ಶಿವಮೊಗ್ಗ: ಜಿಲ್ಲೆಗೆ ಸಂಬಂಧಿಸಿ ಮತ್ತೊಂದು ರೈಲ್ವೆ ಯೋಜನೆ ಆರಂಭಕ್ಕೆ ಪ್ರಕ್ರಿಯೆ ಶುರುವಾಗಿದೆ. ಭದ್ರಾವತಿಯಿಂದ ಚನ್ನಗಿರಿ ಮೂಲಕ ಚಿಕ್ಕಜಾಜೂರಿಗೆ ಸಂಪರ್ಕ ಕಲ್ಪಿಸುವ ರೈಲ್ವೆ ಮಾರ್ಗದ ಸಮೀಕ್ಷೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ.

ಮಲೆನಾಡು ಮತ್ತು ಬಯಲುಸೀಮೆ ಭಾಗಕ್ಕೆ ಸಂಪರ್ಕ ಕಲ್ಪಿಸುವ ಈ ಮಾರ್ಗ ಮಲೆನಾಡಿನ ಆರ್ಥಿಕ ಅಭಿವೃದ್ಧಿಗೆ ಹೊಸ ಮೈಲಿಗಲ್ಲು ಎನಿಸಲಿದೆ. ಮಲೆನಾಡಿಗೆ ರಾಜ್ಯದ ಎಲ್ಲ ಮೂಲೆಗಳಿಂದ ಉತ್ತಮ ರೈಲ್ವೆ ಸಂಪರ್ಕ ದೊರೆಯುವ ಮೂಲಕ ಜನಸಾಮಾನ್ಯರು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಯೋಜನೆ ಪೂರಕವಾಗಲಿದೆ.
ಯೋಜನೆಯಿಂದ ಜಿಲ್ಲೆಯಲ್ಲಿ ಬಂಡವಾಳ ಹೂಡಿಕೆಗೆ ಉತ್ತಮ ವಾತಾವರಣ ನಿರ್ಮಾಣವಾಗುತ್ತದೆ. ದೂರದೃಷ್ಟಿಯಿಂದ ಭದ್ರಾವತಿ-ಚಿಕ್ಕಜಾಜೂರು ನಡುವೆ ರೈಲ್ವೆ ಮಾರ್ಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಸಹಕಾರದಿಂದ ಸರ್ವೇ ಆದೇಶ ಹೊರಬಿದ್ದಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಪುನಶ್ಚೇತನಗೊಳಿಸುವ ಪ್ರಯತ್ನ ಕೇಂದ್ರ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿದೆ. ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಸ್ವತಃ ಕಾರ್ಖಾನೆಗೆ ಭೇಟಿ ನೀಡಿ ಅಗತ್ಯ ನೆರವಿನ ಭರವಸೆ ನೀಡಿದ್ದಾರೆ. ಇನ್ನೊಂದೆಡೆ ಲೋಕಸಭಾ ಸದಸ್ಯ ನಿರಂತರವಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಕಾರ್ಖಾನೆ ಸಂಪೂರ್ಣವಾಗಿ ಮುಚ್ಚುವುದನ್ನು ತಡೆದಿರುವುದು ತಕ್ಕಮಟ್ಟಿನ ನಿರೀಕ್ಷೆ ಮೂಡಿಸಿದೆ.
ಎಲ್ಲವೂ ಅಂದುಕೊಂಡತೆಯೇ ಆದರೆ ಮುಂಬರುವ ದಿನಗಳಲ್ಲಿ ವಿಐಎಸ್‌ಎಲ್‌ಗೆ ಮರುಜೀವ ಸಿಗಲಿದೆ. ಆ ಸಂದರ್ಭದಲ್ಲಿ ಕಾರ್ಖಾನೆಗೆ ಅಗತ್ಯವಿರುವ ಅದಿರನ್ನು ಪೂರೈಸಲು ಈ ಮಾರ್ಗ ಅತ್ಯಂತ ಸಹಕಾರಿಯಾಗಲಿದೆ. ಈಗಾಗಲೇ ಸಂಡೂರು ಬಳಿಯ ರಮಣದುರ್ಗದಲ್ಲಿ ವಿಐಎಸ್‌ಎಲ್‌ಗೆ ಅಗತ್ಯವಿರುವ ಗಣಿ ಮಂಜೂರು ಮಾಡಲಾಗಿದೆ. ಅದಕ್ಕೆ ಪೂರಕವಾಗಿ ಈ ಮಾರ್ಗ ನಿರ್ಮಾಣವಾದರೆ ಜಿಲ್ಲೆಯ ಆರ್ಥಿಕತೆಗೂ ಬಲ ತುಂಬಿದಂತಾಗುತ್ತದೆ.