ತರೀಕೆರೆ: ಪ್ರಸಕ್ತ ವರ್ಷ ಭದ್ರಾ ಮೇಲ್ದಂಡೆ ಯೋಜನೆ ಹಾಗೂ ಅಮೃತಾಪುರ-ಉಬ್ರಾಣಿ ಏತ ನೀರಾವರಿ ಯೋಜನೆ ಮೂಲಕ ಕ್ಷೇತ್ರದ 110 ಕೆರೆಗಳಿಗೆ ನೀರು ತುಂಬಿಸಲಾಗಿದ್ದು, ಸದ್ಯದಲ್ಲೇ ಪಟ್ಟಣದ ರಾಮನಾಯಕನ ಕೆರೆ ಸೇರಿ ದೋರನಾಳು, ಸುಣ್ಣದಹಳ್ಳಿ, ಭೈರಾಪುರ, ನಂದಿ ಇನ್ನಿತರ ಭಾಗದ ಕೆರೆಗೆ ನೀರುಣಿಸಲು ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.
ದೋರನಾಳು ಗ್ರಾಮದಲ್ಲಿ ನರೇಗಾ ಯೋಜನೆಯಡಿ ನೂತನವಾಗಿ ನಿರ್ಮಿಸಿರುವ ಭಾರತ್ ನಿರ್ಮಾಣ್ ಸೇವಾ ಕೇಂದ್ರ, ಘನ ತ್ಯಾಜ್ಯ ವಿಲೇವಾರಿ ಘಟಕ, ದಾಸೋಹ ಭವನ, ಅಂಗನವಾಡಿ ಕೇಂದ್ರ- ಹಾಗೂ ಸರ್ಕಾರಿ ಪ್ರೌಢಶಾಲೆಯ ವಿವೇಕ ಕೊಠಡಿ ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ಬೇಸಿಗೆಯಿಂದ ತಾಲೂಕಿನಲ್ಲಿ ಅಂತರ್ಜಲ ಮಟ್ಟ ಸುಧಾರಿಸಲಿದ್ದು, ರೈತರು ನೀರು ಮಿತವಾಗಿ ಬಳಸಿ ಅಧಿಕ ಇಳುವರಿ ಪಡೆಯಲು ಬೇಕಾದ ತಂತ್ರಗಾರಿಕೆ ಕಲಿತುಕೊಳ್ಳಬೇಕು ಎಂದರು.
ಗ್ರಾಮದಲ್ಲಿ 28 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಭಾರತ್ ನಿರ್ಮಾಣ್ ಸೇವಾ ಕೇಂದ್ರ ಉತ್ತಮ ವಿನ್ಯಾಸದಿಂದ ಕೂಡಿದೆ. ಸರ್ಕಾರಿ ಪ್ರೌಢಶಾಲೆಯಲ್ಲಿ ಕೊಳವೆ ಬಾವಿ ಕೊರೆಸಿ ಸಮಸ್ಯೆ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ದಾನಿ ದೋರನಾಳ್ ಪರಮೇಶ್ ಮಾತನಾಡಿ, ಗ್ರಾಮದ ಅಭಿವೃದ್ಧಿಯ ಪರಿಕಲ್ಪನೆ ಸರ್ಕಾರಕ್ಕಷ್ಟೇ ಅಲ್ಲ, ಪ್ರತಿಯೊಬ್ಬ ನಿವಾಸಿಗಳಲ್ಲೂ ಇರಬೇಕು. ಹಾಗಾದಾಗ ಮಾತ್ರ ಪ್ರಗತಿ ಸುಲಭವಾಗಲಿದೆ. ನಾವು ಮಾಡುವ ಸತ್ಕಾರ್ಯಗಳು ಇತರರಿಗೆ ಪ್ರೇರಣೆಯಾಗಲಿದೆ ಎಂದರು.
ನರೇಗಾ ಸಹಾಯಕ ನಿರ್ದೇಶಕ ಸಿ.ಟಿ.ಯೋಗೀಶ್ ಮಾತನಾಡಿ,ನರೇಗಾ ಯೋಜನೆ ಗ್ರಾಮೀಣ ಪ್ರದೇಶದ ಅಭ್ಯುದಯಕ್ಕೆ ಸಹಕಾರಿಯಾಗಿದೆ. ಯೋಜನೆಯಲ್ಲಿ 300ಕ್ಕೂ ಅಧಿಕ ಕೋಟಿ ರೂ. ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅವಕಾಶವಿದೆ ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷ ಡಿ.ಆರ್.ಮಲ್ಲಪ್ಪ, ಉಪಾಧ್ಯಕ್ಷ ನಾಗರಾಜು, ಸದಸ್ಯರಾದ ಕೆ.ಸಿ.ಚಂದ್ರಮ್ಮ, ಜಯಮ್ಮ, ಬಿ.ಪಿ.ಕರ್ಣ, ಶಾಂತಮ್ಮ, ಶೀಲಾವತಿ, ಪದ್ಮ, ಜಗದೀಶ್, ತಾಪಂ ಇಒ ಡಾ.ಆರ್.ದೇವೇಂದ್ರಪ್ಪ, ಸಿಡಿಪಿಒ ಎನ್.ಚರಣ್‌ರಾಜ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿಜಯಕುಮಾರ್, ಮುಖ್ಯಶಿಕ್ಷಕ ಟಿ.ಎಸ್.ಗಣೇಶ್, ತಾಪಂ ಮಾಜಿ ಸದಸ್ಯ ಅಸ್ಲಾಂಖಾನ್, ಪಿಡಿಒ ಕೆ.ಜಿ.ಸುರೇಶ್, ಮತ್ತಿತರರಿದ್ದರು.
