More

  ನಕಲಿ ಇ-ಮೇಲ್ ಬಗ್ಗೆ ಎಚ್ಚರವಿರಲಿ

  ನಕಲಿ ಇ-ಮೇಲ್ ಬಗ್ಗೆ ಎಚ್ಚರವಿರಲಿ ಪುಣೆ ನಗರದ ಹೆಸರಾಂತ ಹೃದಯ ತಜ್ಞರಾಗಿದ್ದ ಡಾ.ವಿನಯ್, ತಮ್ಮ ಮಕ್ಕಳೊಡನೆ ಖಾಸಗಿ ಆಸ್ಪತ್ರೆ ನಡೆಸುತ್ತಿದ್ದರು. ಒಂದು ದಿನ ಅವರಿಗೆ ಎನ್.ಐ.ಎ ಮುಂದೆ ಹಾಜರಾಗಲು ನ್ಯಾಯಾಲಯದ ನೋಟೀಸ್ ಎಂಬ ವಿಷಯವಿದ್ದ ಇ-ಮೇಲ್ ಬಂದಿತು. ವಿನಯ್ ಮೇಲ್ ಓಪನ್ ಮಾಡಿದಾಗ ಅದರಲ್ಲಿ ಇದಕ್ಕೆ ಲಗತ್ತಿಸಿರುವ ಸಮನ್ಸ್ ನೋಡಿ- ‘ರಾಜೇಂದ್ರ ಕುಮಾರ್, ಇನ್ಸ್​ಪೆಕ್ಟರ್, ರಾಷ್ಟ್ರೀಯ ಸೈಬರ್ ಕ್ರೈಂ ಸಂಸ್ಥೆ, ನವದೆಹಲಿ’ ಎಂದು ಬರೆದಿತ್ತು. ಮೇಲ್​ಗೆ ಲಗತ್ತಿಸಿದ್ದ ಪತ್ರದ ಮೇಲುಗಡೆಯ ಸಾಲಿನ ಎಡಭಾಗದಲ್ಲಿ ಸಿ.ಬಿ.ಐ ಸಂಸ್ಥೆಯ ಚಿಹ್ನೆ ಇದ್ದು ಬಲಭಾಗದಲ್ಲಿ ದೆಹಲಿಯ ಇಂಟಲಿಜೆನ್ಸ್ ಬ್ಯೂರೋ ಚಿಹ್ನೆಯಿತ್ತು. ಮಧ್ಯಭಾಗದಲ್ಲಿ ‘ಇಂಡಿಯನ್ ಸೈಬರ್ ಕ್ರೈಮ್ ಕೋಆರ್ಡಿನೇಷನ್ ಸೆಂಟರ್, ಐದನೆಯ ಮಹಡಿ, ಎನ್​ಡಿಸಿಸಿ ಕಟ್ಟಡ, ಜಯ್ಸಿಂಗ್ ರೋಡ್, ನವದೆಹಲಿ, ಭಾರತ’ ಎಂದಿತ್ತು.

