ಮಂಜುನಾಥ ಗದಗಿನ ಬೆಳಗಾವಿ
ಮದುವೆ, ಮಕ್ಕಳು ಆದನಂತರ ಅದೇಷ್ಟೋ ಜನರಿಗೆ ಇಷ್ಟೇ ಜೀವನ ಎಂದು ಕೈಕಟ್ಟಿ ಕುಳಿತು ಬಿಡುತ್ತಾರೆ. ಸಾಧನೆ ಹಾದಿ ನಮಗಲ್ಲ ಎನ್ನುತ್ತಾ ಕೌಟುಂಬಿಕ ಜೀವನದಲ್ಲಿ ಲೀನವಾಗುತ್ತಾರೆ. ಇಲ್ಲೋಬ ಸಾಧಕಿ ಮದುವೆ, ಮಗು ಆದ ನಂತರವೇ ರಾಜ್ಯದ ಉನ್ನತ ಹುದ್ದೆಯಾದ ಕೆಎಎಸ್ ಪರೀಕ್ಷೆ ಪಾಸ್ ಆಗಿ ಜನಸೇವೆಯಲ್ಲಿ ಮಾಡುತ್ತಿದ್ದಾರೆ. ಇದಷ್ಟೇ ಅಲ್ಲದೇ ತಾವು ಬರೆದ ಹತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂಬತ್ತು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಕಂಡಿದ್ದಾರೆ. ಇಂತಹ ಅನನ್ಯ ಸಾಧಕಿ ಇಂದಿನ ನಮ್ಮ ಗೆಸ್ಟ್ ಆಗಿದ್ದಾರೆ.
ಬೆಳಗಾವಿಯ ವಡಗಾಂವ ಭಾಗ್ಯಶ್ರೀ ರಾಮಚಂದ್ರ ಹುಗ್ಗಿ(ಗುಂಜೀರಿ) ಈ ಸಾಧಕಿ. ಬಡ ನೇಕಾರಿಕೆ ಕುಟುಂಬದಲ್ಲಿ ಜನಿಸಿ ಇದೀಗ ಯುವ ಸಮುದಾಯ, ಗೃಹಣಿಯರಿಗೆ ಸ್ಫೂರ್ತಿಯಾಗಿದ್ದಾರೆ. ನೀನು ಸಮಾಜದಲ್ಲಿ ಉನ್ನತ ಹುದ್ದೆಯಲ್ಲಿ ಇರಬೇಕು, ಅದೇ ನನ್ನ ಕನಸು ಎಂದು ತಂದೆ ಆಗಾಗ ಹೇಳುತ್ತಿದ್ದರು. ಇದೇ ಕಾರಣಕ್ಕೆ ಯುಪಿಎಸ್‌ಇ ಪಾಸ್ ಮಾಡಬೇಕು ಎಂಬ ಛಲತೊಟ್ಟು ಪಿಯುಸಿ ಇರುವಾಗಲೇ ಅಧ್ಯಯನ ಆರಂಭಿಸಿದರು. ಇದೇ ವೇಳೆ ತಂದೆ ಅಗಲಿದರು. ಏನೇ ಆದರೂ ತಂದೆ ಆಸೆ ಈಡೇರಿಸಬೇಕು ಎಂಬ ಛಲದೊಂದಿಗೆ ಯುಪಿಎಸ್‌ಇ ಓದಲು ಆರಂಭಿಸಿದರು. 2011ರಲ್ಲಿ ಮೊದಲ ಬಾರಿಗೆ ಯುಪಿಎಸ್‌ಇ ಪರೀಕ್ಷೆ ಬರೆದು. ಅದು ಕೈಗೂಡಲಿಲ್ಲ. ನಂತರ 2012ರಲ್ಲಿ ಗಜಾನನ ಗುಂಜುರಿ ಅವರೊಂದಿಗೆ ವಿವಾಹವಾಯಿತು.
