಗಂಟೆಯಿಂದಲೆ ಬಾಗಲಕೋಟೆಯಲ್ಲಿ ಪ್ರತಿಭಟನೆ ಆರಂಭವಾಯಿತು. ಕಾಂಗ್ರೆಸ್, ಜೆಡಿಎಸ್, ಎಐಎಂಐಎಂ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸೇರಿ ವಿವಿಧ ಸಂಘಟನೆಗಳು ಬಂದ್​ಗೆ ಬೆಂಬಲ ಸೂಚಿಸಿ ಪ್ರತಿಭಟನೆ ನಡೆಸಿದವು. ಕೇಂದ್ರ ಸರ್ಕಾರದ ವಿರುದ್ಧ ಘೊಷಣೆ ಕೂಗಿ, ವಿಭಿನ್ನ ರೀತಿಯ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಬೀಳಗಿ, ಹುನಗುಂದ, ಬಾದಾಮಿ, ಇಳಕಲ್ಲ, ಅಮೀನಗಡ, ಕಮತಗಿ, ಕೆರೂರ, ಕಲಾದಗಿ, ಲೋಕಾಪುರ, ಮುಧೋಳ, ರಬಕವಿ-ಬನಹಟ್ಟಿ, ತೇರದಾಳ, ಜಮಖಂಡಿ, ಮಹಾಲಿಂಗಪುರ, ತುಬಚಿ ಹಾಗೂ ಜಿಲ್ಲೆಯ ವಿವಿಧೆಡೆ ಬಂದ್ ನಡೆಯಿತು. ಪ್ರಮುಖ ರಸ್ತೆಗಳಲ್ಲಿ, ವೃತ್ತಗಳಲ್ಲಿ ಧರಣಿ ನಡೆಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಆದರೆ ಗ್ರಾಮೀಣ ಪ್ರದೇಶಗಳ ಜನರಿಗೆ ಬಂದ್ ಬಿಸಿ ತಟ್ಟಲಿಲ್ಲವಾದರೂ ಬಸ್​ಗಳ ಸಂಚಾರವಿಲ್ಲದೆ ಪರದಾಡಿದರು.

ಮುಂಜಾಗ್ರತೆ ಕ್ರಮವಾಗಿ ಜಿಲ್ಲಾಧಿಕಾರಿ ಶಾಲಾ, ಕಾಲೇಜುಗಳಿಗೆ ರಜೆ ಘೊಷಣೆ ಮಾಡಿದ್ದರಿಂದ ವಿದ್ಯಾರ್ಥಿಗಳು ಶಾಲಾ, ಕಾಲೇಜುಗಳತ್ತ ಮುಖ ಮಾಡಲಿಲ್ಲ. ಸರ್ಕಾರಿ ಕಚೇರಿಗಳು, ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸಿದವಾದರೂ ಜನರಿಲ್ಲದೆ ಸಿಬ್ಬಂದಿ ಹರಟೆಯಲ್ಲಿ ತೊಡಗಿದ್ದರು.

ಬಸ್ ಸಂಚಾರ ಇಲ್ಲದ ಪರಿಣಾಮ ಜಿಲ್ಲೆಯ ಬಸ್ ನಿಲ್ದಾಣಗಳು, ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಕೂಲಿ ಕಾರ್ವಿುಕರು ಕೆಲಸವಿಲ್ಲದೆ ಮನೆಗೆ ಬರಿಗೈಯಲ್ಲಿ ವಾಪಸ್ಸಾದರು. ಜಿಲ್ಲಾದ್ಯಂತ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿತ್ತು. ವ್ಯಾಪಾರಸ್ಥರು ಸ್ವಯಂ ಪ್ರೇರಣೆಯಿಂದ ಅಂಗಡಿ ಬಂದ್ ಮಾಡಿದ್ದರು.

ಕೆಲವು ಅಂಗಡಿಕಾರರು ಬಂದ್​ಗೆ ಬೆಂಬಲ ವ್ಯಕ್ತಪಡಿಸದೆ ವ್ಯವಹಾರ ನಡೆಸಿದವು. ವಿವಿಧ ಸಂಘಟನೆಗಳು, ರಾಜಕೀಯ ಪಕ್ಷದ ಕಾರ್ಯಕರ್ತರು ಕೆಲವೆಡೆ ಒತ್ತಾಯ ಪೂರ್ವಕವಾಗಿ ಅಂಗಡಿ ಮುಂಗಟ್ಟು ಬಂದ್ ಮಾಡಿಸಿದರು.

ಸಂಘಟನೆಗಳ ಸರಣಿ ಪ್ರತಿಭಟನೆ: ಭಾರತ ಬಂದ್ ಹಿನ್ನೆಲೆ ವಿವಿಧ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದವು.

ಬಸವೇಶ್ವರ ವೃತ್ತದಲ್ಲಿ ಜಯಕರ್ನಾಟಕ, ಕರ್ನಾಟಕ ರಕ್ಷಣಾ ವೇದಿಕೆ, ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಪ್ರತ್ಯೇಕವಾಗಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದರು.

ಜಯಕರ್ನಾಟಕ ಸಂಘಟನೆಯ ಮುಖಂಡ ಜ್ಯೂ. ಉಪೇಂದ್ರ ಅವರು ಬೆಲೆ ಏರಿಕೆ ವಿರೋಧಿಸಿ ಆಟೋ, ಬೈಕ್​ಗಳನ್ನು ಸೈಕಲ್ ಹಾಗೂ ಕುದುರೆ ಗಾಡಿಗೆ ಕಟ್ಟಿ ಎಳೆದರೆ, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು, ಕತ್ತೆಗಳ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿ ಮೆರವಣಿಗೆ ನಡೆಸಿ, ಬಾಯಿ ಬಡಿದುಕೊಂಡು, ಗೋಳಾಡಿ ಅಳುತ್ತ ಪ್ರತಿಭಟಿಸಿದರು.

ಜೆಡಿಎಸ್ ಕಾರ್ಯಕರ್ತರು, ರಸ್ತೆಯಲ್ಲಿ ಒಲೆ ಹೂಡಿ ಉಪ್ಪಿಟ್ಟು ತಯಾರಿಸಿ ಉಪಾಹಾರ ಸೇವಿಸಿದರು. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೊಷಣೆ ಕೂಗಿದರು. ಪ್ರತಿಭಟನೆ ಮೆರವಣಿಗೆ ವೇಳೆ ಅಲ್ಲಲ್ಲಿ ತೆರೆದಿದ್ದ ಅಂಗಡಿಗಳನ್ನು ಬಂದ್ ಮಾಡಿಸಿದರು. ಜೆಡಿಎಸ್ ಮುಖಂಡರಾದ ಘನಶಾಮ ಭಾಂಡಗೆ, ರವಿ ಹಣಶ್ಯಾಳ, ಶರಣು ಹುರಕಡ್ಲಿ ಸೇರಿ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.