ಶ್ರೀರಂಗಪಟ್ಟಣ: ಭಗೀರಥ ಮಹರ್ಷಿಗಳು ಲೋಕಕಲ್ಯಾಣರ್ಥವಾಗಿ ಹಿಮಾಲಯದಲ್ಲಿ ಅಖಂಡ ತಪಸ್ಸು ಮಾಡಿ ಶಿವನನ್ನು ಪ್ರಾರ್ಥಿಸಿ ಗಂಗೆಯನ್ನು ಧರೆಗೆ ಕರೆತಂದ ಮಹಾಪುರುಷ ಎಂದು ಪಾಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷಿ ತಿಳಿಸಿದರು.

ತಾಲೂಕಿನ ಪಾಲಹಳ್ಳಿಯಲ್ಲಿ ಭಾನುವಾರ ಗ್ರಾಮದ ಉಪ್ಪಾರ ಸಮುದಾಯ ಹಮ್ಮಿಕೊಂಡಿದ್ದ ಶ್ರೀ ಭಗೀರಥ ಮಹರ್ಷಿಗಳ ಜಯಂತ್ಯುತ್ಸವದಲ್ಲಿ ಶ್ರೀ ಭಗಿರಥರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.
ನಾವು ಕೈಗೊಂಡ ಕಾರ್ಯಗಳು ನಿಷ್ಕಲ್ಮಶ ಮನಸ್ಥಿತಿ ಹಾಗೂ ಸೇವಾ ಮನೋಭಾವದ ಜತೆಗೆ ಶ್ರದ್ಧೆಯಿಂದ ಕೂಡಿರಬೇಕು. ಲೋಕಕಲ್ಯಾಣರ್ಥ ಮಾಡುವ ಪ್ರಾಮಾಣಿಕ ಶ್ರಮಕ್ಕೆ ಭಗೀರಥ ಪ್ರಯತ್ನ ಎಂದು ಜನರು ಕರೆಯುವುದು ಇದಕ್ಕೊಂದು ದೊಡ್ಡ ಉದಾಹರಣೆ ಎಂದು ಬಣ್ಣಿಸಿದರು.
ಸಮುದಾಯದ ಮುಖಂಡ ಹಾಗೂ ನಿವೃತ್ತ ಅರಣ್ಯಾಧಿಕಾರಿ ಮಲ್ಲಶೆಟ್ಟಿ ಮಾತನಾಡಿ, ಸೂರ್ಯವಂಶದ ಮಹಾರಾಜ ಭಗೀರಥರು ಜನಹಿತಕ್ಕಾಗಿ ತಪಸ್ಸು ಕೈಗೊಂಡು ಪ್ರಾರ್ಥಿಸಿದ ಶ್ರಮದ ಫಲವಾಗಿ ಸಾಕ್ಷತ್ ಶಿವನೇ ಪ್ರತ್ಯಕ್ಷಗೊಂಡು ಗಂಗೆಯನ್ನು ಧರೆಗೆ ಭಾಗೀರತಿ ನದಿಯಾಗಿ ಕಳಿಸಿಕೊಟ್ಟನು ಎಂಬ ನಂಬಿಕೆ ಇದೆ. ನಮ್ಮ ಸಮುದಾಯದ ಜನರು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಸಮಾಜಮುಖಿಯಾಗಿ ಮುನ್ನೆಲೆಗೆ ಬರಬೇಕು. ಅದಕ್ಕಾಗಿ ಶಿಕ್ಷಿತರಾಗಿ ನಮ್ಮ ಮಕ್ಕಳಿಗೂ ಶಿಕ್ಷಣಕೊಡಿಸಿ ಸಂಘಟಿತರಾಗಬೇಕು ಎಂದು ಸಲಹೆ ನೀಡಿದರು.
ಇದಕ್ಕೂ ಮೊದಲು ಗ್ರಾಮದ ಬಸ್ ನಿಲ್ದಾಣದಲ್ಲಿ ನೂತನವಾಗಿ ಅಳವಡಿಸಿರುವ ಶ್ರೀ ಭಗಿರಥ ಉಪ್ಪಾರರ ಸಂಘದ ನಾಮಫಲಕವನ್ನು ಗ್ರಾಪಂ ಜನಪ್ರತಿನಿಧಿಗಳು ಮತ್ತು ಸಮುದಾಯದ ಮುಖಂಡರ ಸಮ್ಮುಖದಲ್ಲಿ ಗ್ರಾಪಂ ಅಧ್ಯಕ್ಷೆ ಜಯಲಕ್ಷಿ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಆಶಾ, ಸದಸ್ಯರಾದ ದಿನೇಶ್, ರಾಘು, ಪಾಂಡೀ ಲೋಕೇಶ್, ಭಗೀರಥ ಸಂಘಟನೆ ಅಧ್ಯಕ್ಷ ಗೋಪಾಲ್, ಉಪಾಧ್ಯಕ್ಷ ಕುಮಾರ್, ಪ್ರಧಾನ ಕಾರ್ಯದರ್ಶಿ ರಾಜೇಶ್, ಖಜಾಂಚಿ ಕೋಳಿಮಂಜು, ಸಮುದಾಯದ ಮುಖಂಡ ಬಸವರಾಜು ಇತರರಿದ್ದರು.