  ಆ ಪತ್ರದ ಒಕ್ಕಣೆ ಹೀಗಿತ್ತು: ‘ಇಂಡಿಯನ್ ಸೈಬರ್ ಕ್ರೈಮ್ ಕೋಆರ್ಡಿನೆಷನ್ ಸೆಂಟರ್​ನ ಸಿಇಓ ಆದ ನಾನು ರಾಜೇಂದ್ರ ಕುಮಾರ್ ತಮಗೆ ತಿಳಿಸುವುದೇನೆಂದರೆ ನೀವು ವಿದೇಶದಲ್ಲಿರುವ ಅಪ್ರಾಪ್ತ ಬಾಲಕ ಮತ್ತು ಬಾಲಕಿಯರ ನಗ್ನಫೋಟೋಗಳನ್ನು ಮತ್ತು ಅಶ್ಲೀಲ ವಿಡಿಯೋಗಳನ್ನು ನಿಮ್ಮ ಕಂಪ್ಯೂಟರ್​ನಲ್ಲಿ ನೋಡುತ್ತಿರುವಿರಿ ಎಂದು ಇಂಟರ್​ಪೋಲ್ ಸಂಸ್ಥೆ ನಮ್ಮ ದೇಶದ ರಾಷ್ಟ್ರೀಯ ನೋಡಲ್ ಏಜನ್ಸಿಯಾದ ಸಿಬಿಐಗೆ ನಿಮ್ಮ ವಿರುದ್ಧ ದೂರು ನೀಡಿದೆ. ಈ ನಿಟ್ಟಿನಲ್ಲಿ ನಿಮ್ಮ ಕಂಪ್ಯೂಟರ್​ನ ಐಪಿ ಅಡ್ರೆಸ್ ಮೂಲಕ ನಿಮ್ಮ ಹೆಸರು ಮತ್ತು ವಿಳಾಸವನ್ನು ಪತ್ತೆ ಮಾಡಿದ್ದು, ನಿಮ್ಮ ವಿರುದ್ಧ ಪೋಕ್ಸೋ ಕಾನೂನಿನ ಸೆಕ್ಷನ್ 11ರ ಅನ್ವಯ ಸಿಬಿಐನಲ್ಲಿ ಕ್ರಿಮಿನಲ್ ಕೇಸ್ ದಾಖಲಾಗಿದೆ. ಅದಲ್ಲದೆ ಮಾಹಿತಿ-ತಂತ್ರಜ್ಞಾನ ಕಾನೂನಿನ ಸೆಕ್ಷನ್ 67ಎ ಮತ್ತು 67ಬಿಯಲ್ಲಿ ಇನ್ನೊಂದು ಪ್ರಕರಣವೂ ದಾಖಲಾಗಿದೆ. ನೀವು ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಮಕ್ಕಳ ನಗ್ನ ಫೋಟೋಗಳನ್ನು ಪಡೆದಿರುವುದು ಮೇಲ್ನೋಟಕ್ಕೇ ತಿಳಿದುಬರುತ್ತಿದೆ.

  ನಿಮ್ಮ ಕೃತ್ಯವು ಗುರುತರ ಅಪರಾಧವಾಗಿದ್ದು, ಈ ಪತ್ರ ಮುಟ್ಟಿದ 24 ಗಂಟೆಗಳ ಒಳಗಾಗಿ ನಿಮ್ಮ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳಬಾರದು ಎಂದು ನೀವು ಕಾರಣ ತಿಳಿಸಬೇಕು. ನಿಮ್ಮ ವಿವರಣೆಯನ್ನು ನೀವು 24 ಗಂಟೆಗಳ ಒಳಗೆ ಕೊಡದೆ ಹೋದರೆ, ನಿಮ್ಮ ವಿರುದ್ಧ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್​ಗೆ ದೂರನ್ನು ನೀಡಿ ನಿಮ್ಮ ಲೈಸನ್ಸ್ ಅನ್ನು ಅಮಾನತ್ತು ಗೊಳಿಸುವುದಲ್ಲದೆ ನಿಮ್ಮ ಕಂಪ್ಯೂಟರ್ ಅನ್ನು ಜಪ್ತಿ ಮಾಡಿ ನಿಮ್ಮನ್ನು ಬಂಧಿಸಲಾಗುವುದು’.

  See also  ರೌಡಿಶೀಟರ್ ಹೆಸರಿದ್ದವರೆಲ್ಲ ರೌಡಿಗಳಾಗಲ್ಲ; ಸೈಲೆಂಟ್​ ಸುನೀಲ, ಬೆತ್ತನಗೆರೆ ಶಂಕರ ಬಗ್ಗೆ ಮಾಹಿತಿ ಇಲ್ಲ: ಸಿಟಿ ರವಿ

  ಕಂಪ್ಯೂಟರ್ ಅಥವಾ ಮೊಬೈಲ್ ಫೋನನ್ನು ತಮ್ಮ ಅಧಿಕೃತ ಕೆಲಸವಲ್ಲದೆ ಫೇಸ್​ಬುಕ್, ಇ-ಮೇಲ್, ವಾಟ್ಸ್​ಆಪ್ ಬಿಟ್ಟು ಬೇರೆ ಯಾವುದಕ್ಕೂ ಉಪಯೋಗಿಸಿದ ಡಾಕ್ಟರ್ ವಿನಯ್ ಪತ್ರವನ್ನೋದಿ ಬೆವೆತು ಹೋದರು. ಆಸ್ಪತ್ರೆಯ ತಮ್ಮ ಕೋಣೆಯಲ್ಲಿದ್ದ ಕಂಪ್ಯೂಟರ್ ಮೂಲಕ ಆಸ್ಪತ್ರೆಯ ಸಿಬ್ಬಂದಿ ಯಾರಾದರೂ ಆರೋಪಿಸಿದ ಕೃತ್ಯವನ್ನು ಮಾಡಿರಬಹುದಾದ ಸಾಧ್ಯತೆಯ ಬಗ್ಗೆ ಅವರು ವಿಚಾರಿಸಿದರು. ‘ನಿಮ್ಮ ಕಂಪ್ಯೂಟರ್ ಮುಟ್ಟಲು ಯಾರಿಗೂ ಧೈರ್ಯವಿಲ್ಲ. ನೀವು ನಿಮ್ಮ ರೂಮಿನಲ್ಲಿ ಸಿಸಿಟಿವಿ ಕ್ಯಾಮರಾ ಕೂಡ ಹಾಕಿಸಿದ್ದೀರಿ. ಅಲ್ಲದೆ ನಿಮ್ಮ ರೂಮಿಗೆ ನಿಮ್ಮ ಮಕ್ಕಳ ಹೊರತಾಗಿ ಯಾವುದೇ ಸಿಬ್ಬಂದಿ ಹೋಗುವುದಿಲ್ಲ’ ಎಂದು ಅವರ ಸಹಾಯಕರು ಹೇಳಿದಾಗ ಅವರಿಗೆ ತಮ್ಮ ಮಕ್ಕಳ ಬಗ್ಗೆಯೂ ಅನುಮಾನ ಬಾರದೇ ಇರಲಿಲ್ಲ.

  ಡಾ.ವಿನಯ್ಗೆ ಮುಂದೇನು ಮಾಡುವುದೆಂದು ತೋಚಲಿಲ್ಲ. ಏಕೆಂದರೆ ಆ ಪತ್ರದ ಮೇಲಿದ್ದ ಮೊಹರುಗಳು, ಅದರಲ್ಲಿದ್ದ ಒಕ್ಕಣೆ ನೋಡಿದರೆ ಅದು ಖಂಡಿತವಾಗಿ ಕೇಂದ್ರ ಸರ್ಕಾರದ ಇಲಾಖೆಯಿಂದ ಬಂದದ್ದು ಎನಿಸುತ್ತಿತ್ತು. ಅವರು ತಮ್ಮ ಅನುಮಾನ ಬಗೆಹರಿಸಿಕೊಳ್ಳಲು ‘ಇಂಡಿಯನ್ ಸೈಬರ್ ಕ್ರೈಮ್ ಕೋಅರ್ಡಿನೆಷನ್ ಸೆಂಟರ್’ ಎನ್ನುವ ಸಂಸ್ಥೆ ಅಸ್ತಿತ್ವದಲ್ಲಿದೆಯೆ ಎಂದು ಇಂಟರ್​ನೆಟ್​ನಲ್ಲಿ ಪರಿಶೀಲಿಸಿದಾಗ ಆ ಸಂಸ್ಥೆ ಅಸ್ತಿತ್ವದಲ್ಲಿದ್ದು ಅದರ ವಿಳಾಸ ಸರಿಯಿತ್ತು. ಇದಲ್ಲದೆ ಪತ್ರಕ್ಕೆ ಲಗತ್ತಿಸಿದ್ದ ಮೊಹರುಗಳು ಸಹಾ ನೈಜ ಮೊಹರುಗಳಂತಿದ್ದವು. ಆ ಪತ್ರದಲ್ಲಿ ರಾಜೇಂದ್ರ ಕುಮಾರ್ ಅಲ್ಲದೆ ಇನ್ನೂ ಇಬ್ಬರ ಸಹಿಗಳು ಇದ್ದವು. ಮೊದಲನೆಯದು ಇಂಟೆಲಿಜೆನ್ಸ್ ಬ್ಯೂರೋದ ನಿರ್ದೇಶಕರದಾಗಿದ್ದರೆ ಎರಡನೆಯದು ಸಿಬಿಐ ನಿರ್ದೇಶಕರದಾಗಿತ್ತು. ಅವರಿಬ್ಬರ ಹೆಸರುಗಳೂ ಸರಿಯಾಗಿವೆ ಎಂದು ಡಾ.ವಿನಯ್ ಪರಿಶೀಲಿಸಿದ ನಂತರ ತಿಳಿಯಿತು.

  ಅದೇ ಸಮಯಕ್ಕೆ ಅವರ ಹಿರಿಯ ಮಗ ಡಾ.ಅನಿಲ್ ಅವರ ಕೋಣೆಗೆ ಬಂದು ತನ್ನ ತಂದೆಯನ್ನು ನೋಡಿ ಗಾಬರಿಯಾದ. ‘ಏನಾಯಿತು?’ ಎಂದಾತ ಕೇಳಿದಾಗ, ಡಾ. ವಿನಯ್ ಕಂಪ್ಯೂಟರ್ ಸ್ಕಿ›ೕನ್ ಅವನಿಗೆ ತೋರಿಸಿದರು. ‘ಅಪ್ಪಾ, ನೀವು ನಿಮ್ಮ ವೃತ್ತಿಗೆ ಸಂಬಂಧಿಸಿ ವಿಷಯಗಳಲ್ಲದೆ ನಿಮ್ಮ ಕಂಪ್ಯೂಟರ್​ನಲ್ಲಿ ಬೇರಾವುದೇ ವಿಷಯವನ್ನು ನೋಡುವುದಿಲ್ಲ. ನಾನು ಮತ್ತು ನನ್ನ ಸೋದರನೂ ನಿಮ್ಮ ಕಂಪ್ಯೂಟರ್ ಮುಟ್ಟುವುದಿಲ್ಲ. ಬೇರೆಯವರ ಕಂಪ್ಯೂಟರಿನ ಐ.ಪಿ ಅಡ್ರಸ್ ಬದಲು ನಿಮ್ಮದು ಬಂದಿರಲು ಸಾಕು. ನಾವೇನೂ ಹೆದರುವುದು ಬೇಡ. ಹೇಗಿದ್ದರೂ ನಾಳೆಯವರೆಗೆ ಟೈಮ್ ಇದೆ. ರಾತ್ರಿ ಊಟವಾದ ಮೇಲೆ ನಾವೆಲ್ಲರೂ ಕುಳಿತು ಸೂಕ್ತ ಉತ್ತರ ತಯಾರಿಸಿ ಕಳಿಸೋಣ’ ಎಂದ.

  ಆ ರಾತ್ರಿ ತಮ್ಮ ಮಕ್ಕಳ ಸಹಾಯದಿಂದ ಉತ್ತರವನ್ನು ತಯಾರು ಮಾಡಿ ಅದನ್ನೇ ಡಾ ವಿನಯ್ ತಮಗೆ ಪತ್ರ ಬಂದಿದ್ದ ವಿಳಾಸಕ್ಕೆ ಕಳುಹಿಸಿದರು. ಮಾರನೆಯ ಸಂಜೆ ಅವರಿಗೆ ಒಂದು ಕರೆ ಬಂದಿತು. ಕರೆ ಮಾಡಿದಾತ ಹಿಂದಿ ಭಾಷೆಯಲ್ಲಿ ಮಾತನಾಡಿ, ‘ನಿಮ್ಮ ಉತ್ತರ ಸಮರ್ಪಕವಾಗಿಲ್ಲವಾದ ಕಾರಣ ನಾಳೆ ಸಂಜೆ ನಿಮ್ಮ ಮನೆಗೆ ಬರುತ್ತೇವೆ. ನಿಮ್ಮ ಮನೆ, ಮತ್ತು ಆಸ್ಪತ್ರೆಯನ್ನು ಶೋಧಿಸುವ ವಾರಂಟನ್ನು ನ್ಯಾಯಾಧೀಶರು ಸಹಿ ಮಾಡಿದ್ದಾರೆ’ ಎಂದ. ಇದನ್ನು ಕೇಳಿದ ಕೂಡಲೇ ನಡುಗತೊಡಗಿದ ಡಾ.ವಿನಯ್, ಫೋನನ್ನು ಅನಿಲ್​ನ ಕೈಗಿತ್ತರು. ಆತ ತನ್ನನ್ನು ಪರಿಚಯಿಸಿಕೊಂಡು, ‘ಸರ್, ನನ್ನ ತಂದೆ ಯಾವುದೇ ಅಪರಾಧ ಮಾಡಿಲ್ಲ, ದಯವಿಟ್ಟು ಅವರನ್ನು ಬಿಟ್ಟುಬಿಡಿ, ನೀವು ಹೇಳಿದಂತೆ ಮಾಡುತ್ತೇವೆ’ ಎಂದ. ಆ ವ್ಯಕ್ತಿ, ‘ನಿಮ್ಮ ತಂದೆಯವರನ್ನು ರಕ್ಷಿಸಲು ನಾವು ಎಲ್ಲ ಪ್ರಯತ್ನಗಳನ್ನೂ ಮಾಡುತ್ತೇವೆ. ನನ್ನ ಹಿರಿಯ ಅಧಿಕಾರಿಯೊಡನೆ ಮಾತನಾಡಿ ನಿಮ್ಮನ್ನು ನಾಳೆ ಸಂರ್ಪಸುತ್ತೇನೆ’ ಎಂದ.

  See also  ಅಯೋಧ್ಯೆಯ ರಾಮಮಂದಿರದ ಅರ್ಚಕರಾಗಿ ಗಾಜಿಯಾಬಾದ್ ವಿದ್ಯಾರ್ಥಿ ಆಯ್ಕೆ

  ಮಾರನೆಯ ಬೆಳಗ್ಗೆಯೇ ಡಾ.ವಿನಯ್ರನ್ನು ಸಂರ್ಪಸಿದ ಆ ವ್ಯಕ್ತಿ, ‘ಬಹಳ ಪ್ರಯಾಸಪಟ್ಟು ನಿಮ್ಮ ಮೇಲಿನ ಪ್ರಕರಣ ಹಿಂಪಡೆಯಲು ನಮ್ಮ ಮೇಲಧಿಕಾರಿಯ ಒಪ್ಪಿಗೆ ಪಡೆದಿರುವೆ. ಆದರೆ ಅವರು ಪ್ರಕರಣವನ್ನು ಮುಚ್ಚಲು ಒಂದು ಕೋಟಿ ರೂಪಾಯಿ ಕೇಳುತ್ತಿದ್ದಾರೆ. ನಾನು ಕೊಡುವ ಬ್ಯಾಂಕ್ ಅಕೌಂಟಿಗೆ ನಾಳೆಯೇ ಹಣ ವರ್ಗಾವಣೆ ಮಾಡಿದರೆ ನಿಮ್ಮ ಮೇಲಿನ ಪ್ರಕರಣ ಮುಚ್ಚಲಾಗುವುದು’ ಎಂದ. ಲಂಚದ ಹಣದ ಮೊತ್ತವನ್ನು ಕೇಳಿ ಹೌಹಾರಿದ ವಿನಯ್, ‘ನಾವು ಇಷ್ಟೊಂದು ಹಣ ಇಟ್ಟುಕೊಂಡಿಲ್ಲ’ ಎಂದು ಉತ್ತರಿಸಿದಾಗ ಆತ, ‘ಡಾಕ್ಟರ್​ಗಳು ಹೇಗೆ ಕಪ್ಪುಹಣ ಮಾಡುತ್ತಾರೆ ಎಂದು ನಮಗೆ ಗೊತ್ತಿದೆ. ಈ ಹಣವನ್ನು ಇಂದು ಸಂಜೆಯೊಳಗೆ ವರ್ಗಾಯಿಸದಿದ್ದರೆ ನಾವು ದಾಳಿ ಮಾಡುವುದು ಖಚಿತ’ ಎಂದ. ಹಾಗೂಹೀಗೂ ಮಾಡಿ ಅವನನ್ನು ಪುಸಲಾಯಿಸಿದ ಡಾ.ವಿನಯ್ ಲಂಚದ ಹಣವನ್ನು 50 ಲಕ್ಷ ರೂ.ಗಳಿಗೆ ಇಳಿಸುವುದರಲ್ಲಿ ಸಫಲರಾದರು.

  ಕೂಡಲೇ ಡಾ.ವಿನಯ್ ಆ ವ್ಯಕ್ತಿ ಹೇಳಿದ ಬ್ಯಾಂಕ್ ಅಕೌಂಟ್​ಗೆ 50 ಲಕ್ಷ ರೂ.ಗಳನ್ನು ವರ್ಗಾವಣೆ ಮಾಡಿ ಅವನಿಗೆ ಫೋನ್ ಮೂಲಕ ಮಾಹಿತಿ ನೀಡಿದರು. ‘ಅಯಿತು. ನಿಮ್ಮ ಮೇಲಿನ ಪ್ರಕರಣವನ್ನು ಮುಕ್ತಾಯಗೊಳಿಸುತ್ತಿದ್ದೇವೆ’ ಎಂದು ಆತ ಅವರಿಗೆ ಹೇಳಿದ. ‘ಸಧ್ಯ ಬಂದ ಗಂಡಾಂತರ ತಪ್ಪಿತು’ ಎಂದು ಡಾ.ವಿನಯ್ ನಿಟ್ಟುಸಿರನ್ನು ಬಿಟ್ಟರು. ಆದರೆ ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿಯಲ್ಲಿ ಎಂಬಂತೆ 15 ದಿನದ ನಂತರ ಮತ್ತೊಮ್ಮೆ ಅದೇ ವ್ಯಕ್ತಿ ಕರೆ ಮಾಡಿ, ‘ನಾವು ಪ್ರಕರಣ ಮುಚ್ಚಲು ಬಹಳ ಪ್ರಯತ್ನಿಸಿದೆವು. ಆದರೆ ಸಿಬಿಐ ನಿರ್ದೇಶಕರು ಇದಕ್ಕೆ ಒಪ್ಪುತ್ತಿಲ್ಲ, ಅವರಿಗೆ ರಾಜಕೀಯ ಒತ್ತಡ ಬಂದಿದೆಯಂತೆ. ಹಾಗಾಗಿ ನಾನು ಏನನ್ನೂ ಮಾಡಲು ಬರುವುದಿಲ್ಲ. ನಿಮ್ಮ ಮನೆ ಮತ್ತು ಆಸ್ಪತ್ರೆಯನ್ನು ಶೋಧಿಸಿ ನಿಮ್ಮ ಕಂಪ್ಯೂಟರ್ ಅನ್ನು ಜಪ್ತಿ ಮಾಡಲೇಬೇಕಾಗಿದೆ’ ಎಂದ.

  See also  ಭಾರತದಲ್ಲಿ ಮಹಿಳೆಯರ ಭಾಗವಹಿಸುವಿಕೆ ಕಡಿಮೆ

  ಆಗ ಡಾ.ವಿನಯ್ಗೆ ಏನನ್ನೂ ಮಾಡಲು ತೋಚದೆ ಸ್ನೇಹಿತರೊಬ್ಬರ ಸಲಹೆಯಂತೆ ನಗರದ ಕಮಿಷನರ್​ರನ್ನು ಭೇಟಿಯಾಗಿ ಅವರಿಗೆ ನಡೆದ ವಿಷಯವನ್ನು ಸವಿಸ್ತಾರವಾಗಿ ತಿಳಿಸಿದರು. ‘ಕೇಂದ್ರ ಸರ್ಕಾರವು ಈ ಬಗೆಯ ಮೋಸದ ಬಗ್ಗೆ ಈಗಾಗಲೇ ಪತ್ರಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿಯನ್ನು ಕೊಟ್ಟಿದೆಯಲ್ಲ, ಅದನ್ನು ನೀವು ನೋಡಲಿಲ್ಲವೇ ಡಾಕ್ಟರ್?’ ಎಂದು ಕಮಿಷನರ್ ಕೇಳಿದಾಗ, ‘ಸರ್, ನಾನು ನನ್ನ ವೃತ್ತಿಯಲ್ಲೇ ನನ್ನ ಸಮಯವನ್ನೆಲ್ಲ ಕಳೆಯುವ ಕಾರಣ ಇದರ ಬಗ್ಗೆ ನೋಡಲಿಲ್ಲ’ ಎಂದರು ಡಾ. ವಿನಯ್. ‘ಅಲ್ಲ ಡಾಕ್ಟರೇ ನೀವು ಯಾವುದೇ ಅಪರಾಧವನ್ನೂ ಮಾಡದಿರುವಾಗ ಯಾರೋ ಮಾಡಿದ ಆರೋಪಕ್ಕೆ ಏಕೆ ಹೆದರಿ 50 ಲಕ್ಷ ರೂ. ಕೊಟ್ಟಿರಿ?’ ಎಂದು ಕೇಳಿದ ಆ ಅಧಿಕಾರಿ ತಾವೇ ಉತ್ತರವನ್ನೂ ಕೊಟ್ಟರು.

  ‘ಸೈಬರ್ ಕ್ರಿಮಿನಲ್​ಗಳು ನಮ್ಮಲ್ಲಿ ಭಯವನ್ನು ತರಿಸಿ ಆ ಮೂಲಕ ನಮಗೆ ಮೋಸಮಾಡುವ ಟೆಕ್ನಿಕ್ ಬಳಸುತ್ತಾರೆ, ಮುಂದಾದರೂ ಹುಷಾರಾಗಿರಿ’ ಎನ್ನುತ್ತ ಅವರ ದೂರನ್ನು ಪಡೆದು ಸುಲಿಗೆಯ ಪ್ರಕರಣ ದಾಖಲಿಸಲು ಸೈಬರ್ ಠಾಣೆಗೆ ಸೂಚಿಸಿದರು. ಅಷ್ಟರಲ್ಲಾಗಲೇ ಆ ಆರೋಪಿ ಇದೇ ತಂತ್ರ ಬಳಸಿ ದೇಶದಾದ್ಯಂತ ಸುಮಾರು ಅರವತ್ತು ಜನರಿಗೆ ಪಂಗನಾಮ ಹಾಕಿ ಪರಾರಿಯಾಗಿದ್ದು, ಪೊಲೀಸರ ಕೈಗೆ ಸಿಗಲೇ ಇಲ್ಲ.

  ‘ಪ್ರಚೋದನೆ ಮತ್ತು ಪ್ರತಿಕ್ರಿಯೆಗಳ ನಡುವೆ ಅಂತರವಿರುತ್ತದೆ. ಈ ಅಂತರದ ಅವಧಿಯಲ್ಲಿ ಸೂಕ್ತವಾದ ಪ್ರತಿಕ್ರಿಯೆಯನ್ನು ಆಯ್ಕೆ ಮಾಡುವ ಅಧಿಕಾರ ನಮಗಿರುತ್ತದೆ. ನಾವು ಆಗ ಆಯ್ಕೆ ಮಾಡುವ ನಮ್ಮ ಪ್ರತಿಕ್ರಿಯೆಯೇ ನಮ್ಮ ಏಳಿಗೆ ಮತ್ತು ಸ್ವಾತಂತ್ರಕ್ಕೆ ಸೋಪಾನವಾಗುತ್ತದೆ’ ಎಂದು ಪ್ರಸಿದ್ಧ ಮನಃಶಾಸ್ತ್ರಜ್ಞ ವಿಕ್ಟರ್ ಫ್ರಾಂಕೆಲ್ ಹೇಳುತ್ತಾನೆ. ಡಾ.ವಿನಯ್ರ ಮನಸ್ಸು ಸುಳ್ಳು ಆರೋಪದ ಪ್ರಚೋದನೆಗೆ ಆತುರದಿಂದ ಪ್ರತಿಕ್ರಿಯಿಸಿದ್ದರಿಂದಲೇ ಅವರಿಗೆ ನಷ್ಟವಾಯಿತು. ಅವರು ಮೊದಲೇ ಪೊಲೀಸರನ್ನು ಸಂರ್ಪಸಿದ್ದರೆ ಅವರ ಹಣ ಉಳಿಯುತ್ತಿತ್ತು.

  (ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

  ಲೋಕಸಭೆ ಚುನಾವಣೆ: ಉತ್ತರ ಪ್ರದೇಶವನ್ನು ಲಘುವಾಗಿ ಪರಿಗಣಿಸಿದ್ದೇ ತಪ್ಪಾಯಿತು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts