ಸಿಂಧನೂರು: ಪರಕೀಯರಿಂದ ನಲುಗಿದ ಭಾರತೀಯರ ವಿಮೋಚನೆಗೆ ಹೋರಾಡಿ ಪ್ರಾಣ ತ್ಯಾಗ ಮಾಡಿದ ಸ್ವಾತಂತ್ರ್ಯ ಸೇನಾನಿ ಶಾಹೀದ್ ಭಗತ್‌ಸಿಂಗ್ ಯುವಕರಿಗೆ ಸ್ಫೂರ್ತಿಯಾಗಲಿ ಎಂದು ಆಟೋ ಚಾಲಕರ ಸಂಘದ ಗೌರವಾಧ್ಯಕ್ಷ ನಾಗರಾಜ ಪೂಜಾರ್ ಹೇಳಿದರು.
ಇದನ್ನೂ ಓದಿ:ಸ್ವಾತಂತ್ರ್ಯ ಸೇನಾನಿಗಳ ತ್ಯಾಗ ಮಕ್ಕಳಿಗೆ ತಿಳಿಸಿ
ನಗರದಲ್ಲಿ ಭಗತ್‌ಸಿಂಗ್ ಆಟೋ ಚಾಲಕರ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ಭಗತ್‌ಸಿಂಗ್ ಹುತಾತ್ಮ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಗತ್‌ಸಿಂಗ್, ಚಂದ್ರಶೇಖರ್ ಆಜಾದ್, ಸುಖದೇವ್ ಹಾಗೂ ರಾಜಗುರು ಅವರು ಹೋರಾಟದಿಂದ ಬ್ರಿಟಿಷರನ್ನು ನಡುಗಿಸಿದ್ದರು. ಗೊಡ್ಡು ಬೆದರಿಕೆಗಳಿಗೆ ಹೆದರದೇ, ರಾಜಿಯಾಗದೇ ಬ್ರಿಟಿಷರಿಗೆ ಸೆಡ್ಡು ಹೊಡೆದ ಧೈರ್ಯ ಯುವಜನತೆಗೆ ಮಾದರಿ. ಸ್ವಾತಂತ್ರ್ಯ ಹೋರಾಟದಲ್ಲಿ 6 ಲಕ್ಷಕ್ಕೂ ಹೆಚ್ಚು ಜನರು ದೇಶಕ್ಕಾಗಿ ಪ್ರಾಣ ಅರ್ಪಿಸಿದ್ದಾರೆ. ಆದರೆ, ನೈಜ ಇತಿಹಾಸವನ್ನು ಮರೆಮಾಚಿದ್ದಾರೆ. ದುಡಿಯುವ ಜನರ ಬಗ್ಗೆ ವಿಶೇಷ ಕಳಕಳಿ ಹೊಂದಿದ್ದ ಭಗತ್‌ಸಿಂಗ್ ಮತ್ತು ಗೆಳೆಯರು ದೇಶವನ್ನು ಬ್ರಿಟಿಷರಿಂದ ವಿಮೋಚನೆ ಗೊಳಿಸುವುದಷ್ಟೇ ಅಲ್ಲದೇ ಭವಿಷ್ಯದ ಭಾರತ ಕಟ್ಟುವ ದೂರದೃಷ್ಠಿ ಹೊಂದಿದ್ದರು ಎಂದರು.
ಆಟೋ ಚಾಲಕರ ಸಂಘದ ಅಧ್ಯಕ್ಷ ಬಸವರಾಜ ಕೊಂಡೆ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರ ರೈತ, ದಲಿತ ಹಾಗೂ ಕಾರ್ಮಿಕ ವಿರೋಧಿ ಕಾನೂನುಗಳನ್ನು ಜಾರಿಗೊಳಿಸಿ ಜನರನ್ನು ಸಂಕಷ್ಟಕ್ಕೆ ತಳ್ಳಿದೆ. ದೇಶದ ಸಂಪತ್ತನ್ನು ಅದಾನಿ, ಅಂಬಾನಿಯಂತಹ ಕಾರ್ಪೋರೇಟ್ ಉದ್ಯಮಿಗಳು ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ತಿಳಿಸಿದರು. ನಗರದ ಪ್ರಮುಖ ಬೀದಿಗಳಲ್ಲಿ ಭಗತ್‌ಸಿಂಗ್ ಭಾವಚಿತ್ರ ಮೆರವಣಿಗೆ ಮಾಡಲಾಯಿತು.
ಹೋರಾಟಗಾರ ಬಸವರಾಜ ಎಕ್ಕಿ, ಪ್ರಮುಖರಾದ ಆರ್.ಎಚ್ ಕಲಮಂಗಿ, ಬಸವರಾಜ ಬೆಳಗುರ್ಕಿ, ಶೇಕ್ಷಾವಲಿ, ನಾಗಪ್ಪ ಬಿಂಗಿ, ಹನುಮಂತ ಬಾಲಿ, ಚಂದಾ ಹುಸೇನ್, ರಶೀದ್, ಶೌಕತ್ ಅಲಿ, ಶಿವರಾಜ, ಗೊವಿಂದ್ ಉಪ್ಪಾರ, ಶಿವು ಗಿರಿಜಾಲಿ, ಮಾಳಪ್ಪ, ಮಹಿಬೂಬ್, ಶಿವರಾಜ್, ಮುರುಗೇಶ್, ಶಿವು ಬಜೆಂತ್ರಿ, ವೆಂಕಟೇಶ್ ಶೆಟ್ಟಿ ಇತರರಿದ್ದರು.