ನಿರಾಸಕ್ತ, ಇಂದ್ರಿಯಜಿತ, ಸಮಚಿತ್ತವುಳ್ಳವನೇ ಸ್ಥಿತಪ್ರಜ್ಞ

| ಸ್ವಾಮಿ ಹರ್ಷಾನಂದಜೀ

ಶ್ರೀರಾಮಕೃಷ್ಣ ಪರಮಹಂಸರ ಜೀವನದಲ್ಲಿ ಇಂತಹದ್ದೇ ಸ್ಥಿತಪ್ರಜ್ಞತ್ವ ಘಟನೆ ನಡೆಯಿತು. ಅವರು ಕಾಳಿಕಾಮಾತೆಯ ಪೂಜೆಯನ್ನು ತಮ್ಮ ಸೋದರಳಿಯ ಹೃದಯರಾಮನಿಗೆ ಒಪ್ಪಿಸಿದರು. ದೇವಾಲಯದ ಧರ್ಮದರ್ಶಿ ಮಥುರಾನಾಥಬಾಬು ದಿವಂಗತನಾಗಿದ್ದ. ಅವನ ಮಗ ದ್ವಾರಕಾನಾಥ ದೇವಾಲಯದ ಆಡಳಿತಾಧಿಕಾರಿಯಾಗಿದ್ದ. ಒಮ್ಮೆ ಅವನು ತನ್ನ ಏಳು ವರ್ಷದ ಮಗಳೊಡನೆ ದೇವಾಲಯಕ್ಕೆ ಬಂದಾಗ ಕಾಳಿಕಾಮಾತೆಗೆ ಆರತಿ ಮಾಡುತ್ತಿದ್ದ ಹೃದಯರಾಮ ಆ ಮಗುವನ್ನು ನೋಡಿದ. ಶ್ರೀರಾಮಕೃಷ್ಣ ಪರಮಹಂಸರಂತೆ ತಾನೂ ಏಕೆ ಮಾಡಬಾರದೆಂದು ಅದೇ ಆರತಿಯಿಂದ ಆ ಬಾಲಕಿಗೂ ಆರತಿ ಮಾಡಿದ. ಬ್ರಾಹ್ಮಣ ಹೀಗೆ ಮಾಡಿದರೆ ದೀರ್ಘಾಯುಸ್ಸು ಗತಿಸಿ ಮಗು ಸಾಯುವುದೆಂಬ ಮೂಢನಂಬಿಕೆ ಅವರಲ್ಲಿತ್ತು. ಇದರಿಂದ ಬಹಳವಾಗಿ ಕೋಪಗೊಂಡ ದ್ವಾರಕಾನಾಥ ಹೃದಯರಾಮನ್ನು ದೇವಾಲಯದಿಂದ ಓಡಿಸಲು ಆಳುಗಳಿಗೆ ಆಜ್ಞಾಪಿಸಿದ. ತಕ್ಷಣ ಅವನ ಆಳುಗಳು ದೊಣ್ಣೆ ಹಿಡಿದು ಬಂದರು. ಹೃದಯರಾಮ ಓಡಲಾರಂಭಿಸಿದ. ಅವನು ಶ್ರೀರಾಮಕೃಷ್ಣ ಪರಮಹಂಸರು ಇದ್ದಲ್ಲಿಗೆ ಬಂದು ಕಾಪಾಡಿರೆಂದು ಕಾಲಿಗೆ ಬಿದ್ದ. ಅವರು ಅರ್ಧ ಸಮಾಧಿಯಲ್ಲಿದ್ದರು. ಆಳುಗಳು ಅಲ್ಲಿಗೇ ಹಿಂಬಾಲಿಸಿ ಬಂದಾಗ ಮತ್ತೆ ಓಡಿದ. ಆಗ ಆಳುಗಳಲ್ಲೊಬ್ಬ, ‘ಹೇ ಹುಚ್ಚ, ನೀನೂ ಆಚೆಗೆ ಹೋಗು’ ಎಂದು ಶ್ರೀರಾಮಕೃಷ್ಣ ಪರಮಹಂಸರಿಗೆ ಗದರಿದ. ಅವರು ಎದ್ದು ಹೊರಗೆ ದ್ವಾರಬಾಗಿಲ ಕಡೆಗೆ ನಡೆದರು. ಆ ಹೊತ್ತಿಗೆ ಈ ಸುದ್ದಿ ದ್ವಾರಕಾನಾಥನಿಗೆ ತಿಳಿಯಿತು. ಅವನು ಆಳುಗಳಿಗೆ ಬೈದು, ಓಡಿಬಂದು ಶ್ರೀರಾಮಕೃಷ್ಣ ಪರಮಹಂಸರ ಕಾಲಿಗೆ ಬಿದ್ದನು. ‘ನೀವು ಹೋಗಬಾರದು. ನೀವು ಹೋದರೆ ನನ್ನ ಸರ್ವಸ್ವವೂ ನಾಶವಾಗುವುದು. ದಯವಿಟ್ಟು ನೀವು ಹಿಂತಿರುಗಬೇಕು’ ಎಂದು ಪ್ರಾರ್ಥಿಸಿದ. ಶ್ರೀರಾಮಕೃಷ್ಣ ಪರಮಹಂಸರು ಹಿಂತಿರುಗಿದರು. ದಕ್ಷಿಣೇಶ್ವರದಿಂದ ಹೋಗಲು, ಹಿಂದಿರುಗಲು ಎರಡಕ್ಕೂ ಸಿದ್ಧರಾಗಿದ್ದ ಅವರು ಮಾತೇ ಆಡಲಿಲ್ಲ.

