ಭರಮಸಾಗರದಲ್ಲಿ ಆಲಿಕಲ್ಲು ಸಹಿತ ಹದ ಮಳೆ

ಭರಮಸಾಗರ: ಗ್ರಾಮದಲ್ಲಿ ಶುಕ್ರವಾರ ಸಂಜೆ 45 ನಿಮಿಷ ಆಲಿಕಲ್ಲು ಸಹಿತ ಹದ ಮಳೆಯಾಗಿದೆ. ವಿದ್ಯುತ್ ವ್ಯತ್ಯಯ ಹೊರತು ಯಾವುದೇ ಅನಾಹುತವಾದ ವರದಿಯಾಗಿಲ್ಲ.

ಏಪ್ರಿಲ್ ಆರಂಭ, ಕೊನೆ ಹಾಗೂ ಮೇ ತಿಂಗಳು ಸೇರಿ 4 ಬಾರಿ ಮಳೆಯಾಗಿದೆ. ರೈತರು ಕೃಷಿ ಚಟುವಟಿಕೆ ಕೈಗೊಳ್ಳಲು ತಯಾರಿ ನಡೆಸಿದ್ದಾರೆ. ಇನ್ನೊಂದೆರಡು ದೊಡ್ಡ ಮಳೆಯಾದರೆ ಒಣಗಿ ಹೋಗುತ್ತಿರುವ ತೋಟಗಾರಿಕಾ ಬೆಳೆಗಳಿಗೆ ಜೀವ ಬರುತ್ತದೆ ಎಂಬುದು ಅನ್ನದಾತರ ಅಭಿಪ್ರಾಯವಾಗಿದೆ.

ದೊಡ್ಡಕೆರೆಗೆ ನೀರು ಹರಿದು ಬರುವ ರಾಜ ಹಳ್ಳಕ್ಕೆ ಅಲ್ಲಲ್ಲಿ ಅಡೆತಡೆಯುಂಟಾಗಿದೆ. ಇದನ್ನು ತೆರವುಗೊಳಿಸಿ ಕೆರೆಗೆ ನೀರು ಸರಾಗವಾಗಿ ಹರಿಯಲು ಸಣ್ಣ ನೀರಾವರಿ ಇಲಾಖೆ ಕ್ರಮ ಕೈಗೊಳ್ಳಬೇಕು. ರಾಜಹಳ್ಳ ಮತ್ತು ರಾಜ ಕಾಲುವೆಗಳ ದುರಸ್ತಿಗೆ ಸಂಬಂಧಿಸಿದ ಇಲಾಖೆ ಮುಂದಾಗಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.