ಸಾಧನೆ ಪತಿ ಸಾಥ್: ತಂದೆಯ ಆಸೆಯನ್ನು ಪತಿ ಮುಂದೆ ಹೇಳಿದಾಗ ಪತಿ ನೀನು ಯಾವುದಕ್ಕೂ ಹೆದರಬೇಡ, ನಿನ್ನ ಸಾಧನೆಗೆ ನಾನು ಬೆನ್ನೆಲುಬಾಗಿ ಇರುತ್ತೇನೆ ಎಂದು ಭಾಗ್ಯಶ್ರೀ ಅವರನ್ನು ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ಬಿಟ್ಟರು. 2014ರಲ್ಲಿ ಮತ್ತೆ ಯುಪಿಎಸ್‌ಇ ಪರೀಕ್ಷೆ ಬರೆದರು ಪ್ರಿಲಿಮ್ಸ್ ಪಾಸ್ ಮಾಡಿಕೊಂಡರು. ಆದರೆ, ಮೆನ್ಸ್ ಆಗಲಿಲ್ಲ. ಈ ಸಂದರ್ಭದಲ್ಲಿ ಅಬಕಾರಿ ಉಪನಿರೀಕ್ಷಕ ಪರೀಕ್ಷೆ ಪಾಸ್ ಆಗಿತ್ತು. ಆದರೆ, ಎತ್ತರ ಬರದೇ ಇರುವ ಕಾರಣಕ್ಕೆ ಈ ಹುದ್ದೆ ಕೈತಪ್ಪಿತು. ಇದಾದ ನಂತರ ಅಧಿಕಾರಿಯೊಬ್ವರು ನೀನು ಕೆಎಎಸ್ ಮಾಡು ಅಲ್ಲಿ ಹಲವು ಆಯ್ಕೆಗಳಿವೆ ಎಂದು ಮಾರ್ಗದರ್ಶ ನೀಡಿದರು.
10ರಲ್ಲಿ 9 ಪಾಸ್: 2016ರಲ್ಲಿ ನನಗೆ ಮಗ ಹುಟ್ಟಿದ. ಮಗ ಮೂರು ತಿಂಗಳು ಇರುವಾಗಲೇ ಪಿಡಿಒ ಸೇರಿ ಅನೇಕ ಹುದ್ದೆಗಳಿಗೆ ಅರ್ಜಿ ಕರೆದರು. ನಾನು ಒಂದು ತಿಂಗಳ ಕಾಲ ಪಿಡಿಒ ಕೋಚಿಂಗ್ ಪಡೆದುಕೊಂಡೆ. ಇದರೊಟ್ಟಿಗೆ ಮನೆಯಲ್ಲಿ ಓದುತ್ತಾ ಇದ್ದೆ. ನನ್ನ ಮನೆಯರು, ಅತ್ತೆ ನೀನು ಓದು ನಾವು ಮಗುವನ್ನು ನೋಡಿಕೊಳ್ಳುತ್ತೇವೆ ಎಂದು ಧೈರ್ಯ ತುಂಬಿದರು. ನಾನು ಸಹಿತ ಓದಿದೆ. 2016ರಲ್ಲೇ ಹತ್ತು ಸ್ಪರ್ಧಾತ್ಮಕ ಪರೀಕ್ಷೆ ಬರೆದೆ, ಅದರಲ್ಲಿ ಒಂಬತ್ತು ಹುದ್ದೆಗೆ ಆಯ್ಕೆಗೊಂಡೆ. ಎಸ್‌ಡಿಎ, ಎ್ಡಿಎ, ಪಂಚಾಯಿತಿ ಕಾರ್ಯದರ್ಶಿ, ಎಸ್‌ಬಿಐ, ಪ್ರಥಮ ದರ್ಜೆ ಕಂದಾಯ ನಿರೀಕ್ಷಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸುಪರ್‌ವೈಸರ್ ಹಾಗೂ ಪಿಡಿಒ ಹೀಗೆ ಒಂಬತ್ತು ಹುದ್ದೆಗೆ ಆಯ್ಕೆಯಾದೇನು.
2017ರಲ್ಲಿ ಕೆಎಎಸ್ ಪರೀಕ್ಷೆಗೆ ಕರೆದರು. ಅರ್ಜಿ ಹಾಕಿದೆ. ನಾನು ಯಾವುದೇ ಕೋಚಿಂಗ್ ಪಡೆಲಿಲ್ಲ. ಬದಲಾಗಿ ಮನೆಯಲ್ಲೇ ಕೆಎಎಸ್ ತಯಾರಿ ನಡೆಸಿದೆ. ಪರೀಕ್ಷೆ ಐದು ತಿಂಗಳು ಮಾತ್ರ ಅವಕಾಶವಿದ್ದ ಕಾರಣ ಓದಲು ಆರಂಭಿಸಿದೆ. ಮಗ ಮಲಗಿದ ನಂತರ ಅಂದರೆ ರಾತ್ರಿ 10 ನಂತರ ಕೆಎಎಸ್‌ಗೆ ಓದುತ್ತಿದೆ. ಮತ್ತೆ ಬೆಳಗ್ಗೆ ಬೇಗ ಎದ್ದು ಓದಲು ಲೈಬ್ರರಿಗೆ ಹೋಗುತ್ತಿದ್ದೆ. ಮತ್ತೆ ಸಂಜೆ 5ಗಂಟೆಗೆ ಮನೆ ತಲುಪುತ್ತಿದೆ. ಈ ವೇಳೆ ಸ್ನೇಹಿತರು ಓದಿಗೆ ಸಹಾಯ ಮಾಡಿದರಿ. ಅಂದುಕೊಂಡಂತೆ ಕೆಎಎಸ್ ಪಾಸ್ ಮಾಡಿ ತಂದೆ ಹಾಗೂ ಪತಿ ಆಸೆ ಈಡೇರಿಸಿದೆ. ಬೆಂಗಳೂರಿನಲ್ಲಿ ತರಬೇತಿ ಪಡೆದು ಬೆಳಗಾವಿ ಸದಲಗಾ ಪಪಂ ಮುಖ್ಯಾಧಿಕಾರಿಯಾಗಿ, ನಂತರ ಬೆಳಗಾವಿ ಪಾಲಿಕೆ ಉಪ ಆಯುಕ್ತೆಯಾಗಿ ಕಾರ್ಯ ಮಾಡಿದ್ದೇನೆ. ಸದ್ಯ ಸ್ಥಳ ನಿರೀಕ್ಷೆಯಲ್ಲಿ ಇದ್ದೇನೆ. ಕೆಎಎಸ್ ಪರೀಕ್ಷೆ ಬರೆದ ನಂತರ ಬೆಳಗಾವಿಯ ಕೆ.ಕೆ.ಕೊಪ್ಪ ಗ್ರಾಮದಲ್ಲಿ ಪಿಡಿಒ ಆಗಿ ಕಾರ್ಯ ನಿರ್ವಹಣೆ ಮಾಡಿದೆ. ನಂತರ ಕೆಎಎಸ್ ಸಂಬಂಧಿಸಿದ ಸಂದರ್ಶನ ಕೊಟ್ಟಿದ್ದೆ. ಪಿಡಿಒ ಆಗಿ ಉತ್ತಮ ಕಾರ್ಯ ನಿರ್ವಹಣೆ ಮಾಡಿದ್ದಕ್ಕೆ ಪ್ರಶಸ್ತಿಗಳು ಸಂದಿವೆ.
ಬಾಹ್ಯ ಪರೀಕ್ಷೆ
ಭಾಗ್ಯಶ್ರೀ ಅವರು ಪಿಯುಸಿ ಮುಗಿದ ನಂತರ ಬಿಎ ಬಾಹ್ಯವಾಗಿ ಆಗಿ ಮಾಡಿದರು. ಈ ವೇಳೆ ಮಕ್ಕಳಿಗೆ ಟ್ಯೂಷನ್ ಹೇಳುತ್ತಿದ್ದರು. ಇದರೊಟ್ಟಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತಯಾರಿ ನಡೆಸುತ್ತಿದ್ದರು. ಬಾಹ್ಯ ಬಿಎ ಮಾಡಿ ಕೆಎಎಸ್ ಪಾಸ್ ಆಗಿದ್ದು ಕೂಡ ಸಾಧನೆಯೇ ಸರಿ.
ರಾಜ್ಯಕ್ಕೆ ಏಳನೇ ರ‌್ಯಾಂಕ್
ಶಾಲೆ ದಿನಗಳಲ್ಲಿಯೇ ಭಾಗ್ಯಶರೀ ಹುಗ್ಗಿ ಅವರು ಆಟ, ಪಾಠದಲ್ಲಿ ಮುಂದಿದ್ದರು. ಪುಟಬಾಲ್ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ರಾಜ್ಯ ಪ್ರತಿನಿಧಿಸಿ ಸಾಧನೆ ಮಾಡಿದ್ದಾರೆ. 2005ರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಏಳನೇ ರ‌್ಯಾಂಕ್ ಪಡೆದುಕೊಂಡಿದ್ದರು.
ಸಾಧನೆ ಮಾಡಬೇಕು ಎಂಬ ಛಲ ಇದ್ದರೆ ಸಮಸ್ಯೆ, ಸವಾಲುಗಳು ಯಾವುದು ಲೆಕ್ಕಕ್ಕೆ ಬರುವುದಿಲ್ಲ. ನಾನು ಕೂಡ ಸಂಸಾರ ನಿರ್ವಹಣೆಯೊಂದಿಗೆ ಓದಿ ಕೆಎಎಸ್ ಅಧಿಕಾರಿಯಾಗಿದ್ದೇನೆ. ನನ್ನ ಈ ಸಾಧನೆಗೆ ನನ್ನ ಪತಿ ಹಾಗೂ ಕುಟುಂಬದ ಸಹಕಾರ ತುಂಬಾ ಇದೆ. ಮಹಿಳೆಯರು ಯಾವುದಕ್ಕೂ ಹೆದರದೇ ಮುನ್ನುಗ್ಗುವ ಧೈರ್ಯ ಬೆಳೆಸಿಕೊಳ್ಳಬೇಕು.