ರಾಗ: ರಾಗ, ಭಯ, ಕ್ರೋಧಗಳನ್ನು ಸ್ಥಿತಪ್ರಜ್ಞ ತ್ಯಜಿಸಿರುತ್ತಾನೆ. ರಾಗ ಶಬ್ದವು ‘ರಂಜ್’ ಎಂಬ ಧಾತುವಿನಿಂದ ಬಂದಿದೆ. ರಾಗ ಎಂದರೆ ಬಣ್ಣ ಹತ್ತಿಕೊಳ್ಳುವುದು ಎಂದರ್ಥ. ಬಟ್ಟೆಗೆ ಬಣ್ಣ ಹತ್ತಿದರೆ ಸುಲಭವಾಗಿ ಹೋಗದು. ಹಾಗೆಯೇ ಮನಸ್ಸಿಗೆ ಸಂಬಂಧ, ಸಂಗ, (ಅಠಿಠಿಚ್ಚಜಞಛ್ಞಿಠಿ) ಎಂಬ ಬಣ್ಣ (ವಸ್ತುವಿನ ಬಗ್ಗೆ) ಹತ್ತಿಕೊಂಡರೆ ಹೋಗದು. ವಸ್ತು ದೊರೆತಾಗ, ದೊರೆಯದಿದ್ದಾಗ ಇರಬಹುದಾದ ಮೋಹವು ಮನಸ್ಸಿನಿಂದ ಸುಲಭವಾಗಿ ಹೋಗದು. ನಾಯಿ, ಕುದುರೆಗಳಿಗೆ ತಮ್ಮ ಯಜಮಾನನ ಬಗ್ಗೆ ಹಾಗೂ ಯಜಮಾನನಿಗೆ ಅವುಗಳ ಬಗ್ಗೆ ಅಪಾರ ಪ್ರೀತಿ, ವಿಶ್ವಾಸ. ‘ರಾಗ’ ಎಂದರೆ ಇದೇ.

ಮನೆಯೊಂದರಲ್ಲಿ ಬಹಳ ಪ್ರೀತಿ ವಿಶ್ವಾಸಗಳಿಂದ ಸಾಕಿದ್ದ ನಾಯಿಗೆ ಚಿಕಿತ್ಸೆ ಕೊಡಿಸಿದರೂ ಗುಣವಾಗದೆ ಸತ್ತಿತು. ಮನೆಯವರು ಬಹಳವಾಗಿ ದುಃಖಿಸಿದರು. ಆರು ತಿಂಗಳ ನಂತರ ಮನೆಗೆ ಬಂದ ಸ್ನೇಹಿತರು ನಾಯಿ ಎಲ್ಲಿ ಎಂದು ವಿಚಾರಿಸಿದರು. ಮನೆಯವರು ಮತ್ತೆ ಜೋರಾಗಿ ಅಳತೊಡಗಿದರು. ನಡೆದ ಕಥೆಯಿದು. ವಸ್ತು ಅಥವಾ ವ್ಯಕ್ತಿಯ ಬಗ್ಗೆ ‘ರಾಗ’-ಬಣ್ಣ ಅಂಟಿಕೊಂಡರೆ ಬಿಡಿಸಿಕೊಳ್ಳುವುದು ಬಹಳ ಕಷ್ಟ. ಆದರೆ ಸ್ಥಿತಪ್ರಜ್ಞನಿಗೆ ಸ್ವಲ್ಪವೂ ರಾಗವಿರದು. ಅವನು ಅದಕ್ಕೆ ಅಂಟಿಕೊಳ್ಳುವುದಿಲ್ಲ. ಅದು ಪ್ರಾರಬ್ಧಕರ್ಮದಿಂದ ಬಂದು ಹೋಗುವುದು. ಬಿಳಿ ಪರದೆಯ ಮೇಲಿನ ಚಲನಚಿತ್ರದಂತೆ ಅದು ಇರುವುದಿಲ್ಲ. ಸ್ಥಿತಪ್ರಜ್ಞನ ಮನಸ್ಸಿನಲ್ಲಿ ಯೋಚನೆ, ಭಾವನೆಗಳು ಬಂದು ಹೋದರೂ ಅವು ಅಚಿಟವು. ಚಲನಚಿತ್ರ ಮುಗಿದಾಗ ಬಿಳಿ ಪರದೆ ಮೇಲಿದ್ದಂತೆಯೇ ಅವನ ಮನಸ್ಸು ಹಾಗೆಯೇ ಇರುವುದು.

