ಮರಗಳ ಮಾರಣ ಹೋಮಕ್ಕೆ ಆಕ್ರೋಶ

ಭರಮಸಾಗರ: ರಸ್ತೆ ವಿಸ್ತರಣೆ ನೆಪದಲ್ಲಿ ಆಗುತ್ತಿರುವ ಮರಗಳ ಮಾರಣ ಹೋಮ ನಿಲ್ಲಿಸಬೇಕೆಂದು ಪರಿಸರ ಪ್ರೇಮಿಗಳು ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಹಲವು ದಿನಗಳಿಂದ ಹಳೇ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ಇದಕ್ಕಾಗಿ ಈಗಾಗಲೇ 75ಕ್ಕೂ ಹೆಚ್ಚು ದೊಡ್ಡ ಮರಗಳನ್ನು ಕಡಿದುರುಳಿಸಲಾಗಿದೆ. ಇದೀಗ ಕಾಮಗಾರಿಗೆ ಅಡ್ಡಿಯಾಗದ ಮರಗಳನ್ನು ಕಡಿಯುವುದು ಏಕೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಮರಗಳನ್ನು ಕಡಿಯಲು ಬಂದ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡ ಯುವಕರು, ಒಂದು ಮರ ಕಡಿದರೆ ಪರ್ಯಾಯವಾಗಿ ಹತ್ತು ಗಿಡ ನೆಡಬೇಕೆಂಬ ನಿಯಮ ಅರಣ್ಯ ಇಲಾಖೆಯೇ ರೂಪಿಸಿದೆ. ಇದನ್ನು ಮೀರಿ ನಡೆವುದು ಯಾವ ನ್ಯಾಯ?. ಈ ಕೂಡಲೇ ಹಿಂದಿರುಗಿ ಹೋಗಬೇಕು. ಇಲ್ಲವಾದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಗೌಡ್ರು ರಾಜಣ್ಣ, ನಾಗರಾಜ, ಬಸವರಾಜ್, ಮೋಹನ್, ಮಂಜುನಾಥ್, ಅಜ್ಜಯ್ಯ, ಅನ್ವರ್ ಸಾಬ್, ಡಿ.ವಿ.ಚನ್ನಬಸಪ್ಪ, ದುರ್ಗೇಶ್ ಪ್ರತಿಭಟನೆಯಲ್ಲಿದ್ದರು.