ಸಿದ್ದಾಪುರ: ತಾಲೂಕಿನ ಭುವನಗಿರಿಯ ಭುವನೇಶ್ವರಿ ದೇವಸ್ಥಾನದಲ್ಲಿ ಸುಷಿರ ಸಂಗೀತ ಪರಿವಾರ ಭುವನಗಿರಿ- ಕಲ್ಲಾರೆಮನೆ ಹಾಗೂ ಶ್ರೀ ಭುವನೇಶ್ವರಿ ದೇವಾಲಯ ಆಶ್ರಯದಲ್ಲಿ ಸದ್ಗುರು ಶಾಸ್ತ್ರೀಯ ಸಂಗೀತ ವಿದ್ಯಾಲಯ ಸಾಗರ ಸಹಕಾರದೊಂದಿಗೆ ಆಯೋಜಿಸಿದ್ದ ಎರಡನೇ ವರ್ಷದ ಭಜಭುವನೇಶ್ವರಿ ಅಖಂಡ ಭಜನಾ ಕಾರ್ಯಕ್ರಮ ಕಲಾಸಕ್ತರ ಮನಸೂರೆಗೊಂಡಿತು.
ಕಾರ್ಯಕ್ರಮಕ್ಕೆ ಭುವನಗಿರಿ ದೇವಸ್ಥಾನದ ಅಧ್ಯಕ್ಷ ಶ್ರೀಕಾಂತ ಹೆಗಡೆ, ಸಿದ್ದಾಪುರದ ಶಿಕ್ಷಣ ಪ್ರಸಾರಕ ಸಮಿತಿ ಅಧ್ಯಕ್ಷ ಡಾ. ಶಶಿಭೂಷಣ ಹೆಗಡೆ ದೊಡ್ಮನೆ, ದೇವಾಲಯದ ಪ್ರಧಾನ ಅರ್ಚಕ ಶ್ರೀಧರ ಭಟ್ಟ ಮುತ್ತಿಗೆ ದೀಪ ಬೆಳಗಿಸಿ ಚಾಲನೆ ನೀಡಿದರು.
ಪಂ. ಶ್ರೀಪಾದ ಹೆಗಡೆ ಸೋಮನಮನೆ ಅವರ ಭಜನೆಯಿಂದ ಆರಂಭಗೊಂಡು, ನಂತರ ಸುಮಾರು 65ಕ್ಕೂ ಹೆಚ್ಚು ಕಲಾವಿದರು ನಿರಂತರ ಭಜನಾ ಕಾರ್ಯಕ್ರಮ ನಡೆಸಿ ದೇವಿಯ ಆರಾಧನೆಯಲ್ಲಿ ಪಾಲ್ಗೊಂಡರು.
ಪ್ರಸಿದ್ಧ ಕಲಾವಿದರಾದ ವಸುಧಾ ಶರ್ಮ ಹಳೆಇಕ್ಕೇರಿ, ಮನು ಹೆಗಡೆ ಪುಟ್ಟನಮನೆ, ವಿನಾಯಕ ಹೆಗಡೆ ಹಿರೇಹದ್ದ, ಮಹೇಶ್ ಕುಲಕರ್ಣಿ ಮುಂಬೈ, ವಿನಾಯಕ ಲಲಿತ್ ಮುಂಬೈ, ಗಜಾನನ ಪಾಟೀಲ ಮುಂಬೈ ಮತ್ತಿತರರು ತಮ್ಮ ಸುಶ್ರಾವ್ಯ ಗಾಯನದಿಂದ ಕಾರ್ಯಕ್ರಮಕ್ಕೆ ಮೆರಗು ನೀಡಿದರು.
ಕೊಳಲಿನಲ್ಲಿ ಪ್ರಕಾಶ್ ಹೆಗಡೆ ಕಲ್ಲಾರೆಮನೆ, ಸಂವಾದಿನಿಯಲ್ಲಿ ವಿನಾಯಕ ಲಲಿತ್ ಮುಂಬೈ, ಪ್ರಕಾಶ್ ಹೆಗಡೆ ಯಡಳ್ಳಿ, ಅಜಯ್ ಹೆಗಡೆ ವರ್ಗಾಸರ ಇತರರು ಹಾಗೂ ಪಕ್ವಾಜ್ನಲ್ಲಿ ಸೋಮದತ್ತ ಮಾನೆ ಮುಂಬೈ, ನರಸಿಂಹಮೂರ್ತಿ ಹಳೆಇಕ್ಕೇರಿ, ಅನಂತ ಭಟ್ಟ ಹೆಗ್ಗಾರಳ್ಳಿ, ತಬಲಾದಲ್ಲಿ ವಿನಾಯಕ ನಾಯಕ್ ಮುಂಬೈ, ಗುರುರಾಜ್ ಹೆಗಡೆ ಆಡುಕಳ, ನಿತಿನ್ ಹೆಗಡೆ ಕಲಗದ್ದೆ, ಮಹೇಶ ಹೆಗಡೆ ಹೊಸಗದ್ದೆ, ಮಂಜುನಾಥ ಮೋಟಿನಸರ, ತಾಳದಲ್ಲಿ ಅನಂತಮೂರ್ತಿ ಭಟ್ಟ ಮತ್ತಿಘಟ್ಟ ಸಹಕರಿಸಿದರು.
ತಾಲೂಕಿನ ಮಲ್ಲಿಕಾರ್ಜುನ ಭಜನಾ ಮಂಡಳಿ ಬಾಳೂರು, ರಾಮಾಂಜನೇಯ ಭಜನಾ ಮಂಡಳಿ ಹೊಸಳ್ಳಿ, ಮಾರುತಿ ಭಜನಾ ಮಂಡಳಿ ಬಿಳಗಿ, ಸ್ವರಗಂಗಾ ಭಜನಾ ಮಂಡಳಿ ಭುವನಗಿರಿ, ಓಂ ಶಾಂತಿ ಭಜನಾ ಮಂಡಳಿ ಸಿದ್ದಾಪುರ ಮತ್ತಿತರ ತಂಡಗಳು ಭಾಗವಹಿಸಿದ್ದವು.
ಜಯರಾಮ ಭಟ್ಟ ಗುಂಜಗೋಡು ಸ್ವಾಗತಿಸಿದರು. ಸುಷಿರ ಸಂಗೀತ ಪರಿವಾರದ ಸಂಚಾಲಕ ನಾರಾಯಣ ಹೆಗಡೆ ಮತ್ತು ಶ್ರೀಕಾಂತ ಹೆಗಡೆ ಗುಂಜಗೋಡ ಕಾರ್ಯಕ್ರಮ ನಿರ್ವಹಿಸಿದರು.