ಭಯ: ಭಯ ಎಂದರೇನು? ಬೇಕಾದ ವಸ್ತು ಪಡೆಯಲು ದೊರೆಯದಿದ್ದಾಗ ಅಥವಾ ದೊರೆತರೂ ಕಳವಾಗುವುದೆಂಬ ಹೆದರಿಕೆ. ಮರಣ ಭಯ ಎಲ್ಲಕ್ಕಿಂತ ದೊಡ್ಡ ಭಯ ಎನ್ನುವವು ಶಾಸ್ತ್ರಗಳು. ಇದಕ್ಕಾಗಿಯೇ ಯಕ್ಷನ ಪ್ರಶ್ನೆಗೆ ಉತ್ತರಿಸುತ್ತ ಯುಧಿಷ್ಠಿರ, ‘ಜನರು ನಿತ್ಯ ಯಮಲೋಕಕ್ಕೆ ಹೋಗುತ್ತಿರುವವರನ್ನು ನೋಡುತ್ತಿದ್ದರೂ, ತಾವು ಮಾತ್ರ ಶಾಶ್ವತರೆಂದು ಭಾವಿಸುವರು. ಇದಕ್ಕಿಂತ ದೊಡ್ಡ ಆಶ್ಚರ್ಯ ಯಾವುದಿದೆ?’ ಎನ್ನುವನು. ಆದರೆ ಆತ್ಮಜ್ಞಾನವಾಗಿರುವುದರಿಂದ ಮರಣ ಭಯವಿರದ ಸ್ಥಿತಪ್ರಜ್ಞನಿಗೆ ತಾನು ದೇಹೀಂದ್ರಿಯ, ಮನ ಆದಿಗಳಿಂದ ಭಿನ್ನವಾದ, ವಿಶಿಷ್ಟವಾದ ಆತ್ಮವಸ್ತುವಾದ ತನಗೆ ಹುಟ್ಟು-ಸಾವುಗಳಿಲ್ಲವೆಂಬ ಅರಿವಿರುವುದು. ಸದಾ ಈ ಅನುಭವದಲ್ಲಿರುವುದರಿಂದ ಅವನಿಗೆ ಭಯವಿರದು.

ಕ್ರೋಧ: ‘ಕ್ರೋಧ’ ಎಂದರೆ ಬಯಸಿದ ವಸ್ತುವಿಗೆ ಬರುವ ವಿರೋಧ. ಈ ವಿರೋಧ ಮಾಡಿದವರ ಬಗ್ಗೆ ಕೋಪ ಬಂದು, ಮನಸ್ಸು ಕೆಟ್ಟು, ದ್ವೇಷ ಬೆಳೆದು ಅನಾಹುತವಾಗುವುದು. ವಿದ್ಯಾರಣ್ಯರು ‘ಕೋಪ ಬಂದಾಗ ಕೋಪದೇವನಿಗೆ ನಮಸ್ಕರಿಸಬೇಕು’ ಎನ್ನುವರು. ಕೆಂಡವನ್ನು ಬೀಳದಂತೆ ಕೈಯಲ್ಲಿಟ್ಟು ಆಶ್ರಯ ಕೊಟ್ಟರೂ ಅದು ಕೈ ಸುಡುವುದು. ಹಾಗೆಯೇ ಆಶ್ರಯ ಕೊಟ್ಟ ಕೋಪವು ಮನಸ್ಸನ್ನು ಸುಡುವುದು. ಇಂಥಹ ಅತಿ ಕೆಟ್ಟ ಕ್ರೋಧವನ್ನು ಸ್ಥಿತಪ್ರಜ್ಞನು ಜಯಿಸಿರುತ್ತಾನೆ.

