ಉಡುಪಿ: ರಾಜ್ಯ ಸರ್ಕಾರ 2006ರಲ್ಲಿ ಜಾರಿಗೆ ತಂದ ‘ಭಾಗ್ಯ ಲಕ್ಷ್ಮೀ’ ಯೋಜನೆಯಡಿ ಬಾಂಡ್ ವಿತರಣೆ ಕಾರ್ಯ ಚುರುಕು ಪಡೆದಿದೆ. ಉಡುಪಿ ಜಿಲ್ಲೆಯಲ್ಲಿ 2019ರ ಸೆಪ್ಟೆಂಬರ್ವರೆಗೆ 41,428 ಅರ್ಜಿ ಸಲ್ಲಿಕೆಯಾಗಿದ್ದು, 37,488 ಮಂದಿಗೆ ಬಾಂಡ್ ವಿತರಿಸಲಾಗಿದೆ. 7,247 ಬಾಂಡ್ಗಳು ವಿತರಣೆಗೆ ಬಾಕಿ ಇವೆ. ಹೆಚ್ಚಿನ ಪ್ರಮಾಣದಲ್ಲಿ ಅರ್ಜಿ ಸಲ್ಲಿಕೆಯಾಗುತ್ತಿರುವುದು ಕುಂದಾಪುರದಿಂದ. ಇಲ್ಲಿವರೆಗೆ 18,593 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ 16,584 ಜನರಿಗೆ ಬಾಂಡ್ ವಿತರಣೆಯಾಗಿದೆ. ಉಡುಪಿಯಲ್ಲಿ 5,745, ಕಾರ್ಕಳದಲ್ಲಿ 5,497, ಬ್ರಹ್ಮಾವರದಲ್ಲಿ 9,580 ಅರ್ಜಿಗಳು ಸಲ್ಲಿಕೆಯಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 40,711 ಫಲಾನುಭವಿಗಳಿಗೆ ಯೋಜನೆ ಮಂಜೂರಾಗಿದ್ದು, 37,057 ಮಂದಿಗೆ ಬಾಂಡ್ ವಿತರಿಸಲಾಗಿದೆ. 3,654 ಮಂದಿಗೆ ವಿತರಣೆಗೆ ಬಾಕಿ ಇದೆ. ಬೆಳ್ತಂಗಡಿಯಲ್ಲಿ 7528, ಸುಳ್ಯ 3074, ಮಂಗಳೂರು ನಗರ 1998, ಮಂಗಳೂರು ಗ್ರಾಮಾಂತರ 9038, ಬಂಟ್ವಾಳ 5814, ವಿಟ್ಲ 3671, ಪುತ್ತೂರಿನಲ್ಲಿ 5934 ಮಂದಿ ಫಲಾನುಭವಿಗಳಿಗೆ ಬಾಂಡ್ ವಿತರಿಸಲಾಗಿದೆ ಎಂದು ದ.ಕ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಸುಂದರ ಪೂಜಾರಿ ತಿಳಿಸಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವ, ಪಡಿತರ ಚೀಟಿ ಹೊಂದಿರುವ ಕುಟುಂಬದ ಎರಡು ಹೆಣ್ಣು ಮಕ್ಕಳು ಭಾಗ್ಯಲಕ್ಷ್ಮೀ ಯೋಜನೆಯಡಿ ಆರ್ಥಿಕ ಸೌಲಭ್ಯ ಪಡೆಯಲು ಅರ್ಹರಾಗಿದ್ದು, ಮೊದಲ ಹೆಣ್ಣು ಮಗುವಿನ ಹೆಸರಲ್ಲಿ 19,300 ರೂ, ಎರಡನೇ ಹೆಣ್ಣು ಮಗುವಿನ ಹೆಸರಲ್ಲಿ 18,350 ರೂ. ಮೊತ್ತವನ್ನು ಸರ್ಕಾರ ಪಾಲುದಾರ ಹಣಕಾಸು ಸಂಸ್ಥೆಯಲ್ಲಿ ಪ್ರಾರಂಭಿಕ ಠೇವಣಿ ಇಡುತ್ತದೆ. 18 ವರ್ಷ ಪೂರ್ಣಗೊಂಡ ನಂತರ ಹೆಣ್ಣು ಮಕ್ಕಳು 1 ಲಕ್ಷ ರೂ. ಪಡೆಯಬಹುದು. ಆರ್ಥಿಕ ಸಹಾಯವನ್ನು ಎಲ್ಐಸಿ ಸಹಯೋಗದೊಂದಿಗೆ ವಿತರಿಸಲಾಗುತ್ತಿದೆ.
732 ಡೆತ್ ಕ್ಲೇಮ್ ಯೋಜನೆ ಮಂಜೂರು:
ಫಲಾನುಭವಿ ಹೆಣ್ಣುಮಗುವಿನ ತಂದೆ ಮೃತಪಟ್ಟರೆ ಹೆಣ್ಣು ಮಗುವಿಗೆ ಬಾಂಡ್ನ ಶೇ.75ರಷ್ಟು ಮೊತ್ತ ಸಿಗುತ್ತದೆ. ಜಿಲ್ಲೆಯಲ್ಲಿ ಡೆತ್ ಕ್ಲೇಮ್ಗೆ 447 ಜನರು ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಉಡುಪಿ 54, ಕುಂದಾಪುರ 108, ಬ್ರಹ್ಮಾವರ 86, ಕಾರ್ಕಳದಲ್ಲಿ 50 ಮಂದಿ ಸೇರಿದಂತೆ ಒಟ್ಟು 298 ಫಲಾನುಭವಿಗಳಿಗೆ ಹಣ ಪಾವತಿಯಾಗಿದೆ. ಡೆತ್ ಕ್ಲೇಮ್ ಯೋಜನೆಗೆ ದ.ಕ. ಜಿಲ್ಲೆಯಲ್ಲಿ 500 ಫಲಾನುಭವಿಗಳ ಹೆಸರನ್ನು ಎಲ್ಐಸಿಗೆ ಸಲ್ಲಿಸಲಾಗಿದ್ದು, 434 ಫಲಾನುಭವಿಗಳಿಗೆ ಹಣ ಪಾವತಿಸಲಾಗಿದೆ. ಬೆಳ್ತಂಗಡಿ 31, ಬಂಟ್ವಾಳ 48, ಮಂಗಳೂರು ನಗರ 23, ಮಂಗಳೂರು ಗ್ರಾಮಾಂತರ 96, ಪುತ್ತೂರು 65, ಸುಳ್ಯ 34 ಮತ್ತು ವಿಟ್ಲದಲ್ಲಿ 36 ಮಂದಿಗೆ ಮೊತ್ತ ಪಾವತಿಸಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಭಾಗ್ಯಲಕ್ಷ್ಮೀ ಯೋಜನೆಯಡಿ ನೋಂದಾಯಿಸಿಕೊಳ್ಳುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಸೂಕ್ತ ಸಮಯದಲ್ಲಿ ಬಾಂಡ್ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಗ್ರೇಸಿ ಗೊನ್ಸಾಲ್ವಿಸ್, ಉಪನಿರ್ದೇಶಕಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