ಸಿಎಂ ಎಚ್‌ಡಿಕೆ ರಾಜೀನಾಮೆ ಕೊಟ್ಟು ಮರ್ಯಾದೆ ಉಳಿಸಿಕೊಳ್ಳುವುದು ಸೂಕ್ತ: ಕೆ ಎಸ್‌ ಈಶ್ವರಪ್ಪ

ಬೆಂಗಳೂರು: ಕಾಂಗ್ರೆಸ್‌ನವರು ಮುಖ್ಯಮಂತ್ರಿಯನ್ನು ಲೆಕ್ಕಕ್ಕಿಟ್ಟುಕೊಂಡಿಲ್ಲ. ಈ ಕಾಂಗ್ರೆಸ್‌ ಅನ್ನು ನಂಬಿಕೊಂಡು ಮುಖ್ಯಮಂತ್ರಿಯಾಗಿ ಮುಂದುವರಿಯುವುದು ಸೂಕ್ತವಲ್ಲ‌. ನೀವು ರಾಜೀನಾಮೆ ಕೊಟ್ಟು ಮರ್ಯಾದೆ ಉಳಿಸಿಕೊಳ್ಳುವುದು ಸೂಕ್ತ ಎಂದು ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿಗೆ ಬಿಜೆಪಿ ನಾಯಕ ಕೆ.ಎಸ್‌.ಈಶ್ವರಪ್ಪ ಹೇಳಿದ್ದಾರೆ.

ಮೈತ್ರಿ ಸರ್ಕಾರಕ್ಕೆ ಬಹುಮತವಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಶಾಸಕಾಂಗ ಪಕ್ಷದ ಸಭೆಗೆ ಬರದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು. ಆದರೆ, ನಾಲ್ಕು ಜನ ಸಭೆಗೆ ಬಂದಿಲ್ಲ. ಒಬ್ಬರು ಬಸ್‌ ಹತ್ತದೆ ಓಡಿ ಹೋದರು. ಅವರ ವಿರುದ್ಧ ಇಂದಿಗೂ ಕ್ರಮ ಕೈಗೊಂಡಿಲ್ಲ. ರೆಸಾರ್ಟ್‌ನಲ್ಲಿ ಕೊಲೆಯೊಂದು ಆಗಲಿಲ್ಲ. ಬದಲಿಗೆ ಕೊಲೆ ಪ್ರಯತ್ನ ನಡೆಯಿತು ಎಂದು ಹೇಳಿದರು.

ಸ್ವತಃ ಕುಮಾರಸ್ವಾಮಿಯವರೇ ತಾವು ಎರಡನೆ ದರ್ಜೆ ಸಿಎಂ ಎಂದು ಹೇಳಿಕೊಂಡಿದ್ದಾರೆ. ಕಾಂಗ್ರೆಸ್‌ನಲ್ಲಿರುವ ಅತೃಪ್ತಿ ಸ್ಫೋಟಗೊಂಡಿದ್ದು, ಕುಮಾರಸ್ವಾಮಿಯವರಿಗೆ ಈಗಲೂ ಹೇಳುತ್ತೇನೆ ಕಾಂಗ್ರೆಸ್‌ನವರನ್ನು ನಂಬಿಕೊಂಡು ಮುಖ್ಯಮಂತ್ರಿಯಾಗಿ ಮುಂದುವರಿಯುವುದು ಸೂಕ್ತವಲ್ಲ. ಬದಲಿಗೆ ನೀವೇ ರಾಜೀನಾಮೆ ನೀಡಿ ಮರ್ಯಾದೆ ಉಳಿಸಿಕೊಳ್ಳಿ ಎಂದು ಹೇಳಿದರು.

ಮಧ್ಯಾಹ್ನ 4 ಗಂಟೆಗೆ ಬಿಜೆಪಿ ಕಚೇರಿಯಲ್ಲಿ ಪಕ್ಷದ ಶಾಸಕಾಂಗ ಸಭೆ ನಡೆಯಲಿದ್ದು, ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದರು. (ದಿಗ್ವಿಜಯ ನ್ಯೂಸ್)