ಒಟ್ಟಿನಲ್ಲಿ ಸುಖ, ದುಃಖ, ರಾಗ, ಭಯ, ಕ್ರೋಧಗಳ ಅಂಟಿನಿಂದ ಅಂಟಿಕೊಳ್ಳದೆ ಅವುಗಳನ್ನು ಮನಸ್ಸಿನಿಂದ ಜಯಿಸಿರುತ್ತಾನೆ ಸ್ಥಿತಪ್ರಜ್ಞ. ಇವನು ಇತರರನ್ನು ಕಂಡರೂ ಕೋಪಿಸಿಕೊಳ್ಳನು. ಕಾರಣವೇನೆಂದರೆ ತನ್ನಲ್ಲಿರುವ ಆತ್ಮವಸ್ತು. ಅಂತರ್ಯಾಮಿಯಾದ ಪರಮಾತ್ಮನೇ ಇತರರಲ್ಲಿದ್ದು ತಾನೇ ಅವರು ಅವರೇ ತಾನೆಂಬ ಅರಿವು ಅವನಿಗೆ ಸಾಕ್ಷಾತ್ ಅನುಭವವಾಗಿರುತ್ತದೆ. ಅವನ ಈ ಗುಣಗಳನ್ನು ಕಂಡು, ಚೆನ್ನಾಗಿ ತಿಳಿದರೆ ಸಾಧಕನೂ ಅವನಂತಾಗಲು ಪ್ರಯತ್ನಿಸುವನು. ವ್ಯಾವಹಾರಿಕ ಜೀವನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಮೇಲಿನ ಎರಡೂ ಸ್ಥಿತಿಗಳೂ ಬಂದೇ ಬರುತ್ತವೆ. ಆಗ ನಾವು ಭಗವದ್ಗೀತೆಯಲ್ಲಿನ ಸ್ಥಿತಪ್ರಜ್ಞನ ಲಕ್ಷಣಗಳನ್ನು ಸ್ಮರಿಸಿಕೊಳ್ಳಬೇಕು. ಸುಖದಂತೆಯೇ ದುಃಖವೂ ಶಾಶ್ವತವಲ್ಲ ಎಂದು ಮನಸ್ಸನ್ನು ಕುಗ್ಗಲು ಬಿಡದೆ ದೃಢಗೊಳಿಸಬೇಕು. ಸುಖ, ದುಃಖ, ಸಂತೋಷ, ವಿಷಾದ ಯಾವುದು ಬಂದರೂ ಎಲ್ಲವನ್ನೂ ತೊರೆಯಬೇಕು. ರಾಗ, ಭಯ, ಕ್ರೋಧಗಳು ಮನಸ್ಸಿನಲ್ಲಿ ಬರದಂತೆ ಅಭ್ಯಾಸ ಮಾಡಿದಲ್ಲಿ ಸಾಧಕನೂ ಕಾಲಕ್ರಮೇಣ ಸ್ಥಿತಪ್ರಜ್ಞನಾಗುವನು. ಸತತ ಪ್ರಯತ್ನದಿಂದ ಮನಸ್ಸು ಶುದ್ಧವಾಗಿ ಸ್ಥಿತಪ್ರಜ್ಞನ ಸ್ಥಿತಿಯನ್ನು ಮುಟ್ಟುವನು. ಸಣ್ಣವರಾಗಿದ್ದಾಗ ಆಟದ ಸಾಮಾನು ಮುರಿದರೆ ತುಂಬಾ ದುಃಖವಾಗುವುದು. ದೊಡ್ಡವರಾದಾಗ ಅದರ ನೆನಪೂ ಆಗದು, ಮಾತ್ರವಲ್ಲ ಕಣ್ಣೆದುರಿಗೇ ಕತ್ತರಿಸಿ ಬಿಸಾಡಿದರೂ ಮನಸ್ಸಿಗೆ ನೋವಾಗದು. ಕಾರಣವೇನೆಂದರೆ ನಮ್ಮ ಮನಸ್ಸಿನಲ್ಲಿ ಅದರ ಬಗ್ಗೆ ಅಂಟು ಇರದ ಅರಿವಿದೆ. ಹಾಗೆಯೇ ಮನಸ್ಸನ್ನು ಆಧ್ಯಾತ್ಮಿಕ ದೃಷ್ಟಿಯಿಂದ ಬೆಳೆಸಿದಲ್ಲಿ ನಿಧಾನವಾಗಿ ಸ್ಥಿತಪ್ರಜ್ಞ ಅವಸ್ಥೆ ನಮ್ಮಲ್ಲಿಯೂ ಬರುವುದು.