ಶಿವಮೊಗ್ಗ: ಮೂರರಿಂದ ಆರು ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣದ ಜತೆಗೆ ಸೂಕ್ತ ಪೋಷಣೆ ನೀಡುವ ಮೂಲಕ ಅಂಗನವಾಡಿ ಕಾರ್ಯಕರ್ತೆಯರು ದೇಶ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಎಸ್.ಸಂತೋಷ್ ಅಭಿಪ್ರಾಯಪಟ್ಟರು.
ಆಲ್ಕೊಳದ ಚೈತನ್ಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿವಮೊಗ್ಗ ಮಲ್ಟಿಪರ್ಪಸ್ ಸೋಷಿಯಲ್ ಸರ್ವಿಸ್ ಸೊಸೈಟಿ ಆಶ್ರಯದಲ್ಲಿ ಪೋಷಣ್ ಮಾಸಾಚರಣೆ ಅಂಗವಾಗಿ ಗುರುವಾರ ಆಯೋಜಿಸಿದ್ದ ಅನೀಮಿಯಾ ಮುಕ್ತ ಭಾರತ, ಪೌಷ್ಟಿಕ ಆಹಾರ ಮತ್ತು ಗ್ರೋಥ್ ಮಾನಿಟರಿಂಗ್ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ಕಲಿಸುವ, ಪೋಷಣೆ ಮಾಡುವ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ತಳಮಟ್ಟದಿಂದ ಕೆಲಸದಲ್ಲಿ ನಿರತರಾಗಿದ್ದಾರೆ. ಜವಾಬ್ದಾರಿಗಳನ್ನು ಸಮರ್ಪಕವಾಗಿ ರೂಪಿಸುತ್ತಿದ್ದು, ಕೆಲಸ ಮುಗಿದು ವರದಿ ನೀಡುವವರೆಗೆ ಅಪ್‌ಡೇಟ್ ಆಗಿರಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿರುವ 2,563 ಅಂಗನವಾಡಿಗಳ ಹಲವಾರು ಚಟುವಟಿಕೆಗಳು ಯಶಸ್ವಿಯಾಗಿ ನಡೆಯುತ್ತಿವೆ. ಅವುಗಳ ಪರಿಷ್ಕರಣೆ ಸಹ ಸಮರ್ಪಕವಾಗಿ ಆಗಬೇಕು. ಸುಪೋಷಿತ್ ಕಿಶೋರಿ ಮತ್ತು ಸಶಕ್ತ ನಾರಿ ನಿರ್ಮಾಣ ಕಾರ್ಯಕ್ರಮಗಳ ಉದ್ದೇಶ, ಭವಿಷ್ಯದಲ್ಲಿ ಪೌಷ್ಟಿಕತೆಯಿಂದ ಮಕ್ಕಳು ಬಳಲದಂತೆ ನೋಡಿಕೊಳ್ಳಬೇಕು ಎಂದರು.
ಎಂಎಲ್‌ಸಿ ಡಾ. ಧನಂಜಯ ಸರ್ಜಿ ಮಾತನಾಡಿ, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ನಾವೆಲ್ಲ ಶ್ರಮಿಸಬೇಕು. ಚಿಕ್ಕ ವಯಸ್ಸಿನಿಂದ ಉತ್ತಮ ಅಡಿಪಾಯ ಹಾಕಬೇಕು. ಮಕ್ಕಳಲ್ಲಿ ನಾವು ಮುಖ್ಯವಾಗಿ ಆತ್ಮವಿಶ್ವಾಸ ಬೆಳೆಸಬೇಕು. ಟಿವಿ, ಮೊಬೈಲ್‌ನಿಂದ ಮಕ್ಕಳು ಹೊರಬರಲು ಮೊದಲು ಪಾಲಕರು ಅದರಿಂದ ದೂರವಿರಬೇಕು. ಉತ್ತಮ ಆಚಾರ, ವಿಚಾರ, ಸಂಸ್ಕೃತಿ, ಸಂಸ್ಕಾರ ನೀಡಬೇಕು ಎಂದು ಸಲಹೆ ನೀಡಿದರು.
ಜಿಪಂ ಸಿಇಒ ಎನ್.ಹೇಮಂತ್ ಮಾತನಾಡಿ, ಮಕ್ಕಳಿಗೆ ಅಂಗನವಾಡಿ ಕಾರ್ಯಕರ್ತೆಯರು ಧನಾತ್ಮಕ ಸಲಹೆ ನೀಡಬೇಕು. ಗುಂಪಿನಲ್ಲಿರುವ ಮಕ್ಕಳಿಗೆ ಸ್ಪಂದಿಸುವ ಬಗೆಯನ್ನು ಅರಿತು ಮಕ್ಕಳಲ್ಲಿ ಆತ್ಮವಿಶ್ವಾಸ ಬಿತ್ತಬೇಕು. ಮುಂದಿನ ದಿನಗಳಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ತರಬೇತಿ ನೀಡಲಾಗುವುದು. ವಾರದಲ್ಲಿ ಮೂರು ದಿನ ಕ್ಷೇತ್ರ ಭೇಟಿ ಮಾಡುತ್ತೇನೆ ಎಂದರು.
ಅನೀಮಿಯಾ ಮುಕ್ತ ಭಾರತ ಕುರಿತು ಯುನಿಸೆಫ್ ಕನ್ಸಲ್ಟೆಂಟ್ ಮನೋಜ್ ಸೆಬಾಸ್ಟಿನ್, ಪೌಷ್ಟಿಕ ಆಹಾರ ಹಾಗೂ ಗ್ರೋಥ್ ಮಾನಿಟರಿಂಗ್ ಕುರಿತು ಕೆ.ವಿಶ್ವನಾಥ್ ಮಾತನಾಡಿದರು. ಡಿಎಚ್‌ಒ ಡಾ. ಕೆ.ಎಸ್.ನಟರಾಜ್, ಆರ್‌ಸಿಎಚ್‌ಒ ಡಾ. ಒ.ಮಲ್ಲಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಿ.ಎಚ್.ಕೃಷ್ಣಪ್ಪ, ಜಿಲ್ಲಾ ನಿರೂಪಣಾಧಿಕಾರಿ ಡಾ. ಸಂತೋಷ್ ಕುಮಾರ್, ಅಭಿವೃದ್ಧಿ ಅಧಿಕಾರಿ ಶಶಿರೇಖಾ ಉಪಸ್ಥಿತರಿದ್ದರು.
ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಯಾವ ಕಾರಣಕ್ಕೂ ಹೋಲಿಕೆ ಮಾಡಬಾರದು. ಪ್ರತಿಯೊಬ್ಬರಲ್ಲೂ ಒಂದೊಂದು ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಧನಾತ್ಮಕ ಸಲಹೆ ನೀಡಬೇಕು. ಹಣ ಮತ್ತು ಹಸಿವಿನ ಮಹತ್ವ ತಿಳಿಸಬೇಕು. ಆಯ್ಕೆ ಮಾಡುವುದಕ್ಕೆ ಅವಕಾಶ ನೀಡಬೇಕು. ಸೇವಾ ಭಾವನೆ ಬೆಳೆಸಬೇಕು.
– ಡಾ. ಧನಂಜಯ ಸರ್ಜಿ, ವಿಧಾನ ಪರಿಷತ್ ಸದಸ್ಯ