ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಪಾಕ್‌ ಜತೆಗಿನ ಸಮಸ್ಯೆ ನಿವಾರಣೆಯಾಗುವ ಅವಕಾಶವಿದೆ: ಇಮ್ರಾನ್‌ ಖಾನ್‌

ಇಸ್ಲಾಮಾಬಾದ್: 2019ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಗೆಲುವು ಸಾಧಿಸಿದರೆ ಭಾರತ ಜತೆಗಿನ ಶಾಂತಿ ಮಾತುಕತೆಗೆ ಉತ್ತಮ ಅವಕಾಶವಿದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

ವಿದೇಶಿ ಪತ್ರಕರ್ತರೊಂದಿಗಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಭಾರತದಲ್ಲಿ ಮುಂದಿನ ಸರ್ಕಾರವು ವಿರೋಧ ಪಕ್ಷವಾದ ಕಾಂಗ್ರೆಸ್ ನೇತೃತ್ವದಲ್ಲಿದ್ದರೆ ಪಾಕಿಸ್ತಾನದೊಂದಿಗಿನ ಕಾಶ್ಮೀರದ ಸಮಸ್ಯೆಯ ಕುರಿತು ಬಗೆಹರಿಸಿಕೊಳ್ಳಲು ಕೊಂಚ ಭಯಪಡುವ ಸಾಧ್ಯತೆ ಇದೆ. ಬಲಪಂಥೀಯ ಪಕ್ಷವಾದ ಬಿಜೆಪಿಯು ಗೆದ್ದರೆ ಕಾಶ್ಮೀರದಲ್ಲಿನ ಸಮಸ್ಯೆಗೆ ಕೆಲವು ಪರಿಹಾರಗಳನ್ನು ಕಾಣಬಹುದು ಎಂದು ತಿಳಿಸಿದ್ದಾರೆ.

ಈಗ ಭಾರತದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನಾನು ಕಾಣಬಹುದೆಂದು ಎಂದಿಗೂ ಯೋಚಿಸಿಯೇ ಇರಲಿಲ್ಲ. ಇದೀಗ ಮುಸ್ಲಿಂ ಮತ್ತು ಮುಸ್ಲಿಮೇತರ ಮೇಲೆ ದಾಳಿ ಮಾಡಲಾಗುತ್ತಿದೆ. ಹಲವು ವರ್ಷಗಳಿಂದಲೂ ತಮ್ಮ ಅಲ್ಲಿನ ಪರಿಸ್ಥಿತಿ ಬಗ್ಗೆ ಸಂತೋಷವಾಗಿಯೇ ಇದ್ದ ಭಾರತೀಯ ಮುಸ್ಲಿಮರು ಇದೀಗ ತೀವ್ರ ಹಿಂದು ರಾಷ್ಟ್ರೀಯತೆಯಿಂದಾಗಿ ಆತಂಕಕ್ಕೊಳಗಾಗಿದ್ದಾರೆ ಎಂದು ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ ಇಮ್ರಾನ್‌ ಖಾನ್‌ ತಿಳಿಸಿದ್ದಾರೆ.

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರಂತೆ ಮೋದಿ ಕೂಡ ಭಯ ಮತ್ತು ರಾಷ್ಟ್ರೀಯತೆ ಭಾವದಿಂದಲೇ ಆಯ್ಕೆಯಾದಂತವರು. ಹೊರಗಿನವರು ರಾಜ್ಯದಲ್ಲಿ ಆಸ್ತಿ ಖರೀದಿಗೆ ತಡೆಯೊಡ್ಡುವ ಉದ್ದೇಶದಿಂದ ಜಮ್ಮು ಮತ್ತು ಕಾಶ್ಮೀರದ ಜನರಿಗೆ ದಶಕಗಳ ಹಿಂದಿನಿಂದ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕುವ ಭರವಸೆಯನ್ನು ಬಿಜೆಪಿ ನೀಡಿದೆ. ಇದು ಪ್ರಮುಖವಾಗಿ ಚಿಂತಿಸಬೇಕಾದ ವಿಷಯವಾಗಿದೆ ಎಂದು ಇಮ್ರಾನ್​ ಖಾನ್​ ತಿಳಿಸಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *