ಅನಧಿಕೃತ ಕಟ್ಟಡ, ಗೂಡಂಗಡಿ ತೆರವು

ಭರಮಸಾಗರ: ಹಲವು ತಿಂಗಳಿಂದ ತೀವ್ರ ಚರ್ಚೆ ಹಾಗೂ ಕುತೂಹಲಕ್ಕೆ ಕಾರಣವಾಗಿದ್ದ ಪಟ್ಟಣದ ಹಳೇ ರಾಷ್ಟ್ರೀಯ ಹೆದ್ದಾರಿ ರಸ್ತೆ ವಿಸ್ತರಣೆಗೆ ಕೊನೆಗೂ ಮುಹೂರ್ತ ಫಿಕ್ಸಾಗಿದೆ.

ಬುಧವಾರ ತಹಸೀಲ್ದಾರ್ ಕಾಂತರಾಜ್ ನೇತೃತ್ವದಲ್ಲಿ, ರಸ್ತೆ ವಿಸ್ತರಣೆಗೆ ಅಡ್ಡಿಯಾಗುವ ಗೂಡಂಗಡಿ, ಕಟ್ಟಡಗಳ ತೆರವು ಕಾರ್ಯ ಜರುಗಿತು. ಕಾರ್ಯಾಚರಣೆ ಸುದ್ದಿ ತಿಳಿಯುತ್ತಿದ್ದಂತೆ ಕೆಲ ಅಂಗಡಿ ಮಾಲೀಕರು ಸ್ವಯಂ ಪ್ರೇರಣೆಯಿಂದ ಸಾಮಾನುಗಳನ್ನು ತೆರವುಗೊಳಿಸಿದರು.

ವಿಸ್ತರಣೆ ನಂತರ ರಸ್ತೆಯ ಎರಡೂ ಬದಿಯಲ್ಲಿ 5 ಅಡಿ ಚರಂಡಿ, 5 ಅಡಿ ಸಸಿ ನೆಡಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದರು.

ತೆರವು ಕಾರ್ಯದಿಂದ ರಸ್ತೆಯ ಉದ್ದಕ್ಕೂ ವ್ಯಾಪಾರ ವಹಿವಾಟು ಕುಂಠಿತಗೊಂಡಿತು. ಸಂಚಾರದ ಮೇಲೂ ಪರಿಣಾಮ ಬೀರಿತು.

ತಹಸೀಲ್ದಾರ್ ಕಾಂತರಾಜ್ ಮಾತನಾಡಿ, ರಸ್ತೆ ವಿಸ್ತರಣೆಗೆ ಅಡ್ಡಿಯಾಗುವ ಕಟ್ಟಡ, ಗೂಡಂಗಡಿ ತೆರವುಗೊಳಿಸುವಂತೆ ಮಾಲೀಕರಿಗೆ ಹಲವು ಬಾರಿ ನೋಟೀಸ್ ನೀಡಿದ್ದರೂ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಇಂದು ಪೊಲೀಸರ ರಕ್ಷಣೆಯಲ್ಲಿ ಮಿಂಚಿನ ತೆರವು ಕಾರ್ಯ ನಡೆಸಲಾಗಿದೆ. ಇದಕ್ಕೆ ಅಡ್ಡಿಪಡಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

4 ಗಂಟೆಗಳ ಕಾಲ ತಹಸೀಲ್ದಾರ್ ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಮನೆಗಳ ಮಾಲೀಕರು ಆರಂಭದಲ್ಲಿ ಕಾರ್ಯಾಚರಣೆಗೆ ವಿರೋಧಿಸಿ ಬಳಿಕ ಸಹಕರಿಸಿದರು. ವಿನಾಯಕ ಚಿತ್ರಮಂದಿರ ಬಳಿ ದೊಡ್ಡ ವೃತ್ತಕ್ಕೆ ಪಾಯಿಂಟ್ ಮಾಡಲಾಯಿತು.

ಲೋಕೋಪಯೋಗಿ ಇಲಾಖೆ ಇಂಜಿನೀಯರ್ ಗೋಪಾಲಪ್ಪ, ಸರ್ವೆ ಅಧಿಕಾರಿ ಹನುಮಂತರಾಯಪ್ಪ, ಉಪ ತಹಸೀಲ್ದಾರ್ ಶಶಿಧರ್, ಪಿಡಿಒ ಶ್ರೀದೇವಿ, ಪಿಎಸ್‌ಐ ರಾಜು, ಜಿಪಂ ಸದಸ್ಯ ಡಿ.ವಿ.ಶರಣಪ್ಪ, ತಾಪಂ ಸದಸ್ಯ ಕಲ್ಲೇಶ್, ಗ್ರಾಪಂ ಅಧ್ಯಕ್ಷ ಸಂತೋಷ್, ನಿವೃತ್ತ ಇಂಜಿನಿಯರ್ ಬಿ.ಎಸ್.ಚಂದ್ರಶೇಖರಪ್ಪ ಮತ್ತಿತರರಿದ್ದರು.

Leave a Reply

Your email address will not be published. Required fields are marked *