More

  ಬಾಕಿ ಭಾಗ್ಯಲಕ್ಷ್ಮಿ ಬಾಂಡ್ ವಿತರಣೆ

  ಮಂಗಳೂರು: ಕೆಲವೊಂದು ತಾಂತ್ರಿಕ ಕಾರಣಗಳಿಂದಾಗಿ 2013-18ರ ಮಧ್ಯೆ ಕೆಲವು ಮಕ್ಕಳಿಗೆ ಭಾಗ್ಯಲಕ್ಷ್ಮಿ ಬಾಂಡ್ ನೀಡಲು ಸಾಧ್ಯವಾಗಲಿಲ್ಲ, ಅಂಥವರನ್ನು ಗುರುತಿಸಿ ಏಕಗಂಟಿನಲ್ಲಿ ಅವರಿಗೆ ಬಾಂಡ್ ವಿತರಣೆಗೆ ನಿರ್ಧರಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಆಹಾರ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

  ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ತಮ್ಮ ಅಧೀನದ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಕೆಲವು ಫಲಾನುಭವಿ ಕುಟುಂಬಗಳಲ್ಲಿ ಮಕ್ಕಳು ಹುಟ್ಟಿ 1 ವರ್ಷದೊಳಗೆ ಬಿಪಿಎಲ್ ಕಾರ್ಡ್ ಬಂದಿಲ್ಲ ಎಂಬ ಕಾರಣಕ್ಕೆ ಆ ಮಕ್ಕಳು ಬಾಂಡ್ ವಂಚಿತರಾಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ನಾಳೆಯಿಂದಲೇ ಜಿಲ್ಲೆಯಲ್ಲಿ ಸಮೀಕ್ಷೆ ನಡೆಸಿ, ವರದಿ ಸಲ್ಲಿಸಿ, ಆ ಮಕ್ಕಳನ್ನೂ ಭಾಗ್ಯಲಕ್ಷ್ಮಿ ಯೋಜನೆಗೆ ಸೇರ್ಪಡೆ ಮಾಡಲಾಗುವುದು ಎಂದರು.

  ಖಾಸಗಿ ಪ್ಲೇಸ್ಕೂಲ್ ಮಾದರಿಯಲ್ಲಿಯೇ ಅಂಗನವಾಡಿಗಳನ್ನು ಅಭಿವೃದ್ಧಿಪಡಿಸಬೇಕು, ಅಂಗನವಾಡಿಗಳನ್ನು ಮಕ್ಕಳಿಗೆ ಇಷ್ಟವಾಗುವಂತೆ ರೂಪಿಸಬೇಕಿದೆ, ಅಂತಹ ವಿನ್ಯಾಸವನ್ನು ಸಿದ್ಧಪಡಿಸಲಾಗುತ್ತಿದ್ದು, ಹೊಸ ಅಂಗನವಾಡಿಗಳನ್ನು ಅದೇ ಮಾದರಿಯಲ್ಲಿ ರಾಜ್ಯಾದ್ಯಂತ ನಿರ್ಮಿಸಲಾಗುವುದು, ಹಳೇ ರೀತಿಯ ಆಟಿಕೆಗಳ ಜತೆ ಮಕ್ಕಳು ಇಷ್ಟಪಡುವಂತಹ ಡಿಜಿಟಲ್ ರೂಪದ ಆಟಿಕೆಗಳನ್ನು ಒದಗಿಸುವ ಚಿಂತನೆ ಇದೆ ಎಂದರು.
  ಇಲಾಖೆ ಉಪನಿರ್ದೇಶಕರು, ಶಿಶು ಅಭಿವೃದ್ಧಿ ಅಧಿಕಾರಿ, ಮೇಲ್ವಿಚಾರಕಿಯರು ಇಲಾಖೆಯ ಯೋಜನೆಗಳನ್ನು ಇನ್ನಷ್ಟು ವಿಸ್ತರಿಸಬೇಕು, ಪೋಷಣ್ ಯೋಜನೆಗೆ ಸಂಬಂಧಿಸಿದಂತೆ ಗರ್ಭಿಣಿಯರ ಸೀಮಂತ, ಮಕ್ಕಳ ಅನ್ನಪ್ರಾಶನದಂತಹ ಕಾರ್ಯಕ್ರಮಗಳನ್ನು ಊರಿಗೆ ಸೀಮಿತವಾಗಿ ನಡೆಸುವ ಬದಲು ಜನಪ್ರತಿನಿಧಿಗಳನ್ನು ಕರೆದು ತಾಲೂಕು ಮಟ್ಟದಲ್ಲೇ ನಡೆಸಬೇಕು, ಇದರಿಂದ ಇಲಾಖೆಗೂ ಒಳ್ಳೆ ಹೆಸರು ಬರುತ್ತದೆ ಎಂದರು.

  ಸದ್ಯ ಇಲಾಖೆಯ ವೆಬ್‌ಸೈಟ್ ಝೀರೋ ಇದೆ, ಅದನ್ನು ಚುರುಕುಗೊಳಿಸುವ ಕೆಲಸ ಇನ್ನು 15 ದಿನದೊಳಗೆ ಆಗುತ್ತದೆ. ಪೋಷಣ್ ಅಭಿಯಾನದ ಅಂಗವಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ಆ್ಯಪ್ ಒದಗಿಸಲಾಗುವುದು, ಅವರು ಅದರಲ್ಲಿ ಮಗುವಿನ ಪೋಷಣೆ, ಬೆಳವಣಿಗೆಯನ್ನು ಅಪ್‌ಡೇಟ್ ಮಾಡಬೇಕಾಗುತ್ತದೆ, ಈ ಯೋಜನೆಯಲ್ಲಿ ಪ್ರಸ್ತುತ ಕರ್ನಾಟಕ ಹಿಂದಿದೆ, ಅದನ್ನು ಉತ್ತೇಜಿಸಬೇಕಿದೆ ಎಂದರು.

  ಮಾತೃಪೂರ್ಣ ಯೋಜನೆ ಬದಲಾಯಿಸಿ: ಮಾತೃಪೂರ್ಣ ಯೋಜನೆಯಡಿ ಗರ್ಭಿಣಿಯರು ಊಟಕ್ಕಾಗಿ ಅಂಗನವಾಡಿಗೆ ಬರಬೇಕಾಗುತ್ತದೆ, ಆದರೆ ಅದಕ್ಕೆ ಹೆಚ್ಚಿನವರು ಒಪ್ಪುತ್ತಿಲ್ಲ, ಜಿಲ್ಲೆಯಲ್ಲಿ ಮಳೆಗಾಲದ ನಾಲ್ಕು ತಿಂಗಳು ಬರುವುದು ಕಷ್ಟವಾಗುತ್ತದೆ, ಅದರ ಬದಲು ಅವರಿಗೆ ಆಹಾರವಸ್ತುವನ್ನೇ ಒದಗಿಸುವುದು ಸೂಕ್ತ, ಈ ಕುರಿತು ನೀತಿಯಲ್ಲಿ ಬದಲಾವಣೆ ತರಬೇಕು ಎಂದು ಅಧಿಕಾರಿಗಳು, ಅಂಗನವಾಡಿ ಮೇಲ್ವಿಚಾರಕಿಯರು ಸಚಿವರ ಗಮನಕ್ಕೆ ತಂದರು. ಇತರ ಜಿಲ್ಲೆಗಳಲ್ಲೂ ಇದೇ ರೀತಿಯ ದೂರುಗಳಿವೆ, ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಜೊಲ್ಲೆ ತಿಳಿಸಿದರು.
  ಜಿ.ಪಂ ಅಧ್ಯಕ್ಷ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷ ಕಸ್ತೂರಿ ಪಂಜ, ಜಿ.ಪಂ ಸಿಇಒ ಡಾ.ಆರ್.ಸೆಲ್ವಮಣಿ, ಜಿ.ಪಂ ಸದಸ್ಯೆ ಮಮತಾ ಶೆಟ್ಟಿ, ಆಹಾರ ಇಲಾಖೆ ಜಂಟಿ ನಿರ್ದೇಶಕ ಡಾ.ಮಂಜುನಾಥನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉಸ್ಮಾನ್ ಹಾಜರಿದ್ದರು.

  ಅಕ್ಕಿ ಜತೆ ಗೋಧಿ: ಪಡಿತರ ಗ್ರಾಹಕರಿಗೆ ಅಕ್ಕಿ ಜೊತೆಗೆ ಗೋಧಿ ಕೂಡ ನೀಡುವ ಕುರಿತು ಅಧಿಕಾರಿ ಮಟ್ಟದಲ್ಲಿ ಸಭೆ ನಡೆಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
  ಕರಾವಳಿಯಲ್ಲಿ ಬೆಳ್ತಿಗೆ ಅಕ್ಕಿಯಲ್ಲದೆ ಕುಚ್ಚಲಕ್ಕಿ ಕೂಡ ಪಡಿತರ ಚೀಟಿದಾರರಿಗೆ ನೀಡಲಾಗುತ್ತಿದೆ. ಈ ವೇಳೆ ಅಕ್ಕಿ ಮಾತ್ರವಲ್ಲ, ಗೋಧಿ ಕೂಡ ನೀಡಬೇಕು ಎಂಬ ಬೇಡಿಕೆ ವ್ಯಕ್ತಗೊಂಡಿದೆ. ಪಡಿತರ ಗ್ರಾಹಕರ ಬೇಡಿಕೆ ಗಮನಿಸಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಜಿಲ್ಲೆಯಲ್ಲಿರುವ ಮಕ್ಕಳ ಪಾಲನಾ ಸಂಸ್ಥೆಗಳಿಗೆ ಅಕ್ಕಿ ಉಚಿತ ಪೂರೈಕೆ ಸ್ಥಗಿತಗೊಂಡಿರುವುದು ಗಮನಕ್ಕೆ ಬಂದಿದೆ. ಇದನ್ನು ಮುಂದುವರಿಸುವ ಬಗ್ಗೆ ಸರ್ಕಾರಿ ಮಟ್ಟದಲ್ಲಿ ಚಿಂತನೆ ನಡೆಸಲಾಗಿದೆ ಎಂದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts