ಜೀವನಪ್ರೀತಿಯ ಮೋಡಿಗಾರ

| ರವೀಂದ್ರ ಎಸ್.ದೇಶಮುಖ್

ಕಾಮಿಕ್ಸ್​ಗಳ ಲೋಕದಲ್ಲಿ ವಿಹರಿಸದವರು ಯಾರಿದ್ದಾರೆ ಹೇಳಿ? ಕಲ್ಪನೆಯ ರೆಕ್ಕೆಗಳಿಗೆ ಜೀವ ತುಂಬಿ ಹಾರಾಡುವ ಈ ಪಾತ್ರಗಳು ನಗು ಉಕ್ಕಿಸುತ್ತವೆ, ಘಟನೆ ಅಥವಾ ರೂಪಕದ ಮೂಲಕ ಸಂದೇಶ ರವಾನಿಸುತ್ತವೆ. ‘ಹಠ ಒಳ್ಳೆಯದಲ್ಲ’, ‘ಸುಳ್ಳು ಹೇಳಿದರೆ ಆಗುವ ಫಜೀತಿ’, ‘ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತದೆ’ ಈ ಬಗೆಯ ಸಂದೇಶಗಳನ್ನೆಲ್ಲ ಮಕ್ಕಳಲ್ಲಿ ಕಾಮಿಕ್ಸ್ ಹೀರೋಗಳ ಮೂಲಕ ಬಿತ್ತುತ್ತಿರುವ ಹೊಸ ಜಮಾನಾ ಇದು. ಅದಕ್ಕೆಂದೇ, ಕಾಮಿಕ್ಸ್ ಹೀರೋಗಳನ್ನು ಮಕ್ಕಳು ಮಾತ್ರವಲ್ಲ ದೊಡ್ಡವರೂ ಇಷ್ಟಪಡುತ್ತಾರೆ. ಮಕ್ಕಳು ಆಟವಾಡುವಾಗ ಏನಾದರೂ ತೊಂದರೆ ಆದರೆ ‘ಸ್ಪೈಡರ್​ವ್ಯಾನ್ ಅನ್ನು ಕರೆದುಬಿಡ್ತೀನಿ ನೋಡು’ ಅಂತ ಬಾಲಭಾಷೆಯಲ್ಲಿ ಹೇಳುವಾಗ ಅವರ ಭಾವಲೋಕದ ತುಂಬೆಲ್ಲ ಈ ಹೀರೋಗಳು, ಪಾತ್ರಗಳು ಎಷ್ಟು ಗಾಢವಾಗಿ ಕುಳಿತಿವೆ ಎಂಬುದು ಅರಿವಾಗುತ್ತದೆ. ಆದರೆ, ಇಂಥ ಕಾಮಿಕ್ಸ್ ಹೀರೋಗಳನ್ನು ಸೃಷ್ಟಿಸುವುದು ತಮಾಷೆಯ ಮಾತಲ್ಲ. ಅದಕ್ಕೆ ಅಸಾಧಾರಣ ಸೃಜನಶೀಲತೆ ಬೇಕು. ಈ ಗುಣವೈಶಿಷ್ಟ್ಯ ಹೊಂದಿದ್ದರಿಂದಲೇ ಸ್ಟಾನ್ ಲೀ (ಮೂಲಹೆಸರು Stanley Martin Liebe) ಸ್ಪೈಡರ್​ವ್ಯಾನ್ ಸೇರಿದಂತೆ ಹಲವು ಕಾಮಿಕ್ಸ್ ಹೀರೋಗಳನ್ನು ಸೃಷ್ಟಿಸಿದರು. ತುಂಬು ಜೀವನಪ್ರೀತಿಯ, ಪ್ರತಿ ಕೆಲಸವನ್ನು ಪರಿಪೂರ್ಣತೆಯಿಂದ ಮಾಡುತ್ತಿದ್ದ ಲೇಖಕ, ಸಂಪಾದಕ, ಪ್ರಕಾಶಕ, ಮಾರ್ವೆಲ್ ಕಾಮಿಕ್ಸ್​ನ ಮಾಜಿ ಅಧ್ಯಕ್ಷ ಲೀ 95ನೇ ವಯಸ್ಸಿನಲಿ ್ಲ ಕೊನೆಯುಸಿರೆಳೆದಾಗ (ನ.12), ಕಾಮಿಕ್ಸ್ ಲೋಕ ದೊಡ್ಡ ಆಧಾರವನ್ನೇ ಕಳೆದುಕೊಂಡಿತು.

