More

    ಕಂಠೀರವ ಮೈದಾನದಲ್ಲಿ ಮುಖಾಮುಖಿ | ಗೆಲುವಿನ ವಿಶ್ವಾಸದಲ್ಲಿ ತವರಿನ ತಂಡ, ಬಿಎಫ್​ಸಿಗೆ ಇಂದು ಜಮ್ಶೆಡ್ಪುರ ಚಾಲೆಂಜ್

    ಬೆಂಗಳೂರು: ಕಳೆದ ಐದು ಮುಖಾಮುಖಿಯಲ್ಲಿ ಮೂರು ಗೆಲುವು, 2 ಸೋಲು ಕಂಡು ಏರಿಳಿತದ ನಿರ್ವಹಣೆ ತೋರಿರುವ ಬೆಂಗಳೂರು ಎಫ್​ಸಿ ತಂಡ ಮಂಗಳವಾರ ತನ್ನ 12ನೇ ಮುಖಾಮುಖಿಯಲ್ಲಿ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿರುವ ಜಮ್ಶೆಡ್ಪುರ ಎಫ್​ಸಿ (ಜೆಎಫ್​ಸಿ) ತಂಡವನ್ನು ಎದುರಿಸಲಿದೆ.

    ಕಳೆದ ಪಂದ್ಯದಲ್ಲಿ ಬಲಿಷ್ಠ ಗೋವಾ ಎಫ್​ಸಿ ವಿರುದ್ಧ 2-1 ಗೋಲುಗಳ ಗೆಲುವು ಸಾಧಿಸಿದ ವಿಶ್ವಾಸದಲ್ಲಿರುವ ಬೆಂಗಳೂರು ಎಫ್​ಸಿ ತಂಡ, ತವರಿನ ಕಂಠೀರವ ಮೈದಾನದಲ್ಲಿ ಜಮ್ಶೆಡ್ಪುರವನ್ನು ಎದುರಿಸುತ್ತಿರುವುದರಿಂದ ಗೆಲುವಿನ ವಿಶ್ವಾಸದಲ್ಲಿದೆ. ಜಮ್ಶೆಡ್ಪುರ ಕಳೆದ ಐದು ಪಂದ್ಯಗಳಿಂದ ಗೆಲುವು ದಾಖಲಿಸಲು ವಿಫಲವಾಗಿರುವುದು ತಂಡದ ವಿಶ್ವಾಸವನ್ನು ಕುಗ್ಗಿಸಿದೆ.

    11 ಪಂದ್ಯಗಳಿಂದ 5 ಗೆಲುವು, 4 ಡ್ರಾ ಹಾಗೂ 2 ಡ್ರಾ ಫಲಿತಾಂಶದೊಂದಿಗೆ 19 ಅಂಕ ಸಂಪಾದಿಸಿರುವ ಬೆಂಗಳೂರು ಎಫ್​ಸಿ, ಅಗ್ರ ನಾಲ್ಕು ಸ್ಥಾನವನ್ನು ಬಲಪಡಿಸಿಕೊಳ್ಳುವ ಇರಾದೆ ಹೊಂದಿದೆ.

    ಎಫ್​ಸಿ ಗೋವಾ ವಿರುದ್ಧ ತಂಡದ ಗೆಲುವಿಗೆ ಕಾರಣರಾದ ನಾಯಕ ಸುನೀಲ್ ಛೇಟ್ರಿ ಮತ್ತೊಮ್ಮೆ ಬಿಎಫ್​ಸಿ ತಂಡದ ಪ್ರಮುಖ ಅಸ್ತ್ರವಾಗಿ ಗೋಚರಿಸಿದ್ದಾರೆ. ಈ ಋತುವಿನಲ್ಲಿ ಬಿಎಫ್​ಸಿ ಬಾರಿಸಿರುವ 13 ಗೋಲುಗಳ ಪೈಕಿ 7 ಗೋಲುಗಳನ್ನು ಸುನೀಲ್ ಛೇಟ್ರಿ ಒಬ್ಬರೆ ಬಾರಿಸಿದ್ದಾರೆ.

    ಬೆಂಗಳೂರು ತಂಡದ ರಕ್ಷಣಾ ವಿಭಾಗ ಕೂಡ ಈ ಬಾರಿ ಎಲ್ಲರ ಗಮನಸೆಳೆದಿದೆ. ಈವರೆಗೂ 7 ಗೋಲುಗಳನ್ನು ಮಾತ್ರವೇ ಬಿಟ್ಟುಕೊಟ್ಟಿರುವ ಬಿಎಫ್​ಸಿಯ ರಕ್ಷಣಾ ವಿಭಾಗವನ್ನು ಭೇದಿಸುವುದು ಜಮ್ಶೆಡ್ಪುರ ಎಫ್​ಸಿಗೆ ಕಠಿಣವಾಗಲಿದೆ. ಅದಲ್ಲದೆ, ತಂಡದ ಅಗ್ರ ಆಟಗಾರ ಸೆರ್ಜಿಯೋ ಕ್ಯಾಸ್ಟೆಲ್​ರ ಸೇವೆಯನ್ನು ತಂಡ ಈ ಪಂದ್ಯಕ್ಕೆ ಕಳೆದುಕೊಂಡಿದೆ.

    ಕ್ಯಾಸ್ಟೆಲ್​ರೊಂದಿಗೆ ಪಿಟಿ ಕೂಡ ಈ ಪಂದ್ಯಕ್ಕೆ ಲಭ್ಯವಿಲ್ಲ. ಹಾಗಾಗಿ ಅಂಟೋನಿಯೋ ಇರಿಯೊಂಡೊ ತರಬೇತಿಯ ತಂಡದ ನಿರ್ವಹಣೆ ಬಿಎಫ್​ಸಿ ವಿರುದ್ಧ ಯಾವ ದರ್ಜೆಯಲ್ಲಿ ಇರಲಿದೆ ಎನ್ನುವ ಕುತೂಹಲ ಎಲ್ಲರಲ್ಲಿದೆ.

    ಉದಾಂತ ಬಗ್ಗೆ ಕೌಡ್ರಟ್​ಗೆ ಚಿಂತೆ: ತಂಡದ ವಿಂಗರ್​ಗಳಾದ ಉದಾಂತ ಸಿಂಗ್ ಹಾಗೂ ಆಶಿಖಿ ಕುರುನಿ ಯರ್​ರ ಕಳಪೆ ಫಾಮ್ರ್ ಕೋಚ್ ಕಾರ್ಲಸ್ ಕೌಡ್ರಟ್​ರ ಚಿಂತೆಗೆ ಕಾರಣ ವಾಗಿದೆ. ಇಬ್ಬರೂ ಆಟಗಾರರು ತಮ್ಮ ಶ್ರೇಷ್ಠ ನಿರ್ವಹಣೆ ನೀಡುತ್ತಿದ್ದರೂ, ಗೋಲು ಅವಕಾಶವನ್ನು ಸೃಷ್ಟಿಸಲು ವಿಫಲರಾಗುತ್ತಿದ್ದಾರೆ.

    ನಾವು ಬೆಂಗಳೂರು ತಂಡವನ್ನು ಎದುರಿಸಲಿದ್ದೇವೆ. ಬಲಿಷ್ಠ ತಂಡದ ವಿರುದ್ಧ ಆಡುವುದು ನನಗೆ ಖುಷಿ. ತಂಡ ಮುಂದಿನ ಪಂದ್ಯಗಳಲ್ಲಿ ಯಾವ ವಿಭಾಗದಲ್ಲಿ ಪ್ರಗತಿ ಸಾಧಿಸಬೇಕು ಎನ್ನುವುದನ್ನು ತಿಳಿದುಕೊಳ್ಳಲು ಇದು ಸಾಧ್ಯವಾಗುತ್ತದೆ. ಪ್ರತಿ ಪಂದ್ಯದಿಂದಲೂ ನಾವು ಪ್ರಗತಿ ಸಾಧಿಸುತ್ತಿದ್ದೇವೆ. ಆದರೆ, ಸೆರ್ಜಿಯೋ ಗಾಯದ ಕಾರಣ ತಂಡಕ್ಕೆ ಗೋಲುಗಳು ಬರುತ್ತಿಲ್ಲ.
    | ಅಂಟೋನಿಯೋ ಇರಿಯೊಂಡೊ ಜೆಎಫ್​ಸಿ ಕೋಚ್

     ಸುನೀಲ್ ಛೇಟ್ರಿ ನಮ್ಮ ಅಗ್ರ ಆಟಗಾರ. ಗೋಲು ಬಾರಿಸುವ ಅವಕಾಶ ಎಲ್ಲರಿಗೂ ಸಿಗುತ್ತದೆ. ಛೇಟ್ರಿ ಹೊರತಾಗಿ ಉಳಿದವರೂ ಗೋಲು ಬಾರಿಸಲು ಪ್ರಯತ್ನಿಸಬೇಕು. ನಮ್ಮ ಫಾರ್ವಡ್ ವಿಭಾಗ ಈ ನಿಟ್ಟಿನಲ್ಲಿ ಹೆಚ್ಚಿನ ಗಮನ ನೀಡಿದೆ. ಮುಂದಿನ ಪಂದ್ಯಗಳಲ್ಲಿ ಅವರ ಶ್ರಮಕ್ಕೆ ಫಲ ಸಿಗಬಹುದು.

    | ಜೇವಿಯರ್ ಪಿನಿಲೋಸ್ ಬಿಎಫ್​ಸಿ ಗೋಲ್​ ಕೀಪಿಂಗ್ ಕೋಚ್

    ಪಂದ್ಯ ಆರಂಭ: ರಾತ್ರಿ 7.30, ನೇರಪ್ರಸಾರ: ಸ್ಟಾರ್​ಸ್ಪೋರ್ಟ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts