ಶಿವಮೊಗ್ಗ: ಖಾಸಗಿ ಸಂಸ್ಥೆಯೊಂದು ಉಚಿತವಾಗಿ ಪ್ರವಾಸ ಕರೆದೊಯ್ಯುವುದಾಗಿ ನಂಬಿಸಿ ಜನರಿಂದ ಹಣ ಪಡೆದ ಪ್ರಕರಣದಲ್ಲಿ ಭಾಗಿಯಾದವರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಜನರು ಇಂತಹ ನಕಲಿ ಸಂಸ್ಥಗೆಳ ಬಗ್ಗೆ ಎಚ್ಚರದಿಂದರಬೇಕು. ಆನ್‌ಲೈನ್ ಮೂಲಕ ವ್ಯವಹರಿಸುವಾಗ ಜಾಗೃತರಾಗಿರಬೇಕು ಎಂದು ಎಸಿ ಜಿ.ಕೆ.ಮಿಥುನ್‌ಕುಮಾರ್ ಹೇಳಿದರು.
ವಿವಿಧ ಪ್ರಕರಣಗಳಲ್ಲಿ ನೊಂದವರು, ಪೊಲೀಸರಿಗೆ ದೂರು ನೀಡಿದವರೊಂದಿಗೆ ಡಿವೈಎಸ್ಪಿ ಕಚೇರಿಯಲ್ಲಿ ಸಭೆ ನಡೆಸಿ ಮಾತನಾಡಿದ ಅವರು, ಆನ್‌ಲೈನ್ ವಂಚನೆ ಬಗ್ಗೆ ಪೊಲೀಸ್ ಇಲಾಖೆಯಿಂದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ಆದರೆ ಜನರು ಹಣದ ಆಸೆಯಿಂದ ವಂಚಕರ ಬಲೆಗೆ ಬೀಳುತ್ತಿದ್ದಾರೆ ಎಂದರು.
ಮಹಿಳೆಯೊಬ್ಬರು ಮಾತನಾಡಿ, ನನ್ನ ಪತಿ ವಿದ್ಯುತ್ ಪರಿವರ್ತಕ ಅಳವಡಿಸಲು ತೆರಳಿದ್ದ ಸಂದರ್ಭದಲ್ಲಿ ವಿದ್ಯುತ್ ಅವಘಡದಿಂದ ಮೃತಪಟ್ಟಿದ್ದಾರೆ. ಗುತ್ತಿಗೆದಾರ ಇನ್ನೂ ಪರಿಹಾರ ನೀಡಿಲ್ಲ. ಈ ಸಂಬಂಧ ವಿನೋಬ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿ ಎಸ್ಪಿ, ನಮ್ಮ ಅಧಿಕಾರಿಗಳು ಕಾಲಮಿತಿಯೊಳಗೆ ಪ್ರಕರಣದ ತನಿಖೆ ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪ ಪತ್ರ ಸಲ್ಲಿಸಲಿದ್ದಾರೆ. ಪರಿಹಾರಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲಾತಿಗಳೊಂದಿಗೆ ಸಂಬಂಧಪಟ್ಟ ಇಲಾಖೆಯನ್ನು ಸಂಪರ್ಕಿಸುವಂತೆ ತಿಳಿಸಿದರು.
ಜಮೀನು ವಿಚಾರಕ್ಕೆ ಸಂಬಂಧಿಸಿದ ನಡೆದ ಗಲಾಟೆ ಬಗ್ಗೆ ಸಹೋದರರಿಬ್ಬರು ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿದೂರನ್ನು ಸಲ್ಲಿಸಿದ್ದರು. ಈಗ ಆ ದೂರನ್ನು ಹಿಂಪಡೆದು ನಾವು ರಾಜಿ ಸಂಧಾನ ಮಾಡಿಕೊಳ್ಳಬಹುದೇ ಎಂದು ಆ ಸಹೋದರರು ಎಸ್ಪಿ ಅವರನ್ನು ಪ್ರಶ್ನಿಸಿದರು.
ಯಾವುದೇ ಪ್ರಕರಣ ದಾಖಲಾದ ನಂತರ ತನಿಖಾಧಿಕಾರಿಗಳು ಕಾಲಮಿತಿಯೊಳಗೆ ಪ್ರಕರಣದ ತನಿಖೆ ಪೂರೈಸಿ ತನಿಖೆಯಲ್ಲಿ ಕಂಡುಬರುವ ಅಂಶಗಳ ಆಧಾರದ ಮೇಲೆ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸುತ್ತಾರೆ. ನ್ಯಾಯಾಲಯದಲ್ಲಿ ನಿಮಗೆ ರಾಜಿಯಾಗಲು ಅವಕಾಶವಿದೆ ಎಂದು ಎಸ್ಪಿ ತಿಳಿಸಿದರು.
ಎಎಸ್ಪಿ ಅನಿಲ್ ಕುಮಾರ್ ಭೂಮರಡ್ಡಿ, ಡಿವೈಎಸ್ಪಿ ಎಂ.ಸುರೇಶ್, ಇನ್ಸ್‌ಪೆಕ್ಟರ್‌ಗಳಾದ ಚಂದ್ರಕಲಾ, ಸಿದ್ದೇಗೌಡ, ರವಿ ಪಾಟೀಲ್, ಭರತ್‌ಕುಮಾರ್ ಮುಂತಾದವರಿದ್ದರು.