ಭರಮಸಾಗರ-ಸಿರಿಗೆರೆ ಕೆರೆಗಳ ಭರ್ತಿ ಯೋಜನೆಗೆ ಅನುಮೋದನೆ

ಸಿರಿಗೆರೆ: ಭರಮಸಾಗರ-ಸಿರಿಗೆರೆ ಭಾಗದ ಕೆರೆ ತುಂಬಿಸುವ 1202 ಕೋಟಿ ರೂ. ವೆಚ್ಚದ ಯೋಜನೆ ಒಂದೆರಡು ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಗ್ರಾಮದ ಸದ್ಥರ್ಮ ನ್ಯಾಯಪೀಠದಲ್ಲಿ ಭಾಗವಹಿಸಿದ್ದ ಭರಮಸಾಗರ-ಸಿರಿಗೆರೆ ಕೆರೆ ಹೋರಾಟ ಸಮಿತಿ ಸದಸ್ಯರೊಂದಿಗೆ ಶ್ರೀಗಳು ಚರ್ಚಿಸಿದರು.

ರಾಜನಹಳ್ಳಿ ಏತ ನೀರಾವರಿ ಯೋಜನೆಯಡಿ ಸಿರಿಗೆರೆ-ಭರಮಸಾಗರ ಭಾಗದ 41 ಹಾಗೂ ಜಗಳೂರು-ದಾವಣಗೆರೆ ಭಾಗದ 53 ಕೆರೆಗಳಿಗೆ ನೀರು ತುಂಬಿಸುವ 1202 ಕೋಟಿ ರೂ. ವೆಚ್ಚದ ಯೋಜನೆಗೆ ಬೆಂಗಳೂರಿನಲ್ಲಿ ನಡೆದ ರಾಜ್ಯ ನೀರಾವರಿ ನಿಗಮದ ಸಭೆಯಲ್ಲಿ ಮಂಜೂರಾತಿ ದೊರೆತಿದೆ. ಶೀಘ್ರವೇ ಕಾಮಗಾರಿ ಆರಂಭಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ತುಂಗಭದ್ರಾ ನದಿಯಲ್ಲಿ ಬ್ಯಾರೇಜ್ ನಿರ್ಮಿಸಲು 16 ಕೋಟಿ ಮತ್ತು ಮಲ್ಲಶೆಟ್ಟಿ ಹಳ್ಳಿಯಲ್ಲಿ ಕೆರೆ ಅಭಿವೃದ್ಧಿಗೆ 5 ಕೋಟಿ, ತುಪ್ಪದಹಳ್ಳಿ ಕೆರೆ ಅಭಿವೃದ್ಧಿಗೆ 1.60 ಲಕ್ಷ ರೂ. ಮಂಜೂರು ಮಾಡಿಸಿದ್ದಕ್ಕೆ ಕೆರೆ ಹೋರಾಟ ಸಮಿತಿ ಅಧ್ಯಕ್ಷರು, ಸದಸ್ಯರು ಸ್ವಾಮೀಜಿ ಅವರಿಗೆ ಅಭಿನಂದನೆ ಸಲ್ಲಿಸಿದರು.

ಕೆರೆ ಹೋರಾಟ ಸಮಿತಿ ಅಧ್ಯಕ್ಷ ಶಶಿ ಪಾಟೀಲ್, ಕಾರ್ಯದರ್ಶಿ ಮಹಾಂತೇಶ್, ಪ್ರಗತಿಪರ ರೈತ ಜಿ.ಸಿ. ಶಿವಮೂರ್ತಿ, ಡಿ.ವಿ. ಶರಣಪ್ಪ, ಎಸ್‌ಎಂಎಲ್ ತಿಪ್ಪೇಸ್ವಾಮಿ, ಕೋಗುಂಡೆ ವಿರೂಪಾಕ್ಷಪ್ಪ, ಮಂಜಣ್ಣ, ಸಾಮಿಲ್ ಶಿವಣ್ಣ, ಹನುಮಂತಪ್ಪ, ವೀರಭದ್ರಪ್ಪ ಇತರರಿದ್ದರು.

ಯೋಜನೆ ಅನುಷ್ಠಾನಕ್ಕೆ ಶ್ರಮಿಸಿದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಭಿನಂದಿಸಲು ಫೆ.4ರಂದು ಬೆಂಗಳೂರಿಗೆ ತೆರಳಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.