ಕಳಸದಲ್ಲಿ ಮತ್ತೆ ನೆರೆ ಭೀತಿ

ಕಳಸ: ಒಂದು ವಾರದಿಂದ ಕಡಿಮೆಯಾಗಿದ್ದ ಮಳೆ ಶುಕ್ರವಾರ ರಾತ್ರಿಯಿಂದ ಒಂದೇ ಸಮನೆ ಸುರಿಯಲಾರಂಭಿಸಿದ್ದು, ಮತ್ತೊಮ್ಮೆ ನೆರೆ ಭೀತಿ ಎದುರಾಗಿದೆ.

ಶನಿವಾರ ಬೆಳಗ್ಗೆ ಕಳಸ-ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಕೆಲ ಸಮಯ ಮುಳುಗಡೆಯಾಗಿ ಸಂಚಾರ ಅಸ್ತವ್ಯಸ್ತವಾಯಿತು. ಮಧ್ಯಾಹ್ನ ಮತ್ತಷ್ಟು ಮಳೆ ಪ್ರಮಾಣ ಹೆಚ್ಚಾಗಿರುವುದರಿಂದ ಕಳಸ-ಹೊರನಾಡು ರಸ್ತೆ ಸಂಪರ್ಕ ಕಡಿತಗೊಳ್ಳುವ ಅಪಾಯ ಎದುರಾಗಿದೆ.

20 ದಿನಗಳ ಅವಧಿಯಲ್ಲಿ ನಾಲ್ಕು ಬಾರಿ ಈ ಸೇತುವೆ ಮುಳುಗಡೆಯಾಗಿದ್ದು ಸೇತುವೆ ಕುಸಿಯುವ ಆತಂಕ ಉಂಟಾಗಿದೆ. ಕಳಸ, ಹೊರನಾಡಿಗೆ ಬಂದಿರು ನೂರಾರು ಪ್ರವಾಸಿಗರು ಮಳೆಯ ಅಬ್ಬರಕ್ಕೆ ಕಂಗಾಲಾಗಿದ್ದಾರೆ. ಮಳೆ ಹೆಚ್ಚಾಗಿರುವುದರಿಂದ ಅಡಕೆ, ಕಾಫಿಗೆ ರೋಗ ತಗಲುವ ಸಾಧ್ಯತೆ ಹೆಚ್ಚಾಗಿದೆ. ಈ ಬಾರಿ ಅಧಿಕ ಮಳೆಯಾಗಿರುವುದರಿಂದ ಹೋಬಳಿಯ ಬಹುತೇಕ ಕಡೆಗಳಲ್ಲಿ ರಸ್ತೆಗಳು ಹಾಳಾಗಿರುವುದರಿಂದ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಹಲವೆಡೆ ಹಳ್ಳಿಗಳಿಗೆ ಸಂಪರ್ಕ ಸೇತುವೆ ಇಲ್ಲದೆ ಗ್ರಾಮಸ್ಥರು ಬಿದಿರಿನ ದಬ್ಬೆಗಳನ್ನು ಕಟ್ಟಿ ತಾವೇ ಸೇತುವೆ ನಿರ್ಮಾಣ ಮಾಡಿಕೊಂಡಿದ್ದಾರೆ. ನದಿಯ ಆಸುಪಾಸಿನ ಅಡಕೆ ತೋಟ, ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿವೆ. ಬಹುತೇಕ ನದಿ ಅಂಚಿನ ತಡೆಗೋಡೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.

 

ಪ್ರವಾಸಿಗರಿಗೆ ಸ್ಥಳೀಯರ ತರಾಟೆ

ನೀರಿನ ಪ್ರಮಾಣ ಹೆಚ್ಚಾಗಿ ಭದ್ರಾ ನದಿ ಸೇತುವೆ ಕೆಲಕಾಲ ಮುಳುಗಡೆಯಾದರೂ ಕೆಲ ವಾಹನ ಸವಾರರು ಸೇತುವೆಯಲ್ಲಿ ತಮ್ಮ ವಾಹನಗಳನ್ನು ದಾಟಿಸಿದರು. ಕೆಲ ಪ್ರವಾಸಿಗರು ತುಂಬಿ ಹರಿಯುವ ಸೇತುವೆ ದಾಟಿದರು. ಸೇತುವೆ ಮಧ್ಯ ನಿಂತು ಸೆಲ್ಪಿ ತೆಗೆದುಕೊಂಡರು. ಸೇತುವೆಗೆ ಯಾವುದೇ ತಡೆಗೋಡೆಗಳಿಲ್ಲ. ಅಲ್ಲದೆ ಸೇತುವೆ ಕೆಲವೆಡೆ ಬಿರುಕು ಬಿಟ್ಟು ಅಪಾಯ ಸೂಚಿಸುತ್ತಿದೆ. ಇದರ ನಡುವೆ ಸೇತುವೆ ದಾಟಿದ ಮತ್ತು ಸೆಲ್ಪಿ ತೆಗೆದುಕೊಂಡ ಪ್ರವಾಸಿಗರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡರು.