ಭರಮಸಾಗರ: ಕೆಡಿಪಿ ಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೇಲಧಿಕಾರಿಗಳಿಗೆ ಪತ್ರ ಬರೆಯಿರಿ ಎಂದು ಗ್ರಾಪಂ ಅಧ್ಯಕ್ಷೆ ಯು.ಬಿ.ಜಯಲಕ್ಷ್ಮಿ ಪಿಡಿಒಗೆ ಸೂಚಿಸಿದರು.
ಲಕ್ಷ್ಮೀಸಾಗರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮ ಪಂಚಾಯಿತಿ ಸ್ಥಳೀಯ ಸರ್ಕಾರ ಇದ್ದಂತೆ. ಇದರ ಬಗ್ಗೆ ನಿರ್ಲಕ್ಷೃ ವಹಿಸುವುದು ಸರಿಯಲ್ಲ. ಸರ್ಕಾರದ ವಿವಿಧ ಯೋಜನೆ, ಸೌಲಭ್ಯಗಳ ಬಗ್ಗೆ ಪಂಚಾಯಿತಿ ವ್ಯಾಪ್ತಿಯ ಜನರಿಗೆ ಮಾಹಿತಿ ನೀಡುವುದು ಅಧಿಕಾರಿಗಳ ಕರ್ತವ್ಯ ಎಂದರು.
ಕೇಂದ್ರ ಸರ್ಕಾರದ 14ನೇ ಹಣಕಾಸು ಯೋಜನೆ ಹಾಗೂ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಪೂರ್ಣಗೊಂಡ ಹಾಗೂ ಪ್ರಗತಿಯಲ್ಲಿರುವ ಕಾಮಗಾರಿ ಕುರಿತು ಸಭೆಗೆ ಮಾಹಿತಿ ನೀಡಿದ ಅವರು, ಜಾನುವಾರುಗಳಿಗೆ ಟ್ಯಾಗ್ ಅಳವಡಿಸುವಂತೆ ಪಶುಸಂಗೋಪನೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದರ ತಡೆಗೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ವಹಿಸಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅನುಷ್ಠಾನಗೊಂಡ ಮಾತೃಪೂರ್ಣ ಯೋಜನೆ ಅರ್ಹರಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದರು.
ಉಪಾಧ್ಯಕ್ಷ ವಿ.ಬಿ.ಧನಂಜಯ, ಸ್ಥಾಯಿ ಸಮಿತಿ ಅಧ್ಯಕ್ಷ ಧನಂಜಯ, ಜಲಾಮೃತ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಟಿ.ರಾಜಣ್ಣ, ಪಿಡಿಒ ಸಿ.ಎಲ್.ಬಸವರಾಜು, ಕಾರ್ಯದರ್ಶಿ ರುಬೀನಾ ದೊಡ್ಮನಿ ಹಾಗೂ ಸಿಬ್ಬಂದಿ ಇದ್ದರು.