ಲೈಬರ್​ನ ಯಹೂದಿ ಪರಿವಾರದಲ್ಲಿ 1922ರ ಡಿ.28ರಂದು ಜನಿಸಿದ ಸ್ಟಾನ್​ಲೀ, 1939ರಲ್ಲಿ ವೃತ್ತಿಜೀವನ ಆರಂಭಿಸಿದರು. 1961ರಲ್ಲಿ ಮಾರ್ವೆಲ್ ಕಾಮಿಕ್ಸ್ ಸಂಸ್ಥೆಗೆ ಸೇರ್ಪಡೆಗೊಂಡರು. ಇಲ್ಲಿ ಅವರು ಸ್ಟೈಡರ್​ವ್ಯಾನ್, ಐರನ್ ಮೆನ್, ಡೇರ್ ಡೆವಿಲ್, ಎಕ್ಸ್-ಮೆನ್, ದ ಫೆಂಟಾಸ್ಟಿಕ್ ಫೋರ್ ಮತ್ತು ದಿ ಅವೆಂಜರ್ಸ್ ಎಂಬ ಕಾಮಿಕ್ಸ್ ಹೀರೋಗಳನ್ನು ಸೃಷ್ಟಿಸಿ, ಮಾರ್ವೆಲ್ ಕಾಮಿಕ್ಸ್ ಸಂಸ್ಥೆಗೆ ಅಪಾರ ಮನ್ನಣೆ ತಂದುಕೊಟ್ಟರು. ಅಸಾಧಾರಣ ಶಕ್ತಿಯ ಪಾತ್ರಗಳಿಗೆ ಲೇಖನಿ ಮೂಲಕ ಜೀವತುಂಬಿದ ಲೀ, ಆ ಪಾತ್ರಗಳ ಮುಖೇನವೇ ಜನಮನ್ನಣೆ ಗಳಿಸಿದರು. ಈ ಪಾತ್ರಗಳನ್ನು ಆಧಾರವಾಗಿಟ್ಟುಕೊಂಡೇ ಹಲವು ಸಿನಿಮಾಗಳು ಬಂದವು. ಅಪಾರ ಕಲ್ಪನಾಶಕ್ತಿಯ, ಹೊಸದನ್ನು ಮತ್ತು ವಿಭಿನ್ನವಾದದ್ದನ್ನು ಯೋಚಿಸಿ ಅದನ್ನು ಬರಹರೂಪಕ್ಕೆ ಇಳಿಸುತ್ತಿದ್ದ ಇವರಿಗೆ ಭಾರತ ಸೇರಿದಂತೆ ಜಗತ್ತಿನ ಹಲವಾರು ದೇಶಗಳಲ್ಲಿ ಪ್ರಶಂಸಕರು, ಅಭಿಮಾನಿಗಳು ಇದ್ದಾರೆ. 2002ರಲ್ಲಿ ‘ಸ್ಟೈಡರ್​ವ್ಯಾನ್’ ಚಿತ್ರ ತೆರೆಗೆ ಬಂತು, 2004ರಲ್ಲಿ ಇದರ ರಿಮೇಕ್ ಬಿಡುಗಡೆ ಆಯಿತು. ಈ ಚಿತ್ರಗಳು ಒಟ್ಟು 1.6 ಬಿಲಿಯನ್ ಡಾಲರ್ ಆದಾಯ ಗಳಿಸಿದವು.

ಸಂಬಂಧಿಕರ ‘ಟೈಮ್ಲಿ’ ಕಂಪನಿಯಲ್ಲಿ ಮೊದಲಿಗೆ ಕೆಲಸಕ್ಕೆ ಸೇರಿದ ಲೀ ಸೃಜನಶೀಲತೆ, ತೀಕ್ಷ್ಣ ಬುದ್ಧಿಮತ್ತೆ ಮತ್ತು ಕಲ್ಪನಾಶಕ್ತಿಯಿಂದ ಆರಂಭದಲ್ಲೇ ಗಮನ ಸೆಳೆದರು. ಹಾಗಾಗಿ, ಅವರಿಗೆ ಕಾಮಿಕ್ಸ್ ವಿಭಾಗದ ಜವಾಬ್ದಾರಿ ನೀಡಲಾಯಿತಲ್ಲದೆ 18ನೇ ವಯಸ್ಸಿನಲ್ಲೇ ಕಾಮಿಕ್ಸ್ ಪ್ರಕಾಶನದ ಸಂಪಾದಕ ಹುದ್ದೆಯೇರಿದರು. ಇದೇ ಸಂಸ್ಥೆ ಮುಂದೆ ‘ಮಾರ್ವೆಲ್ ಕಾಮಿಕ್ಸ್’ ಆಗಿ ರೂಪಾಂತರಗೊಂಡಿತು. 1961ರಲ್ಲಿ ಅವರು ರಚಿಸಿದ “The fantastic Four’ ಕಾಮಿಕ್ಸ್ ಮನ್ನಣೆ ಪಡೆದುಕೊಂಡು, ಬಳಿಕ ಸಿನಿಮಾ ಆಗಿ ತೆರೆಗೆ ಬಂತು. ಮಕ್ಕಳನ್ನು ಬಹುವಾಗಿ ಸೆಳೆಯುವ, ಅಸಾಧಾರಣ ಶಕ್ತಿಯ ಪಾತ್ರದ ಮುಖೇನ ಸಮಸ್ಯೆಗಳನ್ನು ಪರಿಹರಿಸಿ ಸುಖಾಂತ್ಯಗೊಳಿಸುವ ಪಾತ್ರಗಳನ್ನು ಬರವಣಿಗೆ ಮೂಲಕ ರೂಪಿಸತೊಡಗಿದರು ಲೀ. ‘ಸ್ಪೈಡರ್​ವ್ಯಾನ್’ ಮತ್ತು ‘ಎಕ್ಸ್-ಮ್ಯಾನ್’ ಪಾತ್ರಗಳಂತೂ ಮನೆಮಾತಾದವು. ‘ಬ್ಲಾ್ಯಕ್ ಪ್ಯಾಂಥರ್’, ‘ಕ್ಯಾಪ್ಟನ್ ಅಮೆರಿಕ’, ‘ಡಾಕ್ಟರ್ ಸ್ಟೈಂಜ್’ ಪಾತ್ರಗಳು ಕೂಡ ಗಮನ ಸೆಳೆದವು.

ಇತ್ತೀಚಿನ ವರ್ಷಗಳಲ್ಲಿ ಸ್ಟಾನ್ ಅವರಿಗೆ ಭಾರತದ ನಂಟು ಲಭಿಸಿತು. 2013ರಲ್ಲಿ ಶರದ್ ದೇವರಂಜನ್ ಮತ್ತು ಗೌತಮ್ ಚೋಪ್ರಾ , ಸ್ಟಾನ್ ಲೀ ಅವರ ಜತೆ ಸೇರಿ ಭಾರತದ ಸೂಪರ್​ಹೀರೋ ಪಾತ್ರ ರೂಪಿಸಿ ‘ಚಕ್ರ’ ಎಂಬ ಸಿನಿಮಾ ಮಾಡಿದರು. ಸಂಪೂರ್ಣ ಆನಿಮೆಷನ್ ಸಿನಿಮಾ ಆದ ಇದನ್ನು ಕಾರ್ಟೂನ್ ನೆಟ್​ವರ್ಕ್​ನಲ್ಲಿ ಲಾಂಚ್ ಮಾಡಲಾಗಿತ್ತು. ಈ ನಿಟ್ಟಿನಲ್ಲಿ ಲೀ ‘ಗ್ರಾಫಿಕ್ ಇಂಡಿಯಾ’ ಸಂಸ್ಥೆ ಜತೆ ಸೇರಿ ಕೆಲಸ ಮಾಡಿದ್ದರು. ಮಕ್ಕಳಲ್ಲಿನ ಉತ್ಸಾಹವನ್ನು ತಣಿಸಲು ಹಾರರ್ ಲೋಕದ ಪಾತ್ರಗಳನ್ನೂ ಸೃಷ್ಟಿಸಿದರು. ಒಂದೋ ‘ಪಾಸಿಟಿವ್’ ಪಾತ್ರ ಇಲ್ಲವೆ ಸಂಪೂರ್ಣ ‘ನೆಗೆಟಿವ್’ ಪಾತ್ರಗಳನ್ನು ಸೃಷ್ಟಿಸುತ್ತಿದ್ದ ಇವರು ಈ ಮಧ್ಯದ ಪಾತ್ರಗಳ ಗೋಜಿಗೆ ಹೋಗುತ್ತಿರಲಿಲ್ಲ.

ಆರಂಭದಲ್ಲಿ ತಮ್ಮದೇ ಬರವಣಿಗೆ ಮತ್ತು ಸೃಷ್ಟಿಸಿದ ಪಾತ್ರದಿಂದ ತಾವೇ ಒಮ್ಮೆ ಗಾಬರಿಗೊಂಡು ಆ ಲೇಖನಕ್ಕೆ ಮೂಲಹೆಸರನ್ನು (ಸ್ಟಾನ್ ಲೀ ಮಾರ್ಟಿನ್ ಲಿಬೆ) ನೀಡದೆ ಸ್ಟಾನ್ ಲೀ ಎಂದಷ್ಟೇ ಬರೆದುಕೊಂಡರು. ಕಾಲಕ್ರಮೇಣ ಇದೇ ಹೆಸರು ಖ್ಯಾತವಾಗಿದ್ದರಿಂದ ಅದನ್ನೇ ಅಧಿಕೃತವಾಗಿಸಿ ಅದಕ್ಕೆ ಕಾನೂನಿನ ಮಾನ್ಯತೆಯನ್ನೂ ಪಡೆದುಕೊಂಡರು. 40ನೇ ವಯಸ್ಸಿನಲ್ಲಿ ‘ಕಾಮಿಕ್ಸ್ ಲೋಕಕ್ಕೆ ನಾನು ತುಂಬ ವೃದ್ಧನಾಗಿಬಿಟ್ಟೆ’ ಎಂಬ ಭಾವ ಲೀ ಅವರಲ್ಲಿ ಆವರಿಸಿಕೊಂಡಾಗ, ಅವರಲ್ಲಿ ಸ್ಪೂರ್ತಿ ತುಂಬಿ ಕಾಲದ ಅಗತ್ಯ ಮತ್ತು ನೀವು ಪ್ರೀತಿಸುವ ಪಾತ್ರಗಳನ್ನು ಸೃಷ್ಟಿಸಿ ಎಂದು ಹುರಿದುಂಬಿಸಿದವರು ಬ್ರಿಟಿಷ್ ಮೂಲದ ಪತ್ನಿ ಜೋನ್. (ಈ ದಂಪತಿಗೆ ಇಬ್ಬರು ಮಕ್ಕಳು) 2001ರಲ್ಲಿ POW! Entertainment ಕಂಪನಿಯನ್ನು ಕಟ್ಟಿ, ಕೆಲ ಧಾರಾವಾಹಿ, ಕಿರುಚಿತ್ರಗಳನ್ನು ನಿರ್ವಿುಸಿದರು. ಗ್ರಾಫಿಕ್ ನಾವೆಲ್​ಗಾಗಿಯೂ ಅವರು ಕೆಲಸ ಮಾಡಿದರು. 2012ರಲ್ಲಿ ‘ರೋಮಿಯೋ-ಜೂಲಿಯೆಟ್’ನ ಸಹಲೇಖಕರಾಗಿದ್ದರು. ಈ ಕೃತಿಯನ್ನು ‘ನ್ಯೂಯಾರ್ಕ್ ಟೈಮ್್ಸ’ ಪತ್ರಿಕೆ ಬೆಸ್ಟ್ ಸೆಲ್ಲರ್ ಪಟ್ಟಿಯಲ್ಲಿ ನಮೂದಿಸಿತ್ತು. 2016ರಲ್ಲಿ ಅವರು ‘ಕಾಮಿಕ್ ಕಾನ್’ ಶೃಂಗದಲ್ಲಿ ನೀಡಿದ ಉಪನ್ಯಾಸ ‘ಗಾಡ್ ವೋಕ್’ ಭಾರಿ ಪ್ರಸಿದ್ಧಿ ಪಡೆಯಿತಲ್ಲದೆ, 2017ರಲ್ಲಿ ‘ಇಂಡಿಪೆಂಡೆಂಟ್ ಪಬ್ಲಿಷರ್ ಬುಕ್’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. 2017ರ ಬಳಿಕ ವಯೋಸಹಜ ಸಮಸ್ಯೆಯಿಂದ ಅವರ ದೃಷ್ಟಿ ಮಂದವಾಯಿತು. ಆದರೂ, ದಿನನಿತ್ಯದ ಚಟುವಟಿಕೆಯಲ್ಲಿ ಲವಲವಿಕೆಯಿಂದಲೇ ತೊಡಗುತ್ತಿದ್ದರು.

