ಬೆಂಗಳೂರು: ಹಾಲಿ ಚಾಂಪಿಯನ್ ಬೆಂಗಳೂರು ಎಫ್ಸಿ ಹಾಗೂ ಅಗ್ರಸ್ಥಾನಿ ಗೋವಾ ಎಫ್ಸಿ ತಂಡಗಳು ಶುಕ್ರವಾರ ಐಎಸ್ಎಲ್ ಮುಖಾಮುಖಿಯಲ್ಲಿ ಎದುರಾಗಲಿವೆ. ಶ್ರೀ ಕಂಠೀರವ ಮೈದಾನದಲ್ಲಿ ಪಂದ್ಯ ನಡೆಯಲಿದ್ದು, ಹೈವೋಲ್ಟೇಜ್ ಪಂದ್ಯವಾಗುವ ನಿರೀಕ್ಷೆ ಇದೆ.
ಗೋವಾ ಎಫ್ಸಿ ಮುನ್ನಡೆಯನ್ನು ಹಿಗ್ಗಿಸುವ ವಿಶ್ವಾಸದಲ್ಲಿದ್ದರೆ, 3ನೇ ಸ್ಥಾನದಲ್ಲಿರುವ ಬೆಂಗಳೂರು ಎಫ್ಸಿ ಅಂಕದ ಅಂತರವನ್ನು ಕಡಿಮೆ ಮಾಡಿಕೊಳ್ಳುವ ಗುರಿಯಲ್ಲಿದೆ. ಜನವರಿ ತಿಂಗಳು ಬಿಎಫ್ಸಿ ಪಾಲಿಗೆ ನಿಬಿಡವಾಗಿದ್ದು,ಈ 31 ದಿನಗಳ ಅಂತರದಲ್ಲಿ 5 ಪಂದ್ಯಗಳನ್ನು ಆಡಬೇಕಿದೆ. ಉಭಯ ತಂಡಗಳ ನಡುವಿನ ಕಳೆದ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು ಕಂಡಿರುವ ಬಿಎಫ್ಸಿ ಅದೇ ಫಾಮರ್್ಅನ್ನು ಮುಂದುವರಿಸುವ ಆಸೆಯಲ್ಲಿದೆ.
ಗೋವಾ ಚಾಣಾಕ್ಷ ತಂಡ. ತನ್ನೆಲ್ಲ ಆಟಗಾರರ ಸಾಮರ್ಥ್ಯದ ಬಗ್ಗೆ ಅವರಿಗೆ ತಿಳಿದಿದೆ. ರಕ್ಷಣೆ ಮಾತ್ರವಲ್ಲ ಈ ಆಟಗಾರರು ಆಕ್ರಮಣಕಾರಿಯಾಗಿ ಆಡಲು ಹೆಸರುವಾಸಿ. ಬಿಎಫ್ಸಿ ಹಾಗೂ ಗೋವಾ ನಡುವಿನ ಹಿಂದಿನೆಲ್ಲ ಮುಖಾಮುಖಿ ರೋಚಕವಾಗಿ ನಡೆದಿವೆ. ಶುಕ್ರವಾರವೂ ಇದೇ ರೀತಿಯ ಪಂದ್ಯವನ್ನು ಎದುರು ನೋಡುತ್ತಿರುವುದಾಗಿ ಬಿಎಫ್ಸಿ ಕೋಚ್ ಕಾರ್ಲಸ್ ಕ್ಲೌಡ್ರಟ್ ತಿಳಿಸಿದ್ದಾರೆ.
ಆರಂಭ: ರಾತ್ರಿ 7.30, ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್