ಶಿವಣ್ಣ-ಹರ್ಷ ಕಾಂಬಿನೇಷನ್​ನಲ್ಲಿ ಭಜರಂಗಿ 2!

ಬೆಂಗಳೂರು: ‘ಸೀತಾರಾಮ ಕಲ್ಯಾಣ’ ಚಿತ್ರದ ನಂತರ ನಿರ್ದೇಶಕ ಹರ್ಷ ಏನು ಮಾಡಲಿದ್ದಾರೆ? ಈ ಪ್ರಶ್ನೆಗೆ ‘ಮೈ ನೇಮ್ ಈಸ್ ಆಂಜಿ’ ಎಂಬ ಉತ್ತರ ಸಿಕ್ಕಿತ್ತು. ‘ಭಜರಂಗಿ’, ‘ವಜ್ರಕಾಯ’ ನಂತರ ಮತ್ತೊಮ್ಮೆ ‘ಸೆಂಚುರಿ ಸ್ಟಾರ್’ ಶಿವರಾಜ್​ಕುಮಾರ್ ಮತ್ತು ಹರ್ಷ ಕಾಂಬಿನೇಷನ್​ನಲ್ಲಿ ‘…ಆಂಜಿ’ ಸಿದ್ಧಗೊಳ್ಳಲಿದೆ ಎನ್ನಲಾಗಿತ್ತು. ಆದರೆ, ಇಲ್ಲೊಂದು ಬದಲಾವಣೆ ಆಗಿದೆ. ಅದು ಶೀರ್ಷಿಕೆ ವಿಚಾರದಲ್ಲಿ! ಹೌದು, ಈ ಚಿತ್ರಕ್ಕೆ ‘ಮೈ ನೇಮ್ ಈಸ್ ಆಂಜಿ’ ಬದಲಾಗಿ ‘ಭಜರಂಗಿ 2’ ಎಂದು ನಾಮಕರಣ ಮಾಡಲಾಗಿದೆಯಂತೆ! ಆರು ವರ್ಷಗಳ ಹಿಂದೆ ತೆರೆಕಂಡಿದ್ದ ‘ಭಜರಂಗಿ’, ಶಿವರಾಜ್​ಕುಮಾರ್ ಮತ್ತು ಹರ್ಷ ಕರಿಯರ್​ನಲ್ಲಿ ದೊಡ್ಡ ಯಶಸ್ಸು ಕಂಡ ಚಿತ್ರಗಳಲ್ಲಿ ಒಂದು.

ಈ ಚಿತ್ರದ ಹಾಡು ಮತ್ತು ಆಕ್ಷನ್ ದೃಶ್ಯಗಳು ಮೋಡಿ ಮಾಡಿದ್ದವು. ಅದರಲ್ಲೂ ಐವತ್ತನೇ ವಯಸ್ಸಿನಲ್ಲಿ ಈ ಸಿನಿಮಾಕ್ಕಾಗಿ ಶಿವಣ್ಣ ಸಿಕ್ಸ್ ಪ್ಯಾಕ್ ಮಾಡಿದ್ದು ಆ ಸಂದರ್ಭದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಆದರೆ, ಈಗ ಮಾಡ ಹೊರಟಿರುವ ‘ಭಜರಂಗಿ 2’ ಚಿತ್ರ ಬೇರೆಯದೇ ಶೈಲಿಯ ಸಿನಿಮಾವಂತೆ. ಕಥೆ ಡಿಮಾಂಡ್ ಮಾಡಿದ್ದರಿಂದ ‘ಭಜರಂಗಿ 2’ ಎಂದು ಶೀರ್ಷಿಕೆ ಫಿಕ್ಸ್ ಮಾಡಲಾಗಿದೆಯೇ ವಿನಾ, ಹಿಂದಿನ ‘ಭಜರಂಗಿ’ ಸಿನಿಮಾಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲವಂತೆ. ಸದ್ಯ ಪ್ರಿ-ಪ್ರೋಡಕ್ಷನ್ ಕೆಲಸಗಳಲ್ಲಿ ಹರ್ಷ ಮಗ್ನರಾಗಿದ್ದಾರೆ. ಅದು ಮುಗಿಯುತ್ತಿದ್ದಂತೆ ಜೂನ್​ನಿಂದ ‘ಭಜರಂಗಿ 2’ ಶೂಟಿಂಗ್ ಶುರು ಮಾಡುವುದಕ್ಕೆ ಯೋಜನೆ ರೂಪಿಸಿದ್ದಾರೆ. ಜಯಣ್ಣ-ಭೋಗೇಂದ್ರ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಶಿವರಾಜ್​ಕುಮಾರ್​ಗೆ ನಾಯಕಿಯಾಗಿ ಭಾವನಾ ಮೆನನ್ ನಟಿಸುತ್ತಿದ್ದಾರೆ. ಈ ಹಿಂದೆ ‘ಟಗರು’ ಚಿತ್ರದಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿತ್ತು. ಅಂದಹಾಗೆ, ‘ಜಯಣ್ಣ ಕಂಬೈನ್ಸ್’ ಬ್ಯಾನರ್​ನಲ್ಲಿ ಶಿವಣ್ಣ ನಟಿಸುತ್ತಿರುವ 4ನೇ ಸಿನಿಮಾ ಇದಾಗಿದೆ.

Leave a Reply

Your email address will not be published. Required fields are marked *