2016ರಲ್ಲಿ ಲೀ ‘ರೇಡಿಯೋ ಟೈಮ್್ಸ’ ಜತೆಗೆ ಮಾತನಾಡುತ್ತ ಸ್ವಾರಸ್ಯಕರ ಸಂಗತಿ ಹಂಚಿಕೊಂಡಿದ್ದರು- ‘ನಾನು ಯಾವುದಾದರೂ ಕಾಮಿಕ್ಸ್ ಬುಕ್ ಸಮ್ಮೇಳನಕ್ಕೆ ಹೋದಾಗ ಓದುಗರು ಕೇಳುವ ಪ್ರಶ್ನೆ ‘ಎಲ್ಲರ ದೊಡ್ಡ ಶಕ್ತಿ ಯಾವುದು?’ ಎಂದು. ಮತ್ತು ನಾನು ಯಾವಾಗಲು ಹೇಳುತ್ತ ಬಂದಿದ್ದೇನೆ, ಅದೃಷ್ಟ ದೊಡ್ಡ ಶಕ್ತಿ ಎಂದು. ಏಕೆಂದರೆ, ನಿಮ್ಮ ಬಳಿ ಒಳ್ಳೆಯ ಅದೃಷ್ಟ ಇದ್ದರೆ ಎಲ್ಲವೂ ನೀವು ಅಂದುಕೊಂಡಂತೆ ನಡೆಯುತ್ತದೆ’. ಇದೇ ಸಂದೇಶಗಳನ್ನು ಪಾತ್ರಗಳಲ್ಲೂ ತುಂಬಿ ಕಾಮಿಕ್ಸ್ ಲೋಕವನ್ನು ದಶಕಗಳ ಕಾಲ ಆಳಿದ ಸ್ಟಾನ್ ಲೀ ‘ಒಳ್ಳೆಯ ಅದೃಷ್ಟ’ದೊಂದಿಗೆ ಮತ್ತೆ ಹುಟ್ಟಿಬರಲಿ, ಅವರ ಕಲ್ಪನಾಪ್ರಪಂಚ ನಮ್ಮನ್ನೆಲ್ಲ ಬೆರಗಾಗಿಸಲಿ.

(ಲೇಖಕರು ವಿಜಯವಾಣಿ ಸಹಾಯಕ ಸುದ್ದಿಸಂಪಾದಕರು)

ಪ್ರತಿಕ್ರಿಯಿಸಿ: [email protected]]